Site icon Vistara News

Karnataka Election 2023 : ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆ, ಹೈಕಮಾಂಡ್‌ನತ್ತ ಬಿಜೆಪಿಗರ ನೋಟ

Karnataka Election 2023 hung verdict karnataka congress jds leaders active in discussion

#image_title

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ (Karnataka Election 2023 ) ಮತದಾನ ನಡೆದ ಮಾರನೇ ದಿನ ಅಂದರೆ ಗುರುವಾರ ಕೂಡ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಈ ಬಾರಿ ಕೂಡ ಅತಂತ್ರ ವಿಧಾನಸಭೆ ರಚನೆಯಾಗಬಹುದು ಎಂದು ಎಕ್ಸಿಟ್‌ ಪೋಲ್‌ಗಳು ಹೇಳಿರುವುದರಿಂದ ʻಮುಂದೇನು?ʼ ಎಂಬ ಪ್ರಶ್ನೆ ರಾಜ್ಯದ ಪ್ರಮುಖ ಮೂರು ಪಕ್ಷಗಳ ನಾಯಕರನ್ನು ಕಾಡುತ್ತಿದೆ.

ಒಂದು ವೇಳೆ ಮತಗಟ್ಟೆ ಸಮೀಕ್ಷೆಗಳು ಅಭಿಪ್ರಾಯ ಪಟ್ಟಂತೆ ಅತಂತ್ರ ವಿಧಾನಸಭೆ ರಚನೆಯಾದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಇರುವ ಏಕೈಕ ಅವಕಾಶವೆಂದರೆ ಜೆಡಿಎಸ್‌ನೊಂದಿಗೆ ಸೇರಿಕೊಂಡು ಸರ್ಕಾರ ರಚಿಸುವುದು. ಜೆಡಿಎಸ್‌ಗೆ ಕೂಡ ಈ ಎರಡು ಪಕ್ಷಗಳೇ ಗತಿ. ಹೀಗಾಗಿ ಒಲ್ಲದ ಮನಸ್ಸಿನಿಂದಲೇ ಮೂರು ಪಕ್ಷಗಳ ನಾಯಕರೂ ಮುಂದಿನ ಕಾರ್ಯತಂತ್ರ ರೂಪಿಸಲು ಆರಂಭಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆ

ಈ ಬಾರಿಯ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಎಂದು ಅಂದಾಜಿಸಲಾಗಿರುವ ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಜ್ವರದಿಂದ ಬಳಲುತ್ತಿದ್ದರೂ ಪಕ್ಷದ ಇತರ ನಾಯಕರೊಂದಿಗೆ ದೂರವಾಣಿಯಲ್ಲಿಯೇ ಚರ್ಚೆ ನಡೆಸುತ್ತಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸುಮಾರು ಮೂರು ತಾಸು ಚರ್ಚೆ ನಡೆಸಿದ್ದಾರೆ. ಪಕ್ಷಕ್ಕೆ ಎಷ್ಟು ಸ್ಥಾನ ದೊರೆಯಬಹುದು, ಹೊಂದಾಣಿಕೆ ಅನಿವಾರ್ಯವಾದರೆ ಮುಂದಿನ ದಾರಿ ಏನು ಎಂಬುದರ ಕುರಿತು ಚರ್ಚೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಮತ್ತೆ ಸಂಜೆ ಕೂಡ ಈ ಇಬ್ಬರು ನಾಯಕರು ಚರ್ಚೆಯನ್ನು ಮುಂದುವರಿಸುವ ಸಾಧ್ಯತೆಗಳಿವೆ. ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಕೂಡ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ರಣದೀಪ್ ಸಿಂಗ್ ಸುರ್ಜೆವಾಲಾ

ಸಿದ್ದರಾಮಯ್ಯರೊಂದಿಗಿನ ಮ್ಯಾರಥಾನ್ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೆವಾಲಾ, ʻʻಕಾಂಗ್ರೆಸ್‌ ಸರ್ಕಾರ ರಚನೆ ಮಾಡಲಿದೆ. ಈ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆʼʼ ಎಂದಷ್ಟೇ ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿರುವ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಕೂಡ ರಾಜ್ಯದ ಇತರ ಕಾಂಗ್ರೆಸ್‌ ನಾಯಕರೊಂದಿಗೆ ಚರ್ಚೆ ನಡೆಸುತ್ತಿದ್ದು, ಒಂದು ವೇಳೆ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಆಯ್ಕೆಯ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಎಲ್ಲವನ್ನೂ ಹೈಕಮಾಂಡ್‌ಗೆ ಬಿಟ್ಟ ಬಿಜೆಪಿ ನಾಯಕರು

ಇನ್ನು ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂಬ ಮತಗಟ್ಟೆ ಸಮೀಕ್ಷೆಗಳಿಂದ ಕಂಗೆಟ್ಟಿರುವ ಬಿಜೆಪಿ ನಾಯಕರು ಸರ್ಕಾರ ರಚನೆಗೆ ಸಂಬಂಧಿಸಿದಂತೆ ಯಾವುದೇ ಚಟುವಟಿಕೆ ನಡೆಸದೇ ಎಲ್ಲ ಪ್ರಶ್ನೆಗಳಿಗೂ ಹೈಕಮಾಂಡ್‌ನತ್ತ ಬೊಟ್ಟುಮಾಡುತ್ತಿದ್ದಾರೆ.

ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಶಿವಮೊಗ್ಗದಿಂದ ಬೆಂಗಳೂರಿಗೆ ಹಿಂದಿರುಗಿದ್ದು, ಪಕ್ಷ 115 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಹಿಡಿಯಲಿದೆ ಎಂದು ಖಚಿತವಾಗಿ ಹೇಳುತ್ತಿದ್ದಾರೆ. ಸರ್ಕಾರ ರಚನೆ ಬಗ್ಗೆ ಮತ್ತು ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಪಕ್ಷದ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಎಕ್ಸಿಟ್‌ ಪೋಲ್‌ನ ಕುರಿತು ಮಾಜಿ ಸಿಎಂ ಯಡಿಯೂರಪ್ಪ ಅವರ ಪ್ರತಿಕ್ರಿಯೆ ಏನು?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪೂರ್ಣ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದು, ರಾಜಧಾನಿಗೆ ಹಿಂದಿರುಗಿಲ್ಲ. ಕುಟುಂಬದೊಂದಿಗೆ ಸವದತ್ತಿ ಎಲ್ಲಮ್ಮ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಗುರುವಾರ ಸಂಜೆ ಅವರು ಬೆಂಗಳೂರಿಗೆ ಆಗಮಿಸಲಿದ್ದು, ನಂತರವಷ್ಟೇ ಸರ್ಕಾರ ರಚನೆ ಕುರಿತು ಚಟುವಟಿಕೆ ಆರಂಭಿಸಬಹುದೆಂದು ನಿರೀಕ್ಷಿಸಲಾಗುತ್ತಿದೆ. ಮುಖ್ಯಮಂತ್ರಿ ಸೇರಿದಂತೆ ಬಿಜೆಪಿಯ ಬಹುತೇಕ ನಾಯಕರು ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಮುಂದೇನು ಎಂಬ ಕುರಿತು ಪಕ್ಷದ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ನಿರಾಳರಾಗಿದ್ದಾರೆ.

ಜೆಡಿಎಸ್‌ನಲ್ಲಿ ದಂಡನಾಯಕನಿಲ್ಲ

ಅತಂತ್ರ ವಿಧಾನಸಭೆ ರಚನೆಯಾದಲ್ಲಿ ಎಲ್ಲರ ಗಮನ ಸೆಳೆಯಲಿರುವ ಜೆಡಿಎಸ್‌ನಲ್ಲಿ ಹೊಸ ಹುರುಪು ಕಾಣಿಸುತ್ತಿದೆ. ಯಾವುದೇ ಪಕ್ಷ ಸರ್ಕಾರ ರಚಿಸಿದರೂ ತಮ್ಮ ಪಕ್ಷದ ಬೆಂಬಲ ಬೇಕೇ ಬೇಕು ಎಂಬ ವಿಷಯವೇ ಪಕ್ಷದ ನಾಯಕರಲ್ಲಿ ಹೊಸ ಉತ್ಸಾಹವನ್ನು ತುಂಬಿದೆ. ಅದರೆ ಸರ್ಕಾರ ರಚನೆ ಅಥವಾ ಬೆಂಬಲದ ಕುರಿತು ತೀರ್ಮಾನಿಸಬೇಕಾಗಿರುವ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಿಂಗಾಪುರದಕ್ಕೆ ತೆರಳಿರುವುದು ಪಕ್ಷದ ನಾಯಕರಲ್ಲಿ ನಿರಾಸೆ ಮೂಡಿಸಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ಪಕ್ಷದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ನಿರ್ಧಾರವೇ ಅಂತಿಮವಾಗಿದ್ದು, ಒಂದು ವೇಳೆ ಅತಂತ್ರ ವಿಧಾನಸಭೆ ನಿರ್ಮಾಣವಾದಲ್ಲಿ ದೇವೇಗೌಡರು ಯಾವ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಎಲ್ಲರೂ ಬೆಂಗಳೂರಿನ ಪದ್ಮನಾಭನಗರದಲ್ಲಿನ ಅವರ ನಿವಾಸದತ್ತ ನೋಡುತ್ತಿದ್ದಾರೆ. ಈ ನಡುವೆ ಪಕ್ಷದ ಎರಡನೇ ಹಂತದ ನಾಯಕರು, ಮುಂದೆ ಬಿಜೆಪಿ ಅಥವಾ ಕಾಂಗ್ರೆಸ್‌ ಆಪರೇಷನ್‌ ನಡೆಸಿದರೆ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಹೇಗೆ ಎಂಬ ಕುರಿತು ಚರ್ಚೆ ನಡೆಸುತ್ತಿದ್ದು, ಪಕ್ಷದ ಗೆಲ್ಲುವ ಅಭ್ಯರ್ಥಿಗಳೊಂದಿಗೆ ಈಗಿನಿಂದಲೇ ಸಂಪರ್ಕದಲ್ಲಿದ್ದಾರೆ.

ರಾಜ್ಯದಲ್ಲಿನ ರಾಜಕೀಯ ಆಸಕ್ತರಂತೂ ಎಕ್ಸಿಟ್‌ ಪೋಲ್‌ಗಳನ್ನು ಮುಂದಿಟ್ಟುಕೊಂಡು ಮುಂದೇನಾಗಹುದು? ಚುನಾವಣೆಯ ಫಲಿತಾಂಶ ಏನಿರಬಹುದು? ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಪಕ್ಷದ ಸ್ಥಳೀಯ ನಾಯಕರಂತೂ ಬೆಟ್ಟಿಂಗ್‌ನಲ್ಲಿ ತೊಡಗಿರುವುದು ಸಾಮಾನ್ಯವಾಗಿದೆ.

ಇದನ್ನೂ ಓದಿ : Karnataka Election 2023 : ಕುಮಾರಸ್ವಾಮಿ ಹೋಗಿದ್ದು, ಸಿಂಗಾಪುರಕ್ಕೋ ದೆಹಲಿಗೋ?

Exit mobile version