Site icon Vistara News

Karnataka Election 2023 : ಕಾಂಗ್ರೆಸ್‌ ಮತಗಳಿಕೆ ಪ್ರಮಾಣದಲ್ಲಿ ಗಣನೀಯ ಏರಿಕೆ; ಬಿಜೆಪಿ ಯಥಾಸ್ಥಿತಿ

Karnataka Election 2023 vote share of congress bjp and jds in karnataka

#image_title

ಬೆಂಗಳೂರು: ಕಾಂಗ್ರೆಸ್‌ ಈ ಚುನಾವಣೆಯಲ್ಲಿ (Karnataka Election 2023) ಶೇ. 42.9 ರಷ್ಟು ಮತಗಳನ್ನು ಪಡೆದಯುವ ಮೂಲಕ ದಾಖಲೆ ಬರೆದಿದೆ. ಕಳೆದ ಅಂದರೆ 2018ರ ಚುನಾವಣೆಯಲ್ಲಿ ಶೇ. 38 ರಷ್ಟು ಮತ ಪಡೆದಿತ್ತು. ಈ ಬಾರಿ ಪಕ್ಷ ಶೇ. 4.9 ರಷ್ಟು ಹೆಚ್ಚು ಪಡೆದಿದೆ. ಇತ್ತೀಚಿನ ವರ್ಷಗಳಲ್ಲಿ ಪಕ್ಷವು ಮತಗಳಿಕೆಯಲ್ಲಿ ಇಷ್ಟೊಂದು ಸಾಧನೆ ಮಾಡಿರುವುದು ದೇಶದಲ್ಲಿಯೇ ಇದು ಮೊದಲು. ಪಕ್ಷ ಒಟ್ಟಾರೆ 135 ಸ್ಥಾನಗಳನ್ನು ಪಡೆದುಕೊಂಡಿದೆ. ಇದು ಕೂಡ ದಾಖಲೆಯೇ.

ಸ್ವಾತಂತ್ರ್ಯಾ ನಂತರ ಒಟ್ಟು ಮತದಲ್ಲಿ ಶೇ.50ರ ಆಸುಪಾಸು ಪಡೆಯುತ್ತಿದ್ದ ಕಾಂಗ್ರೆಸ್‌ನ ಮತ ಪ್ರಮಾಣ 1983ರಲ್ಲಿ ಶೇ.40ಕ್ಕೆ ಇಳಿದಿತ್ತು. ಜನತಾ ಪಕ್ಷ ರಾಜ್ಯ ರಾಜಕಾರಣದಲ್ಲಿ ಉದಯಿಸಿದ ನಂತರ ಜನತಾ ದಳದ ಪ್ರಾಬಲ್ಯ ಹೆಚ್ಚುತ್ತ ಹೋದಂತೆಲ್ಲ ಕಾಂಗ್ರೆಸ್ ನ ಮತಗಳಿಕೆ ಪ್ರಮಾಣ ಕುಸಿಯುತ್ತ ಬಂದಿತ್ತು. 2004ರ ನಂತರದಲ್ಲಿ ಕಾಂಗ್ರೆಸ್ ಮತಪ್ರಮಾಣ ಶೇ. 35ರ ಆಸುಪಾಸಿಗೆ ಬಂದು ನಿಂತಿತ್ತು. ಈ ಬಾರಿ ಮತ್ತೆ ಶೇ. 40ರ ಗಡಿದಾಟಿದೆ.

ಪಕ್ಷವು 2004 ರಿಂದ 2018ರವರೆಗೆ ನಾಲ್ಕು ವರ್ಷ ಕ್ರಮವಾಗಿ ಶೇ.35.27, ಶೇ.34.76, ಶೇ.36.59 ಹಾಗೂ ಶೇ.38.04 ಮತಗಳನ್ನು ಗಳಿಸಿಕೊಂಡು ಬಂದಿದೆ. ಇಲ್ಲಿಯವರೆಗೆ ಕಾಂಗ್ರೆಸ್ ಕಂಡಿರುವುದು ಗರಿಷ್ಠ ಶೇ.2 ಮತ ಹೆಚ್ಚಳ ಮಾತ್ರ. ಈ ಬಾರಿ ಶೇ. 4.9 ರಷ್ಟು ಹೆಚ್ಚಳವಾಗಿರುವುದು ಕೂಡ ಹೀಗಾಗಿ ದಾಖಲೆಯೇ.

ಬಿಜೆಪಿಯ ಮತಗಳಿಕೆಯಲ್ಲಿ ಅಲ್ಪ ಇಳಿಕೆ

ಬಿಜೆಪಿ ಕಳೆದ ಬಾರಿಗಿಂತ ಕೇವಲ ಶೇ.0.2 ಮತಗಳನ್ನು ಕಳೆದುಕೊಂಡಿದೆ. 2018 ರ ಚುನಾವಣೆಯಲ್ಲಿ ಬಿಜೆಪಿ ಶೇ. 36.2 ರಷ್ಟು ಮತ ಪಡೆದಿತ್ತು. ಈ ಬಾರಿ ಶೇ.36 ರಷ್ಟು ಮತ ಪಡೆದಿದೆ. ಆದರೆ ಕಳೆದ ಬಾರಿ 104 ಕ್ಷೇತ್ರಗಳಲ್ಲಿ ಗೆದ್ದಿದ್ದ ಪಕ್ಷ ಈ ಬಾರಿ ಕೇವಲ 66 ಸ್ಥಾನಗಳನ್ನು ಪಡೆದುಕೊಂಡಿದೆ.

