ಲಕ್ಷ್ಮೀಪತಿ ವಿಸ್ತಾರ ನ್ಯೂಸ್, ಕೋಲಾರ
ರಾಜಧಾನಿ ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿರುವ ಚಿನ್ನದ ನಾಡು ಖ್ಯಾತಿಯ ಕೋಲಾರ ಈ ಬಾರಿ ಚುನಾವಣೆಯಲ್ಲಿ (Karnataka Election 2023) ಹೆಚ್ಚು ಗಮನ ಸೆಳೆಯುತ್ತಿರುವ ಜಿಲ್ಲೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇಡೀ ರಾಜ್ಯದ ಗಮನ ಸೆಳೆದಿದ್ದ ಕೋಲಾರದ ರಾಜಕೀಯ ದಿನದಿಂದ ದಿನಕ್ಕೆ ಈಗ ಕಾವು ಪಡೆದುಕೊಳ್ಳುತ್ತಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಆಯ್ಕೆಯಲ್ಲಿ ಅಚ್ಚರಿ ಮೂಡಿಸಿದ್ದರಿಂದಾಗಿ ಈ ಬಾರಿಯ ಚುನಾವಣೆಯು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸಿಲ್ಕ್ ಅಂಡ್ ಮಿಲ್ಕ್ ನ ಜಿಲ್ಲೆ ಎಂದೆನಿಸಿಕೊಂಡಿರುವ ಕೋಲಾರ ಜನಪರ ಹೋರಾಟ ಮತ್ತು ಜನಪರ ಸಂಸ್ಕೃತಿಯ ನೆಲೆ. ಚಿಕ್ಕಬಳ್ಳಾಪುರ ಜಿಲ್ಲೆಯೂ ಹಿಂದೆ ಕೋಲಾರ ಜಿಲ್ಲೆಗೇ ಸೇರಿತ್ತು. 2007 ರಲ್ಲಿ ಜಿಲ್ಲೆ ಪುನರ್ ವಿಂಗಡಣೆಯಾದ ಮೇಲೆ ಚಿಕ್ಕಬಳ್ಳಾಪುರ ಉಪ ವಿಭಾಗವು ಕೋಲಾರದಿಂದ ವಿಭಜನೆಗೊಂಡು ಸ್ವತಂತ್ರ ಜಿಲ್ಲೆಯಾಯಿತು. ಈಗ ರೇಷ್ಮೆಯ ಈ ನಾಡಿನಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿವೆ. ಇವುಗಳ ಪೈಕಿ ಮೂರು ಮೀಸಲು ಕ್ಷೇತ್ರಗಳಾಗಿದ್ದರೆ, ಮಿಕ್ಕ ಮೂರು ಸಾಮಾನ್ಯ ಕ್ಷೇತ್ರಗಳು. ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ತ್ರಿಕೋನ ಸ್ಪರ್ಧೆ ನಡೆಯುತ್ತಿದ್ದು, ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಬಿಗಿ ಹಿಡಿತದಲ್ಲಿದ್ದ ಜಿಲ್ಲೆಯಲ್ಲಿ ಈಗ ಬಿಜೆಪಿಯೂ ಪೈಪೋಟಿಗಿಳಿದಿದೆ. ಲೋಕಸಭಾ ಕ್ಷೇತ್ರವನ್ನು ಗೆದ್ದಿರುವ ಬಿಜೆಪಿ ವಿಧಾನಭಾ ಚುನಾವಣೆಯಲ್ಲಿ ಯಾವ ರೀತಿಯ ಮ್ಯಾಜಿಕ್ ಮಾಡಲಿದೆ ಎಂಬ ಕುತೂಹಲವಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆರು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ನಾಲ್ಕರಲ್ಲಿ ಗೆದ್ದಿತ್ತು. ಉಳಿದ ಎರಡು ಕ್ಷೇತ್ರಗಳಲ್ಲಿ ಗೆದ್ದವರು ಕೂಡ ಅಂದರೆ ಜೆಡಿಎಸ್‌ನಿಂದ ಗೆದ್ದಿದ್ದ ಶ್ರೀನಿವಾಸ ಗೌಡ ಹಾಗೂ ಪಕ್ಷೇತರರಾಗಿ ಗೆದ್ದಿದ್ದ ಎಚ್.ನಾಗೇಶ್ ಈಗ ಕಾಂಗ್ರೆಸ್ ಸೇರಿದ್ದಾರೆ.
