Site icon Vistara News

Karnataka Election 2023 : ಮಂಡ್ಯದಿಂದ ಸ್ಪರ್ಧಿಸಲಾರೆ ಎಂದ ಕುಮಾರಸ್ವಾಮಿ; ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಕೆ

Karnataka Election 2023 Kumaraswamy said that he cannot contest from Mandya

ಚನ್ನಪಟ್ಟಣ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಮಾತ್ರವಲ್ಲದೆ, ಮಂಡ್ಯದಿಂದಲೂ ಸ್ಪರ್ಧಿಸಲಿದ್ದಾರೆ ಎಂಬ ವರದಿಗಳನ್ನು ಅವರು ತಳ್ಳಿ ಹಾಕಿದ್ದಾರೆ.

ʻʻಮಂಡ್ಯದಿಂದ ಸ್ಪರ್ಧಿಸುವಂತೆ ಅಲ್ಲಿಯ ಕಾರ್ಯಕರ್ತರು ಮತ್ತು ನಾಯಕರು ಒತ್ತಡ ಹೇರುತ್ತಿರುವುದು ನಿಜ. ಆದರೆ ನಾನು ಅಲ್ಲಿ ಸ್ಪರ್ಧೆ ಮಾಡಿದರೆ ಚನ್ನಪಟ್ಟಣದಲ್ಲಿ ಅಪಪ್ರಚಾರ ನಡೆಸುತ್ತಾರೆ. ಹೀಗಾಗಿ ನಾನು ಮಂಡ್ಯದಿಂದ ಸ್ಪರ್ಧಿಸಲಾರೆ. ಅಲ್ಲಿಯ ಕಾರ್ಯಕರ್ತರ ಭಾವನೆಗಳನ್ನು ಗೌರವಿಸುತ್ತೇನೆʼʼ ಎಂದು ಅವರು ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ʻʻನಾನು ಹಿಂದೆ ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ನಿಂತಿದ್ದೆ ನಿಜ. ಆದರೆ ಆಗಿನ ಪರಿಸ್ಥಿತಿಯೇ ಬೇರೆ, ಈಗಿನ ಪರಿಸ್ಥಿತಿಯೇ ಬೇರೆ. ಮಂಡ್ಯದಲ್ಲಿ ಯಾರೇ ನಿಂತ್ರು ಗೆಲ್ಲಿಸಬಹುದುʼʼ ಎಂದು ಹೇಳಿದ ಕುಮಾರಸ್ವಾಮಿ, ಮಂಡ್ಯದಲ್ಲಿ ನಾನೇ ಸ್ಪರ್ಧೆ ಮಾಡಬೇಕೆಂಬ ಪರಿಸ್ಥಿತಿ ಇಲ್ಲ. ಅಲ್ಲಿ ಎರಡು ದಿನ ಪ್ರಚಾರ ನಡೆಸಿದರೂ ಸಾಕಾಗುತ್ತದೆ. ಈ ಕುರಿತು ಅಂತಿಮವಾಗಿ ತೀರ್ಮಾನಿಸಲು ಇನ್ನೆರಡು ದಿನಗಳಲ್ಲಿ ಮಂಡ್ಯದ ಕಾರ್ಯಕರ್ತರ, ನಾಯಕರ ಸಭೆ ಕರೆಯುವೆ ಎಂದರು.

ಮಂಡ್ಯ ಜಿಲ್ಲೆಯ ಜನ ಭಾವನಾತ್ಮಕ ಜನ. ಭಾವನಾತ್ಮಕ ಶಕ್ತಿ ಮುಂದೆ ಯಾವುದೇ ಶಕ್ತಿ ನಿಲ್ಲಲು ಸಾಧ್ಯವಿಲ್ಲ. ನೀವು ಬಂದ್ರೆ ಜಿಲ್ಲೆಯಲ್ಲಿ 7ಕ್ಕೆ 7ಸ್ಥಾನ ಗೆಲ್ಲಬಹುದು ಎಂದು ಅಲ್ಲಿಯ ನಾಯಕರು ಹೇಳುತ್ತಿದ್ದಾರೆ. ಈ ಕುರಿತು ನಾಯಕರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ನುಡಿದರು.

ಅವ್ರು ದೊಡ್ಡವ್ರು, ಅವ್ರ ಬಗ್ಗೆ ಮಾತನಾಡಕಾಗುತ್ತಾ….?

