Site icon Vistara News

Karnataka Election 2023 : ಕಾಂಗ್ರೆಸ್‌ ಮುಖ್ಯಮಂತ್ರಿ ಆಯ್ಕೆ ಬಿಕ್ಕಟ್ಟಿಗೆ ಏನು ಕಾರಣ? ಇಲ್ಲಿದೆ ಇನ್‌ಸೈಡ್‌ ಸ್ಟೋರಿ!

Karnataka Election 2023 real reason behind Chief Minister election crisis in congress

#image_title

ರಾಮಸ್ವಾಮಿ ಹುಲಕೋಡು, ಬೆಂಗಳೂರು
ಭರ್ಜರಿ ಬಹುಮತದೊಂದಿಗೆ ಅಧಿಕಾರ‌ (Karnataka Election 2023) ಹಿಡಿದಿರುವ ಕಾಂಗ್ರೆಸ್‌ನಲ್ಲಿ ಈಗ ಸಿಎಂ ಗಾದಿಗೆ ಜಿದ್ದಾಜಿದ್ದಿ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತೀವ್ರ ಪೈಪೋಟಿಗೆ ಇಳಿದಿದ್ದು, ಈಗ ಆಯ್ಕೆಯ ಚೆಂಡು ಎಂದಿನಂತೆ ಹೈಕಮಾಂಡ್‌ನ ಅಂಗಳ ತಲುಪಿದೆ. ಚುನಾವಣೆಯ ಸಂದರ್ಭದಲ್ಲಿ ಇವರಿಬ್ಬರೂ ಒಗ್ಗಟ್ಟಿನಿಂದ ಪ್ರಚಾರ ನಡೆಸಿದ್ದರು. ಇದಕ್ಕೆ ಮುಖ್ಯ ಕಾರಣ 50:50 ಅಧಿಕಾರ ಹಂಚಿಕೆ‌ ಕುರಿತು ಪಕ್ಷದ ಹೈಕಮಾಂಡ್‌ ಈಗಾಗಲೇ ತೀರ್ಮಾನಿಸಿರುವುದು ಎಂದು ಹೇಳಲಾಗುತ್ತಿತ್ತು. ಆದರೆ ಈಗ ಪಟ್ಟಕ್ಕೇರುವ ಸಂದರ್ಭದಲ್ಲಿ ಅನಿರೀಕ್ಷಿತ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದಕ್ಕೆ ಕಾರಣವೇನಿರಬಹುದು ಎಂಬ ಬಗ್ಗೆ ಈಗ ಕಾಂಗ್ರೆಸ್‌ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.‌

ಚುನಾವಣೆಗಿಂತ ಮೊದಲು ಅಧಿಕಾರದ ಕುರಿತು ತೀರ್ಮಾನಿಸಿರಲಿಲ್ಲ. ಈಗ ಇಬ್ಬರೂ ಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದಿದ್ದಾರೆ. ಅಲ್ಲದೆ, 50:50 ಸೂತ್ರದಡಿ ಅಧಿಕಾರ ಹಂಚಿಕೆಗೂ ಡಿ.ಕೆ. ಶಿವಕುಮಾರ್‌ ಒಪ್ಪುತ್ತಿಲ್ಲ. ಸಿದ್ದರಾಮಯ್ಯ ಶಾಸಕರ ಬೆಂಬಲ ಯಾರಿಗೆ ಜಾಸ್ತಿ ಇದೆಯೋ ಅವರನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ ಎಂದೆಲ್ಲಾ ಈ ಬೆಳವಣಿಗೆ ಕುರಿತು ಕಾಂಗ್ರೆಸ್‌ ನಾಯಕರು ಮಾಹಿತಿ ನೀಡುತ್ತಿದ್ದಾರೆ. ಆದರೆ ನಿಜವಾದ ಕಾರಣ ಬೇರೆಯೇ ಇದೆ ಎನ್ನುತ್ತಿವೆ ಪಕ್ಷದ ಉನ್ನತ ಮೂಲಗಳು.

