Site icon Vistara News

Karnataka Election 2023 : ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ಹೇಗಿರುತ್ತದೆ ಗೊತ್ತೇ?

Karnataka Election 2023 Voting Process at Polling Booth details in kannada

#image_title

ಬೆಂಗಳೂರು : ಕರ್ನಾಟಕ ವಿಧಾನಸಭೆಗೆ (Karnataka Election 2023) ಬುಧವಾರ ಮತದಾನ ನಡೆಯಲಿದೆ. ಚುನಾವಣಾ ಆಯೋಗ ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಚುನಾವಣಾ ಸಿಬ್ಬಂದಿ ಕೂಡ ಮತಕೇಂದ್ರಗಳಿಗೆ ತೆರಳಿದ್ದಾರೆ. ಮತಕೇಂದ್ರದಲ್ಲಿ (ಪೋಲಿಂಗ್‌ ಬೂತ್‌)ಮತದಾನ ಪ್ರಕ್ರಿಯೆ ಈ ಬಾರಿ ಹೇಗಿರುತ್ತದೆ ಎಂಬ ಕುರಿತು ಮತದಾರರಿಗೆ ಸಹಜವಾಗಿಯೇ ಕುತೂಹಲವಿರುತ್ತದೆ.

ಈಗ ಚುನಾವಣಾ ಆಯೋಗ ಪ್ರತಿ ಮತಕೇಂದ್ರಗಳಲ್ಲಿಯೂ ವಿವಿ ಪ್ಯಾಟ್‌ ಅಳವಡಿಸಿರುವುದರಿಂದ ನೀವು ಸರಿಯಾಗಿ ಮತದಾನ ಮಾಡಿದ್ದೀರ ಎಂಬುದನ್ನು ನೀವೇ ಖಚಿತಪಡಿಸಿಕೊಳ್ಳಬಹುದಾಗಿದೆ. ಹೀಗಾಗಿ ಯಾವುದೇ ಗೊಂದಲವಿಲ್ಲದಂತೆ ನೀವು ನಿಮ್ಮ ಮತವನ್ನು ಚಲಾಯಿಸಬಹುದು.

ಮತದಾನಕ್ಕೆ ಹೊರಡುವಾಗ ಇದನ್ನು ಗಮನಿಸಿ

ನಿಮಗೆ ಈಗಾಗಲೇ ಮತ ಕೇಂದ್ರಕ್ಕೆ ಹೋಗುವಾಗ ಏನೇನು ತೆಗೆದುಕೊಂಡು ಹೋಗಬೇಕೆಂಬುದು ಗೊತ್ತಿರಬಹುದು. ಮತದಾರರ ಪಟ್ಟಿಯಲಿ ನಿಮ್ಮ ಹೆಸರಿದೆ, ವೋಟರ್‌ ಐಡಿ ಕೂಡ ಇದೆ ಅಲ್ಲವೇ? ಒಂದು ವೇಳೆ ವೋಟರ್‌ ಐಡಿ ಇಲ್ಲದಿದ್ದರೆ, ಪ್ಯಾನ್‌ ಕಾರ್ಡ್, ‌ಆಧಾರ್‌ ಕಾರ್ಡ್,‌ ನರೇಗಾ ಜಾಬ್‌ ಕಾರ್ಡ್, ‌ಫೋಟೊ ಅಂಟಿಸಿರುವ ಬ್ಯಾಂಕ್‌ ಪಾಸ್‌ಬುಕ್, ಫೋಟೊ ಇರುವ ಪಿಂಚಣಿ ಡಾಕ್ಯುಮೆಂಟ್, ಕೇಂದ್ರ, ರಾಜ್ಯ, ಸಾರ್ವಜನಿಕ ವಲಯದ ಕಂಪನಿಗಳ ಐಡಿ, ಡ್ರೈವಿಂಗ್‌ ಲೈಸೆನ್ಸ್‌, ಕಾರ್ಮಿಕ ಸಚಿವಾಲಯ ನೀಡಿದ ವಿಮೆಯ ಸ್ಮಾರ್ಟ್‌ ಕಾರ್ಡ್ ಇವುಗಳಲ್ಲಿ ಯಾವುದನ್ನಾದರೂ ಒಂದನ್ನು ತೆಗೆದುಕೊಂಡು ಮತದಾನ ಮಾಡಲು ಹೋಗಿ.

ಮತಕೇಂದ್ರದಲ್ಲಿ ಶಿಸ್ತಿರಲಿ

ಮತದಾನ ಮಾಡಲು ಹೋದಾಗ ಮತಕೇಂದ್ರಗಳ ಒಳಗೆ ನುಗ್ಗಬೇಡಿ. ಹೆಚ್ಚು ಜನರು ಇರುವ ಮತ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ಒಬ್ಬೊಬ್ಬರನ್ನೇ ಮತಕೇಂದ್ರದ ಒಳಗೆ ಬಿಡುತ್ತಾರೆ. ನೀವು ಕೂಡ ಸರತಿಯ ಸಾಲಿನಲ್ಲಿಯೇ ನಿಂತು ಮತ ಕೇಂದ್ರವನ್ನು ಪ್ರವೇಶ ಮಾಡಿ. ಅನಾವಶ್ಯಕವಾಗಿ ಅಲ್ಲಿ-ಇಲ್ಲಿ ನಿಂತು ಗೊಂದಲ ಸೃಷ್ಟಿಸಬೇಡಿ.

