ಬೆಂಗಳೂರು: ಕಾಂಗ್ರೆಸ್ ಈ ಬಾರಿ ಆತ್ಮವಿಶ್ವಾಸದಿಂದ ಚುನಾವಣೆ ಎದುರಿಸಲು (Karnataka Election 2023) ಕಾರಣವಾಗಿದ್ದು ನಾಲ್ಕೈದು ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷ ನಡೆಸಿದ್ದ ಸಮೀಕ್ಷೆ. ಮುಂದಿನ ಚುನಾವಣೆಯಲ್ಲಿ ಪಕ್ಷ 120 ಪ್ಲಸ್ ಸ್ಥಾನ ಗಳಿಸುವ ಮೂಲಕ ಸರಳ ಬಹುಮತ ಪಡೆಯಲಿದೆ. ಬಿಜೆಪಿ 70 ಪ್ಲಸ್ ಸ್ಥಾನ ಗಳಿಸಿದರೆ, ಜೆಡಿಎಸ್ 25 ಸ್ಥಾನಗಳಿಗೆ ಸೀಮಿತವಾಗಲಿದೆ. 6ರಿಂದ 8 ಮಂದಿ ಪಕ್ಷೇತರರು ಗೆಲ್ಲಲಿದ್ದಾರೆ ಎಂದು ಈ ಸಮೀಕ್ಷೆ ಅಭಿಪ್ರಾಯಪಟ್ಟಿತ್ತು. ರಾಜ್ಯದ ಲಿಂಗಾಯತ ಸಮುದಾಯ ಬಿಜೆಪಿಯ ನಡುವಳಿಕೆಯಿಂದ ಬೇಸತ್ತಿದ್ದು, ಕಾಂಗ್ರೆಸ್‌ನತ್ತ ಒಲವು ತೋರುತ್ತಿದೆ ಎಂಬುದನ್ನು ಈ ಸಮೀಕ್ಷೆಯಲ್ಲಿಯೇ ಬೊಟ್ಟು ಮಾಡಲಾಗಿತ್ತು.
ಇದು ಕಾಂಗ್ರೆಸ್‌ನ ನಡೆಸಿದ ಸಮೀಕ್ಷೆಯಾದರೂ ಇದರ ಮಾಹಿತಿ ಆಗಲೇ ಬಿಜೆಪಿಗೂ ತಲುಪಿತ್ತು. ಈ ಸಮೀಕ್ಷೆಯ ವರದಿಯನ್ನು ಬಿಜೆಪಿ ಕಡೆಗಣಿಸಿರಲಿಲ್ಲ. ಕಾರಣ ಈ ಸಮೀಕ್ಷೆ ನಡೆಸಿರುವುದು ರಾಜ್ಯ ಮೂಲದ ರಾಜಕೀಯ ತಂತ್ರಜ್ಞ ಸುನೀಲ್ ಕನುಗೋಲು (Sunil Kanugolu). ರಾಜಕೀಯ ತಂತ್ರಗಾರಿಕೆಯ ಚತುರ ಪ್ರಶಾಂತ್ ಕಿಶೋರ್ ಕೈಕೆಳಗೆ ಪಳಗಿದವರು ಸುನೀಲ್ ಕನುಗೋಲು. ಇದುವರೆಗೂ ಬಿಜೆಪಿಗಾಗಿಯೇ ಕೆಲಸ ಮಾಡುತ್ತಿದ್ದವರು. 2014ರ ಚುನಾವಣೆಯಿಂದಲೂ ಪ್ರಧಾನಿ ಮೋದಿಯವರ ಪ್ರಚಾರಕ ಹುದ್ದೆ ನಿರ್ವಹಿಸಿದವರು.
2017ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲ್ಲಲು ಇವರು ನಡೆಸಿದ ತಂತ್ರಗಾರಿಕೆಯ ಪಾಲೂ ಇದೆ ಎಂದು ಹೇಳಲಾಗುತ್ತಿದೆ. ರಾಜಕೀಯ ತಂತ್ರಗಾರಿಕೆಯಲ್ಲಿ ಒಂದು ದಶಕಕ್ಕೂ ಹೆಚ್ಚಿನ ಅನುಭವ ಹೊಂದಿರುವ ಸುನೀಲ್ ಕನುಗೋಲು ಈಗಾಗಲೇ 14 ಚುನಾವಣೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಗುಜರಾತ್‌ನಿಂದ ಹಿಡಿದು ಹಲವು ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದ್ದು ಇವರ ನೆರವಿನಿಂದಲೇ.