ಈ ಮೂಲಗಳ ಪ್ರಕಾರ ಕಾಂಗ್ರೆಸ್‌ ಪ್ರಚಾರ ಸಂದರ್ಭದಲ್ಲಿ ನಡೆಸಿದ ʻಪ್ರಜಾಧ್ವನಿ ಯಾತ್ರೆʼ ಗೂ ಮೊದಲೇ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬ ಕುರಿತು ಪಕ್ಷದ ಉನ್ನತ ನಾಯಕರ ನಡುವೆ ಚರ್ಚೆ ಆರಂಭವಾಗಿತ್ತು. 50:50 ಸೂತ್ರದಡಿ ಅಧಿಕಾರ ಹಂಚಿಕೆಯ ಕುರಿತು ತೀರ್ಮಾನವಾದ ನಂತರವೇ ಒಂದೆಡೆ ಸಿದ್ದರಾಮಯ್ಯ ಮತ್ತೊಂದೆಡೆ ಡಿ. ಕೆ. ಶಿವಕುಮಾರ್‌ ಯಾತ್ರೆಯ ನೇತೃತ್ವ ವಹಿಸಿದ್ದರು. ಹೀಗಾಗಿ ಮುಖ್ಯಮಂತ್ರಿ ಆಯ್ಕೆಯ ಪ್ರಕ್ರಿಯೆಯು ಯಾವುದೇ ಗೊಂದಲವಿಲ್ಲದಂತೆ ನಡೆಯುತ್ತದೆ ಎಂದೇ ಪಕ್ಷದ ಹೈಕಮಾಂಡ್‌ ಭಾವಿಸಿತ್ತು. ಆದರೆ ಈಗ ಯಾರು ಮೊದಲು ಮುಖ್ಯಮಂತ್ರಿಯಾಗ ಬೇಕೆಂಬ ವಿಷಯದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದಕ್ಕೆ ಮೊದಲು ತಾನು ಮುಖ್ಯಮಂತ್ರಿಯಾಗಬೇಕೆಂದು ಡಿ ಕೆ ಶಿವಕುಮಾರ್‌ ಪಟ್ಟು ಹಿಡಿದಿರುವುದೇ ಕಾರಣ.

ಡಿ ಕೆ ಶಿವಕುಮಾರ್‌ ಪಟ್ಟಿನ ಹಿಂದೆಯೂ ಕಾರಣವಿದೆ!

ರಾಜ್ಯದಲ್ಲಿ ಕಾಂಗ್ರೆಸ್‌ ಅನ್ನು ಸದೃಢವಾಗಿ ಕಟ್ಟಲು ಹಗಲಿರುಳು ಶ್ರಮಿಸಿದ ಡಿ ಕೆ ಶಿವಕುಮಾರ್‌ ಈಗ ಬಿಜೆಪಿ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೆ ಅವರ ವಿರುದ್ಧ ಸಿಬಿಐ, ಜಾರಿ ನಿರ್ದೇಶನಾಲಯ (ಇಡಿ)ಯಲ್ಲಿ ಹಲವು ಪ್ರಕರಣಗಳಿವೆ. ಇದನ್ನು ಬಳಸಿಕೊಂಡು ಡಿಕೆ ಶಿವಕುಮಾರ್‌ಗೆ ʻಪಾಠʼ ಕಲಿಸಲು ವಿಪಕ್ಷಕ್ಕೆ ಹಲವು ಅವಕಾಶಗಳಿದ್ದು, ತಮಗೆ ಕಿರುಕುಳ ನೀಡಬಹುದು ಎಂಬ ಭಾವನೆ ಡಿ ಕೆ ಶಿವಕುಮಾರ್‌ ಅವರಲ್ಲಿದೆ.

ಇದೇ ಹೊತ್ತಿನಲ್ಲಿ ಕೇಂದ್ರ ಸರ್ಕಾರವು, ಡಿ ಕೆ ಶಿವಕುಮಾರ್‌ ಕೆಂಗಣ್ಣಿಗೆ ಗುರಿಯಾಗಿದ್ದ ಕರ್ನಾಟಕದ ಡಿಜಿಪಿ ಪ್ರವೀಣ್‌ ಸೂದ್‌ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ಮಾಡಿದೆ. ಇದರ ಹಿಂದೆ ಕೂಡ ತಮ್ಮ ವಿರುದ್ಧದ ಸಂಚಿದೆ ಎಂದು ಭಾವಿಸಿರುವ ಅವರು, ತಾವು ಮೊದಲು ಮುಖ್ಯಮಂತ್ರಿಯಾದರೆ ಬಂಧನ, ವಿಚಾರಣೆ ಇತ್ಯಾದಿ ಕಿರುಕುಳದಿಂದ ಪಾರಾಗಬಹುದು ಎಂದು ಲೆಕ್ಕಾಚಾರ ಹಾಕಿದ್ದಾರೆ.

ಇದನ್ನೂ ಓದಿ: Praveen Sood: ಪ್ರವೀಣ್‌ ಸೂದ್‌ ನಾಲಾಯಕ್‌ ಡಿಜಿಪಿ, ಅಧಿಕಾರಕ್ಕೆ ಬಂದಾಗ ತೋರಿಸ್ತೇನೆ ಎಂದಿದ್ದ ಡಿ.ಕೆ. ಶಿವಕುಮಾರ್‌!

ಲೋಕಸಭಾ ಚುನಾವಣೆ ಹತ್ತಿರದಲ್ಲಿಯೇ ಇರುವುದರಿಂದ ತಾವು ಮುಖ್ಯಮಂತ್ರಿಯಾದರೆ ತಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳುವ ಧೈರ್ಯವನ್ನು ಕೇಂದ್ರೀಯ ತನಿಖಾ ಸಂಸ್ಥೆಗಳು ತೆಗೆದುಕೊಳ್ಳಲಾರವು ಎಂಬುದು ಡಿಕೆಶಿಯ ಚಿಂತನೆಯಾಗಿದೆ. ಹೀಗಾಗಿ ಮೊದಲು ತಮಗೆ ಅವಕಾಶ ನೀಡಿ ಎಂದು ಅವರು ಪಟ್ಟು ಹಿಡಿಯುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿಯೇ ಅವರು ಮಾಧ್ಯಮಗಳ ಮುಂದೆ ಸಹ, ʻʻನಾನು ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸಹಕಾರ ನೀಡಿದ್ದೇನೆ. ಅವರು ಈಗ ನನಗೆ ಸಹಕಾರ ನೀಡಬೇಕೆಂದುʼʼ ಮನವಿ ಮಾಡಿಕೊಂಡಿದ್ದಾರೆ.

ಗೌರವಯುತ ನಿರ್ಗಮನ ಬಯಸಿದ ಸಿದ್ದರಾಮಯ್ಯ

ಅಧಿಕಾರ ಹಂಚಿಕೆಯ ಸೂತ್ರಕ್ಕೆ ಬಹುತೇಕವಾಗಿ ಒಪ್ಪಿಗೆ ಸೂಚಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮಗೇ ಮೊದಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ತಾವು ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಪ್ರಕಟಿಸಿದ್ದು, ಈಗ ಪಕ್ಷ ಅಧಿಕಾರಕ್ಕೆ ಬಂದಿರುವುದರಿಂದ ತಾವು ಮೊದಲ ಅವಧಿಗೆ ಮುಖ್ಯಮಂತ್ರಿಯಾಗಿ ಗೌರವಯುತವಾಗಿ ನಿರ್ಗಮಿಸುತ್ತೇನೆ. ಈಗ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಟ್ಟು ನಂತರ ಮತ್ತೆ ಅಧಿಕಾರಕ್ಕೆ ಬಂದು ಸಕ್ರಿಯ ಚುನಾವಣಾ ರಾಜಕಾರಣದಿಂದ ನಿರ್ಗಮಿಸುವುದು ಗೌರವಯುತವಾಗಿರುವುದಿಲ್ಲ ಎಂದು ಹೇಳುತ್ತಿದ್ದಾರೆ.

