ಬೆಂಗಳೂರು: ರಾಜ್ಯದಲ್ಲಿ ಈ ಬಾರಿಯೂ ಅತಂತ್ರ ವಿಧಾನಸಭೆ (Karnataka Election 2023) ರಚನೆಯಾಗಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು (ಎಕ್ಸಿಟ್ ಪೋಲ್) ಅಭಿಪ್ರಾಯಪಟ್ಟಿರುವುದರಿಂದ ಮುಂದೇನು ಎಂದು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಚಿಂತಿಸುತ್ತಿದ್ದಾರೆ. ಒಂದು ವೇಳೆ ಮತಗಟ್ಟೆ ಸಮೀಕ್ಷೆಗಳು ಅಭಿಪ್ರಾಯಪಟ್ಟಂತೆ ಅತಂತ್ರ ವಿಧಾನಸಭೆ ರಚನೆಯಾದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಇರುವ ಏಕೈಕ ಅವಕಾಶವೆಂದರೆ ಜೆಡಿಎಸ್‌ನೊಂದಿಗೆ ಸೇರಿಕೊಂಡು ಸರ್ಕಾರ ರಚಿಸುವುದು.
ಜೆಡಿಎಸ್‌ಗೆ ಕೂಡ ಈ ಎರಡು ಪಕ್ಷಗಳೇ ಗತಿ. ಇವುಗಳಲ್ಲಿಯೇ ಯಾವುದಾದರೂ ಒಂದು ಪಕ್ಷಕ್ಕೆ ಬೆಂಬಲ ನೀಡಬೇಕು, ಇಲ್ಲವೇ ಬೆಂಬಲ ಪಡೆದು ಸರ್ಕಾರ ರಚಿಸಬೇಕು. ಹೀಗಾಗಿ ಮೂರು ಪಕ್ಷದಲ್ಲಿಯೂ ಸರ್ಕಾರ ರಚನೆ ಹೇಗೆಂಬ ಕುರಿತು ಈಗ ಬಿಸಿ ಬಿಸಿ ಚರ್ಚೆ ನಡೆಯುತ್ತಿವೆ. ಈ ಮೂರು ಪಕ್ಷಗಳಿಗಿರುವ ಅವಕಾಶಗಳೇನು ಎಂಬುದನ್ನು ನೋಡೋಣ;
ಬಿಜೆಪಿಯ ಮುಂದಿರುವ ಅವಕಾಶಗಳೇನು? ಒಡೆದು ಹೋಗುತ್ತಾ ಗೌಡರ ಕುಟುಂಬ?
1. ಒಂದು ವೇಳೆ ಬಿಜೆಪಿಗೆ ಸರಳ ಬಹುಮತ ದೊರೆಯದಿದ್ದರೆ ಅದು ಜೆಡಿಎಸ್‌ನ ಬೆಂಬಲ ಕೋರಬಹುದು. ಈಗಾಗಲೇ ಪಕ್ಷದ ಹೈಕಮಾಂಡ್ ಈ ನಿಟ್ಟಿನಲ್ಲಿ ಸಕ್ರಿಯವಾಗಿದೆ ಎಂದು ಹೇಳಲಾಗಿದೆ.
2. ಒಂದು ವೇಳೆ ಜೆಡಿಎಸ್ ಬೆಂಬಲ ನೀಡದೆ ತಾನೇ ಸರ್ಕಾರ ರಚಿಸುವುದಾಗಿ ಹೇಳಿದರೆ ಅದಕ್ಕೆ ಬೆಂಬಲ ನೀಡಬಹುದು. ಸರ್ಕಾರದಲ್ಲಿ ಭಾಗಿಯಾಗುವ ಅವಕಾಶವೂ ಇರುತ್ತದೆ.
3.ಜೆಡಿಎಸ್‌ನ ಕೆಲ ಶಾಸಕರನ್ನು ಸೆಳೆದು, ಈ ಹಿಂದಿನಂತೆ ಸೆಳೆದು (ಆಪರೇಷನ್ ಕಮಲ ನಡೆಸಿ) ಸರ್ಕಾರ ರಚನೆ ಮಾಡಬಹುದು. ಅಗತ್ಯಬಿದ್ದರೆ ಕಾಂಗ್ರೆಸ್ ಶಾಸಕರನ್ನೂ ಸೆಳೆಯಬಹುದು.
