Site icon Vistara News

Karnataka Election 2023 : ಕಾಂಗ್ರೆಸ್‌ನಿಂದ ಒಟ್ಟು 209 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ; ಯಾವ ಜಾತಿಗೆ ಎಷ್ಟು ಟಿಕೆಟ್‌?

Congress releases fourth list of 10 candidates for Karnataka Assembly polls

#image_title

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಸ್ಪರ್ಧಿಸಲಿರುವ ಕಾಂಗ್ರೆಸ್‌ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟವಾಗಿದೆ. 43 ಅಭ್ಯರ್ಥಿಗಳ ಹೆಸರು ಈ ಪಟ್ಟಿಯಲ್ಲಿದ್ದು, ಒಟ್ಟಾರೆ ಪಕ್ಷವು 209 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದಂತಾಗಿದೆ. ಇನ್ನು ಕೇವಲ 15 ಕ್ಷೇತ್ರಗಳ ಅಭ್ಯರ್ಥಿಗಳನ್ನಷ್ಟೇ ಅಂತಿಮಗೊಳಿಸಬೇಕಾಗಿದೆ.

ಮೂರನೇ ಪಟ್ಟಿಯಲ್ಲಿನ ಒಟ್ಟು 16 ಅಭ್ಯರ್ಥಿಗಳು ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಇದುವರೆಗೆ ಕಾಂಗ್ರೆಸ್‌ ಪ್ರಕಟಿಸಿದ ಅಭ್ಯರ್ಥಿಗಳಲ್ಲಿ ಲಿಂಗಾಯಿತರು ಪ್ರಾಬಲ್ಯ ಮೆರೆದಿದ್ದಾರೆ. ಒಟ್ಟಾರೆ 47 ಅಭ್ಯರ್ಥಿಗಳು ಈ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನಂತರದ ಸ್ಥಾನವನ್ನು ಒಕ್ಕಲಿಗರು ಪಡೆದುಕೊಂಡಿದ್ದಾರೆ. 43 ಒಕ್ಕಲಿಗ ಅಭ್ಯರ್ಥಿಗಳು ಕಣಕ್ಕಿಳಿಯುತ್ತಿದ್ದಾರೆ. ಪರಿಶಿಷ್ಟ ಜಾತಿಯ (ಎಡಬಲ ಸೇರಿ) 31 ಅಭ್ಯರ್ಥಿಗಳನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ.
ಉಳಿದಂತೆ 16 ಅಭ್ಯರ್ಥಿಗಳು ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 12 ಅಭ್ಯರ್ಥಿಗಳು ಕುರುಬರು, 12 ಅಭ್ಯರ್ಥಿಗಳು ಮುಸ್ಲೀಮರು, 7 ಬ್ರಾಹ್ಮಣರು, 3 ಕ್ರಿಶ್ಚಿಯನ್‌ ಧರ್ಮಕ್ಕೆ ಸೇರಿದವರಾಗಿದ್ದಾರೆ.

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲಿ ಎಲ್ಲದಕ್ಕಿಂತ ಜಾತಿ ಲೆಕ್ಕಾಚಾರ ಮತ್ತು ಲಾಬಿಯೇ ಮುಂಚೂಣಿಗೆ ಬಂದಿತ್ತು. ಪಕ್ಷದ ನಾಯಕರು ತಮ್ಮ ವೈಯಕ್ತಿಕ ವರ್ಚಸ್ಸಿನ ಜತೆಗೆ ಜಾತಿಯನ್ನೂ ಮುಂದಿಟ್ಟುಕೊಂಡು ಟಿಕೆಟ್‌ಗೆ ಲಾಬಿ ನಡೆಸಿದ್ದರು. ಇನ್ನು ಅಭ್ಯರ್ಥಿಗಳ ಜತೆಗೆ ಸಮುದಾಯದ ನಾಯಕರು ತಮ್ಮ ಸಮುದಾಯಕ್ಕೆ ಹೆಚ್ಚೆಚ್ಚು ಟಿಕೆಟ್‌ ಕೊಡಬೇಕು ಎಂದು ಒತ್ತಡ ಹೇರುತ್ತಲೇ ಬಂದಿದ್ದರು.