ಚುನಾವಣೆಯನ್ನು ಎದುರಿಸುವ ಹೊತ್ತಿಗೆ, ʻಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲʼ ಎಂದು ತೀರ್ಮಾನಿಸಿರುವ ನಾನು ಮುಖ್ಯಮಂತ್ರಿಯಾಗುವುದು ಎಷ್ಟು ಸರಿ? ಎಂದು ಪ್ರಶ್ನಿಸುತ್ತಿರುವ ಅವರು ಮೊದಲ ಅವಧಿಯಲ್ಲಿ ನಾನೇ ಮುಖ್ಯಮಂತ್ರಿಯಾಗಬೇಕೆಂದು ಪಟ್ಟು ಹಿಡಿದು ಕುಳಿತಿದ್ದಾರೆ. ಅಲ್ಲದೆ, ತಮ್ಮನ್ನು ಬೆಂಬಲಿಸುವ ಶಾಸಕರ ಸಂಖ್ಯೆ ಹೆಚ್ಚಿದ್ದು, ಪಕ್ಷ ತಮಗೆ ಮೊದಲು ಅವಕಾಶ ನೀಡದೇ ಇದ್ದಲ್ಲಿ ಅವರನ್ನೆಲ್ಲಾ ಸಮಾಧಾನ ಪಡಿಸುವುದು ಕಷ್ಟವಾಗಲಿದೆ ಎಂದು ಸಿದ್ದರಾಮಯ್ಯ ವಾದ ಮಂಡಿಸುತ್ತಿದ್ದಾರೆ.

ಈ ಇಬ್ಬರು ನಾಯಕರ ವಾದಗಳೂ ಸರಿಯಾಗಿಯೇ ಇರುವುದರಿಂದ ಯಾರ ಪರವಾಗಿ ನಿರ್ಧಾರಕ್ಕೆ ಬರಬೇಕೆಂದು ಎಐಸಿಸಿ ನೇಮಿಸಿದ ವೀಕ್ಷಕರಿಗೆ, ಪಕ್ಷದ ನಾಯಕರಿಗೆ ತೀರ್ಮಾನಿಸಲು ಸಾಧ್ಯವಾಗಿಲ್ಲ. ಹೀಗಾಗಿ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಹಾಗೂ ನಾಯಕ ರಾಹುಲ್‌ ಗಾಂಧಿ ಅವರ ತೀರ್ಮಾನಕ್ಕೆ ಬಿಡಲು ನಿರ್ಧರಿಸಿದ್ದಾರೆ. ಇವರಿಬ್ಬರ ನಡುವಿನ ಈ ಸಂಘರ್ಷದ ವಿಷಯ ಸಾರ್ವಜನಿಕವಾಗಿ ಚರ್ಚೆಗೆ ಬರಬಾರದೆಂಬ ಕಾರಣಕ್ಕೆ ಇವರಿಬ್ಬರ ನಡುವೆ ಮುಖ್ಯಮಂತ್ರಿ ಆಯ್ಕೆಗೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಬಿಂಬಿಸಲಾಗುತ್ತಿದ್ದು, ಶಾಸಕರ ಅಭಿಪ್ರಾಯ ಸಂಗ್ರಹಿಸುವ ʻಕಾರ್ಯʼ ವನ್ನೂ ನಡೆಸಲಾಗಿದೆ.

ಒಟ್ಟಾರೆಯಾಗಿ ಮುಖ್ಯಮಂತ್ರಿ ಆಯ್ಕೆ ಸರಳವಾಗಿ ನಡೆಯಲಿದೆ ಎಂದುಕೊಂಡಿದ್ದ ಪಕ್ಷ ಹೈಕಮಾಂಡ್‌ಗೆ ಕೂಡ ಈ ಕಗ್ಗಂಟನ್ನು ಬಿಡಿಸುವುದು ಕಷ್ಟವಾಗಲಿದ್ದು, ಮುಖ್ಯಮಂತ್ರಿ ಆಯ್ಕೆ ನಿರೀಕ್ಷೆಗಿಂತಲೂ ತಡವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : Karnataka CM: ಸಿಎಂ ಆಯ್ಕೆ ಕಸರತ್ತಿನ ಮಧ್ಯೆಯೇ ಡಿಕೆಶಿ ಜನ್ಮದಿನ ಆಚರಣೆ; ಸಿದ್ದುಗೆ ಕೇಕ್‌ ತಿನ್ನಿಸಿದ ಕೆಪಿಸಿಸಿ ಅಧ್ಯಕ್ಷ

Exit mobile version