ಸುನೀಲ್ ಕನುಗೋಲು ಬಗ್ಗೆ ಈ ವಿಷಯ ಗೊತ್ತೇ?
ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಕಂಪನಿ ಮೆಕೆನ್ಸಿಯ ಸಲಹೆಗಾರರಾಗಿದ್ದ 42 ವರ್ಷದ ಸುನೀಲ್ ಕನುಗೋಲು ನಮ್ಮ ಬಳ್ಳಾರಿಯವರು. ಆದರೆ ಓದಿದ್ದು, ಬೆಳೆದಿದ್ದು ಎಲ್ಲ ಚೆನ್ನೈನಲ್ಲಿ. ಬಳ್ಳಾರಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರ ಕುಟುಂಬ ಚೆನ್ನೈಗೆ ಸ್ಥಳಾಂತರಗೊಂಡಿತ್ತು. ಅಲ್ಲಿ ಓದಿದ ಅವರು ಉನ್ನತ ವ್ಯಾಸಾಂಗಕ್ಕಾಗಿ ಅಮೆರಿಕಕ್ಕೆ ಹೋಗಿದ್ದರು. ಎಂಜಿನಿಯರಿಂಗ್ ಓದಿರುವ ಅವರು, ಫೈನಾನ್ಸ್ ವಿಷಯದಲ್ಲಿ ಎಂಎಸ್ಸಿ ಮಾಡಿದ್ದಾರೆ. ಅಲ್ಲದೆ ಎಂಬಿಎ ಪದವಿಯನ್ನೂ ಪಡೆದುಕೊಂಡಿದ್ದಾರೆ. 20̈09ರಲ್ಲಿ ಅಮೆರಿಕದಿಂದ ಹಿಂದಿರುಗಿದ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಸ್‌ಆರ್ ಇಂಡಿಪೆಡೆಂಟ್ ಫಿಷರೀಸ್ ಪ್ರವೇಟ್ ಲಿಮಿಟೆಡ್, ಎಸ್‌ಆರ್ ನ್ಯೂಟ್ರೋ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಬ್ರೈನ್ ಸ್ಟ್ರೋಮ್ ಇನೋವೇಷನ್ ಅಂಡ್ ರಿಸರ್ಚ್ ಪ್ರವೇಟ್ ಲಿಮಿಟೆಡ್ (BSIR) ಕಂಪನಿಗಳ ನಿರ್ದೇಶಕರಾಗಿದ್ದಾರೆ.
ಬಿಜೆಪಿಯ ʻʻಅಸೋಸಿಯೇಷನ್ ಬಿಲಿಯನ್ ಮೈಂಡ್ʼʼ (ಎಬಿಎಂ)ನ ಮುಖ್ಯಸ್ಥರಾಗಿದ್ದ ಸುನೀಲ್ ಕನುಗೋಲು ಪಕ್ಷದ ಐಟಿ ಸೆಲ್ ವ್ಯವಸ್ಥಿತ ಕ್ಯಾಂಪೇನ್ ನಡೆಸುವಂತೆ ನೋಡಿಕೊಳ್ಳುತ್ತಿದ್ದರು. ರಾಜ್ಯದಲ್ಲಿ ಕಳೆದ ಚುನಾವಣೆಯಲ್ಲಿ ಅವರು ಬಿಜೆಪಿ ಪರವಾಗಿ ಕೆಲಸ ಮಾಡಿದ್ದರು. ಕಳೆದ ಚುನಾವಣೆಗೂ ಮೋದಲು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾರೋಪದಲ್ಲಿ 6 ಸಾವಿರ ಐಟಿ ಕಾರ್ಯಕರ್ತರು ಕೆಲಸ ಮಾಡುವಂತೆ ಅವರು ನೋಡಿಕೊಂಡಿದ್ದರು! ಹೀಗಾಗಿ ಬಿಜೆಪಿಯ ತಂತ್ರಗಾರಿಕೆಯನ್ನು ಅವರು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು, ಊಹಿಸಬಲ್ಲರು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸ್ಪಷ್ಟ ಜನಾದೇಶ, ಕಾಂಗ್ರೆಸ್ ಗೆಲುವು ತಂದ ಸ್ಥಿರತೆ, ಬಿಜೆಪಿಗೆ ಆತ್ಮಾವಲೋಕನದ ಕಾಲ
ಚೆನ್ನೈನ್ ನಿವಾಸಿಯಾಗಿರುವುದರಿಂದ ತಮಿಳುನಾಡಿನ ರಾಜಕೀಯ ಪಕ್ಷಗಳೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಡಿಎಂಕೆ, ಎಐಡಿಎಂಕೆ ಪಕ್ಷಗಳ ಪರವಾಗಿಯೂ ಕೆಲಸ ಮಾಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಯಾಗಿರುವ ಸ್ಟಾಲಿನ್‌ಗೆ ರಾಜಕೀಯ ಇಮೇಜ್ ಕಟ್ಟಿಕೊಟ್ಟ, 2016ರ Namakku Naame ಕ್ಯಾಂಪೇನ್‌ನ ಅನ್ನು ಇವರೇ ರೂಪಿಸಿದ್ದರು. ಕಳೆದ ವರ್ಷದ ಮಾರ್ಚ್‌ನಲ್ಲಿ ಕಾಂಗ್ರೆಸ್ ಸೇರಿದ್ದ ಇವರು ರಾಹುಲ್ ಗಾಂಧಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ʻಭಾರತ್ ಜೋಡೋ ಯಾತ್ರೆʼʼಯ ರೂವಾರಿಗಳಲ್ಲಿ ಇವರೂ ಒಬ್ಬರು.
