Site icon Vistara News

Karnataka Election 2023 : ನಾಳೆಯಿಂದ ಕಿಚ್ಚ ಸುದೀಪ್‌ ಪ್ರಚಾರ; ಈ ಬಾರಿ ಯಾವ ನಟ-ನಟಿಯರೆಲ್ಲಾ ಪ್ರಚಾರ ಮಾಡಲಿದ್ದಾರೆ?

sandalwood stars kiccha sudeep , Darshan Thoogudeepa in election campaign

sandalwood stars

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು (Karnataka Election 2023), ಸ್ಯಾಂಡಲ್‌ವುಡ್‌ (sandalwood) ನಟ-ನಟಿಯರು ತಮ್ಮ, ಪಕ್ಷ, ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಈಗಾಲೇ ಚುನಾವಣಾ ಕಣದಲ್ಲಿ ʻಬೆವರುʼ ಸುರಿಸುತ್ತಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುವುದಾಗಿ ಪ್ರಕಟಿಸಿರುವ ಖ್ಯಾತ ನಟ ಕಿಚ್ಚ ಸುದೀಪ್‌ (Kichcha Sudeep) ಬುಧವಾರದಿಂದ ಪ್ರಚಾರ ಆರಂಭಿಸಲಿದ್ದಾರೆ. ಇದುವರೆಗೂ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತೇನೆ ಎಂದು ಎಲ್ಲಿಯೂ ಸ್ಪಷ್ಟವಾಗಿ ಹೇಳದೇ ಇರುವ ಕಿಚ್ಚ ಸುದೀಪ್‌, (Kichcha Sudeep) ಕುಟಂಬದ ಹಿತೈಷಿ, ʻಮಾಮಾʼ ಎಂದೇ ತಾವು ಕರೆಯುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುವ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತೇನೆ ಎನ್ನುತ್ತಲೇ ಬಂದಿದ್ದಾರೆ.

ಶಿಗ್ಗಾಂವಿ ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹಾಜರಿದ್ದು, ಈ ಸಂದರ್ಭದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಭಾಷಣ ಮಾಡಿದ್ದ ಕಿಚ್ಚ ಸುದೀಪ್‌, ಬಸವರಾಜ ಬೊಮ್ಮಾಯಿ ಅವರನ್ನು ಗೆಲ್ಲಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಇದೀಗ ಅವರು ಅಧಿಕೃತವಾಗಿ ಪ್ರಚಾರ ಆರಂಭಿಸುತ್ತಿದ್ದು, ಬುಧವಾರದಿಂದ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳ ಕೆಲವು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

ಏ. 26ರಂದು ಮೊಣಕಾಲ್ಮೂರು, ಜಗಳೂರು, ಮಾಯಕೊಂಡ, ದಾವಣಗೆರೆಯಲ್ಲಿ ರೋಡ್‌ ಶೋ ನಡೆಸಿ, ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಭಾಷಣ ಮಾಡಲಿದ್ದಾರೆ. ನಂತರ ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ಏಪ್ರಿಲ್ 27 ಹಾಗು 28 ರಂದು ಹುಬ್ಬಳ್ಳಿ, ಗದಗ ಮತ್ತು ಶಿವಮೊಗ್ಗದಲ್ಲಿ ಪ್ರಚಾರ ಮಾಡಲಿದ್ದಾರೆ. ನಂತರ ರಾಜ್ಯದ ಇತರ ಜಿಲ್ಲೆಗಳಿಗೂ ತೆರಳಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೆಲ್ಲಿಸಿ ಎನ್ನುತ್ತಿರುವ ಕಿಚ್ಚ ಸುದೀಪ್‌

ಗೆಳೆಯರಿಗಾಗಿ ದರ್ಶನ್‌ ಪ್ರಚಾರ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಈ ಬಾರಿ ಕೂಡ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಾಡಿದಂತೆ ಬೇರೆ ಬೇರೆ ಪಕ್ಷದಿಂದ ಕಣಕ್ಕಿಳಿದಿರುವ ತಮ್ಮ ಗೆಳೆಯರ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಈಗಾಗಲೇ ಅವರು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಇಂಡುವಾಳು ಸಚ್ಚಿದಾನಂದ ಪರ ಒಂದು ಸುತ್ತು ಪ್ರಚಾರ ನಡೆಸಿ ಬಂದಿದ್ದಾರೆ. ಇದರ ಬೆನ್ನಲ್ಲೇ ಇನ್ನೋರ್ವ ಗೆಳೆಯ ಯಲಹಂಕ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೇಶವ ರಾಜಣ್ಣ ಪರವಾಗಿ ಕೂಡ ಪ್ರಚಾರ ನಡೆಸಿದ್ದಾರೆ.

