Site icon Vistara News

Karnataka Election 2023 : ನಿರೀಕ್ಷೆ ಹುಸಿಗೊಳಿಸಿದ ಆಪ್‌; ಕೇಜ್ರಿವಾಲ್‌ ಪ್ರಚಾರಕ್ಕೆ ಬಂದಿಲ್ಲ ಏಕೆ?

Arvind Kejriwal

Arvind Kejriwal gets 7th summons by probe agency, asked to appear on Monday

ರಾಮಸ್ವಾಮಿ ಹುಲಕೋಡು, ಬೆಂಗಳೂರು
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಲಿದೆ ಎಂದು ನಿರೀಕ್ಷಿಸಲಾಗಿದ್ದ ಆಮ್‌ ಆದ್ಮಿ ಪಕ್ಷ (ಆಪ್‌) ನಿರಾಸೆ ಮೂಡಿಸಿದೆ. ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಪ್ರಚಾರಕ್ಕೇ ಬರುತ್ತಿಲ್ಲ. ಉಳಿದ ನಾಯಕರೂ ನೆಪ ಮಾತ್ರಕ್ಕೆ ಪ್ರಚಾರ ನಡೆಸಿ ಹೋಗುತ್ತಿದ್ದಾರೆ.

ದೆಹಲಿ ನಂತರ ಪಂಜಾಬ್‌ನಲ್ಲಿ ಅಧಿಕಾರ ಹಿಡಿದಿದ್ದ ಆಪ್‌ ದೇಶಾದ್ಯಂತ ಪಕ್ಷವನ್ನು ವಿಸ್ತರಿಸಲು ನಿರ್ಧಿರಿಸಿತ್ತು. ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ ಎಂಬ ಕಾರಣದಿಂದ ಕಳೆದ ವರ್ಷದ ಏಪ್ರಿಲ್‌ನಲ್ಲಿಯೇ ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ ನಡಸಿ, ಮುಂದಿನ ಚುನಾವಣೆಗೆ ಪಕ್ಷ ಸಿದ್ಧವಾಗುತ್ತಿದೆ ಎಂದೂ ಘೋಷಿಸಿತ್ತು. ಪಕ್ಷರ ರಾಷ್ಟ್ರೀಯ ಸಂಚಾಲಕರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರೇ ಬೆಂಗಳೂರಿಗೆ ಆಗಮಿಸಿ ಅನೇಕ ರೈತ ನಾಯಕರು, ಗಣ್ಯರನ್ನು ಪಕ್ಷಕ್ಕೆ ಸೇರಿಸಿಕೊಂಡು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಲಿದೆ ಎಂಬ ಅಭಿಪ್ರಾಯ ಮೂಡಿಸಿದ್ದರು.

ಅಲ್ಲದೆ ಕಳೆದ ಮಾರ್ಚ್‌ 4 ರಂದು ದಾವಣಗೆರೆಯಲ್ಲಿ ಪಕ್ಷದ ಪದಾಧಿಕಾರಿಗಳ, ಕಾರ್ಯಕರ್ತರ ಬೃಹತ್‌ ಸಮಾವೇಶನ ನಡೆಸಿ, ಚುನಾವಣಾ ಪ್ರಚಾರಕ್ಕೆ ಚಾಲನೆಯನ್ನೂ ನೀಡಿದ್ದರು. ಈ ಸಮಾವೇಶದಲ್ಲಿಯೂ ಭಾಗವಹಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನಂತರ ರಾಜ್ಯದ ಕಡೆ ತಲೆ ಹಾಕಿಲ್ಲ. ಹೀಗಾಗಿ ಸ್ಟಾರ್‌ ಪ್ರಚಾರಕನ್ನಿಲ್ಲದೆ ಪಕ್ಷದ ಅಭ್ಯರ್ಥಿಗಳು ದಿಕ್ಕುಕಾಣದಂತಾಗಿದ್ದಾರೆ. ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಸಿಂಗ್‌ ಮಾನ್‌ ಮಾತ್ರ ಎರಡು ಬಾರಿ ಆಗಮಿಸಿ, ನೆಪ ಮಾತ್ರಕ್ಕೆ ಪ್ರಚಾರ ಮಾಡಿ ಹಿಂದಿರುಗಿದ್ದಾರೆ.

ಕೇಜ್ರಿವಾಲ್‌ ಬರಲು ಬಿಜೆಪಿ ಬಿಡುತ್ತಿಲ್ಲ!