40 ಪರ್ಸೆಂಟ್ ಕ್ಯಾಂಪೇನ್ ಐಡಿಯಾ ಇವರದ್ದೇ!
ಕಳೆದ ಎಂಟು ತಿಂಗಳಿನಲ್ಲಿ ಐದು ಸಮೀಕ್ಷೆಗಳನ್ನು ನಡೆಸಿದ್ದ ಸುನೀಲ್ ಅದರ ವರದಿಯನ್ನು ಇಟ್ಟುಕೊಂಡು ಪಕ್ಷದ ತಂತ್ರಗಾರಿಕೆ ರೂಪಿಸಿದ್ದರು. ಈ ಸಮೀಕ್ಷೆಗಳ ಆಧಾರದಲ್ಲಿಯೇ ಪಕ್ಷ ಟಿಕೆಟ್ ಹಂಚಿಕೆ ಮಾಡಿತ್ತು. ಅದರಲ್ಲಿಯೂ ಮುಖ್ಯವಾಗಿ ಗೆಲ್ಲಬಹುದಾದ 70 ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆಮಾಡುವಲ್ಲಿ ಈ ಸಮೀಕ್ಷೆಗಳ ಅಭಿಪ್ರಾಯ ಪ್ರಮುಖ ಪಾತ್ರ ವಹಿಸಿತ್ತು ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಚಾರದಲ್ಲಿ ಮುಖ್ಯವಾಗಿ ಗಮನ ಸೆಳೆದವು ಎಂದರೆ ʻ40 ಪರ್ಸೆಂಟ್ ಸರ್ಕಾರʼ ಮತ್ತು ʻಪೇ ಸಿಎಂʼ ಕ್ಯಾಂಪೇನ್. ಇವುಗಳನ್ನು ರೂಪಿಸಿದವರು ಕೂಡ ಸುನಿಲ್. ಕಾಂಗ್ರೆಸ್ ನಾಯಕರಿಗೆ ಒಗ್ಗಟ್ಟಿನ ಮಂತ್ರ ಹೇಳಿಕೊಟ್ಟ ಅವರು, ಚುನಾವಣೆಯ ಸಂದರ್ಭದಲ್ಲಿ ದಿನಕ್ಕೆ 20ಗಂಟೆ ಕೆಲಸ ಮಾಡುತ್ತಿದ್ದರು. ಪ್ರತಿಯೊಂದು ವಿಷಯವನ್ನೂ ಗಮನಿಸಿ, ಪಕ್ಷಕ್ಕೆ ಹಾನಿಯಾಗದಂತೆ ನೋಡಿಕೊಳ್ಳುತ್ತಿದ್ದರು. ಇದರಿಂದಾಗಿ ಕಾಂಗ್ರೆಸ್ ಕರ್ನಾಟಕದಲ್ಲಿ ಅಭೂತಪೂರ್ವ ಗೆಲುವು ಸಾಧಿಸಲು ಸಾಧ್ಯವಾಗಿದೆ.
2024ರ ಲೋಕಸಭಾ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ರೂಪಿಸಿರು ಟಾಸ್ಕ್ ಫೋರ್ಸ್‌ನ ಸದಸ್ಯರಾಗಿ ನೇಮಕಗೊಂಡಿರುವ ಸುನಿಲ್, ಈ ವರ್ಷವೇ ನಡೆಯಲಿರುವ ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳ ಚುನಾವಣೆಯ ತಂತ್ರಗಾರಿಕೆ ರೂಪಿಸುವಲ್ಲಿ ಈಗ ಬಿಜಿಯಾಗಿದ್ದಾರೆ.