ಬೆಂಗಳೂರು / ಹೊಳೆನರಸೀಪುರ: ಜೆಡಿಎಸ್‌ನ ನಾಯಕ ಮಾಜಿ ಸಚಿವ ಎಚ್.ಡಿ. ರೇವಣ್ಣ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ (Karnataka Election 2023) ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಇದೇ ರೀತಿಯಾಗಿ ಜೆಡಿಎಸ್ ಪಕ್ಷದ ಅನೇಕ ನಾಯಕರು ಕೂಡ ನಾಮಪತ್ರ ಸಲ್ಲಿಸಿದ್ದಾರೆ.
ಹೊಳೆನರಸೀಪುರದ ಲಕ್ಷ್ಮೀನರಸಿಂಹ ಸ್ವಾಮಿ, ಮಹಾಲಕ್ಷ್ಮೀ, ಹರದನಹಳ್ಳಿ ಈಶ್ವರ, ಯಲಿಯೂರು ದೇವಿರಮ್ಮ, ರಾಘವೇಂದ್ರಸ್ವಾಮಿಗೆ ಪೂಜೆ ಸಲ್ಲಿಸಿ ತಾಲ್ಲೂಕು ಕಚೇರಿಗೆ ಆಗಮಿಸಿದ ರೇವಣ್ಣ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪತ್ನಿ ಭವಾನಿ, ಪುತ್ರರಾದ ಸೂರಜ್, ಪ್ರಜ್ವಲ್ ಇದ್ದರು. ಈ ಕ್ಷೇತ್ರದಿಂದ ರೇವಣಕ್ಕ ಸ್ಪರ್ಧಿಸುತ್ತಿರುವುದು ಇದು ಏಳನೇ ಬಾರಿ. ಐದು ಬಾರಿ ಅವರು ಶಾಸಕರಾಗಿದ್ದಾರೆ. ಒಂದು ಬಾರಿ ಅಂದರೆ 1999ರಲ್ಲಿ ಅವರು ಸೋತಿದ್ದರು.
ಏಳು ಕ್ಷೇತ್ರಗಳಲ್ಲೂ ಗೆಲುವು
ನಾಮ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ. ರೇವಣ್ಣ , ತಂದೆ ದೇವೇಗೌಡರು ಸ್ಪರ್ಧಿಸುತ್ತಿದ್ದ ಕ್ಷೇತ್ರ ಇದು. ಅವರ ನಂತರ ನಾನು ಪ್ರತಿನಿಧಿಸುತ್ತಿದ್ದೇನೆ. ಪ್ರತಿ ಸಾರಿ ಅತಿ ಹೆಚ್ಚು ಮತಗಳಿಂದ ನನ್ನನ್ನೂ ಗೆಲ್ಲಿಸುತ್ತಿದ್ದಾರೆ. ಈ ಬಾರಿಯೂ ಗೆಲ್ಲಿಸಲಿದ್ದಾರೆ. ಗೆದ್ದು ಬಂದು ಬಡವರ ಪರವಾದ ಕೆಲಸವನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.
ಹಾಸನ ಜಿಲ್ಲೆಯ ಏಳು ಕ್ಷೇತ್ರಗಳನ್ನು ಜೆಡಿಎಸ್ ಗೆಲ್ಲುವುದು ನಿಶ್ಚಿತ. ನಾನು ಏಳೂ ಕ್ಷೇತ್ರಗಳಿಗೆ ಹೋಗಿ ಪ್ರಚಾರ ಮಾಡುತ್ತೇನೆ ಎಂದು ರೇವಣ್ಣ ಹೇಳುವ ಮೂಲಕ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಅವರು ಪ್ರಚಾರ ನಡೆಸಲಿದ್ದಾರೆಯೇ ಎಂಬ ಗೊಂದಲಕ್ಕೆ ತೆರೆ ಎಳೆದರು.
ಜೆಡಿಎಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಮೈಸೂರು ವರದಿ: ಮೈಸೂರಿನಲ್ಲಿ ಶಾಸಕ ಜಿ.ಟಿ. ದೇವೇಗೌಡ ನಾಮಪತ್ರ ಸಲ್ಲಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಅವರು ನಾಮಪತ್ರ ಸಲ್ಲಿಸಿದರು. ಪತ್ರ ಸಲ್ಲಿಕೆಗೂ ಮುನ್ನ ಕೋಟೆ ಆಂಜನೇಯ ಸ್ವಾಮಿಗೆ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ರೋಡ್ ಶೋ ಕೂಡ ನಡೆಸಿದರು.
ರಾಯಚೂರು ವರದಿ: ಜಿಲ್ಲೆಯ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿದ್ದು ವೈ ಬಂಡಿ ನಾಮಪತ್ರ ಸಲ್ಲಿಸಿದ್ದಾರೆ. ಸಹಾಯಕ ಆಯುಕ್ತರ ಕಚೇರಿಯಲ್ಲಿ ಅವರು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ, ರಾಜ್ಯ ವಕ್ತಾರೆ ನಜ್ಮಾ ನಜೀರ್ ಇದ್ದರು. ಇದಕ್ಕೂ ಮೊದಲು ಬೃಹತ್ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶನ ಮಾಡಲಾಯಿತು.
ವಿಜಯಪುರ ವರದಿ: ಜಿಲ್ಲೆ ನಾಗಠಾಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದೇವಾನಂದ್ ಚವ್ಹಾಣ ನಾಮಪತ್ರ ಸಲ್ಲಿಸಿದ್ದಾರೆ. ವಿಜಯಪುರದ ಜಿಲ್ಲಾ ಪಂಚಾಯತ ಆವರಣದಲ್ಲಿರುವ ಆಜಾದ್ ಭವನದಲ್ಲಿ ನಾಮಪತ್ರ ಸಲ್ಲಿಸಿದರು.
ಕುಮಟಾ ವರದಿ: ಉತ್ತರಕನ್ನಡ ಜಿಲ್ಲೆಯ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ನಾಮಪತ್ರ ಸಲ್ಲಿಸಿದ್ದಾರೆ. ಗಿಬ್ ಸರ್ಕಲ್ ಸಮೀಪದ ಜೆಡಿಎಸ್ ಕಚೇರಿಯಿಂದ ಇನ್ನೂರು ಮಂದಿ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಬಂದ ಅವರು ನಾಮಪತ್ರ ಸಲ್ಲಿಸಿದರು.
ಬಾಗಲಕೋಟೆ ವರದಿ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ. ದೇವರಾಜ ಪಾಟೀಲ್ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ದೇವರಾಜ ಪಾಟೀಲ್ ಟಿಕೆಟ್ ದೊರೆಯದೇ ಇದ್ದುದ್ದರಿಂದ ಜೆಡಿಎಸ್ ಸೇರಿದ್ದರು. ಇಂದು ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿ ಸಲ್ಲಿಸಿದ್ದಾರೆ.
ಶಿವಮೊಗ್ಗ ವರದಿ: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಡೂರ್ ರಾಜಾರಾಮ್ ನಾಮಪತ್ರ ಸಲ್ಲಿಸಿದ್ದಾರೆ. ತೀರ್ಥಹಳ್ಳಿಯ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆಯಾಗಿದ್ದು, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ.
ಚಿತ್ರದುರ್ಗ ವರದಿ: ಹಿರಿಯೂರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ ರವೀಂದ್ರಪ್ಪ ನಾಮಪತ್ರ ಸಲ್ಲಿಸಿದ್ದಾರೆ. ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ಏ. 20ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Karnataka Election 2023: ಡಿ.ಕೆ.ಶಿವಕುಮಾರ್ ಸೇರಿ ವಿವಿಧ ಕಾಂಗ್ರೆಸ್ ನಾಯಕರಿಂದ ನಾಮಪತ್ರ ಸಲ್ಲಿಕೆ