4. ಜೆಡಿಎಸ್‌ನಲ್ಲಿನ ಭಿನ್ನಮತವನ್ನು ಬಳಸಿಕೊಂಡು, ಗೌಡರ ಕುಟುಂಬ ಸೇರಿದಂತೆ ಪಕ್ಷವನ್ನು ಒಡೆದು (ಶಿವಸೇನೆಯನ್ನು ಒಡೆದಂತೆ) ಜೆಡಿಎಸ್ ಶಾಸಕರ ಬೆಂಬಲವನ್ನೂ ಪಡೆದುಕೊಂಡು ಸರ್ಕಾರ ರಚಿಸುವುದು.
5. ಪಕ್ಷೇತರ ಶಾಸಕರು, ಮಾಜಿ ಸಚಿವ ಜನಾರ್ಧನ ರೆಡ್ಡಿಯವರ ಕೆಆರ್‌ಪಿಪಿ ಸೇರಿದಂತೆ ಇನ್ನಿತರ ಸಣ್ಣ ಪುಟ್ಟ ಪಕ್ಷಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ಸರ್ಕಾರ ರಚಿಸಬಹುದು.
ಕಾಂಗ್ರೆಸ್ ಏನು ಮಾಡಬಹುದು? ಮತ್ತೆ ಗೌಡರ ಮನೆಗೆ ಬಾಗಿಲಿಗೆ ಹೋಗುತ್ತಾ?
1. ಹಿಂದಿನ ಕಹಿ ಘಟನೆಗಳನ್ನೆಲ್ಲಾ ಮರೆತು ಮತ್ತೆ ಜೆಡಿಎಸ್‌ನ ಬೆಂಬಲ ಪಡೆದು ಸರ್ಕಾರ ರಚನೆ ಮಾಡಬಹುದು. ಇದಕ್ಕೆ ಜೆಡಿಎಸ್ ಅನ್ನು ಒಪ್ಪಿಸಲು ʻಕೋಮು ಶಕ್ತಿಗಳನ್ನು ಅಧಿಕಾರದಿಂದ ದೂರ ಇಡುವ ಪ್ರಯತ್ನʼʼ ಎಂಬ ಬಣ್ಣ ಕಟ್ಟಬಹುದು.
2. ಕಳೆದ ಬಾರಿಯಂತೆಯೇ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್‌ಗೆ ನೀಡಿ, ಆ ಪಕ್ಷದ ನೇತೃತ್ವದಲ್ಲಿಯೇ ಸರ್ಕಾರ ರಚನೆಗೆ ಅವಕಾಶ ಒದಗಿಸಬಹುದು. ಇಲ್ಲವೇ ಹೊರಗಿನಿಂದ ಜೆಡಿಎಸ್‌ಗೆ ಬೆಂಬಲ ನೀಡಬಹುದು.
3. ಪಕ್ಷೇತರರು, ಮಾಜಿ ಸಚಿವ ಜನಾರ್ಧನ ರೆಡ್ಡಿಯವರ ಕೆಆರ್‌ಪಿಪಿ ಸೇರಿದಂತೆ ಇನ್ನಿತರ ಸಣ್ಣ ಪುಟ್ಟ ಪಕ್ಷಗಳಿಂದ ಆಯ್ಕೆಯಾಗುವವರ ಬೆಂಬಲ ಪಡೆದು ಸರ್ಕಾರ ರಚನೆ ಮಾಡಬಹುದು.
4. ಜೆಡಿಎಸ್ ಬೆಂಬಲ ನೀಡಲು ಒಪ್ಪದೇ ಇದ್ದಲ್ಲಿ ಆಪರೇಷನ್ ಹಸ್ತದ ಮೂಲಕ ಜೆಡಿಎಸ್‌ನ ಶಾಸಕರನ್ನು ಸೆಳೆದು, ಅವರ ಬೆಂಬಲ ಪಡೆದುಕೊಳ್ಳಬಹುದು.
