Site icon Vistara News

Karnataka Election 2023 : 13 ಕ್ಷೇತ್ರಗಳಲ್ಲಿ ಹಾದು ಹೋದ ಮೋದಿ ರೋಡ್‌ ಶೋ; ಬೆಂಗಳೂರಿನಾದ್ಯಂತ ಸಂಚಲನ

modi in roadshow in bangalore and its effects

#image_title

ಬೆಂಗಳೂರು: ವಿಧಾನಸಭಾ ಚುನಾವಣೆಯ (Karnataka Election 2023) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ನಡೆಸಿದ ರೋಡ್‌ ಶೋ (Narendra Modi Road show) ಯಶಸ್ವಿಯಾಗಿ ಅಂತ್ಯಗೊಂಡಿದೆ. 26.5 ಕಿ.ಮೀ. ದೂರ ಕ್ರಮಿಸಿದ ಈ ಮೆಗಾ ರೋಡ್‌ ಶೋಗೆ ಅರ್ಧ ಗಂಟೆ ಹೆಚ್ಚು ಸಮಯ ತೆಗೆದುಕೊಳ್ಳಲಾಯಿತು ಎಂಬುದನ್ನು ಬಿಟ್ಟರೆ ಮತ್ತೆಲ್ಲವೂ ನಿಗದಿಯಂತೆಯೇ ನಡೆದಿದೆ.

ಮೋದಿ ಈ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ನಡೆಸಿದ ಎರಡನೇ ರೋಡ್‌ ಶೋ ಇದಾಗಿದೆ. ಮೂರನೇ ರೋಡ್‌ ಶೋ ಭಾನುವಾರ ನಡೆಯಲಿದೆ. ಗುಜರಾತ್‌ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ 50 ಕಿ.ಮೀ. ರೋಡ್‌ ಶೋ ನಡೆಸಿದ್ದರು. ಒಟ್ಟು 16 ಕ್ಷೇತ್ರಗಳಲ್ಲಿ ಈ ಮೂಲಕ ಪ್ರಚಾರ ನಡೆಸಿದ್ದರು. ಅದನ್ನು ಬಿಟ್ಟರೆ ಇದೇ ಮೋದಿಯವರ ಉದ್ದದ ರೋಡ್‌ ಶೋ ಆಗಿದೆ. ಈ ಬಾರಿ ಬೆಂಗಳೂರಿನಲ್ಲಿ ಮೋದಿ ಒಟ್ಟು ಮೂರು ರೋಡ್‌ ಶೋ ನಡೆಸುತ್ತಿದ್ದು, ಸುಮಾರು 39 ಕಿ.ಮೀ ಕ್ರಮಿಸಿದಂತಾಗಲಿದೆ.

ಮೋದಿಯವರ ಶನಿವಾರದ ಮೆಗಾ ರೋಡ್‌ ಶೋ ಮುಗಿಯುತ್ತಿದ್ದಂತೆಯೇ ಚುನಾವಣೆಯ ಮೇಲೆ ಇದು ಯಾವ ರೀತಿಯ ಪರಿಣಾಮ ಬೀರಬಹದು ಎಂಬ ರಾಜಕೀಯ ಲೆಕ್ಕಾಚಾರ ಶುರುವಾಗಿದೆ. 26 ಕಿಲೋಮೀಟರ್ ಉದ್ದದ ಈ ರೋಡ್ ಶೋ 13 ವಿಧಾನಸಭೆ ಕ್ಷೇತ್ರಗಳನ್ನು ಹಾದು ಹೋಗಿದೆ. ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ, ಪದ್ಮನಾಭ ನಗರ, ಬಸವನಗುಡಿ, ಚಿಕ್ಕಪೇಟೆ, ಚಾಮರಾಜ ಪೇಟೆ, ಗಾಂಧಿನಗರ, ಮಹಾಲಕ್ಷ್ಮಿ ಲೇಔಟ್, ವಿಜಯ ನಗರ, ಗೋವಿಂದರಾಜ ನಗರ, ರಾಜಾಜಿ ನಗರ, ಮಲ್ಲೇಶ್ವರ ವಿಧಾನ ಸಭಾ ಕ್ಷೇತ್ರಗಳಲ್ಲಿ ಮೋದಿ ಸಂಚರಿಸಿದ್ದಾರೆ.

ಈ 13 ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳನ್ನು ಬಿಟ್ಟರೆ ಉಳಿದೆಲ್ಲಾ ಕ್ಷೇತ್ರಗಳಲ್ಲಿಯೂ ಕಳೆದ ಬಾರಿ ಬಿಜೆಪಿ ಗೆದ್ದಿತ್ತು. ಜಯನಗರ, ಚಾಮರಾಜ ಪೇಟೆ, ಗಾಂಧಿನಗರ ಮತ್ತು ವಿಜಯನಗರದಲ್ಲಿ ಕಾಂಗ್ರೆಸ್‌ ಗೆದ್ದಿದೆ. ಈ ಬಾರಿಯೂ ಈ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಹೀಗಾಗಿ ಈ ನಾಲ್ಕು ಕ್ಷೇತ್ರಗಳ ಮೇಲೆ ಮೋದಿ ರೋಡ್‌ ಶೋನ ಪರಿಣಾಮವೇನಿರಬಹುದು ಎಂಬುದು ಮುಖ್ಯವಾಗಿದೆ.

