Site icon Vistara News

Karnataka Election 2023 : ರಾಜ್ಯದಲ್ಲಿ ಶೇ. 72.67 ರಷ್ಟು ಮತದಾನ; ದಾಖಲೆ ಪ್ರಮಾಣದ ವೋಟಿಂಗ್‌ನಿಂದ ಯಾರಿಗೆ ಲಾಭ?

Karnataka Election 2023 Voting Concludes With 68.10 Per Cent Voter Turnout

#image_title

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Election 2023) ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ದಾಖಲೆ ಪ್ರಮಾಣದಲ್ಲಿ ಮತದಾನವಾಗಿದೆ. ಚುನಾವಣಾ ಆಯೋಗದ ಅಧಿಕೃತ ಮಾಹಿತಿ ಪ್ರಕಾರ ರಾಜ್ಯದಲ್ಲಿ ಈ ಬಾರಿ ಶೇ. 72.67 ರಷ್ಟು ಮತದಾನವಾಗಿದೆ. ಈ ಮೂಲಕರು ಕಣದಲ್ಲಿದ್ದ ಒಟ್ಟು 2,163 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದೆ.

ಪೋಸ್ಟಲ್ ಬ್ಯಾಲೆಟ್ ಮತ್ತು 80 ವರ್ಷ ಮೇಲ್ಪಟ್ಟವರ ಮತ ಹೊರತುಪಡಿಸಿ ಶೇ. 72.67 ರಷ್ಟು ಮತದಾನವಾಗಿದ್ದು, ಅದೂ ಸೇರಿದರೆ ಅಂತಿಮವಾಗಿ ಮತದಾನದ ಪ್ರಮಾಣ ಶೇ.73ರಷ್ಟನ್ನು ದಾಟುವ ಸಾಧ್ಯತೆ ಇದೆ. ಕಳೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ.72.13 ರಷ್ಟು ಮತದಾನ ನಡೆದಿತ್ತು. ಇದು 1952ರ ನಂತರ ನಡೆದ ಚುನಾವಣೆಗಳಲ್ಲಿಯೇ ಅತಿ ಹೆಚ್ಚಿನ ಮತಪ್ರಮಾಣವಾಗಿತ್ತು. ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ಮತದಾನ ವಾಗಿರುವುದರಿಂದ ಹೊಸ ದಾಖಲೆ ಸೃಷ್ಟಿಯಾಗಿದೆ. ಈ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತ ಪ್ರಮಾಣವು ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗುತ್ತಿತ್ತು. ಆದರೆ ನಿರೀಕ್ಷೆಯಷ್ಟು ಏರಿಕೆಯಾಗಿಲ್ಲ.

ನಿರೀಕ್ಷೆ ಹುಸಿಗೊಳಿಸಿದ ಬೆಂಗಳೂರಿನ ಮತದಾರರು
ಈ ಬಾರಿ ಕೂಡ ಬೆಂಗಳೂರಿನ ಮತದಾರರು ಎಂದಿನಂತೆ ಮತದಾನದಲ್ಲಿ ಆಸಕ್ತಿ ತೋರಿಸದೇ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಮತ ಪ್ರಮಾಣವನ್ನು ಹೆಚ್ಚಿಸುವ ಚುನಾವಣಾ ಆಯೋಗದ ಪ್ರಯತ್ನ ಯಶಸ್ಸು ನೀಡಿಲ್ಲ. ಪ್ರಾಥಮಿಕ ವರದಿಗಳ ಪ್ರಕಾರ ಬೆಂಗಳೂರಿನಲ್ಲಿ ಈ ಬಾರಿ ಶೇ.54.53 ರಷ್ಟು ಮತದಾನವಾಗಿದೆ ಇದು ಕಳೆದ ಮೂರು ಚುನಾವಣೆಗಳಿಗಿಂತ ಹೆಚ್ಚೇನು ಅಲ್ಲ.
2008ರ ಚುನಾವಣೆಯಲ್ಲಿ ಶೇ. 49.87 ರಷ್ಟು ಮತದಾನವಾಗಿತ್ತು. 2013 ರಲ್ಲಿ ಈ ಪ್ರಮಾಣ ಶೇ. 57.38 ಕ್ಕೆ ಏರಿತ್ತು. ಮತ್ತೆ 2018 ರಲ್ಲಿ ಶೇ. 54.73 ಕಕ್ಕೆ ಕುಸಿದಿತ್ತು. ಈ ಬಾರಿ ಕೂಡ ಹೆಚ್ಚು ಕಡಿಮೆ ಇಷ್ಟೇ ಪ್ರಮಾಣದ ಮತದಾನವಾಗಿದೆ. ಹೀಗಾಗಿ ಇಲ್ಲಿಯ ರಾಜಕೀಯ ಚಿತ್ರಣ ಬದಲಾಗುವ ಲಕ್ಷಣಗಳೇನೂ ಕಂಡು ಬರುತ್ತಿಲ್ಲ.
ಬೆಂಗಳೂರು ಕೇಂದ್ರ ಕ್ಷೇತ್ರಗಳಲ್ಲಿ ಶೇ. 55.63, ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಶೇ. 53.03, ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ಶೇ.52.28, ನಗರ ಕ್ಷೇತ್ರಗಳಲ್ಲಿ ಶೇ. 57.17 ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಪ್ರಧಾನಿ ಮೋದಿ ಅವರ ರೋಡ್‌ ಶೋ ಹಿನ್ನೆಲೆಯಲ್ಲಿ ಮತ ಪ್ರಮಾಣ ಹೆಚ್ಚುವ ನಿರೀಕ್ಷೆ ಇತ್ತು.

