ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಸ್ಪರ್ಧಿಸಲಿರುವ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ. ಇದುವರೆಗೆ 217 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಇದೀಗ ಬಾಕಿ ಇದ್ದ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು, ರಾತ್ರಿ ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಿದೆ.
ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಪುಲಿಕೇಶಿನಗರ ನಗರ ವಿಧಾನಸಭಾ ಕ್ಷೇತ್ರದಿಂದ ಎ. ಸಿ. ಶ್ರೀನಿವಾಸ್ ಅವರನ್ನು ಕಣಕ್ಕಿಳಿಸಲಾಗುತ್ತಿದೆ. ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಟಿಕೆಟ್ ನೀಡಬೇಕೆಂದು ಬಹುತೇಕ ಕಾಂಗ್ರೆಸ್ ನಾಯಕರು ಒತ್ತಾಯಿಸುತ್ತಿದ್ದರು. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಕ್ಷೇತ್ರದ ಅಭ್ಯರ್ಥಿಯನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಷ ಟಿಕೆಟ್ ನೀಡುವುದಿಲ್ಲ ಎಂಬ ಮಾಹಿತಿಯನ್ನು ಮೊದಲೇ ಪಡೆದಿದ್ದ ಅಖಂಡ ಶ್ರೀನಿವಾಸ ಮೂರ್ತಿ ಈಗಾಗಲೇ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷೇತರರಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ.
ಪುಲಗೇಶಿ ನಗರದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಎ. ಸಿ. ಶ್ರೀನಿವಾಸ್ ದೇವನಹಳ್ಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷವು ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಿದೆ. ತಮ್ಮ ಗೆಲುವಿನ ದಾರಿ ಸುಲಭ ಮಾಡಿಕೊಳ್ಳಲು ಮುನಿಯಪ್ಪ ಎ ಸಿ ಶ್ರೀನಿವಾಸ್‌ಗೆ ಪುಲಿಕೇಶಿನಗರದ ಟಿಕೆಟ್ ಕೊಡಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.
ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರೆಂದು ಗುರುತಿಸಲ್ಪಟ್ಟಿರುವ ಸಂಪತ್ ರಾಜ್‌ಗೆ ಈ ಬಾರಿ ಟಿಕೆಟ್ ನೀಡಲಾಗುತ್ತಿಲ್ಲ. ಸಿವಿ ರಾಮನ್ ನಗರ, ಪುಲಿಕೇಶಿನಗರ ಎರಡೂ ಕಡೆಯಲ್ಲೂ ಅವರಿಗೆ ಟಿಕೆಟ್ ಮಿಸ್ ಆಗಿದೆ.
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಮಂಗಳೂರು ಉತ್ತರ ಕ್ಷೇತ್ರದಿಂದ ಇನಾಯತ್ ಆಲಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಮಾಜಿ ಶಾಸಕ ಬಿ.ಎ. ಮೊಹಿಯುದ್ದೀನ್ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಸಿವಿ ರಾಮನ್ ನಗರದಿಂದ ಆನಂದ ಕುಮಾರ್, ಮುಳಬಾಗಿಲು ಕ್ಷೇತ್ರದಿಂದ ಡಾ. ಮುದ್ದು ಗಂಗಾಧರ್, ಅರಕಲಗೂಡು ಕ್ಷೇತ್ರದಿಂದ ಕೃಷ್ಣೆಗೌಡ, ಶಿಡ್ಲಘಟ್ಟ ಕ್ಷೇತ್ರದಿಂದ ರಾಜೀವ್ ಗೌಡ ಹಾಗೂ ಕೆ ಆರ್ ಪುರಂ ಕ್ಷೇತ್ರದಿಂದ ಮೋಹನ್ ಬಾಬು ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಲಿದೆ.