ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಆಯ್ಕೆ (Karnataka Election 2023) ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ನಾಯಕರಿಗೆ ಸಭೆಯ ಮೇಲೆ ಸಭೆ ನಡೆಸಿದರೂ ಯಾರನ್ನು ಆಯ್ಕೆ ಮಾಡಬೇಕೆಂಬುದು ಸ್ಪಷ್ಟವಾಗುತ್ತಿಲ್ಲ. ಅಲ್ಲದೆ ಸಿಎಂ ಗಾದಿಗಾಗಿ ಪೈಪೋಟಿ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಪಟ್ಟು ಸಡಿಲಿಸುತ್ತಿಲ್ಲ.
ಇಬ್ಬರ ಬಗ್ಗೆಯೂ ಪಕ್ಷದ ಹೈಕಮಾಂಡ್‌ಗೆ ಒಳ್ಳೆಯ ಅಭಿಪ್ರಾಯವೇ ಇದ್ದು, ಸಮಬಲದ ಈ ನಾಯಕರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬ ಕುರಿತು ಪಕ್ಷದ ಉನ್ನತ ನಾಯಕರಲ್ಲಿಯೂ ಭಿನ್ನಾಭಿಪ್ರಾಯ ಮೂಡಿರುವುದು ಈ ಬಿಕ್ಕಟ್ಟನ್ನು ಇನ್ನಷ್ಟು ಕಗ್ಗಂಟಾಗಿಸಿದೆ. ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ನಾಯಕ ರಾಹುಲ್ ಗಾಂಧಿ ಕೂಡ ಈ ಬಿಕ್ಕಟ್ಟನ್ನು ಬಗೆಹರಿಸಲು ದಾರಿ ಕಾಣದೆ ಹೌಹಾರಿ ಕುಳಿತಿದ್ದಾರೆ.
ಪಕ್ಷದ ಉನ್ನತ ಮೂಲಗಳ ಪ್ರಕಾರ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ, ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಎಐಸಿಸಿಯ ಇತರ ಪ್ರಧಾನ ಕಾರ್ಯದರ್ಶಿಗಳು ಡಿ.ಕೆ. ಶಿವಕುಮಾರ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯರ ಪರವಾಗಿ ನಿಂತಿದ್ದಾರೆ. ಪಕ್ಷ ಕಷ್ಟದಲ್ಲಿ ಸಿಲುಕಿದ್ದಾಗಲೆಲ್ಲಾ ಟ್ರಬಲ್ ಶೂಟರ್ ಆಗಿ ಕಾರ್ಯ ನಿರ್ವಹಿಸಿದ ತಮ್ಮನ್ನು ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಬಿಟ್ಟುಕೊಡುವುದಿಲ್ಲ ಎಂಬ ವಿಶ್ವಾಸದಲ್ಲಿ ಡಿ.ಕೆ. ಶಿವಕುಮಾರ್ ಇದ್ದಾರೆ. ಹೀಗಾಗಿಯೇ ಪದೇ ಪದೇ ಸೋನಿಯಾಗಾಂಧಿಯವರ ಹೆಸರನ್ನು ಅವರು ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ಮುಂದಿನ ಮುಖ್ಯಮಂತ್ರಿ ಯಾರೆಂಬುದನ್ನು ತೀರ್ಮಾನಿಸಬೇಕಾಗಿದ್ದ ಪಕ್ಷದ ಉನ್ನತ ನಾಯಕರಲ್ಲಿ ಕೂಡ ಒಮ್ಮತವಿಲ್ಲ. ಇದು ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಿದೆ.
ಯಾರು ಯಾರ ಪರ?
ಸಿದ್ದರಾಮಯ್ಯರ ಪರ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಮತ್ತು ಪಕ್ಷದ ಬಹುತೇಕ ನೂತನ ಶಾಸಕರು ನಿಂತಿದ್ದಾರೆ.
ಡಿಕೆ ಶಿವಕುಮಾರ್ ಪರವಾಗಿ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ, ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆಲ ನೂತನ ಶಾಸಕರಿದ್ದಾರೆ.
ರಾಜ್ಯದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಟಸ್ಥ ನಿಲುವು ಹೊಂದಿದ್ದರೂ ಹೆಚ್ಚಿನ ಶಾಸಕರು ಸಿದ್ದರಾಮಯ್ಯರ ಪರ ಇರುವುದನ್ನು ಪರಿಗಣಿಸುವಂತೆ ಹೇಳುತ್ತಿದ್ದಾರೆ ಎನ್ನಲಾಗಿದೆ.
ಈ ನಡುವೆ ದೇಶದ ಬೇರೆ ಬೇರೆ ರಾಜ್ಯಗಳ ಕಾಂಗ್ರೆಸ್ ಪ್ರಾದೇಶಿಕ ಪಕ್ಷದ ಅಧ್ಯಕ್ಷಕರು, ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್‌ಗೆ ಮುಖ್ಯಮಂತ್ರಿ ಹುದ್ದೆ ನೀಡಿ, ಪಕ್ಷದ ಸಂಪ್ರದಾಯವನ್ನು ಮುಂದುವರಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿರುವುದು ಕೂಡ ಪಕ್ಷದ ನಾಯಕರನ್ನು ಇನ್ನಷ್ಟು ಗೊಂದಲಕ್ಕೆ ತಳ್ಳಿದೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ತಮ್ಮನ್ನು ಏಕೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬೇಕೆಂದು ಮಂಡಿಸುತ್ತಿರುವ ವಾದದಲ್ಲಿ ಇಬ್ಬರದೂ ಸಮತೂಕವಿದೆ. ಅಧಿಕಾರ ಹಂಚಿಕೆಯ ಸೂತ್ರಗಳನ್ನು ರೂಪಿಸದರೂ ಇದಕ್ಕೆ ಈ ಇಬ್ಬರು ನಾಯಕರು ಒಪ್ಪುತ್ತಿಲ್ಲ. ಹೀಗಾಗಿ ರಾಜ್ಯದ ಮುಂದಿನ ಮುಖ್ಯಮಂತ್ರಿಯ ಆಯ್ಕೆ ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗೇ ಆಗ್ತಾನೆ; ಇಲ್ಲದಿದ್ದರೆ ಮೀಸೆ ಬೋಳಿಸ್ತೀನಿ ಅಂದ ಮೀಸೆಯೇ ಇಲ್ಲದ 3 ವರ್ಷದ ಬಾಲಕ!