Site icon Vistara News

Karnataka Election 2023 : ಕುಮಾರಸ್ವಾಮಿ ಹೋಗಿದ್ದು, ಸಿಂಗಾಪುರಕ್ಕೋ ದೆಹಲಿಗೋ?

HD Kumaraswamy

#image_title

ರಾಮಸ್ವಾಮಿ ಹುಲಕೋಡು
ಬೆಂಗಳೂರು: ರಾಜ್ಯದಲ್ಲಿ ಈ ಬಾರಿಯೂ (Karnataka Election 2023) ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂದು ಬಹುತೇಕ ಎಕ್ಸಿಟ್‌ ಪೋಲ್‌ಗಳು ಸಾರಿರುವ ಹಿನ್ನೆಲೆಯಲ್ಲಿ ಈಗ ಎಲ್ಲರ ಕಣ್ಣು ಜೆಡಿಎಸ್‌ನತ್ತ ನೆಟ್ಟಿದೆ. ಪಕ್ಷದ ನಾಯಕ ಎಚ್‌. ಡಿ. ಕುಮಾರಸ್ವಾಮಿ (h d kumaraswamy) ಈಗ ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ. ಅವರು ಮತದಾನ ಮುಗಿಯುತ್ತಿದ್ದಂತೆಯೇ ಸಿಂಗಾಪುರಕ್ಕೆ ತೆರಳಿದ್ದು, ಈ ಕುರಿತು ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ಅತಂತ್ರ ವಿಧಾನಸಭೆ ರಚನೆಯಾಗುವುದು ಬಹುತೇಕ ಖಚಿತವಾಗುತ್ತಿದ್ದಂತೆಯೇ ಅವರು ಸಿಂಗಾಪುರಕ್ಕೆ (Singapore) ತೆರಳಿರುವುದು ಅನುಮಾನಗಳಿಗೂ ಕಾರಣವಾಗುತ್ತಿದೆ. ಪಕ್ಷದ ಅಧಿಕೃತ ಮಾಹಿತಿ ಪ್ರಕಾರ ಅವರು ಆರೋಗ್ಯದ ಪರೀಕ್ಷೆಗಾಗಿ ಸಿಂಗಾಪುರಕ್ಕೆ ತೆರಳಿದ್ದು, ಮತ ಎಣಿಕೆಯ ದಿನ ಅಂದರೆ ಶನಿವಾರ ಬೆಳಗ್ಗೆ ಹಿಂತಿರುಗಲಿದ್ದಾರೆ. ಉಸಿರಾಟದ ಕೆಲ ಸಮಸ್ಯೆಗಳಿರುವುದರಿಂದ ಅವರು ಅಲ್ಲಿಯ ಪ್ರಸಿದ್ಧ ಮೌಂಟ್‌ ಎಲೆಜೆಬೆತ್‌ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಲಿದ್ದಾರೆ. ಆದರೆ ಪಕ್ಷದ ಕಾರ್ಯಕರ್ತರೇ, ʻʻಅವರು ಸಿಂಗಾಪುರಕ್ಕೆ ತೆರಳಿಲ್ಲ, ದೆಹಲಿಗೆ ಹೋಗಿದ್ದು, ರಾಷ್ಟ್ರೀಯ ಪಕ್ಷದ ನಾಯಕರೊಬ್ಬರೊಂದಿಗೆ ಗುಪ್ತವಾಗಿ ಮಾತುಕತೆ ನಡೆಸುತ್ತಿದ್ದಾರೆʼʼ ಎಂದು ಗುಸುಗುಸು ಮಾತನಾಡಿಕೊಳ್ಳುತ್ತಿದ್ದಾರೆ!

ಎಕ್ಸಿಟ್‌ ಪೋಲ್‌ ಹೇಳಿದಂತೆ ಒಂದು ವೇಳೆ ಅತಂತ್ರ ವಿಧಾನಸಭೆ ರಚನೆಯಾದಲ್ಲಿ ಈ ಬಾರಿ ಮಾಜಿ ಸಿಎಂ ಕುಮಾರಸ್ವಾಮಿ ಯಾರಿಗೆ ಬೆಂಬಲ ನೀಡಬಹುದು ಅಥವಾ ಯಾರ ಬೆಂಬಲದಿಂದ ಸರ್ಕಾರ ರಚನೆ ಮಾಡಬಹುದು ಎಂಬ ಕುತೂಹಲ ರಾಜಕೀಯ ಆಸಕ್ತರಲ್ಲಿದೆ. ಕಾರ್ಯಕರ್ತರು ಜೆಡಿಎಸ್‌ ನಿರೀಕ್ಷೆಗೂ ಮೀರಿ ಸ್ಥಾನ ಪಡೆಯಲಿದ್ದು, ಯಾವುದಾದರೂ ಒಂದು ಪಕ್ಷದ ಬೆಂಬಲ ಪಡೆದು ಜೆಡಿಎಸ್‌ ಸರ್ಕಾರ ರಚಿಸಲಿದೆ, ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಖುಷಿಯಲ್ಲಿದ್ದಾರೆ.