ಕೆಜಿಎಫ್ : ಕ್ಷೇತ್ರದಲ್ಲಿ
ತ್ರಿಕೋನ ಸ್ಪರ್ಧೆ
ಕಳೆದ ಬಾರಿಯಂತೆ ಈ ಬಾರಿಯೂ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆಯುವುದು ಖಚಿತವಾಗಿದೆ. ಕಾಂಗ್ರೆಸ್ ಪಕ್ಷವು ಶಾಸಕಿ ರೂಪಕಲಾ ಶಶಿಧರ್ ಅವರಿಗೇ ಟಿಕೆಟ್ ನೀಡಿದ್ದು, ಕಳೆದ ಐದು ವರ್ಷಗಳಲ್ಲಿ ಅವರು ಮಾಡಿರುವ ಕೆಲಸ ಪಕ್ಷಕ್ಕೆ ವರವಾಗಲಿದೆ ಎಂದೇ ನಂಬಿದೆ. ಹಗಲು ರಾತ್ರಿ ಎನ್ನದೆ ಜನರ ಕಷ್ಟಗಳಿಗೆ ಸ್ಪಂಧಿಸುವ ಶಾಸಕಿ ಎಂದು ಹೆಸರು ಮಾಡಿರುವ ರೂಪಕಲಾ, ಕ್ಷೇತ್ರದ ಜನಕಲ್ಯಾಣಕ್ಕಾಗಿ ಜಿಲ್ಲಾಧಿಕಾರಿಗಳ ವಿರುದ್ಧವೇ ಧರಣಿ ಮಾಡಿ ಸುದ್ದಿ ಮಾಡಿದ್ದರು! ವಿಧಾನ ಸಭಾ ಕಲಾಪದಲ್ಲಿ ಕ್ಷೇತ್ರದ ಜನರ ಪರವಾಗಿ ದನಿ ಎತ್ತಿದ್ದಾರೆ ಎಂಬ ಅಭಿಮಾನ ಜನಸಾಮಾನ್ಯರಲ್ಲಿದೆ. ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬೇಕು ಎಂದು ಪಟ್ಟು ಹಿಡಿಯುತ್ತಲೇ ಬಂದಿದ್ದಾರೆ.
ಇವರಿಗೆ ಕಳೆದ ಬಾರಿ ತೀವ್ರ ಸ್ಪರ್ಧೆ ನೀಡಿದ್ದ ಅಶ್ವಿನಿ ಸಂಪಂಗಿ ಮತ್ತೆ ಈ ಬಾರಿ ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಮಾಜಿ ಶಾಸಕ ವೈ ಸಂಪಂಗಿ ಬದಲಿಗೆ ಅವರ ಪುತ್ರಿ ಅಶ್ವಿನಿ ಸಂಪಂಗಿಯನ್ನು ಪಕ್ಷ ಕಣಕ್ಕಿಳಿಸಿತ್ತು. ನಿರೀಕ್ಷೆಗೂ ಮೀರಿದ ಪೈಪೋಟಿ ನೀಡಿದ್ದ ಅಶ್ವಿನಿಗೆ ಪಕ್ಷ ಮತ್ತೊಂದು ಅವಕಾಶ ನೀಡಿದೆ.
