Site icon Vistara News

Karnataka Election 2023 : ಅಶೋಕ್‌ ವಿರುದ್ಧ ಸುರೇಶ್‌ ಸ್ಪರ್ಧೆ; ಕುತೂಹಲ ಉಳಿಸಿಕೊಂಡ ಕಾಂಗ್ರೆಸ್‌!

DK Shivakumar will definitely contest from Kanakapura; Says DK Suresh

DK Shivakumar will definitely contest from Kanakapura; Says DK Suresh

ಬೆಂಗಳೂರು: ಸಚಿವ ಆರ್.‌ ಅಶೋಕ್‌ ಸ್ಪರ್ಧಿಸಲಿರುವ ಪದ್ಮನಾಭನಗರ ಕ್ಷೇತ್ರದಿಂದ (Karnataka Election 2023) ಕಾಂಗ್ರೆಸ್‌ ಅಭ್ಯರ್ಥಿಯಾಗಿ ರಘುನಾಥ್ ನಾಯ್ಡು ಬಿ ಫಾರಂನೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಸದ್ಯ ಅವರೇ ಅಧಿಕೃತ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ!

ಆದರೆ ಈ ಕ್ಷೇತ್ರದಿಂದ ಸಂಸದ ಡಿ.ಕೆ. ಸುರೇಶ್‌ ಕಣಕ್ಕಿಳಿಯಲಿದ್ದಾರೆಯೇ ಎಂಬ ಕುತೂಹಲ ಇನ್ನೂ ಮುಂದುವರೆದಿದೆ. ಬುಧವಾರ ನಾಮಪತ್ರ ಸಲ್ಲಿಸಿದ ರಘುನಾಥ್ ನಾಯ್ಡು , ನಾಳೆ ಮಧ್ಯಾಹ್ನದ ಒಳಗೆ ಸಂಸದ ಡಿ.ಕೆ. ಸುರೇಶ್‌ ನಾಮಪತ್ರ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ಅವರು ಸ್ಪರ್ಧೆ ಮಾಡಿದರೆ ತಾವು ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. ಡಿ.ಕೆ.ಸುರೇಶ್‌ ಹೊರತು ಪಡಿಸಿ ಬೇರೆಯಾರಾದರೂ ನಾಮಪತ್ರ ಸಲ್ಲಿಸಿದರೆ ತಾವೇ ಕಣದಲ್ಲಿ ಮುಂದುವರಿಯುವುದಾಗಿಯೂ ಅವರು ಹೇಳಿದ್ದಾರೆ.

ಬುಧವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್‌, ತಾವು ಕಣಕ್ಕಿಳಿಯಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್ ಗಾಂಧಿ ಸೂಚನೆಗಾಗಿ ಕಾಯುತ್ತಿದ್ದೇನೆ. ನೋ ಡ್ಯೂ ಸರ್ಟಿಫಿಕೇಟ್ ಅನ್ನು ದೆಹಲಿಯಿಂದ ತರಿಸಿಕೊಂಡಿದ್ದೇನೆ. ಅಗತ್ಯ ದಾಖಲೆಗಳು ಸಿದ್ಧವಾಗುತ್ತಿದ್ದು, ಪಕ್ಷದ ನಾಯಕರು ಸೂಚನೆ ನೀಡುತ್ತಿದ್ದಂತೆಯೇ ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ತಮ್ಮನ್ನು ಕಣಕ್ಕಿಳಿಸುವ ಕುರಿತು ಪಕ್ಷದ ವರಿಷ್ಠ ನಾಯಕರ ನಡುವೆ ಚರ್ಚೆ ನಡೆಯುತ್ತಿದೆ. ಪದ್ಮನಾಭನಗರ ಮಾತ್ರವಲ್ಲ, ಮಂಡ್ಯ ಸೇರಿದಂತೆ ಬೇರೆ ಕ್ಷೇತ್ರಗಳಿಂದಲೂ ಸ್ಪರ್ಧಿಸಲು ಸಾಕಷ್ಟು ಒತ್ತಡಗಳಿವೆ ಎಂದು ಹೇಳಿರುವ ಡಿ.ಕೆ. ಸುರೇಶ್‌, ವೈಯಕ್ತಿಕವಾಗಿ ನನಗೆ ಚುನಾವಣೆಗೆ ನಿಲ್ಲುವ ಮನಸ್ಸಿಲ್ಲ. ಆದರೆ ಕಾರ್ಯಕರ್ತರು ಮತ್ತು ಮುಖಂಡರ ಅಭಿಪ್ರಾಯ ಮುಖ್ಯವಾಗುತ್ತದೆ ಎಂದಿದ್ದಾರೆ.

