Site icon Vistara News

Karnataka Election 2023 : ಮುಖ್ಯಮಂತ್ರಿ ನೇಮಕ ಅಂತಿಮವಾಗಿಲ್ಲ ಎಂದ ಸುರ್ಜೇವಾಲಾ; ಕಾಂಗ್ರೆಸ್‌ನಲ್ಲಿ ಗೊಂದಲವೋ ಗೊಂದಲ

No decision yet on Karnataka CM says Surjewala

#image_title

ಬೆಂಗಳೂರು: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರೆಂಬುದನ್ನು ಇನ್ನೂ ನಿರ್ಧಾರವಾಗಿಲ್ಲ (Karnataka Election 2023). ನಿರ್ಧಾರವಾದ ಮೇಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಪ್ರಕಟಿಸಲಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷದ ಕರ್ನಾಟಕದ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ 48 ರಿಂದ 72 ಗಂಟೆಗಳ ಒಳಗೆ ಕರ್ನಾಟಕದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಅಲ್ಲಿಯವರೆಗೆ ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

ಕರ್ನಾಟಕ ರಾಜ್ಯದ ಜನರಿಗೆ ಭರವಸೆ ನೀಡಿದಂತೆ ಅತ್ಯುತ್ತಮವಾದ ಆಡಳಿತವನ್ನು ನೀಡುತ್ತೇವೆ. ಅವಿರೋಧವಾಗಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಯತ್ನಿಸುತ್ತಿದ್ದೇವೆ ಎಂದು ಸುರ್ಜೇವಾಲಾ ಹೇಳಿದ್ದಾರೆ. ಪ್ರಮಾಣವಚನ ದಿನ, ಸಮಯ ಇನ್ನೂ ನಿಗದಿಯಾಗಿಲ್ಲ. ಇದು ಕೂಡ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.

ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಈಗಾಗಲೇ ಪಕ್ಷ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು. ಇದರಲ್ಲಿ ಅನುಮಾನ ಬೇಡ ಎಂದು ಹೇಳಿದ್ದಾರೆ.

ಆದರೆ ಕಾಂಗ್ರೆಸ್‌ ಪಕ್ಷದ ಉನ್ನತ ಮೂಲಗಳು ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗಿ ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದೆ ಎಂದು ಹೇಳಿವೆ. ಅಲ್ಲದೆ ಪ್ರಮಾಣವಚನ ಕಾರ್ಯಕ್ರಮ ಗುರುವಾರ ನಡೆಯಲಿದ್ದು, ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಗುರುವಾರ ಮಧ್ಯಾಹ್ನ 3.30ಕ್ಕೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುವ ಸಾಧ್ಯತೆಗಳಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಸುರ್ಜೇವಾಲಾ ಮಾತು ಇಲ್ಲಿದೆ ಕೇಳಿ

ರಾಜಧಾನಿಯ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಕಲ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಈ ಬೆಳವಣಿಗೆಯಿಂದ ಪಕ್ಷದಲ್ಲಿ ಗೊಂದಲ ನಿರ್ಮಾಣವಾಗಿದೆ.

ಇದನ್ನೂ ಓದಿ : Karnataka Election 2023: ನಾನು ಸಿಎಂ ರೇಸ್‌ನಲ್ಲಿ ಇಲ್ಲ; ಮುಖ್ಯಮಂತ್ರಿ ಹುದ್ದೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ: ಸಿದ್ದು, ಡಿಕೆಶಿಗೆ ಖರ್ಗೆ ಖಡಕ್‌ ವಾರ್ನಿಂಗ್

Exit mobile version