ಕಳೆದ ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆದಿದ್ದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಈ ಬಾರಿಯೂ ಎಸ್. ರಾಜೇಂದ್ರನ್ ಅವರನ್ನೇ ಕಣಕ್ಕಿಳಿಸಿದೆ. ಅವರೂ ಕೂಡ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಈ ನಡುವೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಡಾ. ವಿ ಎಂ ರಮೇಶ್ ಬಾಬು ಅವರನ್ನು ಜೆಡಿಎಸ್ ಕಣಕ್ಕಿಳಿಸಿದೆ. ಕೋಲಾರ ತಾಲೂಕಿನ ಉಪ್ಪುಕುಂಟೆ ಗ್ರಾಮದ ನಿವಾಸಿಯಾಗಿರುವ ರಮೇಶ್ ಈಗಾಗಲೇ ಕ್ಷೇತ್ರದಲ್ಲಿ ಓಡಾಟ ನಡೆಸಿ, ಪಕ್ಷ ಸಂಘಟಿಸಲು ಶ್ರಮಿಸುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ನಾಲ್ಕನೇ ಸ್ಥಾನ ಪಡೆದಿತ್ತು.
ಕಳೆದ ಬಾರಿಯ ಫಲಿತಾಂಶ ಏನು?
ರೂಪಕಲಾ ಶಶಿಧರ್ (ಕಾಂಗ್ರೆಸ್)- 71,151 | ಅಶ್ವಿನಿ ಸಂಪಂಗಿ (ಬಿಜೆಪಿ) : 30,324 | ಎಸ್ ರಾಜೇಂದ್ರನ್ (ಆರ್‌ಪಿಐ): 20, 393 | ಗೆಲುವಿನ ಅಂತರ: 40,827
ಮಾಲೂರು: ಬಿಜೆಪಿಯಲ್ಲಿನ
ಜಗಳ ಕಾಂಗ್ರೆಸ್‌ಗೆ ಲಾಭ?
ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕ್ಷೇತ್ರವಾಗಿದ್ದ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಎರಡನೇ ಸ್ಥಾನಪಡೆದಿದ್ದ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಇದರಿಂದಾಗಿ ಪಕ್ಷ ಒಡೆದ ಮನೆಯಾಗಿದೆ. ಇದರ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಯತ್ನಿಸುತ್ತಿವೆ.
ಕಾಂಗ್ರೆಸ್ ನಿರೀಕ್ಷೆಯಂತೆ ಶಾಸಕ ಕೆ.ವೈ ನಂಜೇಗೌಡ ಅವರಿಗೆ ಟಿಕೆಟ್ ನೀಡಿದೆ. ಶಿಲ್ಪಾಕಲಾ ಗ್ರಾಮ ಅಭಿವೃದ್ಧಿ, ವಿವಿಧ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಹೆಸರು ಮಾಡಿರುವ ನಂಜೇಗೌಡ ಮತ್ತೊಮ್ಮೆ ಗೆಲ್ಲುವು ಹುಮ್ಮಸ್ಸಿನಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಕಳೆದ ಬಾರಿ ಬಿಜೆಪಿಯಿಂದ ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ ಸ್ಪರ್ಧಿಸಿದ್ದರಾದರೂ ಈ ಬಾರಿ ಅವರು ಕ್ಷೇತ್ರ ಬದಲಾಯಿಸಿದ್ದಾರೆ. ಬಿಜೆಪಿಯಿಂದ ಮಾಜಿ ಜೆಡಿಎಸ್ ಶಾಸಕ ಮಂಜುನಾಥ ಗೌಡ ಕಣಕ್ಕೆ ಇಳಿದಿದ್ದಾರೆ. ಅವರು ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ, ಎರಡನೇ ಸ್ಥಾನ ಪಡೆದುಕೊಂಡಿದ್ದರು. ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಿದ್ದರಿಂದ ಪಕ್ಷದ ನಿಷ್ಠವಂತ ಕಾರ್ಯಕರ್ತ ಹೂಡಿ ವಿಜಯ್ ಕುಮಾರ್ ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇದರಿಂದ ಬಿಜೆಪಿಯ ಮತಗಳು ಇಬ್ಭಾಗವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
2013ರ ಚುನಾವಣೆಯಿಂದಲೂ ಈ ಕ್ಷೇತ್ರದಲ್ಲಿ ಒಳ್ಳೆಯ ಪೈಪೋಟಿ ನೀಡುತ್ತಿರುವ ಜೆಡಿಎಸ್ ಈ ಬಾರಿ ಜೆ. ಇ. ರಾಮೇಗೌಡ ಅವರನ್ನು ಕಣಕ್ಕಿಳಿಸಿದೆ. ಮಂಜುನಾಥ ಗೌಡ ಲೋಕಸಭಾ ಚುನಾವಣೆಯ ವೇಳೆಯಲ್ಲಿಯೇ ಪಕ್ಷ ತೊರೆದಿರುವುದರಿಂದ ಜೆಡಿಎಸ್ ಗೊಂದಲವಿಲ್ಲದೆ, ಈ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಇದರಿಂದ ಈ ಬಾರಿ ಕೂಡ ತ್ರಿಕೋನ ಸ್ಪರ್ಧೆ ನಡೆಯಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಕೆ.ವೈ ನಂಜೇಗೌಡ (ಕಾಂಗ್ರೆಸ್): 1,60,666 | ಕೆ ಎಸ್ ಮಂಜುನಾಥ ಗೌಡ : 57,762 | ಕೃಷ್ಣಯ್ಯ ಶೆಟಿ (ಬಿಜೆಪಿ) : 23,889| ಗೆಲುವಿನ ಅಂತರ: 17,915
ಬಂಗಾರಪೇಟೆ : ಇಬ್ಬರು
ನಾರಾಯಣಸ್ವಾಮಿ; ಗೆಲ್ಲೋದು
ಯಾರು ಸ್ವಾಮಿ?
ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಕೆ ಸಿ ರೆಡ್ಡಿ ಸ್ಪರ್ಧಿಸುತ್ತಿದ್ದ ಕ್ಷೇತ್ರ ಎಂದರೆ ಬಂಗಾರ ಪೇಟೆ. ಈ ಮೀಸಲು ಕ್ಷೇತ್ರದ ಈ ಬಾರಿಯ ವಿಶೇಷವೆಂದರೆ ಇಬ್ಬರು ನಾರಾಯಣ ಸ್ವಾಮಿಗಳ ನಡುವೆ ಸ್ಪರ್ಧೆ ನಡೆಯುತ್ತಿದೆ. ಅಲ್ಲದೆ ಇಬ್ಬರೂ ಒಂದೇ ಜಾತಿಗೆ ಸೇರಿದವರಾಗಿದ್ದು, ಇವರ ನಡುವೆಯೇ ತೀವ್ರ ಪೈಪೋಟಿ ಏರ್ಪಟ್ಟಿದೆ. ಜತೆಗೆ ಜೆಡಿಎಸ್ ಆಭ್ಯರ್ಥಿಕೂಡ ಕಣದಲ್ಲಿರುವುದರಿಂದ ತ್ರಿಕೋನ ಸ್ಪರ್ಧೆ ನಡೆಯಲಿದೆ.