ಡಿಕೆಶಿ ಹೇಳಿದ ಹಾಗೆ ಶುಭ ಘಳಿಗೆ ಶುಭ ಸಮಯದಲ್ಲಿ ಎಲ್ಲವೂ ನಡೆಯುತ್ತಿರುತ್ತದೆ. ಗುರುವಾರ ಗ್ರಹಣ ಅಮಾವಾಸ್ಯೆಯಾಗಿರುವುದರಿಂದ ಅಶುಭ ದಿನವಲ್ಲ, ದಿನ ಚೆನ್ನಾಗಿದೆ ಅಂತ ನನಗೆ ಎಲ್ಲರೂ ಹೇಳಿದ್ದಾರೆ. ಹೀಗಾಗಿ ನಾಳೆ ಕೂಡ ನಾನು ನಾಮಪತ್ರ ಸಲ್ಲಿಸಬಹುದು ಎಂದು ಹೇಳಿರುವ ಡಿ ಕೆ. ಸುರೇಶ್‌, ಏನೇ ತೀರ್ಮಾನವಾಗುವುದಿದ್ದರೂ ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆಯ ಒಳಗೆ ತೀರ್ಮಾನವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಚಿವ ಅಶೋಕ್‌ ಅವರನ್ನು ಭಯಬೀಳಿಸುವ ಉದ್ದೇಶದಿಂದ ಸ್ಪರ್ಧೆಯ ಕುರಿತು ಹೇಳಿಕೆ ನೀಡುತ್ತಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಡಿ. ಕೆ. ಸುರೇಶ್‌ ʻʻಪಾಪ…. ಅಶೋಕ್….ʼʼ ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ.

ಬುಧವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪದ್ಮನಾಭನಗರದಿಂದ ಡಿ.ಕೆ.ಸುರೇಶ್‌ ಸ್ಪರ್ಧಿಸಲಿದ್ದಾರೆ. ಅವರು ನಾಮ ಪತ್ರ ಸಲ್ಲಿಸುವ ಸಂದರ್ಭದಲ್ಲಿ ನಾನೂ ಇರುತ್ತೇನೆ ಎಂದು ಹೇಳಿದ್ದರು.

ಅಶೋಕ್‌ ಗೆಲುವು ಖಚಿತ
ಪದ್ಮನಾಭನಗರದಿಂದ ಸಂಸದ ಡಿ.ಕೆ.ಸುರೇಶ್‌ ಸ್ಪರ್ಧಿಸಲಿದ್ದಾರೆ ಎಂಬ ವರದಿಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಬಿಜೆಪಿಯ ಉಸ್ತುವಾರಿ ಅರುಣ್‌ ಸಿಂಗ್‌ ಅವರ ಸ್ಪರ್ಧೆಯಿಂದ ಸಚಿವ ಅಶೋಕ್‌ ಗೆಲ್ಲುವುದು ಇನ್ನಷ್ಟು ಸುಲಭವಾಗಲಿದೆ ಎಂದಿದಾರೆ. ಡಿ.ಕೆ.ಸುರೇಶ್‌ ಈಗಾಗಲೇ ಸಂಸದರಾಗಿದ್ದಾರೆ. ಅವರು ಸ್ಪರ್ಧಿಸುವುದರಿಂದ ಬಿಜೆಪಿಗೆ ಇನ್ನಷ್ಟು ಅನುಕೂಲವಾಗಲಿದೆ. ಕಾಂಗ್ರೆಸ್‌ ಯಾರನ್ನೇ ಕಣಕ್ಕಿಳಿಸಿದರೂ ಆಶೋಕ್‌ ಗೆಲ್ಲಲಿದ್ದಾರೆ ಎಂದು ಅವರು ಹೇಳಿದ್ದಾರೆ.

ರಘುನಾಥ್ ನಾಯ್ಡು ಬೃಹತ್‌ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಇದ್ದರು. ಅವರು ಈ ಸಂದರ್ಭದಲ್ಲಿ ಮಾತನಾಡಿ, ಈ ಬಾರಿ ಬಿಜೆಪಿ ಅಭ್ಯರ್ಥಿ ಆರ್‌. ಅಶೋಕ್‌ ಸೋಲುವುದು ಖಚಿತ ಎಂದರು.

ಇದನ್ನೂ ಓದಿ : Karnataka Elections : ಐದು ವರ್ಷ ಪಾಲಿಟಿಕ್ಸ್‌ ಮಾಡಿ ಮತ್ತೆ ಪೊಲೀಸ್‌ ಇಲಾಖೆ ಸೇರಿಕೊಂಡ ಅಧಿಕಾರಿ! ಅದು ಹೇಗೆ ಸಾಧ್ಯ?

Exit mobile version