ಬಿಜೆಪಿಯ ಮತಗಳಿಕೆ ಪ್ರಮಾಣವು 1989ರಲ್ಲಿ ಶೇ.4.14 ಮತದಿಂದ 1994ರಲ್ಲಿ ಶೇ. 16.99ಕ್ಕೆ ಜಿಗಿದಿತ್ತು. 1994ರ ಚುನಾವಣೆಯಲ್ಲಿ ಬಿಜೆಪಿ ಶೇ.16.99 ರಷ್ಟು ಮತ ಪಡೆದಿತ್ತು. 1999 ರ ಚುನಾವಣೆಯಲ್ಲಿ ಇದು ಶೇ.20.69 ಕ್ಕೆ ಏರಿತ್ತು. ಆ ನಂತರ ಜನತಾ ಪರಿವಾರ ಪಕ್ಷಗಳನ್ನು ಹಿಂದಿಕ್ಕಿದ ಬಿಜೆಪಿ 2004 ರಲ್ಲಿ ಶೇ.28.33 ಮತಪಡೆದಿತ್ತು. 2008 ಶೇ.33.86 ಕ್ಕೆ ಏರಿತ್ತು ನಂತರ ಏರುತ್ತಲೇ ಸಾಗಿತು. 2018ರ ಚುನಾವಣೆಯಲ್ಲಿ ಬಿಜೆಪಿ ಶೇ.36.22 ಮತ ಪಡೆದಿತ್ತು. ಬಿಜೆಪಿಯ ಇತಿಹಾಸದಲ್ಲಿಯೇ ಮತಗಳಿಕೆ ಪ್ರಮಾಣ ( 2013ರಲ್ಲಿ ಪಕ್ಷ ಇಬ್ಭಾಗವಾಗಿ ಕೆಜೆಪಿಗೆ ಮತಗಳು ಹಂಚಿಕೆಯಾಗಿದ್ದನ್ನು ಬಿಟ್ಟರೆ – ಆಗ ಬಿಜೆಪಿ ಮತಗಳು ದಿಢೀರನೆ ಶೇ.19.89ಕ್ಕೆ ಕುಸಿದಿದ್ದವು) ಕುಸಿತವಾಗಿರುವುದು ಇದೇ ಮೊದಲು.

ಲಿಂಗಾಯತ ಮತಗಳು ಬಿಜೆಪಿಯಿಂದ ಕಾಂಗ್ರೆಸ್‌ಗೆ ಶಿಫ್ಟ್‌ ಆಗಿವೆ. ಇದರಿಂದಾಗಿ ಕಾಂಗ್ರೆಸ್‌ ಮತಗಳಿಕೆ ಪ್ರಮಾಣ ಹೆಚ್ಚಾಗಿದೆ ಎಂಬ ವಾದಗಳಿವೆ. ಆದರೆ ಬಿಜೆಪಿಯ ಮತಗಳಿಕೆ ಪ್ರಮಾಣದಲ್ಲಿ ಹೆಚ್ಚೇನು ವ್ಯತ್ಯಾಸವಾಗದೇ ಇರುವುದರಿಂದ ಈ ವಾದವನ್ನು ಕೆಲವರು ತಳ್ಳಿ ಹಾಕುತ್ತಿದ್ದಾರೆ. ಜೆಡಿಎಸ್‌ನ ಮತಗಳನ್ನು ಕಾಂಗ್ರೆಸ್‌ ಸೆಳೆದಿದೆ. ಬಿಜೆಪಿ ಮತ ಪ್ರಮಾಣ ಹಿಂದಿನಂತೆಯೇ ಇದೆ ಎಂಬೆಲ್ಲಾ ವಿಶ್ಲೇಷಣೆಗಳು ನಡೆಯುತ್ತಿವೆ.

ಜೆಡಿಎಸ್‌ ಮತಗಳಿಕೆಯಲ್ಲಿ ಭಾರಿ ಕುಸಿತ

ಜೆಡಿಎಸ್‌ನ ಮತಗಳಿಕೆ ಮತ್ತು ಗೆದ್ದ ಸ್ಥಾನಗಳ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿದೆ. ಕಳೆದ ಚುನಾವಣೆಯಲ್ಲಿ ಶೇ. 18.3 ರಷ್ಟು ಮತ ಪಡೆದಿದ್ದ ಪಕ್ಷ ಈ ಬಾರಿ ಕೇವಲ ಶೇ. 13.3 ರಷ್ಟು ಮತ ಪಡೆದಿದೆ. ಕಳೆದ ಬಾರಿ ಜೆಡಿಎಸ್‌ 37 ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಬಾರಿ ಕೇವಲ 19 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿದೆ.

ಇತರರು ಕಳೆದ ಬಾರಿ ಶೇ. 7.5 ರಷ್ಟು ಮತ ಪಡೆದಿದ್ದರೆ, ಈ ಬಾರಿ ಶೇ. 7.8 ರಷ್ಟು ಮತಪಡೆದಿದ್ದಾರೆ. ಈ ಬಾರಿ ಇಬ್ಬರು ಪಕ್ಷೇತರರು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಒಬ್ಬರು, ಸರ್ವೋದಯ ಕರ್ನಾಟಕ ಪಕ್ಷದ ಒಬ್ಬರು ಗೆದ್ದು ಬೀಗುತ್ತಿದ್ದಾರೆ.

ಇದನ್ನೂ ಓದಿ: Karnataka Election Results 2023 : ರಾಜಧಾನಿಯಲ್ಲಿ ನಿರೀಕ್ಷಿಸಿದಷ್ಟು ಸ್ಥಾನ ಗೆಲ್ಲದ ಬಿಜೆಪಿ; ಭದ್ರಕೋಟೆಗಳನ್ನು ಉಳಿಸಿಕೊಂಡ ಕಾಂಗ್ರೆಸ್‌

Exit mobile version