ಕಾಂಗ್ರೆಸ್‌ ಪಕ್ಷದ ಮೂಲಗಳ ಪ್ರಕಾರವೇ, ಪಂಚಮಸಾಲಿ ಹಾಗೂ ಲಿಂಗಾಯತ ಸಮುದಾಯವರು 65, ಪರಿಶಿಷ್ಟ ಜಾತಿ ಎಡ ಪಂಗಡದವರು 15, ಪರಿಶಿಷ್ಟ ಜಾತಿ ಬಲ ಪಂಗಡದವರು15, ಪರಿಶಿಷ್ಟ ಪಂಗಡದವರು 20, ಒಕ್ಕಲಿಗ ಸಮುದಾಯದವರು 48, ಒಬಿಸಿಯವರು 52 ಮುಸ್ಲಿಂ ಸಮುದಾಯವದುರ 24 ಟಿಕೆಟ್‌ಗೆ ಬೇಡಿಕೆ ಮುಂದಿಟ್ಟಿದ್ದರು. ಆದರೆ ಗೆಲ್ಲುವ ಅಭ್ಯರ್ಥಿ ಮತ್ತು ಕ್ಷೇತ್ರದಲ್ಲಿನ ಜಾತಿ ಎರಡನ್ನೂ ಲೆಕ್ಕಹಾಕಿ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಪಕ್ಷವು 47 ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅದರಲ್ಲಿ 17 ಅಭ್ಯರ್ಥಿಗಳು ಜಯಗಳಿಸಿದ್ದರು. ಕಣಕ್ಕಿಳಿಸಿದ್ದ 46 ಒಕ್ಕಲಿಗ ಅಭ್ಯರ್ಥಿಗಳ ಪೈಕಿ 15 ಮಂದಿ ಗೆದ್ದಿದ್ದರು. ಒಟ್ಟು 50 ಒಬಿಸಿ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿತ್ತು. ಇವರಲ್ಲಿ 15 ಅಭ್ಯರ್ಥಿಗಳು ಮಾತ್ರ ಗೆದ್ದಿದ್ದರು.
ಕಳೆದ ಚುನಾವಣೆಯಲ್ಲಿ ಈ ಬಾರಿಗಿಂತ ಹೆಚ್ಚು ಅಂದರೆ 17 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿತ್ತು. ಇದರಲ್ಲಿ ಏಳು ಮಂದಿ ಮಾತ್ರ ಗೆದ್ದಿದ್ದರು. ಪರಿಶಿಷ್ಟ ಜಾತಿಯ 17 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು, ಇವರಲ್ಲಿ 9 ಮಂದಿ ಗೆದ್ದಿದ್ದರು. ಟಿಕೆಟ್‌ ಪಡೆದಿದ್ದ ಆರು ಬ್ರಾಹ್ಮಣರಲ್ಲಿ ನಾಲ್ವರು ಗೆದ್ದಿದ್ದರು.

ಹೆಚ್ಚು ಕಡಿಮೆ ಕಳೆದ ಬಾರಿಯಂತೆಯೇ ಕಾಂಗ್ರೆಸ್‌ ಜಾತಿ ನೋಡಿ ಮಣೆ ಹಾಕಿದೆ. ಇನ್ನೂ ಹದಿನೈದು ಕ್ಷೇತ್ರಗಳ ಅಭ್ಯರ್ಥಿಯನ್ನು ಅಂತಿಮಗೊಳಿಸಬೇಕಾಗಿದ್ದು, ಆ ನಂತರವಷ್ಟೇ ಯಾವ ಜಾತಿಯ ಅಭ್ಯರ್ಥಿಗಳು ಎಷ್ಟು ಮಂದಿ ಕಣಕ್ಕಿಳಿದಿದ್ದಾರೆ ಎಂಬುದು ಸ್ಪಷ್ಟವಾಗಲಿದೆ. ಕಾಂಗ್ರೆಸ್‌ ಇನ್ನೂ ಅಭ್ಯರ್ಥಿಗಳನ್ನು ಘೋಷಿಸದೇ ಇರುವ ಕ್ಷೇತ್ರಗಳೆಂದರೆ; ಪುಲಕೇಶಿ ನಗರ, ಸಿವಿ ರಾಮನ್ ನಗರ, ಮುಳಬಾಗಿಲು, ರಾಯಚೂರು ಸಿಟಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪರ್ಧಿಸುತ್ತಿರುವ ಶಿಗ್ಗಾವಿ, ಶ್ರವಣಬೆಳಗೊಳ, ಅರಕಲಗೂಡು, ಲಿಂಗಸೂರು, ಹುಬ್ಬಳ್ಳಿ ಧಾರವಾಡ ಸೆಂಟ್ರಲ್, ಹುಬ್ಬಳ್ಳಿ ಧಾರವಾಡ ವೆಸ್ಟ್, ಮಂಗಳೂರು ‌ಉತ್ತರ, ಶಿಡ್ಲಘಟ್ಟ, ಚಿಕ್ಕಮಗಳೂರು, ಕೆ.ಆರ್ ಪುರಂ ಮತ್ತು ಹರಿಹರ.

ಇದನ್ನೂ ಓದಿ : Karnataka Elections 2023 : ಜೆಡಿಎಸ್‌ನಿಂದ ಇನ್ನೂ 6 ಕ್ಷೇತ್ರಗಳ ಪಟ್ಟಿ ರಿಲೀಸ್‌; ಮಾಲಕ ರೆಡ್ಡಿ, ರಘು ಆಚಾರ್‌ಗೆ ಟಿಕೆಟ್‌

Exit mobile version