ಅಲ್ಲದೆ ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದಲ್ಲಿ ರೈತ ನಾಯಕ ದಿವಂಗತ ಪುಟ್ಟಣ್ಣಯ್ಯನವರ ಪುತ್ರ ದರ್ಶನ್‌ ʼಸರ್ವೋದಯ ಕರ್ನಾಟಕ ಪಕ್ಷʼದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರು ನಾಮಪತ್ರ ಸಲ್ಲಿಸಿಸುವ ಸಂದರ್ಭದಲ್ಲಿ ಉಪಸ್ಥಿತಿದ್ದ ನಟ ದರ್ಶನ್‌ ಅಭ್ಯರ್ಥಿ ದರ್ಶನ್‌ ಜತೆಯಾಗಿ ಭರ್ಜರಿ ರೋಡ್‌ ಶೋ ನಡೆಸಿದ್ದು, ಅವರನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ. ದರ್ಶನ್‌ ಪರವಾಗಿ ರಾಕಿಂಗ್‌ ಸ್ಟಾರ್‌ ಯಶ್‌ ಕೂಡ ಪ್ರಚಾರ ನಡೆಸುವ ಸಾಧ್ಯತೆಗಳಿವೆ.

ಮಂಡ್ಯಕ್ಕೆ ಅಭಿಷೇಕ್‌ ಅಂಬರೀಷ್‌

ಸಂಸದೆ ಸುಮಲತಾ ಅವರ ಪುತ್ರ. ನಟ ಅಭಿಷೇಕ್ ಅಂಬರೀಷ್‌ ಕೂಡ ಮೇ ಒಂದರಿಂದ ಪ್ರಚಾರದ ಕಣಕ್ಕೆ ಇಳಿಯಲಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಅಭಿಷೇಕ್ ವಿಭಿನ್ನವಾಗಿ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ. ಬೈಕ್ ರ‍್ಯಾಲಿ ಮೂಲಕ ಅವರು ಮತದಾರರ ಗಮನ ಸೆಳೆಯಲಿದ್ದಾರೆ. ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣದ ಕ್ಷೇತ್ರದಲ್ಲಿ ಹಳ್ಳಿ ಹಳ್ಳಿಗೂ ತೆರಳಿ ಅವರು ಪ್ರಚಾರ ನಡೆಸಲಿದ್ದಾರೆ.

ಬಿಜೆಪಿಯ ತಾರಾ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ರಾಜ್ಯಸಭಾ ಸದಸ್ಯ, ನವರಸ ನಟ ಜಗ್ಗೇಶ್‌ ಇನ್ನೂ ಪ್ರಚಾರ ಆರಂಭಿಸಿಲ್ಲ. ಆದರೆ ನಟಿ ಶೃತಿ ಈಗಾಗಲೇ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಿಜೆಪಿಯ ಉಪಾಧ್ಯಕ್ಷ, ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ ವಿಜಯೇಂದ್ರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರು ಉಪಸ್ಥಿತರಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ನಟಿ ತಾರಾ ಕೂಡ ಬೆಂಗಳೂರಿನಲ್ಲಿ ಪ್ರಚಾರ ಆರಂಭಿಸಿದ್ದಾರೆ.

ನಟಿ ರಮ್ಯಾ ಅನುಮಾನ

ಕಾಂಗ್ರೆಸ್‌ನ ತಾರಾ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಖ್ಯಾತ ನಟಿ ರಮ್ಯಾ ಈ ಬಾರಿ ಚುನಾವಣಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಕಾಂಗ್ರೆಸ್‌ನಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಒಮ್ಮೆ ಗೆದ್ದಿರುವ ಮಾಜಿ ಸಂಸದೆ ರಮ್ಯಾ ಸದ್ಯ ಸಕ್ರೀಯ ರಾಜಕಾರಣದಿಂದ ದೂರ ಇದ್ದಾರೆ. ಹೀಗಾಗಿ ಅವರು ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕಿಳಿಯಲಾರರು ಎಂದೇ ಹೇಳಲಾಗುತ್ತಿದೆ.

ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ʻಭಾರತ್‌ ಜೋಡೊʼ ಪಾದ ಯಾತ್ರೆ ರಾಜ್ಯದಲ್ಲಿ ಸಾಗಿದಾಗಲೂ ರಮ್ಯಾ ಅದರಲ್ಲಿ ಸಕ್ರಿಯವಾಗಿ ಭಾಗಿಯಾಗಿರಲಿಲ್ಲ. ಯಾತ್ರೆಯು ರಾಜ್ಯದಲ್ಲಿ ಮುಕ್ತಾಯವಾಗಲಿದೆ ಎನ್ನುವಾಗ ಪಾದಯಾತ್ರೆಯಲ್ಲಿ ಕಾಣಿಸಿಕೊಂಡಿದ್ದ ಅವರು, ರಾಹುಲ್‌ ಗಾಂಧಿಯವರೊಂದಿಗೆ ನಾಲ್ಕು ಹೆಜ್ಜೆ ಹಾಕಿದ್ದರು. ಈಗಲೂ ಪಕ್ಷದ ರಾಷ್ಟ್ರೀಯ ನಾಯಕರು ಭಾಗವಹಿಸುವ ಬಹಿರಂಗ ಸಭೆಗಳಲ್ಲಿ ಮಾತ್ರ ರಮ್ಯಾ ಕಾಣಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಆದರೆ ರಾಮ್ಯಾ ಸಕ್ರೀಯವಾಗಿ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ.