ನೆನಪಿಡಿ ಮತದಾರರಿಗೆ ಮತಗಟ್ಟೆ ಒಳಗೆ ಯಾವುದೇ ಕಾರಣಕ್ಕೂ ಮೊಬೈಲ್ ಫೋನ್, ಕ್ಯಾಮರಾ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣವನ್ನ ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ. ಒಂದು ವೇಳೆ ನೀವು ಮೊಬೈಲ್‌ ಫೋನ್‌ ತೆಗೆದುಕೊಂಡು ಹೋಗಿದ್ದರೆ ಹೊರಗೆ ನಿಂತ ಭದ್ರತಾ ಸಿಬ್ಬಂದಿಗೆ ಅದನ್ನು ಒಪ್ಪಿಸಿ ಮತಕೇಂದ್ರ ಪ್ರವೇಶಿಸಬಹುದು.

ಮತಕೇಂದ್ರದೊಳಗೆ ಪ್ರಕ್ರಿಯೆ ಹೇಗಿರುತ್ತದೆ?

ನೀವು ಮತಗಟ್ಟೆ ಒಳಗೆ ಹೋಗುತ್ತಿದ್ದಂತೆಯೇ ಮತಗಟ್ಟೆ ಅಧಿಕಾರಿ ನಿಮ್ಮ ಹೆಸರು ವೋಟರ್ ಲಿಸ್ಟ್‌ನಲ್ಲಿ ಇದೆಯೇ ಎಂದು ಪರಿಶೀಲನೆ ಮಾಡುತ್ತಾರೆ. ನಂತರ ನಿಮ್ಮ ಗುರುತಿನ ಚೀಟಿಯನ್ನು ಪರಿಶೀಲನೆ ಮಾಡುತ್ತಾರೆ. ನಂತರ ಎರಡನೇ ಮತಗಟ್ಟೆ ಅಧಿಕಾರಿ ನಿಮ್ಮ ಬೆರಳಿಗೆ ಶಾಯಿ ಹಾಕುತ್ತಾರೆ. ಜೊತೆಗೆ ತಮ್ಮ ದಾಖಲಾತಿ ಪುಸ್ತಕದಲ್ಲಿ ನಿಮ್ಮ ಸಹಿ ಅಥವಾ ಹೆಬ್ಬೆಟ್ಟು ಗುರುತು ಹಾಕಿಸಿಕೊಂಡು ನಿಮ್ಮ ಕೈಗೆ ಒಂದು ಚೀಟಿ ಕೊಡುತ್ತಾರೆ.

ನಂತರ ನಿಮ್ಮನ್ನು ಮೂರನೇ ಮತಗಟ್ಟೆ ಅಧಿಕಾರಿ ಬಳಿ ಕಳಿಸಿಕೊಡುತ್ತಾರೆ. ಮೂರನೇ ಮತಗಟ್ಟೆ ಅಧಿಕಾರಿಯ ಬಳಿ ನಿಮಗೆ ಈಗಾಗಲೇ ಮತಗಟ್ಟೆ ಅಧಿಕಾರಿ ಕೊಟ್ಟಿರುವ ಚೀಟಿಯನ್ನು ನೀಡಬೇಕು. ಅಲ್ಲದೆ, ಅವರಿಗೆ ನಿಮ್ಮ ಬೆರಳಿಗೆ ಶಾಯಿ ಹಾಕಿರುವುದನ್ನು ತೋರಿಸಬೇಕು. ಇದನ್ನು ಖಚಿತಪಡಿಸಿಕೊಂಡ ನಂತರವಷ್ಟೇ ಆ ಅಧಿಕಾರಿಯು ನಿಮಗೆ ಮತ ಚಲಾಯಿಸಲು ಅವಕಾಶ ನೀಡುತ್ತಾರೆ. ಅವರು ಹೇಳಿದ ನಂತರ ನೀವು ಇವಿಎಂ ಯಂತ್ರ ಇರುವಲ್ಲಿಗೆ ಹೋಗಬೇಕಾಗುತ್ತದೆ.

ಇವಿಎಂ ಯಂತ್ರದಲ್ಲಿ ನಿಮ್ಮ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಎಲ್ಲ ಅಭ್ಯರ್ಥಿಗಳ ಹೆಸರು, ಅವರ ಪಕ್ಷದ ಚಿಹ್ನೆ ಇರುತ್ತದೆ. ಪ್ರತಿ ಅಭ್ಯರ್ಥಿಯ ಹೆಸರು, ಚಿಹ್ನೆ ಎದುರಿಗೆ ಬಟನ್ ಅನ್ನು ನೀಡಲಾಗಿರುತ್ತದೆ. ನೀವು ನಿಮ್ಮ ಇಷ್ಟದ ಅಭ್ಯರ್ಥಿ ಎದುರಿನ ಬಟನ್ ಒತ್ತಿದ ಕೂಡಲೇ ಬೀಪ್ ಸೌಂಡ್ ಬರುತ್ತದೆ. ಆಗ ನೀವು ಮತದಾನ ಮಾಡಿದ್ದು ದೃಢವಾಗುತ್ತದೆ. ನಂತರ ಇವಿಎಂ ಯಂತ್ರದ ಪಕ್ಕದಲ್ಲಿ ಇರುವ ವಿವಿ ಪ್ಯಾಟ್ ಯಂತ್ರದಲ್ಲಿ ಒಂದು ಚೀಟಿ ಬರುತ್ತದೆ. ಈ ಚೀಟಿಯಲ್ಲಿ ನೀವು ಯಾರಿಗೆ ಮತ ಹಾಕಿದಿರಿ, ಅವರ ಹೆಸರು, ಅವರ ಪಕ್ಷದ ಚಿಹ್ನೆ ಏನು ಅನ್ನುವುದನ್ನು ತೋರಿಸಲಾಗಿರುತ್ತದೆ.

ಈ ಚೀಟಿಯು ಕೇವಲ 7 ಸೆಕೆಂಡ್‌ಗಳ ಕಾಲ ಮಾತ್ರ ಅದು ನಿಮಗೆ ವಿವಿ ಪ್ಯಾಟ್‌ನಲ್ಲಿ ಕಾಣುತ್ತದೆ. ಆದರೆ ಈ ಚೀಟಿಯನ್ನು ನಿಮಗೆ ಕೊಡಲಾಗುವುದಿಲ್ಲ. ಏಳು ಸೆಕೆಂಡ್‌ ಆಗುತ್ತಿದ್ದಂತೆಯೇ ನಂತರ ವಿವಿ ಪ್ಯಾಟ್‌ನ ಬಾಕ್ಸ್‌ ಒಳಗೆ ಬಿದ್ದು ಸೀಲ್ ಆಗುತ್ತದೆ. ಅದನ್ನು ನೋಡಿಕೊಂಡೇ ನೀವು ಅಲ್ಲಿಂದ ಹೊರಡಬೇಕು. ಅಲ್ಲಿಗೆ ನೀವು ನಿಮ್ಮ ಮತದಾನದ ಹಕ್ಕನ್ನು ಚಲಾಯಿಸಿದಂತೆ. ಒಂದು ವೇಳೆ ವಿವಿ ಪ್ಯಾಟ್‌ನ ಬಾಕ್ಸ್‌ನಲ್ಲಿ ನಿಮಗೆ ಚೀಟಿಯು ಕಾಣದಿದ್ದರೆ ನೀವು ಈ ಕುರಿತು ಅಲ್ಲಿಯೇ ಅಧಿಕಾರಿಗಳ ಗಮನಕ್ಕೆ ಇದನ್ನು ತರಬಹುದು. ಅವರು ನಿಮಗೆ ನೀವು ಮತದಾನ ಮಾಡಿರುವುದನ್ನು ಖಚಿತ ಪಡಿಸಿಯೇ ಅಲ್ಲಿಂದ ಕಳಿಸುತ್ತಾರೆ.

ಇವಿಎಂ ಯಂತ್ರದಲ್ಲಿ ನೀವು ಕೇವಲ ಅಭ್ಯರ್ಥಿಗಳನ್ನು ಮಾತ್ರವಲ್ಲ, ಈ ಬಾರಿ ಸ್ಪರ್ಧೆ ಮಾಡಿರುವವರಲ್ಲಿ ಯಾರೂ ಅರ್ಹರಿಲ್ಲ ಎಂದು ನಿಮಗನ್ನಿಸಿದ್ದರೆ ನೀವು ʻನೋಟಾʼ ಆಯ್ಕೆಯನ್ನೂ ಮಾಡಿಕೊಂಡು ಮತ ಚಲಾಯಿಸಬಹುದು. ಮತದಾನ ನಿಮ್ಮ ಹಕ್ಕು ಅದನ್ನು ಮರೆಯದೇ ಚಲಾಯಿಸಿ.

ನೆನಪಿಡಿ, ಬುಧವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ಒಳಗೆ ಮಾತ್ರ ಮತದಾನ ಮಾಡಲು ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಿರಿ: https://ceo.karnataka.gov.in/kn

ಇದನ್ನೂ ಓದಿ : ಯಾವ ಬೂತ್‌ನಲ್ಲಿ ಮತ ಹಾಕಬೇಕು? ರೂಟ್‌ ಯಾವುದು? ಎಲ್ಲ ಮಾಹಿತಿಗೂ ಇದೊಂದು App ಸಾಕು

Exit mobile version