ಕಳೆದ ಚುನಾವಣೆಯಲ್ಲಿ ಶೇ.72.13 ರಷ್ಟು ಮತದಾನ ನಡೆದಿದ್ದರಲ್ಲಿ, ಬಿಜೆಪಿಯು ಶೇ.36, ಕಾಂಗ್ರೆಸ್‌ ಶೇ.38, ಜೆಡಿಎಸ್‌ ಶೇ.18.4 ಮತ್ತು ಇತರರು ಶೇ. 7.4 ಮತ ಪಡೆದಿದ್ದವು. 2013 ರ ವಿಧಾನಸಭೆಯಲ್ಲಿ ರಾಜ್ಯದಲ್ಲಿ ಶೇ. 70.23 ಮತದಾನವಾಗಿತ್ತು. ಆಗ ಬಿಜೆಪಿ ಶೇ.19.9, ಕಾಂಗ್ರೆಸ್‌ ಶೇ. 36.6, ಜೆಡಿಎಸ್‌ ಶೇ. 20.2 ಮತ್ತು ಇತರರು (ಆಗಿನ ಕೆಜೆಪಿ ಸೇರಿದಂತೆ) ಶೇ. 23.3 ಮತ ಪಡೆದಿದ್ದವು. ಅತಿ ಹೆಚ್ಚು ಮತ ಪಡೆದಿದ್ದ ಕಾಂಗ್ರೆಸ್‌ 2013 ರಲ್ಲಿ ಸರ್ಕಾರ ರಚಿಸಿತ್ತು. ಆದರೆ 2018 ರ ಚುನಾವಣೆಯಲ್ಲಿ ಅತಂತ್ರ ಸರ್ಕಾರ ರಚನೆಯಾಗಿತ್ತು.

ಈ ಬಾರಿ ಮತ ಪ್ರಮಾಣ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಯಾವ ಪಕ್ಷದ ಮತಗಳಿಕೆ ಎಷ್ಟಿರಲಿದೆ. ಎಂಬುದು ಕೂಡ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಈಗಲೇ ಲೆಕ್ಕಚಾರಗಳು ಆರಂಭವಾಗಿವೆ. ಕೇವಲ ಶೇ. 1 ರಷ್ಟು ಏರಿಕೆ ಕೂಡ ಬಹಳ ಕ್ಷೇತ್ರಗಳಲ್ಲಿ ರಾಜಕೀಯ ಬದಲಾವಣೆಗಳಿಗೆ ಕಾರಣವಾಗಬಹುದು. ಹೀಗಾಗಿ ಈ ಬಾರಿಯ ಫಲಿತಾಂಶ ಏನಾಗಬಹುದು ಎಂಬ ಬಗ್ಗೆ ಕುತೂಹಲ ಹೆಚ್ಚಿದೆ. ವಿವಿಧ ಮತಗಟ್ಟೆ ಸಮೀಕ್ಷೆಗಳು ಈ ಬಾರಿ ಕೂಡ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂದು ಹೇಳುತ್ತಿವೆ.

ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾವ ಜಿಲ್ಲೆಯಲ್ಲಿ ಎಷ್ಟು ಮತದಾನ?

ಚುನಾವಣಾ ಆಯೋಗವು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಗಿರುವ ಮತ ಪ್ರಮಾಣ (ಶೇಕಡವಾರು) ಇಂತಿದೆ; ಬೆಂಗಳೂರು ಸೆಂಟ್ರಲ್ – 55.39, ಬೆಂಗಳೂರು ಉತ್ತರ – 52.88, ಬೆಂಗಳೂರು ದಕ್ಷಿಣ – 52.80, ಬೆಂಗಳೂರು ನಗರ – 56.98, ಬೆಂಗಳೂರು ಗ್ರಾಮಾಂತರ – 83.76, ಬೆಳಗಾವಿ -76.33, ಬಾಗಲಕೋಟೆ – 74.63, ಬಳ್ಳಾರಿ -76.13, ಬೀದರ್‌ -71.66, ವಿಜಯಪುರ- 70.78, ಚಾಮರಾಜನಗರ -80.81, ಚಿಕ್ಕಬಳ್ಳಾಪುರ -85.83, ಚಿಕ್ಕಮಗಳೂರು-77.89, ಚಿತ್ರದುರ್ಗ -80.37, ದಕ್ಷಿಣ ಕನ್ನಡ -76.15, ದಾವಣಗೆರೆ -77.47, ಧಾರವಾಡ -71.02, ಗದಗ -75.21, ಕಲಬುರಗಿ -65.22, ಹಾಸನ-81.59, ಹಾವೇರಿ -81.17, ಕೊಡಗು-74.74, ಕೋಲಾರ-81.22, ಕೊಪ್ಪಳ-77.25, ಮಂಡ್ಯ -84.36, ಮೈಸೂರು – 75.04, ರಾಯಚೂರು-69.79, ರಾಮನಗರ -84.98, ಶಿವಮೊಗ್ಗ -77.22, ತುಮಕೂರು -83.46, ಉಡುಪಿ – 78.46, ಉತ್ತರ ಕನ್ನಡ – 74.72, ವಿಜಯನಗರ -76.62, ಯಾದಗಿರಿ -66.66.

#image_title

ಇದನ್ನೂ ಓದಿ: Karnataka Election 2023: ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿ‌ ಕಾಂಗ್ರೆಸ್‌ ನಾಯಕರ ಮತದಾನ; ಇಲ್ಲಿವೆ ಫೋಟೊಗಳು

Exit mobile version