ಬೆಂಗಳೂರು: ವಿಧಾನಸಭಾ ಚುನಾವಣೆಗೆ (Karnataka Election 2023) ಕಾಂಗ್ರೆಸ್ ಬಿಡುಗಡೆ ಮಾಡಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ, ಸಂಸದ ಇಮ್ರಾನ್ ಪ್ರತಾಪ್ ಗಡಿ ಹೆಸರಿರುವುದಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಮ್ರಾನ್ ಪ್ರತಾಪ್ ಗಡಿ ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್ ಆಗಿದ್ದ ಅತೀಕ್ ಅಹ್ಮದ್ ಬೆಂಬಲಿಗರಾಗಿದ್ದಾರೆ. ಇತ್ತೀಚೆಗೆ ಹತ್ಯೆಯಾದ ಅತೀಕ್ ಅಹ್ಮದ್ ನನ್ನ ಗುರು ಎಂದು ಇಮ್ರಾನ್ ಪ್ರತಾಪ್ ಗಡಿ ಹೇಳಿಕೊಂಡಿದ್ದಾರೆ. ಇಂತವರನ್ನು ಕಾಂಗ್ರೆಸ್ ರಾಜ್ಯ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರನ್ನಾಗಿ ಮಾಡಿದೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ಈ ರೀತಿಯ ಉಗ್ರ ಮುಸ್ಲಿಂ ನಾಯಕರನ್ನು ಪ್ರಚಾರಕ್ಕೆ ಕರೆತರುವ ಮೂಲಕ ಹಿಂದೂಗಳ ವಿರುದ್ಧ ಮುಸ್ಲಿಮರನ್ನು ಎತ್ತಿಕಟ್ಟುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದ ಶೋಭಾ ಕರಂದ್ಲಾಜೆ , ಕಾಂಗ್ರೆಸ್ ಕೈ ಅಪರಾಧಿಗಳ ಜತೆ, ದೇಶದ್ರೋಹಿಗಳ ಜತೆ ಇದೆ ಎಂಬುದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ.
ಕಾಂಗ್ರೆಸ್ ನಾಯಕರಾದ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪಕ್ಷ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ನಿಷೇಧ ಕಾನೂನನ್ನು ವಾಪಾಸ್ ತೆಗೆದುಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಕೇರಳದಲ್ಲಿ ಬೀದಿಯಲ್ಲಿಯೇ ಗೋ ಹತ್ಯೆ ಮಾಡಿ ಅದರ ರಕ್ತದಲ್ಲಿ ಆಟವಾಡಿದ ರುಜಿಲ್ ಮಾಕುಟಿಯನ್ನು ಕಾಂಗ್ರೆಸ್ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರೊಂದಿಗೆ ಡಿ ಕೆ ಶಿವಕುಮಾರ್ ಓಡಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ ಶೋಭಾ ಕರಂದ್ಲಾಜೆ ರುಜಿಲ್ ಮಾಕುಟಿಯರೊಂದಿಗೆ ಡಿಕೆಶಿ ಇರುವ ಫೋಟೊವನ್ನು ತೋರಿಸಿದರು.
ಕಾಂಗ್ರೆಸ್‌ನಿಂದಾಗಿ ನಾವು ಸ್ವತಂತ್ರವಾಗಿ ಓಡಾಡಲು ಕಷ್ಟವಾಗಿದೆ. ಕಾಂಗ್ರೆಸ್ ನಾಯಕರನ್ನು, ಪ್ರಚಾರಕರನ್ನು ನೋಡಿದ್ರೆ ಹೆದರುವ ಕಾಲ ಬಂದಿದೆ. ಸಿದ್ದರಾಮಯ್ಯ, ಡಿಕೆಶಿ ಇಂತವರೊಂದಿಗೆ ಸ್ನೇಹಬೆಳೆಸಿಕೊಂಡು ಆರಾಮವಾಗಿ ಓಡಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಶೋಭಾ ಕರಂದ್ಲಾಜೆ, ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಆದಾಗ, ಅದರಲ್ಲಿ ಸಿಲುಕಿದವನನ್ನು ನನ್ನ ಸಹೋದರ ಎಂದು ಸಿದ್ದರಾಮಯ್ಯ ಮತ್ತು ಡಿಕೆಶಿ ಹೇಳಿದ್ದರು. ಈ ಬ್ಲಾಸ್ಟ್ ನಲ್ಲಿ ನಮ್ಮ ಕೈವಾಡ ಇದೆ ಎಂದು ಐಎಸ್‌ಐಯೇ ಹೇಳಿಕೊಂಡಿದೆ. ಇವರಿಂದ ದೇಶ ರಕ್ಷಣೆ ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ : Karnataka Elections : ಕಾಂಗ್ರೆಸ್ ವಿರುದ್ಧ ಅಖಂಡ ದಲಿತಾಸ್ತ್ರ ಬಳಸಲು ಮುಂದಾದ ಬಿಜೆಪಿ