ಕಾಂಗ್ರೆಸ್ ಪಕ್ಷ ನಿರೀಕ್ಷೆಯಂತೆ ಶಾಸಕ ಎಸ್ ಎನ್ ನಾರಾಯಣಸ್ವಾಮಿಯವರನ್ನು ಕಣಕ್ಕಿಳಿಸಿದೆ. ಉತ್ತಮ ಗುಣಮಟ್ಟದ ರಸ್ತೆಗಳ ನಿರ್ಮಾಣದಿಂದ ಗಮನ ಸೆಳೆದಿರುವ ಇವರು ಸರಳತೆಯಿಂದಾಗಿ ಹೆಸರು ಮಾಡಿದ್ದಾರೆ. ಹೀಗಾಗಿ ಪಕ್ಷ ಅಭ್ಯರ್ಥಿಯನ್ನು ಬದಲಾಯಿಸಿಲ್ಲ. ಜೆಡಿಎಸ್ ಕಳೆದ ಬಾರಿ ಎರಡನೇ ಸ್ಥಾನ ಪಡೆದುಕೊಂಡಿದ್ದ ಎಂ. ಮಲ್ಲೇಶ್ ಬಾಬು ಅವರನ್ನೇ ಕಣಕ್ಕಿಳಿಸಿದೆ. ಅವರು 21,571 ಅಂತರಗಳಿಂದ ಸೋತಿದ್ದರು.
ಕಳೆದ ಬಾರಿ ಬಿಜೆಪಿಯಿಂದ ವೆಂಕಟಮುನಿಯಪ್ಪ ಬಿ. ಪಿ. ಸ್ಪರ್ಧಿಸಿ ಮೂರನೇ ಸ್ಥಾನ ಪಡೆದಿದ್ದರು. ಈ ಬಾರಿ ಎಂ. ನಾರಾಯಣಸ್ವಾಮಿಯನ್ನು ಪಕ್ಷ ಕಣಕ್ಕಿಳಿಸಿದೆ. ಮಾಜಿ ಶಾಸಕರಾಗಿರುವ ಇವರು ಕೂಡ ಕ್ಷೇತ್ರದಲ್ಲಿ ಒಳ್ಳೆಯ ಸಂಪರ್ಕ ಹೊಂದಿದ್ದಾರೆ. ಹೆಚ್ಚು ಕಡಿಮೆ ಮೂರು ಪಕ್ಷಗಳೂ ಸಮಬಲ ಹೊಂದಿರುವ ಈ ಕ್ಷೇತ್ರದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಎಸ್ ಎನ್ ನಾರಾಯಣಸ್ವಾಮಿ (ಕಾಂಗ್ರೆಸ್): 1,55,727 | ಎಂ ಮಲ್ಲೇಶ್ ಬಾಬು (ಜೆಡಿಎಸ್): 49,300 |ವೆಂಕಟಮುನಿಯಪ್ಪ ಬಿ. ಪಿ. (ಬಿಜೆಪಿ): 33,555 | ಗೆಲುವಿನ ಅಂತರ: 21, 571
ಶ್ರೀನಿವಾಸಪುರ : ಕಾಂಗ್ರೆಸ್
ಜೆಡಿಎಸ್ ನಡುವೆ ಜಿದ್ದಾಜಿದ್ದಿ
ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಖ್ಯಾತಿ ಪಡೆದಿರುವ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಿದ್ದಾಜಿದ್ದ ಏರ್ಪಟ್ಟಿದೆ. ಈ ಕ್ಷೇತ್ರದಿಂದ ಒಮ್ಮೆಯೂ ಬಿಜೆಪಿ ಗೆದ್ದಿಲ್ಲ. ಕ್ಷೇತ್ರದಲ್ಲಿ 13 ಚುನಾವಣೆಗಳು ನಡೆದಿದ್ದರೂ, ಇದುವರೆಗೆ ಶಾಸಕರಾಗಿ ಆಯ್ಕೆಯಾದವರು ಐವರು ಮಾತ್ರ. ಅದರಲ್ಲಿಯೂ 8 ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಜಯಗಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ನಿರೀಕ್ಷೆಯಂತೆಯೇ ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಅವರನ್ನು ಕಣಕ್ಕಿಳಿಸಿದೆ. ಜೆಡಿಎಸ್‌ನಿಂದ ಜಿ ಕೆ ವೆಂಕಟಶಿವಾರೆಡ್ಡಿ ಕಣದಲ್ಲಿದ್ದಾರೆ. 1983 ರಿಂದ ಅಂದರೆ ಸತತ 9 ಚುನಾವಣೆಗಳಲ್ಲಿ ಕೆ. ಆರ್ ರಮೇಶ್ ಕುಮಾರ್ ಮತ್ತು ವೆಂಕಟಶಿವಾರೆಡ್ಡಿ ನಡುವೆಯೇ ಪೈಪೋಟಿ ನಡೆಯುತ್ತಾ ಬಂದಿದ್ದು ಹತ್ತನೇ ಬಾರಿಗೆ ಇವರಿಬ್ಬರೂ ಸೆಣೆಸುತ್ತಿದ್ದಾರೆ.