ದೆಹಲಿ ಸಿಎಂ ಕೇಜ್ರಿವಾಲ್‌ ಅವರಿಗೆ ಕರ್ನಾಟಕಕ್ಕೆ ಬಂದು ಪ್ರಚಾರ ನಡೆಸಲು ಬಿಜೆಪಿ ಬಿಡುತ್ತಿಲ್ಲ ಎಂದು ಆಪ್‌ ವಕ್ತಾರ ಬ್ರಿಜೇಶ್‌ ಕಾಳಪ್ಪ ನೇರವಾಗಿ ಆರೋಪಿಸಿದ್ದಾರೆ. ʻವಿಸ್ತಾರ ನ್ಯೂಸ್‌ʼ ನೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಪ್ರಚಾರಕ್ಕೆ ಪ್ಲಾನ್‌ ಮಾಡುತ್ತಿದ್ದಂತೆಯೇ ಸಿಬಿಐನಿಂದ ನೋಟಿಸ್‌ ನೀಡಲಾಗುತ್ತಿದೆ. ಹೀಗೆ ಎರಡು ಬಾರಿ ಮಾಡಿದ್ದರಿಂದ ಅವರ ಪ್ರಚಾರ ಕಾರ್ಯಕ್ರಮಗಳು ರದ್ದಾಗಿವೆ. ಈ ಬಾರಿ ಅವರು ಪ್ರಚಾರಕ್ಕೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ. ಉಳಿದಂತೆ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಸಿಂಗ್‌ ಮಾನ್‌ ಸೇರಿದಂತೆ ಅನೇಕ ನಾಯಕರು ಪ್ರಚಾರ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆಪ್‌ ಮೂಲಗಳ ಪ್ರಕಾರ ದೆಹಲಿಯ ಇಬ್ಬರು ಸಚಿವರು ಈಗಾಗಲೇ ಜೈಲಿನಲ್ಲಿರುವುದರಿಂದ ಅಲ್ಲಿಯ ಸರ್ಕಾರ ಸಂಕಷ್ಟದಲ್ಲಿದೆ. ಅಲ್ಲದೆ, ಸಿಬಿಐ ಕೂಡ ಕೇಜ್ರಿವಾಲ್‌ ಹಿಂದೆ ಬಿದ್ದಿದೆ. ಇದರಿಂದ ದೂರದ ಕರ್ನಾಟಕಕ್ಕೆ ಬಂದು ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಅವರಿಗೆ ಕಷ್ಟವಾಗುತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸುವ ಯೋಜನೆಯಿಂದ ಅವರು ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ. ಪಂಜಾಬ್‌ ಮತ್ತು ಗುಜರಾತ್‌ ಚುನಾವಣೆಯಲ್ಲಿ ಅವರೇ ಮುಂದೆ ನಿಂತು ಪ್ರಚಾರ ನಡೆಸಿದ್ದರು.

ನಿರೀಕ್ಷಿಸಿದಷ್ಟು ಸಿಗದ ಬೆಂಬಲ…

ಪಂಜಾಬ್‌ನಲ್ಲಿ ರೈತರ ಬೆಂಬಲ ಪಡೆದು ಅಧಿಕಾರ ಹಿಡಿದಿದ್ದ ಆಪ್‌ ಕರ್ನಾಟಕದಲ್ಲಿಯೂ ರೈತರ ಬೆಂಬಲ ಪಡೆದು, ರೈತರ ಮತ್ತು ಜನಸಾಮಾನ್ಯರ ಪಕ್ಷವಾಗಿ ಕರ್ನಾಟಕದಲ್ಲಿ ನೆಲೆಯೂರಲು ಹೊರಟಿತ್ತು. ಹೀಗಾಗಿಯೇ 2022ರ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆಸಿದ್ದ ಬೃಹತ್‌ ಸಮಾವೇಶದಲ್ಲಿ ಅನೇಕ ರೈತ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು.

ಮುಖ್ಯವಾಗಿ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್‌ ಮತ್ತು ರೈತ ಸಂಘದ ಒಂದು ಬಣದ ನಾಯಕರು ಆಪ್‌ ಸೇರಿದ್ದರು. ಆದರೆ ಈ ಸಮಾವೇಶದ ಬೆನ್ನಲ್ಲೇ ಕೋಡಿಹಳ್ಳಿ ಚಂದ್ರಶೇಖರ್‌ ಮೇಲೆ ಸಾರಿಗೆ ನೌಕರರ ಮುಷ್ಕರ ನಿಲ್ಲಿಸಲು ಹಣ ಪಡೆದ ಆರೋಪ ಕೇಳಿಬಂದಿದ್ದು, ಅವರನ್ನು ರೈತ ಸಂಘದಿಂದಲೇ ಉಚ್ಚಾಟಿಸಲಾಗಿತ್ತು. ಆಪ್‌ ಕೂಡ ಅವರನ್ನು ದೂರವಿಡುವುದು ಅನಿವಾರ್ಯವಾಯಿತು. ರೈತ ಸಂಘದ ಬೇರೆ ನಾಯಕರು ಕೂಡ ಆಪ್‌ನೊಂದಿಗೆ ಗುರುತಿಸಿಕೊಳ್ಳಲು ಹಿಂದೇಟು ಹಾಕಿದ್ದರು.

