ಬೆಂಗಳೂರು: ವಿಧಾನಸಭಾ ಚುನಾವಣೆಗೆ (Karnataka Election 2023) ಸಂಬಂಧಿಸಿದಂತೆ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರಕಟಿಸಲಾಗಿದ್ದ ಅಭ್ಯರ್ಥಿಯನ್ನು ಬದಲಾಯಿಸಲಾಗಿದ್ದು, ಮಹ್ಮದ್ ಯೂಸುಫ್ ಸವಣೂರು ಬದಲಾಗಿ ಈಗ ಸ್ಥಳೀಯ ಮುಖಂಡ ಯಾಸೀರ್ ಅಹ್ಮದ್‌ಖಾನ್ ಪಠಾಣ್ ಅವರನ್ನು ಕಣಕ್ಕಿಳಿಸಲಾಗಿದೆ.
ಹುಬ್ಬಳ್ಳಿ ಅಂಜುಮಾನ್ ಕಮಿಟಿ ಅಧ್ಯಕ್ಷರಾಗಿರುವ ಯೂಸುಫ್ ಸವಣೂರು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅಚ್ಚರಿ ಎನ್ನುವಂತೆ ಅವರಿಗೆ ಶಿಗ್ಗಾಂವಿ ಕ್ಷೇತ್ರದ ಟಿಕೆಟ್ ನೀಡಲಾಗಿತ್ತು. ಯೂಸುಫ್ ಸವಣೂರುಗೆ ಟಿಕೆಟ್ ಘೋಷಣೆ ಮಾಡಿದ್ದರಿಂದ ಸ್ಥಳೀಯ ಮುಖಂಡರು ಅಸಮಧಾನ ವ್ಯಕ್ತಪಡಿಸಿದ್ದು, ಟಿಕೆಟ್ ಬದಲಾವಣೆಗೆ ಒತ್ತಾಯಿಸಿದ್ದರು. ಒಟ್ಟು 14 ಸ್ಥಳೀಯ ನಾಯಕರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅಜ್ಜಂಪೀರ್ ಖಾದ್ರಿ ಈ ಬಾರಿ ಟಿಕೆಟ್ ಬೇಡ ಎಂದಿದ್ದರಿಂದ ಪಕ್ಷಕ್ಕೆ ಅಭ್ಯರ್ಥಿಯ ಆಯ್ಕೆ ಸವಾಲಾಗಿತ್ತು.
ಈ ನಡುವೆ ಮುಖ್ಯಮಂತ್ರಿ ಎದುರಿಗೆ ಡಮ್ಮಿ ಅಭ್ಯರ್ಥಿಗೆ ಪಕ್ಷದ ಟಿಕೆಟ್ ನೀಡಲಾಗಿದೆ ಎಂಬ ಚರ್ಚೆಯೂ ಪಕ್ಷದಲ್ಲಿ ನಡೆಯುತ್ತಿತ್ತು. ಈಗಾಗಲೇ ಟಿಕೆಟ್ ಆಕಾಂಕ್ಷಿಗಳಾಗಿದ್ದ ಶಶಿಧರ ಯಲಿಗಾರ ಹಾಗೂ ಶಣ್ಮುಖ ಶಿವಳ್ಳಿ ಬಂಡಾಯವೆದ್ದು ನಾಮಪತ್ರ ಕೂಡ ಸಲ್ಲಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಕ್ಷ ಅಭ್ಯರ್ಥಿಯನ್ನು ಬದಲಾಯಿಸಿದ ಕಾಂಗ್ರೆಸ್ ಪಕ್ಷದ ವರಿಷ್ಠರು, ಸ್ಥಳೀಯ ಕಾಂಗ್ರೆಸ್ ನಾಯಕರಾಗಿರುವ ಯಾಸೀರ್ ಅಹ್ಮದ್‌ಖಾನ್ ಪಠಾಣ್ ಅವರನ್ನು ಕಣಕ್ಕಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಪುಲಿಕೇಶಿನಗರ ನಗರ ವಿಧಾನಸಭಾ ಕ್ಷೇತ್ರದಿಂದ ಎ. ಸಿ. ಶ್ರೀನಿವಾಸ್ ಅವರನ್ನು ಕಣಕ್ಕಿಳಿಸಲಾಗಿದೆ. ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಟಿಕೆಟ್ ನೀಡಬೇಕೆಂದು ಬಹುತೇಕ ಕಾಂಗ್ರೆಸ್ ನಾಯಕರು ಒತ್ತಾಯಿಸುತ್ತಿದ್ದರು. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಕ್ಷೇತ್ರದ ಅಭ್ಯರ್ಥಿಯನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಷ ಟಿಕೆಟ್ ನೀಡುವುದಿಲ್ಲ ಎಂಬ ಮಾಹಿತಿಯನ್ನು ಮೊದಲೇ ಪಡೆದಿದ್ದ ಅಖಂಡ ಶ್ರೀನಿವಾಸ ಮೂರ್ತಿ ಈಗಾಗಲೇ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷೇತರರಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ.
ಮುಳಬಾಗಿಲು ಕ್ಷೇತ್ರದಿಂದ ಡಾ. ಮುದ್ದು ಗಂಗಾಧರ್, ಕೆ ಆರ್ ಪುರಂ ಕ್ಷೇತ್ರದಿಂದ ಡಿ.ಕೆ. ಮೋಹನ್ (ಗೊಲ್ಲ ಸಮುದಾಯಕ್ಕೆ ಸೇರಿದ ಮೋಹನ್ ಎ.ಕೃಷ್ಣಪ್ಪರ ತಮ್ಮನ ಮಗನಾಗಿದ್ದಾರೆ.) ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಪಕ್ಷ ಇನ್ನೂ ಐದು ಕ್ಷೇತ್ರಗಳ ಅಭ್ಯರ್ಥಿಯನ್ನು ಕಾಂಗ್ರೆಸ್ ಪ್ರಕಟಿಸಬೇಕಿದೆ. ಈ ಕ್ಷೇತ್ರಗಳೆಂದರೆ; ಸಿ.ವಿ ರಾಮನ್ ನಗರ, ಮಂಗಳೂರು ಉತ್ತರ, ಶಿಡ್ಲಘಟ್ಟ, ಅರಕಲಗೂಡು ಮತ್ತು ರಾಯಚೂರು ಸಿಟಿ.
ಇದನ್ನೂ ಓದಿ : Karnataka elections 2023: ಜೈಲಿಗೆ ಹೋಗಿ ಬಂದಿರುವ ವ್ಯಕ್ತಿಗಳಿಂದ ಗಂಗಾವತಿ ಜನರು ಪಾಠ ಕಲಿಯುವ ಅಗತ್ಯವಿಲ್ಲ: ಇಕ್ಬಾಲ್ ಅನ್ಸಾರಿ