ಇದುವರೆಗೆ ಒಮ್ಮೆ ಮಾತ್ರ ಶಾಸಕರಾದವರು ಮತ್ತೆ ಗೆದ್ದಿದ್ದಾರೆ. ಸತತವಾಗಿ ಎರಡು ಬಾರಿ ಗೆದ್ದಿರುವ ರಮೇಶ್ ಕುಮಾರ್ ಮೂರನೇ ಬಾರಿಗೆ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಕ್ಷೇತ್ರದಲ್ಲಿ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯವಾಗಿದೆ. ಸರ್ಕಾರಿ ಯೋಜನೆಗಳು ಅವರ ಬೆಂಬಲಿಗರ ಪಾಲಾಗಿವೆ ಎಂಬ ಆರೋಪಗಳು ಮುಖ್ಯವಾಗಿ ಕೇಳಿ ಬರುತ್ತಿವೆ. ಅವರದು ಸರ್ವಾಧಿಕಾರಿ ಧೋರಣೆ ಎಂದು ಟೀಕಿಸುವವರೂ ಕ್ಷೇತ್ರದಲ್ಲಿ ಕಾಣ ಸಿಗುತ್ತಾರೆ. ಇತ್ತ ಜಿ ಕೆ ವೆಂಕಟಶಿವಾ ರೆಡ್ಡಿ ಪರವಾಗಿ ಅನುಕಂಪದ ಅಲೆಯೂ ಎದ್ದಿದೆ. ಹೀಗಾಗಿ ಇವರಿಬ್ಬರ ಪೈಪೋಟಿ ತೀವ್ರ ಕುತೂಹಲ ಕೆರಳಿಸಿದೆ.
ಈ ಕ್ಷೇತ್ರದಲ್ಲಿ ನೆಲೆಯನ್ನೇ ಹೊಂದಿರದ ಬಿಜೆಪಿಯು ಈ ಬಾರಿ ಸಮಾಜ ಸೇವಕ ಗುಂಜೂರು ಆರ್.ಶ್ರೀನಿವಾಸರೆಡ್ಡಿ ಅವರನ್ನು ಕಣಕ್ಕಿಳಿಸಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಕೆ ಆರ್ ರಮೇಶ್ ಕುಮಾರ್ (ಕಾಂಗ್ರೆಸ್): 93,571, ಜಿ ಕೆ ವೆಂಕಟಶಿವಾರೆಡ್ಡಿ (ಜೆಡಿಎಸ್) : 83, 019 ಗೆಲುವಿನ ಅಂತರ: 10,552
ಮುಳಬಾಗಿಲು: ಕಾಂಗ್ರೆಸ್
ಜೆಡಿಎಸ್ ನಡುವೆ ನೇರ ಸ್ಪರ್ಧೆ
ಸ್ವತಂತ್ರ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದ ಗಮನ ಸೆಳೆಯುತ್ತಿರುವ ಮುಳಬಾಗಿಲು ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
2013ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಕೊತ್ತೂರು ಜಿ. ಮಂಜುನಾಥ್ ಸಲ್ಲಿಸಿದ್ದು, ನಕಲಿ ಜಾತಿ ಪ್ರಮಾಣ ಪತ್ರ ಎಂಬುಂದು ಸಾಬೀತಾಗಿದ್ದರಿಂದ ಈ ಬಾರಿ ಅವರು ಕ್ಷೇತ್ರ ಬದಲಾಯಿಸಿ ಕೋಲಾರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಆದರೆ ತಮ್ಮ ಬೆಂಬಲಿಗರಾದ ಸ್ಥಳೀಯ ಅಭ್ಯರ್ಥಿ ಹಾಗೂ ಬೊವಿ ಸಮೂದಾಯದ ಮುಖಂಡ ಆದಿನಾರಾಯಣಗೆ ಕಾಂಗ್ರೆಸ್ ಟಿಕೇಟ್ ಕೊಡಿಸಿದ್ದಾರೆ.