2022 ರಲ್ಲಿ ಬೆಂಗಳೂರಿನಲ್ಲಿ ನಡೆದ ರೈತರ ಸಮಾವೇಶದಲ್ಲಿ ಅರವಿಂದ್‌ ಕೇಜ್ರಿವಾಲ್‌.

ರಾಜ್ಯದಲ್ಲಿ ರೈತ ಸಂಘಟನೆ, ದಲಿತ ಸಂಘಟನೆಗಳು ʻಸರ್ವೋದಯ ಕರ್ನಾಟಕ ಪಕ್ಷʼ ಎಂಬ ವೇದಿಕೆಯಡಿ ಚುನಾವಣೆಯನ್ನು ಎದುರಿಸಿಕೊಂಡು ಬಂದಿವೆ. ಹೀಗಾಗಿ ಈ ಸಂಘಟನೆಗಳು ಕೂಡ ಆಪ್‌ ಅನ್ನು ಬೆಂಬಲಿಸಲಿಲ್ಲ. ಬೆರಳೆಣಿಕೆಯಷ್ಟು ಮಂದಿ ನಿವೃತ್ತ ಅಧಿಕಾರಿಗಳು, ಗಣ್ಯರು ಆಪ್‌ ಸೇರಿದರು. ಆದರೆ ಕೇಜ್ರಿವಾಲ್‌ ಅವರೇ ಆಸಕ್ತಿ ತೋರದೇ ಇರುವುದರಿಂದ ಅವರೂ ಉತ್ಸಾಹ ಕಳೆದುಕೊಂಡಿದ್ದಾರೆ.

ಚುನಾವಣೆಯ ವೇಳೆಗೆ ಒಂದಿಷ್ಟು ಸಂಘಟಿತವಾಗಿ, ಹೋರಾಟದ ಹುಮ್ಮಸ್ಸು ತೋರಿಸಿದ್ದರೂ ಸಾಕಿತ್ತು. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನಲ್ಲಿ (ಜೆಸಿಬಿಯಲ್ಲಿ) ನಿರಾಸೆ ಅನುಭವಿಸಿದ್ದ ಕೆಲ ನಾಯಕರು ಆಪ್‌ ಸೇರಿಕೊಳ್ಳುತ್ತಿದ್ದರು. ಆದರೆ ಇದ್ಯಾವುದೂ ನಡೆಯಲಿಲ್ಲ. ಪಕ್ಷದ ಶಿಸ್ತು ಮತ್ತು ಅದರ ಹೆಸರಿನಲ್ಲಿ ಸ್ಥಳೀಯ ನಾಯಕರು ವರ್ತಿಸಿದ ರೀತಿಯಿಂದಾಗಿ ಆಸಕ್ತಿ ತೋರಿಸಿದವರೂ ಕೂಡ ಹಿಂದೆ ಸರಿದರು.

ಸದ್ಯ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಆಪ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ದೆಹಲಿಯ ಆಡಳಿತವನ್ನು ಬಲ್ಲವರು, ಆಪ್‌ ವಿಚಾರಧಾರೆಗೆ ಮಾರು ಹೋದವರು ಹುಮ್ಮಸ್ಸಿನಿಂದಲೇ ಪ್ರಚಾರ ನಡೆಸುತ್ತಿದ್ದಾರೆ. ಆದರೆ ರಾಜ್ಯದ ಯಾವುದೇ ಕ್ಷೇತ್ರದಲ್ಲಿಯೂ ಜೆಸಿಬಿಗೆ (ಜೆಡಿಎಸ್‌, ಕಾಂಗ್ರೆಸ್‌ ಬಿಜೆಪಿ) ಸವಾಲೊಡುತ್ತಿರುವುದು ಕಂಡು ಬರುತ್ತಿಲ್ಲ.

ಇದನ್ನೂ ಓದಿ: Karnataka Election 2023 : ಅಬ್ಬಬ್ಬಾ! ಕಣದಲ್ಲಿವೆ 80ಕ್ಕೂ ಹೆಚ್ಚು ಪಕ್ಷಗಳು!! ಈ ಪಕ್ಷಗಳ ಹೆಸರೇ ವಿಶೇಷವಾಗಿದೆ ನೋಡಿ!

Exit mobile version