ಪಕ್ಷದ ಮೂಲಗಳ ಪ್ರಕಾರ ದೇವೇಗೌಡರ ಕುಟುಂಬದಲ್ಲಿ ಕೂಡ ಮುಂದಿನ ರಾಜಕೀಯ ನಡೆಯ ಕುರಿತು ಚರ್ಚೆ ಆರಂಭವಾಗಿದೆ. ಚುನಾವಣೆಯ ಟಿಕೆಟ್‌ ಹಂಚಿಕೆಯ ಸಂದರ್ಭದಲ್ಲಿ ಕುಟುಂಬದಲ್ಲಿ ಸ್ವಲ್ಪ ಭಿನ್ನಮತ ಮೂಡಿದ್ದರಿಂದ ಸರ್ಕಾರ ರಚನೆಯ ಸಂದರ್ಭದಲ್ಲಿಯೂ ಭಿನ್ನಾಭಿಪ್ರಾಯಗಳು ಉಂಟಾಗಬಹುದು ಎಂದು ಹೇಳಲಾಗುತ್ತಿದ್ದು, ಇದು ಪಕ್ಷ ಇಬ್ಭಾಗವಾಗಲೂ ಕಾರಣವಾಗಬಹುದೇ ಎಂಬ ಆತಂಕ ಕೂಡ ಪಕ್ಷದ ಕಾರ್ಯಕರ್ತರಲ್ಲಿದೆ. ಆದರೆ ಎಚ್‌ ಡಿ ದೇವೇಗೌಡರು ಮತ್ತೆ ಕ್ರಿಯಾಶೀಲರಾಗಿರುವುದರಿಂದ ಅವರ ತೀರ್ಮಾನವೇ ಅಂತಿಮವಾಗಲಿದ್ದು, ಎಲ್ಲರೂ ದೇವೇಗೌಡರತ್ತ ದೃಷ್ಟಿ ನೆಟ್ಟಿದ್ದಾರೆ.

ಗುರುವಾರ ಮತ್ತು ಶುಕ್ರವಾರ ದೇವೇಗೌಡರು ಪಕ್ಷದಲ್ಲಿನ ತಮ್ಮ ಆಪ್ತ ನಾಯಕರೊಂದಿಗೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬರುವ ಸಾಧ್ಯತೆಗಳಿವೆ. ಒಂದು ವೇಳೆ ಯಾವುದಾದರೂ ಒಂದು ಪಕ್ಷ ಸರಳ ಬಹುಮತ ಪಡೆದು ಸರ್ಕಾರ ರಚಿಸಿದರೆ, ಮುಂದೆ ಪಕ್ಷವನ್ನು ಉಳಿಸಿಕೊಳ್ಳುವುದು ಕೂಡ ಜೆಡಿಎಸ್‌ಗೆ ಸವಾಲಾಗಲಿದ್ದು, ಈ ಬಗ್ಗೆಯೂ ಪಕ್ಷದ ವರಿಷ್ಠರು ಗಮನ ನೀಡಬೇಕಾಗಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ʻʼವಿಸ್ತಾರ ನ್ಯೂಸ್‌ʼʼನೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ (Click Here) ಮಾಡಿ

ಈ ನಡುವೆ ಪಕ್ಷದ ನಾಯಕ ಕುಮಾರಸ್ವಾಮಿ ಗೆಲ್ಲಬಹುದಾದ ಅಭ್ಯರ್ಥಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅವರು ಸರ್ಕಾರ ರಚನೆಯ ಸಂದರ್ಭದಲ್ಲಿ ಆಪರೇಷನ್‌ಗೆ ಒಳಗಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಅಲ್ಲದೆ ಈ ಜವಾಬ್ದಾರಿಯನ್ನು ಪಕ್ಷದ ಅಧ್ಯಕ್ಷರು ಮತ್ತು ಕೆಲ ನಾಯಕರಿಗೂ ವಹಿಸಿದ್ದಾರೆ. ಹೀಗಾಗಿ ಈಗ ಪಕ್ಷದಲ್ಲಿ ಚುನಾವಣೆ ಮುಗಿದರೂ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ.