ಮುಳಬಾಗಿಲು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ 2013 ಮತ್ತು 2018 ರ ಚುನಾವಣೆಯಲ್ಲಿ ಇಲ್ಲಿ ಪಕ್ಷೇತರರು ಗೆದ್ದಿದ್ದಾರೆ. ಕಳೆದ ಬಾರಿ ಕೊತ್ತೂರು ಮಂಜುನಾಥ್ ಅವರ ಬೆಂಬಲದಿಂದ ಆಕಸ್ಮಿಕವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ಎಚ್.ನಾಗೇಶ್ ಕಾಂಗ್ರೆಸ್-ಜೆಡಿಎಸ್ ಸರ್ಕಾರದಲ್ಲಿ ಸಚಿವರಾಗಿದ್ದರು. ಆನಂತರ ಬಿಜೆಪಿಗೂ ಬೆಂಬಲ ನೀಡಿ, ಅಲ್ಲಿಯೂ ಸಚಿವರಾಗಿದ್ದರು. ಮುಖ್ಯಮಂತ್ರಿ ಬದಲಾದ ಮೇಲೆ ಅಂಬೇಡ್ಕರ್ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಈಗ ಕಾಂಗ್ರೆಸ್ ಸೇರಿ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.
ಜೆಡಿಎಸ್ ಕಳೆದ ಬಾರಿ ಎರಡನೇ ಸ್ಥಾನ ಪಡೆದುಕೊಂಡಿದ್ದ ಸಮೃದ್ಧಿ ಮಂಜುನಾಥ್ ಅವರನ್ನು ಮತ್ತೆ ಕಣಕ್ಕಿಳಿಸಿದೆ. ಗಟ್ಟಿ ನೆಲೆಯನ್ನು ಹೊಂದಿರುವ ಜೆಡಿಎಸ್ ಈ ಬಾರಿ ಕೂಡ ತೀವ್ರ ಸ್ಪರ್ಧೆಯೊಡ್ಡುತ್ತಿದೆ. ಕೆ. ಸುಂದರ್ ರಾಜ್ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಕಳೆದ ಬಾರಿಯ ಫಲಿತಾಂಶ ಏನು?
ಎಚ್. ನಾಗೇಶ್ (ಪಕ್ಷೇತರ) : 74,213 | ಸಮೃದ್ಧಿ ಮಂಜುನಾಥ್ (ಜೆಡಿಎಸ್) : 67,498 | ಗೆಲುವಿನ ಅಂತರ: 6,715
ಕೋಲಾರ: ತ್ರಿಕೋನ ಸ್ಪರ್ಧೆ
ಮಾಜಿ ಮುಖ್ಯಮಂತ್ರಿ ಸ್ಪರ್ಧಿಸಲಿದ್ದಾರೆ ಎಂಬ ವರದಿಗಳಿಂದಾಗಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ. ಒಂದು ವೇಳೆ ಸಿದ್ದರಾಮಯ್ಯ ಈ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರೆ ಇಲ್ಲಿಯ ರಾಜಕೀಯ ಚಿತ್ರಣವೇ ಬದಲಾಗಿರುತ್ತಿತ್ತು. ಆದರೆ ಈಗ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಕಳೆದ ಬಾರಿ ಈ ಕ್ಷೇತ್ರ ಜೆಡಿಎಸ್ ಪಾಲಾಗಿತ್ತು. ಪಕ್ಷದಿಂದ ಗೆದಿದ್ದ ಕೆ ಶ್ರೀನಿವಾಸ ಗೌಡ ಈಗ ಕಾಂಗ್ರೆಸ್ ಸೇರಿದ್ದಾರೆ. ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎಂಬ ಕಾರಣಕ್ಕೆ ಅವರು ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಆದರೆ ಸಿದ್ದರಾಮಯ್ಯ ಕೊನೆಯ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದ್ದರಿಂದಾಗಿ ಆವರು ಈ ಬಾರಿ ಚುನಾವಣಾ ರಾಜಕಾರಣದಿಂದ ದೂರ ಉಳಿಯುವಂತಾಗಿದೆ.
