Site icon Vistara News

Karnataka Election 2023 : ಮೈತ್ರಿ ನಿರ್ಧಾರ ಫೈನಲ್‌ ಆಗಿದೆ ಎಂದ ಜೆಡಿಎಸ್‌; ಆಯ್ಕೆ ಕಾಂಗ್ರೆಸ್ಸೋ, ಬಿಜೆಪಿಯೋ?

Karnataka Election 2023 We have already decided with whom we are going to form the government says jds

#image_title

ಬೆಂಗಳೂರು: ಮತಗಟ್ಟೆ ಸಮೀಕ್ಷೆಗಳು ಅಭಿಪ್ರಾಯ ಪಡುತ್ತಿರುವಂತೆ ಈ ಬಾರಿಯೂ ಅತಂತ್ರ ವಿಧಾನಸಭೆ (Karnataka Election 2023) ರಚನೆಯಾದಲ್ಲಿ ಯಾವ ಪಕ್ಷವನ್ನು ಬೆಂಬಲಿಸಬೇಕು, ಯಾವ ಪಕ್ಷದೊಂದಿಗೆ ಸೇರಿ ಸರ್ಕಾರ ರಚನೆ ಮಾಡಬೇಕು ಎಂಬುದನ್ನು ಈಗಾಗಲೇ ತೀರ್ಮಾನಿಸಿರುವುದಾಗಿ ಜೆಡಿಎಸ್‌ ಪ್ರಕಟಿಸಿದೆ.

ಈಗಾಗಲೇ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ಪಕ್ಷವನ್ನು ಸಂಪರ್ಕಿಸಿದ್ದು, ಯಾವ ಪಕ್ಷದೊಂದಿಗೆ ಹೋಗಬೇಕೆಂಬುದನ್ನು ನಾವು ಈಗಾಗಲೇ ತೀರ್ಮಾನಿಸಿದ್ದೇವೆ. ಇದನ್ನು ಸೂಕ್ತ ಸಮಯದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ತನ್ವೀರ್ ಅಹಮದ್ ʻಎಎನ್‌ಐʼ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ತನ್ವೀರ್ ಅಹಮದ್ ಹೇಳಿದ್ದೇನು?

ಜೆಡಿಎಸ್‌ನ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಮತ್ತು ಬಿಜೆಪಿ ನಾವು ಜೆಡಿಎಸ್‌ ಅನ್ನು ಇನ್ನೂ ಸಂಪರ್ಕಿಸಿಯೇ ಇಲ್ಲ ಎಂದು ಹೇಳಿವೆ. ನಮ್ಮ ಪಕ್ಷ ಬಹುಮತ ಪಡೆದು ಅಧಿಕಾರ ಹಿಡಿಯಲಿದೆ. ಹೀಗಾಗಿ ಜೆಡಿಎಸ್‌ನ ಬೆಂಬಲ ಕೋರುವ ಅವಶ್ಯಕತೆಯೇ ಇಲ್ಲ ಎಂದು ಈ ಎರಡೂ ಪಕ್ಷಗಳ ನಾಯಕರು ಹೇಳಿಕೊಂಡೇ ಬಂದಿದ್ದಾರೆ.

ʻʻನಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ರಾಜ್ಯದ ಹಿತದೃಷ್ಟಿಯಿಂದ ಯಾವೆಲ್ಲಾ ಕಾರ್ಯಕ್ರಮ ಜಾರಿಗೆ ತರಬೇಕೆಂದುಕೊಂಡಿದ್ದೆವೋ ಆ ಕಾರ್ಯಕ್ರಮಗಳನ್ನು ಜಾರಿಗೆ ತರುವ ಪಕ್ಷ ಯಾವುದು ಎಂಬುದನ್ನು ನಾವು ಗುರುತಿಸಿದ್ದೇವೆ. ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ. ಒಟ್ಟಾರೆ ರಾಜ್ಯದ ಜನತೆಗೆ ಉಪಯೋಗವಾಗುವಂತ ಪಕ್ಷದ ಜೊತೆಗೆ ಸರ್ಕಾರ ರಚನೆ ಮಾಡುತ್ತೇವೆʼʼ ಎಂದು ಜೆಡಿಎಸ್ ವಕ್ತಾರ ತನ್ವೀರ್ ಅಹಮದ್ ವಿವರಿಸಿದ್ದಾರೆ.

ಕೂತು ತೀರ್ಮಾನಿಸುತ್ತೇವೆ ಎಂದ ಇಬ್ರಾಹಿಂ

ಶುಕ್ರವಾರ ಬೆಳಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಜೆಡಿಎಸ್‌ನ ಅಧ್ಯಕ್ಷ ಸಿ ಎಂ ಇಬ್ರಾಹಿಂ, ಸಮ್ಮಿಶ್ರ ಸರ್ಕಾರ ರಚನೆ ಮಾಡುವ ಸಂದರ್ಭ ಬಂದರೆ ಪಕ್ಷದ ನಾಯಕರೆಲ್ಲಾ ಕೂತು ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದು ಹೇಳಿದ್ದರು.