5. ಇತ್ತೀಚೆಗೆ ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್, ಸವದಿ ಮತ್ತಿತರರ ಮೂಲಕ ಬಿಜೆಪಿಯ ಕೆಲ ಶಾಸಕರನ್ನು ಸಂಪರ್ಕಿಸಿ, ʻಆಪರೇಷನ್ ಹಸ್ತʼ ನಡೆಸಬಹುದು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ (Click Here) ಮಾಡಿ.
ಜೆಡಿಎಸ್‌ಗೆ ಇರುವುದು ಎರಡೇ ದಾರಿ!
1. ಕಾಂಗ್ರೆಸ್‌ನ ಬೆಂಬಲ ಪಡೆದು ಸರ್ಕಾರ ರಚಿಸಬಹುದು. ಇಲ್ಲವೇ, ಕಠಿಣ ಷರತ್ತುಗಳನ್ನು ವಿಧಿಸಿ, ಕಾಂಗ್ರೆಸ್‌ಗೆ ಬೆಂಬಲ ನೀಡಿ ಅಥವಾ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಬಹುದು.
2. ಬಿಜೆಪಿ ಬೆಂಬಲ ಪಡೆದು ಸರ್ಕಾರ ರಚಿಸಬಹುದು. ಇಲ್ಲವೇ ಕಠಿಣ ಷರತ್ತುಗಳನ್ನು ವಿಧಿಸಿ, ಬಿಜೆಪಿಗೆ ಬೆಂಬಲ ನೀಡಿ ಅಥವಾ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಬಹುದು.
3. ಈ ಬಾರಿ ಈ ಎರಡೂ ಪಕ್ಷಗಳಿಗೆ ಬೆಂಬಲ ನೀಡುವುದಿಲ್ಲ ಎಂದು ದೂರ ಉಳಿದು, ಯಾವ ಪಕ್ಷವೂ ಸರ್ಕಾರ ರಚಿಸದಂತೆ ನೋಡಿಕೊಂಡು ಮತ್ತೊಂದು ಚುನಾವಣೆಗೆ ಸಿದ್ಧತೆ ನಡೆಸಬಹುದು.
4. ರಾಜ್ಯದ ಹಿತದೃಷ್ಟಿಯಿಂದ ಸರ್ಕಾರ ರಚಿಸುವುದಾಗಿ ಪ್ರಕಟಿಸಿ, ಸಣ್ಣ ಪುಟ್ಟ ಪಕ್ಷಗಳ ಬೆಂಬಲ ಪಡೆದುಕೊಂಡು ಸರ್ಕಾರ ರಚಿಸಿ, ಕಾಂಗ್ರೆಸ್ ಮತ್ತು ಬಿಜೆಪಿಯ ಶಾಸಕರಿಗೂ ಬೆಂಬಲ ನೀಡುವಂತೆ ಕರೆ ನೀಡಿ, ರಾಜಕೀಯ ಡ್ರಾಮಾ ನಡೆಸಬಹುದು.
5. ಬೇರೆಯಾವ ಪಕ್ಷವೂ ತಮ್ಮ ಪಕ್ಷವನ್ನು ಒಡೆಯದಂತೆ ಎಚ್ಚರಿಕೆ ವಹಿಸಿಕೊಂಡು, ಈ ಪ್ರಯತ್ನ ನಡೆಸುವ ಪಕ್ಷದ ವಿರುದ್ಧ ತಿರುಗಿಬಿದ್ದು, ಮತ್ತೊಂದು ಪಕ್ಷಕ್ಕೆ ಬೆಂಬಲ ನೀಡಬಹುದು.
ಅತಂತ್ರ ವಿಧಾನಸಭೆ ರಚನೆಯಾದರೆ ʻಜೆಸಿಬಿʼ ಪಕ್ಷಗಳು ಎಂದು ಕರೆಸಿಕೊಳ್ಳುವ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಏನು ಮಾಡಲಿವೆ ಎಂಬುದು ಸದ್ಯದ ಮಟ್ಟಿಗೆ ತೀವ್ರ ಕುತೂಹಲಕಾರಿ ಸಂಗತಿಯಾಗಿದೆ.
ಇದನ್ನೂ ಓದಿ : Karnataka Election 2023 : ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆ, ಹೈಕಮಾಂಡ್‌ನತ್ತ ಬಿಜೆಪಿಗರ ನೋಟ