ಕಾಂಗ್ರೆಸ್ ಪಕ್ಷ ಕೊನೆಯ ಕ್ಷಣದಲ್ಲಿ ಜಿಲ್ಲೆಯ ಯುವ ನಾಯಕ ಕೊತ್ತೂರು ಜಿ. ಮಂಜುನಾಥ್ ಅವರನ್ನು ಕಣಕ್ಕಿಳಿಸಿದೆ. ಎರಡು ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ವರ್ತೂರು ಪ್ರಕಾಶ್ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಬಿಜೆಪಿ ಈ ಕ್ಷೇತ್ರದಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ವರ್ತೂರು ಪ್ರಕಾಶ್ ಮೂರನೇ ಸ್ಥಾನದಲ್ಲಿದ್ದರು. ಬಿಜೆಪಿ ಮತ್ತು ಅವರ ಮತಗಳು ಒಟ್ಟಾಗುವುದರಿಂದ ಈ ಬಾರಿ ಬಿಜೆಪಿ ಕೂಡ ಈ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ಜೆಡಿಎಸ್ ಶಾಸಕ ಕೆ. ಶ್ರೀನಿವಾಸ ಗೌಡ ಕಾಂಗ್ರೆಸ್ ಸೇರಿರುವುದರಿಂದ ಟೊಮೆಟೊ ಮಂಡಿ ಮಾಲೀಕ ಸಿ.ಎಂ. ಆರ್. ಶ್ರೀನಾಥ್ ಅವರನ್ನು ಕಣಕ್ಕಿಳಿಸಿದೆ. ಜೆಡಿಎಸ್ ಇಲ್ಲಿ ಗಟ್ಟಿ ನೆಲೆ ಹೊಂದಿದ್ದು, ಈ ಬಾರಿಯೂ ಗೆಲ್ಲುವ ನಿರೀಕ್ಷೆಯಲ್ಲಿದೆ. ಮುಸ್ಲಿಮರ ಮತಗಳು ಈ ಕ್ಷೇತ್ರದಲ್ಲಿ ನಿರ್ಣಯಕವಾಗಿರುವುದರಿಂದ ತ್ರಿಕೋನ ಸ್ಪರ್ಧೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಕೆ. ಶ್ರೀನಿವಾಸಗೌಡ (ಜೆಡಿಎಸ್): 82,788 | ಸೈಯದ್ ಜಮೀರ್ ಪಾಷಾ (ಕಾಂಗ್ರೆಸ್) : 38,537| ಆರ್. ವರ್ತೂರು ಪ್ರಕಾಶ್: 35, 544 | ಗೆಲುವಿನ ಅಂತರ: 44,251
ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲೆ ಕ್ಷೇತ್ರ ಸಮೀಕ್ಷೆ : ಮತ್ತೊಮ್ಮೆ ಮೇಲುಗೈ ಸಾಧಿಸಲು ಕಾಂಗ್ರೆಸ್ ಕಠಿಣ ಪರಿಶ್ರಮ