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್‌ ಶೋ

ರಾಜಧಾನಿಯ ಒಟ್ಟು 28 ಕ್ಷೇತ್ರಗಳ ಪೈಕಿ ಈ ಬಾರಿ 20 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಬೇಕೆಂಬುದು ಬಿಜೆಪಿಯ ಗುರಿಯಾಗಿದೆ. ಇದಕ್ಕಾಗಿ ಪಕ್ಷ ಹಲವಾರು ತಂತ್ರಗಳನ್ನು ರೂಪಸಿದ್ದು, ಇದರ ಭಾಗವಾಗಿ ಪ್ರಧಾನಿ ಮೋದಿಯವರ ಮೂರು ರೋಡ್‌ ಶೋಗಳನ್ನು ಆಯೋಜಿಸಿದೆ. ರೋಡ್‌ ಶೋ ಮೂಲಕ ಜನರನ್ನು ತಲುಪುವುದು ಸುಲಭ ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ. ಗುಜರಾತ್‌ನಲ್ಲಿ ರೋಡ್‌ ಶೋಗಳು ಯಶಸ್ವಿಯಾಗಿರುವುದರಿಂದ ಇಲ್ಲಿಯೂ ಇದರ ಲಾಭ ಪಡೆಯುವ ಯೋಚನೆ ಪಕ್ಷದ್ದು.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜಧಾನಿಯಲ್ಲಿ 11 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್‌ 15 ಮತ್ತು ಜೆಡಿಎಸ್‌ 2 ಸ್ಥಾನಗಳನ್ನು ಗೆದ್ದಿದ್ದವು. ನಂತರ ʻಆಪರೇಷನ್‌ ಕಮಲʼ ದಿಂದಾಗಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಮೂರು ಸ್ಥಾನ ಕಳೆದುಕೊಂಡಿದ್ದರೆ ಜೆಡಿಎಸ್‌ 1 ಸ್ಥಾನ ಕಳೆದುಕೊಂಡಿತ್ತು. ಬಿಜೆಪಿಯ ಶಕ್ತಿ 15 ಸ್ಥಾನಗಳಿಗೆ ಏರಿತ್ತು, ಕಾಂಗ್ರೆಸ್‌ 12 ಮತ್ತು ಜೆಡಿಎಸ್‌ 1 ಸ್ಥಾನ ಉಳಿಸಿಕೊಂಡಿದ್ದವು. ಈ ಬಾರಿಯ ಚುನಾವಣೆಯಲ್ಲಿ ರಾಜಧಾನಿಯಲ್ಲಿ ಯಾರು ಎಷ್ಟು ಸ್ಥಾನ ಗೆಲ್ಲಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಬಿಜೆಪಿ ಮೂಲಗಳ ಪ್ರಕಾರ ಈ ಬಾರಿ ಏನಾದರೂ ಮಾಡಿ ಪಕ್ಷ 18 ಸ್ಥಾನಗಳಲ್ಲಿಯಾದರೂ ಗೆಲ್ಲಬೇಕೆಂದು ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ. ಪಕ್ಷದ ಸಮೀಕ್ಷೆಗಳ ಪ್ರಕಾರ ನಗರದ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಜಿದ್ದಾಜಿದ್ದಿ ನಡೆಯುತ್ತಿದ್ದು, ಈ ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸಲೇಬೇಕೆಂದು ಪ್ರಚಾರದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಇದರಲ್ಲಿ ಪ್ರಧಾನಿ ರೋಡ್‌ ಶೋ ನಡೆಸುತ್ತಿರುವುದು ಕೂಡ ಒಂದು ತಂತ್ರಗಾರಿಕೆಯಾಗಿದೆ.

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್‌ ಶೋ; ರಾಜಕೀಯ ಪರಿಣಾಮವೇನು?

ಬೆಂಗಳೂರಿನಲ್ಲಿ ನಡೆಸುವ ರೋಡ್‌ ಶೋನಲ್ಲಿ ಲಕ್ಷಾಂತರ ಜನರ ಭಾಗವಹಿಸುತ್ತಿದ್ದಾರೆ. ಇದು ಬೆಂಗಳೂರಿನ ಇತರ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವುದಲ್ಲದೆ ರಾಜ್ಯಾದ್ಯಂತ ಇದರ ಎಫೆಕ್ಟ್‌ ಇರಲಿದೆ. ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಇದು ಸಾಬೀತಾಗಿದ್ದರಿಂದ ಪ್ರಧಾನಿ ಮೋದಿಯವರೇ ಬೆಂಗಳೂರಿನಲ್ಲಿ ರೋಡ್‌ ಶೋ ನಡೆಸಲು ಉತ್ಸಾಹ ತೋರಿದರೆಂದು ಪಕ್ಷದ ಮೂಲಗಳು ತಿಳಿಸಿವೆ.

ಒಟ್ಟಾರೆಯಾಗಿ ಮೋದಿಯವರ ಎರಡನೇ ರೋಡ್‌ ಶೋ ಕೂಡ ಯಶಸ್ವಿಯಾಗಿ ನಡೆದಿದ್ದು, ನಗರದ ಬಿಜೆಪಿ ನಾಯಕರಲ್ಲಿ, ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ.

ಇದನ್ನೂ ಓದಿ : Modi In Karnataka: ಮೋದಿ ರೋಡ್‌ ಶೋ ವೇಳೆ ರಾರಾಜಿಸಲಿವೆ ಆಂಜನೇಯನ ಭಾವಚಿತ್ರ ಇರುವ ಕೇಸರಿ ಬಾವುಟ

Exit mobile version