ಭಾಸ್ಕರ್ ಆರ್. ಗೆಂಡ್ಲ, ವಿಸ್ತಾರ ನ್ಯೂಸ್, ಶಿರಸಿ
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಕ್ಷೇತ್ರಗಳ ಸಮೀಕ್ಷೆಯನ್ನು ಈಗಾಗಲೇ ವಿಸ್ತಾರ ನ್ಯೂಸ್ ಪ್ರಕಟಿಸಿದೆ. ( ಈ ಸಮೀಕ್ಷೆ ಓದಲುಇಲ್ಲಿ ಕ್ಲಿಕ್ ಮಾಡಿ ) ಘಟ್ಟದ ಮೇಲಿನ ಪ್ರದೇಶದ ಮೂರು ಕ್ಷೇತ್ರಗಳಲ್ಲಿ ಕೂಡ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ನಡೆಯುತ್ತಿದೆ.
ಈ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೇಲುಗೈ ಸಾಧಿಸಿದ ಇತಿಹಾಸ ಇದೆ. ಆದರೆ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಹುಮ್ಮಸ್ಸು ಹೆಚ್ಚಿದ್ದು, ಈ ಪಕ್ಷಗಳ ಕಾರ್ಯಕರ್ತರಲ್ಲಿ ಹೆಚ್ಚು ಉತ್ಸಾಹ ಕಾಣುತ್ತಿದೆ. ಕಳೆದ ಬಾರಿ ಶಿರಸಿ-ಸಿದ್ದಾಪುರ, ಯಲ್ಲಾಪುರ-ಮುಂಡಗೋಡ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದರೆ, ಹಳಿಯಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿತ್ತು.
ಶಿರಸಿ-ಸಿದ್ದಾಪುರ:
ಸೋಲಿಲ್ಲದ ಸರದಾರ
ಕಾಗೇರಿಗೆ ಕಠಿಣ ಸವಾಲು
ಕಳೆದ 25 ವರ್ಷಗಳಿಂದ ಬಿಜೆಪಿ ಹಿಡಿತದಲ್ಲಿರುವ ಈ ಕ್ಷೇತ್ರವನ್ನು ಈ ಬಾರಿ ಕಿತ್ತುಕೊಳ್ಳಲು ಎದುರಾಳಿ ಪಕ್ಷಗಳು ಹವಣಿಸುತ್ತಿವೆ. ಹವ್ಯಕ ಬ್ರಾಹ್ಮಣ ಹಾಗೂ ನಾಮಧಾರಿಗಳ ಮತಗಳು ಇಲ್ಲಿ ನಿರ್ಣಾಯಕ. ಸ್ವಜಾತಿಯ ಹವ್ಯಕರು ಮತ್ತು ಬಿಜೆಪಿ ಅಭಿಮಾನಿ ನಾಮಧಾರಿಗಳು ವಿಶ್ವೇಶ್ವರ ಹೆಗಡೆ ಕಾಗೇರಿಯ ನಿರಂತರ ಗೆಲುವಿಗೆ ಸಹಕಾರಿಯಾಗಿದ್ದಾರೆ.
ಹಣದ ಹೊಳೆ, ಕೀಳುಮಟ್ಟದ ರಾಜಕೀಯ ಕೆಸರೆರಚಾಟವಿಲ್ಲದೇ ಅತ್ಯಂತ ಶಾಂತ, ಸರಳವಾಗಿ ಚುನಾವಣೆ ನಡೆಯುವ ಅಪರೂಪದ ಕ್ಷೇತ್ರ ಎಂಬ ವಿಶೇಷತೆ ಶಿರಸಿ ವಿಧಾನಸಭಾ ಕ್ಷೇತ್ರಕ್ಕಿದೆ. ಕಾಂಗ್ರೆಸ್‌ನ ಭೀಮಣ್ಣ ನಾಯ್ಕ ಹಾಗೂ ಕಾಗೇರಿ ಇಬ್ಬರಲ್ಲೂ ಸ್ವಭಾವದಲ್ಲಿ ಕೆಲವು ಹೋಲಿಕೆ ಇದೆ. ಇಬ್ಬರೂ ಪಕ್ಷ ನಿಷ್ಠೆ ಹೊಂದಿದವರು, ಕ್ಷೇತ್ರದಲ್ಲಿ ಪಕ್ಷ ಕಟ್ಟಿದವರಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಹೊನ್ನಾವರದಲ್ಲಿ ನಡೆದ ಪರೇಶ್ ಮೇಸ್ತಾ ಸಾವು ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾಗಿತ್ತು. ಇದರಿಂದ ಇಡೀ ಶಿರಸಿ ನಗರ ಹೊತ್ತಿ ಉರಿದಿತ್ತು. ಆಗ ನಡೆದ ಚುನಾವಣೆಯಲ್ಲಿ ಕಾಗೇರಿ ನಿರಾಯಾಸವಾಗಿ ಗೆಲವು ಸಾಧಿಸಿದ್ದರು. ಆದರೆ ಈ ಬಾರಿ ಸಿದ್ದಾಪುರ ಭಾಗದಲ್ಲಿ ಸ್ವಪಕ್ಷದವರೇ ಕಾಗೇರಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ʻಬಿಜೆಪಿ ಬೇಕು, ಕಾಗೇರಿ ಬೇಡʼ ಎಂಬ ಕೂಗು ಕೇಳಿಬಂದಿದೆ. ಇನ್ನು ಸಿದ್ದಾಪುರ ಭಾಗದ ಬಿಜೆಪಿ ಅಭಿಮಾನಿ ನಾಮಧಾರಿ ಮತಗಳನ್ನೂ ಭೀಮಣ್ಣ ನಾಯ್ಕ ಸೆಳೆಯುವ ಸಾಧ್ಯತೆ ಇದೆ.
2008ರ ಕ್ಷೇತ್ರ ಪುನರ್ ವಿಂಗಡನೆಯ ನಂತರ ಶಿರಸಿ, ಸಿದ್ದಾಪುರ ತಾಲೂಕನ್ನೊಳಗೊಂಡ ಕ್ಷೇತ್ರದಿಂದ ನಿರಂತರ 3 ಬಾರಿ ಕಾಗೇರಿ ಆಯ್ಕೆಯಾಗಿದ್ದಾರೆ. 2013ರ ಚುನಾವಣೆಯಲ್ಲಿ ಅವರ ಗೆಲುವಿನ ಅಂತರ ಕಡಿಮೆಯಾಗಿತ್ತು. ಆದರೆ, 2018ರಲ್ಲಿ ಮೋದಿ ಅಲೆ ಹಾಗೂ ಜಿಲ್ಲೆಯಲ್ಲಿ ನಡೆದ ಕೋಮು ಸಂಘರ್ಷದ ಕಾರಣದಿಂದ ಗೆಲುವಿನ ಅಂತರ ಹೆಚ್ಚಿತ್ತು. ಯಾವುದೇ ವಿವಾದಗಳಿಗೆ ಸಿಲುಕದೆ ಕ್ಲೀನ್ ಇಮೇಜ್ ಉಳಿಸಿಕೊಂಡಿರುವುದು, ಕ್ಷೇತ್ರದ ಸಾಮಾನ್ಯರ ಮದುವೆ, ಮುಂಜಿ ಸಮಾರಂಭಗಳಿಗೂ ತೆರಳಿ ಶುಭ ಕೋರುವುದು ಕಾಗೇರಿ ರಾಜಕಾರಣದ ವಿಶೇಷ. ಸುದೀರ್ಘ ರಾಜಕೀಯ ಅನುಭವ, ಸಿಎಂ ಕ್ಯಾಂಡಿಡೇಟ್ ಆಗುವಷ್ಟು ಪ್ರಭಾವ ಹೊಂದಿದ್ದರೂ, ಕ್ಷೇತ್ರದ ಹಲವು ಗಂಭೀರ ಸಮಸ್ಯೆಗಳಿಗೆ ಪರಿಹಾರ ಹುಡುಕಿಲ್ಲ. ಪರ್ಯಾಯ ನಾಯಕರನ್ನು ಬೆಳೆಸಿಲ್ಲ. ಕಾರ್ಯಕರ್ತರ, ಆಪ್ತರ ವೈಯಕ್ತಿಕ ಕಾರ್ಯಗಳಿಗೆ ಸ್ಪಂದಿಸುವುದಿಲ್ಲ ಎಂಬ ಆರೋಪ ಕಾಗೇರಿಯವರ ಮೇಲಿದೆ.
ಇನ್ನು ಅಘನಾಶಿನಿ ನದಿಯ ಉಗಮ ಸ್ಥಾನವಾಗಿದ್ದರೂ ಶಿರಸಿ, ಸಿದ್ದಾಪುರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಪ್ರತ್ಯೇಕ ಜಿಲ್ಲೆಯಾಗಬೇಕು ಎನ್ನುವುದು ಒಂದು ಕಡೆಯಾದರೆ, ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವುದು ಇಲ್ಲಿನ ಮತದಾರರ ಆಗ್ರಹ ಬಲವಾಗಿದೆ. ಒಟ್ಟಾರೆ ಈ ಬಾರಿ ಕಾಗೇರಿ ಅವರು ಗೆಲುವು ಸಾಧಿಸುವುದು ಹಿಂದಿನ ಚುನಾವಣೆಯಷ್ಟು ಸುಲಭವಂತೂ ಅಲ್ಲ. ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡುವುದು ಖಚಿತ.
ಕಳೆದ ಬಾರಿಯ ಫಲಿತಾಂಶ ಏನು?
ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ): 70,595 | ಭೀಮಣ್ಣ ನಾಯ್ಕ (ಕಾಂಗ್ರೆಸ್): 53,134 | ಗೆಲುವಿನ ಅಂತರ: 17,461
ಯಲ್ಲಾಪುರ-ಮುಂಡಗೋಡ:
ಹೆಬ್ಬಾರ್-ಪಾಟೀಲ್
ನೇರ ಹಣಾಹಣಿ
ಯಲ್ಲಾಪುರ–ಮುಂಡಗೋಡ ಕ್ಷೇತ್ರದಲ್ಲಿ ಈ ಬಾರಿ ಪ್ರಬಲ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಕಾಂಗ್ರೆಸ್‍ನಿಂದ ಬಿಜೆಪಿಗೆ, ಬಿಜೆಪಿಯಿಂದ ಕಾಂಗ್ರೆಸ್‍ಗೆ ಜಿಗಿದ ನಾಯಕರ ನಡುವೆ ನೇರಾನೇರ ಹಣಾಹಣಿ ನಡೆಯುತ್ತಿದೆ. ಯಲ್ಲಾಪುರ, ಮುಂಡಗೋಡ ತಾಲೂಕುಗಳ ಜತೆಗೆ ಶಿರಸಿ ತಾಲೂಕಿನ ಬನವಾಸಿ ಹೋಬಳಿ ಒಳಗೊಂಡಿರುವ ಕ್ಷೇತ್ರದಲ್ಲಿ ಹಾಲಿ ಕಾರ್ಮಿಕ ಸಚಿವರಾಗಿರುವ ಶಿವರಾಮ ಹೆಬ್ಬಾರ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಇವರಿಗೆ ಮಾಜಿ ಶಾಸಕ ವಿ.ಎಸ್.ಪಾಟೀಲ್ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.
2013 ಮತ್ತು 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ 2 ಬಾರಿ ಹಾಗೂ 2019ರಲ್ಲಿ ಆಪರೇಷನ್ ಕಮಲಕ್ಕೊಳಗಾಗಿ ಉಪ ಚುನಾವಣೆಯಲ್ಲಿ ಸತತ ಮೂರನೇ ಬಾರಿ ಗೆಲುವು ಸಾಧಿಸಿರುವ ಶಿವರಾಮ ಹೆಬ್ಬಾರ್ ಈ ಬಾರಿ ಕೂಡ ಗೆಲುವಿನ ವಿಶ್ವಾಸ ಹೊಂದಿದ್ದಾರೆ. ಆದರೆ ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಶಾಸಕ ವಿ.ಎಸ್. ಪಾಟೀಲ ಅವರು ಹೆಬ್ಬಾರ್ ವಿರುದ್ಧ ತೊಡೆ ತಟ್ಟುತ್ತಿದ್ದಾರೆ.
ಕಳೆದ ಉಪ ಚುನಾವಣೆ ಹೊರತುಪಡಿಸಿ ಇನ್ನುಳಿದ ಮೂರು ಚುನಾವಣೆಯಲ್ಲೂ ವಿ.ಎಸ್. ಪಾಟೀಲ ಮತ್ತು ಶಿವರಾಮ ಹೆಬ್ಬಾರ್ ನಡುವೆಯೇ ನೇರಾನೇರ ಸ್ಪರ್ಧೆ ನಡೆದಿದೆ. ಆದರೆ, ಹಿಂದಿನ ಚುನಾವಣೆಗಳಲ್ಲಿ ಹೆಬ್ಬಾರ್ ಕಾಂಗ್ರೆಸ್ ಅಭ್ಯರ್ಥಿಯಾದರೆ ವಿ.ಎಸ್. ಪಾಟೀಲ ಬಿಜೆಪಿ ಅಭ್ಯರ್ಥಿಯಾಗಿದ್ದರು. ಆದರೆ, ಈಗ ಇಬ್ಬರ ಪಕ್ಷ ಅದಲು ಬದಲಾಗಿದೆ. ಪಕ್ಷ ಬದಲಾದರೂ ಸಂಪ್ರದಾಯದಂತೆ ಇವರಿಬ್ಬರ ನಡುವೆಯೇ ಸ್ಪರ್ಧೆ ಮುಂದುವರಿದಿದೆ. ಬೇರೆ ಅಭ್ಯರ್ಥಿಗಳಿದ್ದರೂ ಲೆಕ್ಕಕ್ಕಿಲ್ಲ.
ಕಳೆದ ಬಾರಿಯ ಫಲಿತಾಂಶ ಏನು?
ಶಿವರಾಮ್ ಹೆಬ್ಬಾರ್(ಕಾಂಗ್ರೆಸ್): 66,290 | ವಿ.ಎಸ್. ಪಾಟೀಲ್(ಬಿಜೆಪಿ): 64,807| ಗೆಲುವಿನ ಅಂತರ: 1,483
2019ರ ಉಪ ಚುನಾವಣೆ : ಶಿವರಾಮ್ ಹೆಬ್ಬಾರ್(ಬಿಜೆಪಿ): 80,442 | ಭೀಮಣ್ಣ ನಾಯ್ಕ(ಕಾಂಗ್ರೆಸ್): 49,634 | ಗೆಲುವಿನ ಅಂತರ: 30,808
ಹಳಿಯಾಳ :
ಗುರು-ಶಿಷ್ಯರ ಕಾಳಗ
ತ್ರಿಕೋನ ಸ್ಪರ್ಧೆ
ಈ ಕ್ಷೇತ್ರ ಇಂದಿಗೂ ಕಾಂಗ್ರೆಸ್‌ನ ಭದ್ರಕೋಟೆಯಾಗಿ ಉಳಿದಿದೆ. ಈವರೆಗೆ ಬಿಜೆಪಿಯ ಒಬ್ಬ ಅಭ್ಯರ್ಥಿ ಕೂಡ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿಲ್ಲ ಎಂಬುದು ಗಮನಾರ್ಹ ಸಂಗತಿ. ಹಿಂದೆ ಈ ಕ್ಷೇತ್ರ ಹಳಿಯಾಳ ಮತ್ತು ಮುಂಡಗೋಡ ತಾಲೂಕುಗಳನ್ನು ಒಳಗೊಂಡಿತ್ತು. 2008ರಲ್ಲಿ ಕ್ಷೇತ್ರಗಳ ಮರುವಿಂಗಡನೆಯಾದಾಗ ಹಳಿಯಾಳ ಕ್ಷೇತ್ರದಿಂದ ಮುಂಡಗೋಡ ತಾಲೂಕು ಬೇರ್ಪಟ್ಟು ಜೋಯಿಡಾ ತಾಲೂಕು ಹೊಸದಾಗಿ ಸೇರ್ಪಡೆಯಾಯಿತು.
ಯಾವಾಗ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೂ ಆರ್.ವಿ ದೇಶಪಾಂಡೆಯವರು ಸಚಿವರಾಗ್ತಾರೆ ಅನ್ನೋ ಮಾತಿದೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮಾರ್ಗದರ್ಶನದಲ್ಲಿ ಬೆಳೆದ ಆರ್.ವಿ. ದೇಶಪಾಂಡೆ ಅವರು ಸುಮಾರು 10 ಮುಖ್ಯಮಂತ್ರಿಗಳ ಜೊತೆ ಕಾರ್ಯ ನಿರ್ವಹಿಸಿದ್ದಾರೆ. ಸಚಿವರಾಗಿ, ಪ್ರತಿಪಕ್ಷದ ನಾಯಕರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, 2004ರಲ್ಲಿ ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ಸಣ್ಣ ಕೈಗಾರಿಕೆ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಕೃಷಿ, ತೋಟಗಾರಿಕೆ, ಕಂದಾಯ, ಕೌಶಲಾಭಿವೃದ್ಧಿ ಸೇರಿದಂತೆ ಅನೇಕ ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಈ ಬಾರಿ ಹಳಿಯಾಳ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಲಕ್ಷಣಗಳಿವೆ. ಸೋಲೇ ಕಾಣದ ದೇಶಪಾಂಡೆ ವಿರುದ್ಧ ಅವರ ಶಿಷ್ಯರೆಂದು ಗುರುತಿಸಿಕೊಂಡ ಎಸ್.ಎಲ್ ಘೋಟ್ನೆಕರ್ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿ ಜೆಡಿಎಸ್ ಅಭ್ಯರ್ಥಿಯಾಗಿ ಗುರು ವಿರುದ್ಧವೇ ಸ್ಪರ್ಧೆಗೆ ಇಳಿದಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಒಂದು ಬಾರಿ ಜೆಡಿಎಸ್‌ನಿಂದ ಗೆದ್ದು ಶಾಸಕರಾಗಿ ಆಯ್ಕೆಯಾದವರು. ಈ ಕ್ಷೇತ್ರದಲ್ಲಿ ಮರಾಠರು, ಕುಣಬಿಗಳು, ಮುಸ್ಲಿಮರು ನಿರ್ಣಾಯಕ ಮತದಾರರಾಗಿದ್ದಾರೆ.
ಎಸ್.ಎಲ್. ಘೋಟ್ನೆಕರ್ ಅವರು ದೇಶಪಾಂಡೆ ಅವರ ಸಾಂಪ್ರದಾಯಿಕ ಮತಗಳನ್ನು ಸೆಳೆಯುವ ಸಾಧ್ಯತೆ ಇದೆ. ಇದು ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆಗೆ ಪ್ಲಸ್ ಪಾಯಿಂಟ್ ಆಗಬಹುದು. ಶಾಸಕರ ನಿಧಿಯನ್ನು ಸಮರ್ಪಕವಾಗಿ ಬಳಸುವಲ್ಲಿ ಆರ್.ವಿ.ದೇಶಪಾಂಡೆ ಮುಂದಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಅವರು ಅತ್ಯುತ್ತಮ ಶಾಸಕ ಎಂದು ವಿಧಾನಸಭೆಯಿಂದ ಪ್ರಶಸ್ತಿ ಪಡೆದಿದ್ದಾರೆ. ಈ ಬಗ್ಗೆ ಕ್ಷೇತ್ರದ ಜನರಿಗೆ ಹೆಮ್ಮೆ ಇದೆ.
ಆದರೆ, ಹಳಿಯಾಳ ಕ್ಷೇತ್ರದಲ್ಲಿ ಕಬ್ಬು ಬೆಳೆಗಾರರು ಹಲವು ಸಮಸ್ಯೆಗಳಿಂದ ತತ್ತರಿಸಿದ್ದಾರೆ. ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಉತ್ತರ ಕನ್ನಡದ ಎಲ್ಲಾ ಕ್ಷೇತ್ರಗಳಂತೆ ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವುದು ಇಲ್ಲಿನ ಮತದಾರರ ಬೇಡಿಕೆಯೂ ಆಗಿದೆ. ಇದಕ್ಕೆ ಆರ್.ವಿ. ದೇಶಪಾಂಡೆ ಶ್ರಮಿಸಿಲ್ಲ ಎನ್ನುವ ಆರೋಪವೂ ಇದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಸುನೀಲ್ ಹೆಗಡೆ ಅವರು ದೇಶಪಾಂಡೆಯವರಿಗೆ ತೀವ್ರ ಪೈಪೋಟಿ ನೀಡಿದ್ದರು. ಈ ಬಾರಿ ತ್ರಿಕೋನ ಸ್ಪರ್ಧೆಯಲ್ಲಿ ಗೆಲುವು ಯಾರದು ಎಂಬ ಬಗ್ಗೆ ಕುತೂಹಲ ಮೂಡಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಆರ್.ವಿ. ದೇಶಪಾಂಡೆ(ಕಾಂಗ್ರೆಸ್): 61,577 | ಸುನೀಲ್ ಹೆಗಡೆ(ಬಿಜೆಪಿ): 56,437 | ಗೆಲುವಿನ ಅಂತರ: 5,140
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಕರಾವಳಿಯಲ್ಲಿ ಬಿಜೆಪಿಗೆ ಕಾಂಗ್ರೆಸ್, ಜೆಡಿಎಸ್ ಪ್ರಬಲ ಪೈಪೋಟಿ