ಬೇಸರದಲ್ಲಿ ಉಮಾಶ್ರೀ, ಭಾವನಾ

ಕಾಂಗ್ರೆಸ್‌ನ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮಾಜಿ ಸಚಿವೆ, ನಟಿ ಉಮಾಶ್ರೀ ಕಾಂಗ್ರೆಸ್‌ ಪರವಾಗಿ ಪ್ರಚಾರ ನಡೆಸುವ ಉತ್ಸಾಹದಲ್ಲಿಲ್ಲ. ತೇರದಾಳು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ನ ಆಕಾಂಕ್ಷಿಯಾಗಿದ್ದ ಅವರು ಟಿಕೆಟ್‌ ತಪ್ಪಿದ್ದರಿಂದ ಮುನಿಸಿಕೊಂಡಿದ್ದಾರೆ. ಹೀಗಾಗಿ ಪ್ರಚಾರದ ಕುರಿತು ಇನ್ನೂ ಅವರು ತೀರ್ಮಾನಿಸಿಲ್ಲ. ಇದೇ ರೀತಿಯಾಗಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ನಟಿ ಭಾವನಾ ಕೂಡ ಪಕ್ಷದ ನಾಯಕರ ವಿರುದ್ಧ ಬೇಸರಗೊಂಡಿದ್ದಾರೆ, ಇನ್ನೂ ಪ್ರಚಾರಕ್ಕೆ ಇಳಿದಿಲ್ಲ. ಆದರೆ ತಾವು ಪಕ್ಷದ ಪರವಾಗಿ ಪ್ರಚಾರ ನಡೆಸುತ್ತೇನೆ ಎಂದು ಅವರು ಪ್ರಕಟಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ಪರವಾಗಿ ಪರಚಾರ ನಡೆಸುತ್ತೇನೆ ಎಂದಿರುವ ನಟಿ ಭಾವನಾ

ಕಾಂಗ್ರೆಸ್‌ ತಾರಾ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಸಾಧು ಕೋಕಿಲ ಈಗಾಗಲೇ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಸಂದರ್ಭದಲ್ಲಿ ಸಾಧು ಕೋಕಿಲ ಕೂಡ ಭಾಗವಹಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರೊಂದಿಗೆ ಹಲವು ಕ್ಷೇತ್ರ ಸುತ್ತಿದ್ದಾರೆ. ತಮ್ಮ ವಿಶಿಷ್ಟವಾದ ಮಾತಿನ ಶೈಲಿಯಲ್ಲಿ ಮೋಡಿ ಮಾಡುತ್ತಿರುವ ಅವರು ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ.

ಆಮ್‌ ಆದ್ಮಿ ಪಕ್ಷದ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮುಖ್ಯಮಂತ್ರಿ ಚಂದ್ರು, ಟೆನ್ನಿಸ್‌ ಕೃಷ್ಣ ಕೂಡ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ತಮ್ಮ ನೆಂಟ ರಕ್ಷಿತ್‌ ಶಿವರಾಂ ಪರ ನಟ ವಿಜಯ ರಾಘವೇಂದ್ರ ಪ್ರಚಾರ ನಡೆಸುತ್ತಿದ್ದಾರೆ.

ಬೆಳ್ತಂಗಡಿ ಕ್ಷೇತ್ರದಲ್ಲಿ ನಟ ವಿಜಯ ರಾಘವೇಂದ್ರ

ಹಿರಿಯ ನಟ ಅನಂತನಾಗ್‌, ಶಶಿಕುಮಾರ್‌, ಶಿವರಾಜ್‌ ಕುಮಾರ್‌, ಗಣೇಶ್‌, ನಟಿ ಪೂಜಾಗಾಂಧಿ, ರಚಿತಾ ರಾಮ್‌, ಅಮೂಲ್ಯ ಕೂಡ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಸಾಧ್ಯತೆಗಳಿವೆ. ಇದರಿಂದ ಚುನಾವಣಾ ಕಣ ಇನ್ನಷ್ಟು ರಂಗು ಪಡೆಯಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ : ‌Karnataka Election: ಮೂರೂ ಪಕ್ಷಗಳ ಸ್ಟಾರ್‌ ಪ್ರಚಾರಕರಲ್ಲಿದ್ದಾರೆ ಹಾಸ್ಯ ನಟರು: ಜೆಡಿಎಸ್‌ನಲ್ಲಿ ಯಾರೂ ಇಲ್ಲ!

Exit mobile version