ಕಳೆದ ಬಾರಿಯೂ ಹೀಗೇ ಆಗಿತ್ತು!

ಕಳೆದ ಬಾರಿಯ ಚುನಾವಣೆಯ ಸಂದರ್ಭದಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಅತಂತ್ರ ವಿಧಾನಸಭೆ ರಚನೆಯಾಗಬಹುದೆಂಬ ಕಾರಣಕ್ಕೆ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ಜೆಡಿಎಸ್‌ ಅನ್ನು ತಮ್ಮ ವಿರೋಧ ಪಕ್ಷದ ʻಬಿ ಟೀಮ್‌ʼ ಎಂದು ದೂರಿ ಪ್ರಚಾರ ನಡೆಸಿದ್ದವು. ಈ ಬಾರಿ ಕೂಡ ಇದೇ ರೀತಿಯಲ್ಲಿಯೇ ಎರಡೂ ಪಕ್ಷಗಳ ನಾಯಕರು ಪ್ರಚಾರ ನಡೆಸಿದ್ದರು. ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಜೆಡಿಎಸ್‌ ಬಿಜೆಪಿಯ ʻಬಿ ಟೀಮ್‌ʼ ಎಂದರೆ, ಬಿಜೆಪಿ ಪರವಾಗಿ ಪ್ರಚಾರ ನಡೆಸಿದ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ʻನೀವು ಜೆಡಿಎಸ್‌ಗೆ ಮತ ಹಾಕಿದರೆ ಅದು ಕಾಂಗ್ರೆಸ್‌ಗೆ ಮತ ಹಾಕಿದಂತೆʼ ಎಂದೇ ಹೇಳುತ್ತಿದ್ದರು.

ಫಲಿತಾಂಶ ಪ್ರಕಟವಾದ ನಂತರ ಕಳೆದ ಬಾರಿಯಂತೆಯೇ ಈ ಬಾರಿಯೂ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದೇ ಅಂದಾಜಿಸಲಾಗುತ್ತಿದೆ. ಕಳೆದ ಬಾರಿ ಅತಂತ್ರವಾಗುವ ಸುಳಿವು ಸಿಗುತ್ತಿದ್ದಂತೆಯೇ ಕಾಂಗ್ರೆಸ್‌ ಎಚ್ಚೆತ್ತುಕೊಂಡು ಕೂಡಲೇ ಜೆಡಿಎಸ್‌ನೊಂದಿಗೆ ಹೊಂದಾಣಿಕೆಗೆ ಮುಂದಾಗಿತ್ತು. ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿ ಜೆಡಿಎಸ್‌ ಅನ್ನು ಸಂಪರ್ಕಿಸುವುದರೊಳಗೆ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ರಚಿಸುವ ತೀರ್ಮಾನ ಪ್ರಕಟಿಸಿದ್ದವು. ಈ ಬಾರಿಯೂ ಹೀಗೆ ಆಗಬಹುದು ಎಂದು ಎರಡೂ ರಾಷ್ಟ್ರೀಯ ಪಕ್ಷಗಳು ಅಲರ್ಟ್‌ ಆಗಿವೆ. ಹೀಗಾಗಿಯೇ ಜೆಡಿಎಸ್‌ ನಾಯಕ ಕುಮಾರಸ್ವಾಮಿ ಎಲ್ಲಿದ್ದಾರೆ, ಯಾರೊಂದಿಗಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದನ್ನು ಕಾಂಗ್ರೆಸ್‌ ಮತ್ತು ಬಿಜೆಪಿಯ ನಾಯಕರು ಸೇರಿದಂತೆ ಎಲ್ಲರೂ ಗಮನಿಸುತ್ತಿದ್ದಾರೆ.

ಒಟ್ಟಾರೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಂತೆ ಹೆಚ್ಚು ಸುದ್ದಿಯಲ್ಲಿರದ ಜೆಡಿಎಸ್‌ ಮತದಾನ ಮುಗಿಯುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಕೇಂದ್ರ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ : Karnataka Election 2023 : ಜೆಡಿಎಸ್‌ ಪರ ಪ್ರಚಾರಕ್ಕೆ ಮಮತಾ ಬ್ಯಾನರ್ಜಿ, ಚಂದ್ರಶೇಖರ ರಾವ್‌ ಏಕೆ ಬರಲಿಲ್ಲ?

Exit mobile version