ಮಂಡ್ಯಕ್ಕೆ ಕುಮಾರಸ್ವಾಮಿ ಬಂದು ನಿಂತ್ರೂ ಸೋಲಿಸಿ ಕಳುಹಿಸುತ್ತೇವೆ ಎಂಬ ಮಂಡ್ಯ ಸಂಸದೆ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ʻʻಅವ್ರು ದೊಡ್ಡವ್ರು, ಅವ್ರ ಬಗ್ಗೆ ಮಾತನಾಡಕಾಗುತ್ತಾ….?ʼʼ ಎಂದು ಪ್ರಶ್ನಿಸಿದರು. ʻʻನಾವು ಸಣ್ಣ ಪಕ್ಷದವರು. ಅವ್ರು ಈಗ ರಾಷ್ಟ್ರೀಯ ಪಕ್ಷ ಬೇರೆ ಸೇರಿದ್ದಾರೆ. ಅಂತವರ ಬಗ್ಗೆ ಮಾತನಾಡಲು ಆಗುತ್ತಾ?ʼʼ ಎಂದು ತಿರುಗೇಟು ನೀಡಿದರು.

ಮಂಡ್ಯದಲ್ಲಿ ಈ ಬಾರಿ ಶಾಕಿಂಗ್ ರಿಸಲ್ಟ್ ಬರುತ್ತೆ ಎಂಬ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ʻʻಈಗ ಯಾಕೆ ಅದರ ಮಾತು?, ಅದನ್ನ ಜನರೇ ತೀರ್ಮಾನ ಮಾಡ್ತಾರೆ ಬನ್ನಿ‌. ನಾನ್ಯಾಕೆ ಈಗ ಅವ್ರಿಗ್ಯಾಕೆ ಉತ್ತರ ಕೊಡಲಿʼʼ ಎಂದರು.

ಕಾಂಗ್ರೆಸ್‌ಗೆ ಹಿನ್ನಡೆಯಾಗದು!

ಮಾಜಿ ಸಿಎಂ ಹೆಚ್ ಡಿ ಕುಮಾರಸ್ಚಾಮಿ ಮಂಡ್ಯದಿಂದಲೂ ಸ್ಪರ್ಧೆ ಮಾಡಲಿದ್ದಾರೆ ಎಂಬ ವರದಿಗಳ ಕುರಿತು ನಾಗಮಂಗಲದಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಎನ್ ಚೆಲುವರಾಯಸ್ವಾಮಿ, ಕುಮಾರಸ್ವಾಮಿ ಬಂದ್ರೂ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹಿನ್ನಡೆಯಾಗುವುದಿಲ್ಲ ಎಂದಿದ್ದಾರೆ. ಮಂಡ್ಯದಲ್ಲಿ ಈಗಾಗಲೇ ಏಳೂ ಸ್ಥಾನಗಳಿಗೆ ಅಭ್ಯರ್ಥಿಯನ್ನು ಪಕ್ಷ ಘೊಷಣೆ ಮಾಡಿದೆ. ಅವರು ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಯಾರು ಬರುತ್ತಾರೆ, ಸ್ಪರ್ಧೆ ಮಾಡುತ್ತಾರೆ ಎಂಬುದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.

ಕುಮಾರಸ್ವಾಮಿಯವರ ತಂದೆ ಪ್ರಧಾನಿಯಾಗಿದ್ರು, ಮುಖ್ಯಮಂತ್ರಿಯಾಗಿದ್ದರು. ಕುಮಾರಸ್ವಾಮಿ ಸಹ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಆಗ ಮಂಡ್ಯದ ಅಭಿವೃದ್ಧಿಯ ಕಡೆಗೆ ಗಮನ ನೀಡಿರಲಿಲ್ಲ. ಈಗ ಒಬ್ಬ ಶಾಸಕನಾಗಿ ಜಿಲ್ಲೆಯನ್ನು ಅಭಿವೃದ್ಧಿ ಮಾಡಲು ಸಾಧ್ಯವೆ? ಎಂದು ಅವರು ಪ್ರಶ್ನಿಸಿದ್ದಾರೆ.

ಎಚ್‌ಡಿಕೆ ನಾಮಪತ್ರ ಸಲ್ಲಿಕೆ

ಎಚ್‌ ಡಿ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಬೃಹತ್‌ ರೋಡ್‌ ಶೋ ನಡೆಸಲಾಯಿತು. ಜೆಡಿಎಸ್‌ನ ಸಾವಿರಾರು ಕಾರ್ಯಕರ್ತರು ಈ ರೋಡ್‌ ಶೋನಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: Karnataka Elections : ಶೆಟ್ಟರ್‌ ಕಂಡಕೂಡಲೇ ಅಪ್ಪಿಕೊಂಡು ಕಣ್ಣೀರು ಹಾಕಿದ ಪತ್ನಿ ಶಿಲ್ಪಾ ಶೆಟ್ಟರ್‌; ಬಿಜೆಪಿ ವಿಶ್ವಾಸದ್ರೋಹಕ್ಕೆ ವೇದನೆ

Exit mobile version