ಜೆಡಿಎಸ್‌ ಶಾಸಕರಾಗಲಿರುವವರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ʻʻನಮ್ಮಲ್ಲೆಲ್ಲ ಪತಿವ್ರತೆಯರು ಇದ್ದಾರೆ. ಹೀಗಾಗಿ ಆ ಪರಿಸ್ಥಿತಿ ನಮಗೆ ಬಂದಿಲ್ಲʼʼ ಎಂದು ಹೇಳಿದ್ದರು. ಚುನಾವಣೆಯಲ್ಲಿ ಹಣವಿಲ್ಲದ ಕಾರಣದಿಂದ ಸ್ವಲ್ಪ ಪಕ್ಷಕ್ಕೆ ಹಿನ್ನೆಡೆಯಾಗಿದೆ. ಆದರೆ ಜನರು ನಮಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಹೀಗಾಗಿ ಈ ಸಮೀಕ್ಷೆಗಳ ಅಭಿಪ್ರಾಯವನ್ನು ತಾವು ನಂಬುವುದಿಲ್ಲ ಎಂದು ಹೇಳಿದ್ದರು.

ಒಂದು ವೇಳೆ ಅತಂತ್ರ ವಿಧಾನಸಭೆ ರಚನೆಯಾದಲ್ಲಿ ಜೆಡಿಎಸ್‌ ಕಾಂಗ್ರೆಸ್‌ ಅಥವಾ ಬಿಜೆಪಿಯನ್ನು ಬೆಂಬಲಿಸಲೇ ಬಾರದು ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ. ಅಗತ್ಯವೆನಿಸಿದರೆ ಮತ್ತೊಂದು ಚುನಾವಣೆ ನಡೆದರೂ ಅಡ್ಡಿಯಿಲ್ಲ. ಆದರೆ ಈ ಎರಡು ಪಕ್ಷಗಳ ಸಹವಾಸ ಬೇಡ ಎಂಬುದು ನನ್ನ ಅನಿಸಿಕೆ. ಆದರೆ ಪಕ್ಷದ ವರಿಷ್ಠರೆಲ್ಲರ ತೀರ್ಮಾನದಂತೆಯೇ ಪಕ್ಷ ನಡೆದುಕೊಳ್ಳಲಿದೆ ಎಂದು ಇಬ್ರಾಹಿಂ ಹೇಳಿದ್ದರು.

ನಮ್ಮಲ್ಲೆಲ್ಲಾ ಪತಿವ್ರತೆಯರೇ ಇರುವುದು ಎಂದ ಸಿ ಎಂ ಇಬ್ರಾಹಿಂ,

ಗೆಲ್ಲುವ ಅಭ್ಯರ್ಥಿಗಳ ಮೇಲೆ ಕಣ್ಣು

ರಾಜ್ಯ ರಾಜಕೀಯದ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ ಶುರುವಾಗಿರುವ ಹೊತ್ತಿನಲ್ಲಿಯೇ ಒಂದು ವೇಳೆ ಅತಂತ್ರ ವಿಧಾನಸಭೆ ರಚನೆಯಾದರೆ ಮುಂದೇನು ಮಾಡಬೇಕೆಂಬ ಕುರಿತು ಜೆಡಿಎಸ್‌ ವರಿಷ್ಠರು ಇನ್ನೂ ಚಿಂತನೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಪಕ್ಷದ ವರಿಷ್ಠ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ತಾವೇ ನೇರವಾಗಿ ಗೆಲ್ಲಬಹುದಾದ ಪಕ್ಷದ ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಅವರಿಂದ ಅಭಿಪ್ರಾಯ ಸಂಗ್ರಹಿಸುವುದರ ಜತೆಗೆ ಆಮೀಷಕ್ಕೆ ಒಳಗಾಗದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಗುರುವಾರದಿಂದಲೇ ಅವರು ನಿರಂತರವಾಗಿ ಅಭ್ಯರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯ ರಾಜಕಾರಣದ ಕುತೂಹಲಕಾರಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಇತ್ತ ಸಿಂಗಾಪುರಕ್ಕೆ ತೆರಳಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ರಾಜಕೀಯ ತಂತ್ರಗಾರಿಕೆಯಲ್ಲಿ ತೊಡಗಿದ್ದು, ಫಲಿತಾಂಶದ ನಂತರ ಪಕ್ಷ ತೆಗೆದುಕೊಳ್ಳಬೇಕಾಗಿರುವ ನಿರ್ಧಾರಗಳ ಕುರಿತು ಪಕ್ಷದ ನಾಯಕರೊಂದಿಗೆ ಚರ್ಚಿಸುತ್ತಿದ್ದಾರೆ. ಜೆಡಿಎಸ್ ಮುಂದಿರುವ ಆಯ್ಕೆಗಳೇನು, ಯಾವ ತೀರ್ಮಾನ ತೆಗೆದುಕೊಂಡರೆ ಜೆಡಿಎಸ್‌ಗೆ ಲಾಭವಾಗುತ್ತದೆ ಎಂದು ರಾಜಕೀಯ ತಜ್ಞರಿಂದ ಅವರು ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಜೆಡಿಎಸ್‌ನ ಗೆದ್ದ ಶಾಸಕರು ತೆಲಂಗಾಣಕ್ಕೆ ?

ಆಗಾಗ ಪಕ್ಷದ ನಾಯಕರನ್ನು ಸಂಪರ್ಕಿಸಿ ಇಲ್ಲಿಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವ ಕುಮಾರಸ್ವಾಮಿ, ಇತರ ಪಕ್ಷದ ನಾಯಕರ ಚುಟುವಟಿಕೆಗಳ ಮೇಲೂ ಕಣ್ಣಿಡುವಂತೆ ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Karnataka Election 2023 : ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆ; ಸಿಎಂ ಗಾದಿಗೆ 50:50 ಸೂತ್ರ

Exit mobile version