Site icon Vistara News

Karnataka Election 2023 : ಕಣದಲ್ಲಿರುವ ಸಣ್ಣ-ಪುಟ್ಟ ಪಕ್ಷಗಳಲ್ಲಿ ಯಾರಾಗಬಹುದು ಗೇಮ್‌ ಚೇಂಜರ್‌?

Karnataka Election 2023 which party is game changer for karnataka

#image_title

ರಾಮಸ್ವಾಮಿ ಹುಲಕೋಡು, ಬೆಂಗಳೂರು
ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ಬಿಜೆಪಿ, ಕಾಂಗ್ರೆಸ್‌ ಮತ್ತು ಜಾತ್ಯತೀತ ಜನತಾದಳ (ಜೆಡಿಎಸ್‌) ಮಾತ್ರವಲ್ಲದೆ ಹಲವಾರು ರಾಜಕೀಯ ಪಕ್ಷಗಳು ಕಣದಲ್ಲಿವೆ. ಇವುಗಳಲ್ಲಿ ಯಾವುದಾದರೂ ಒಂದು ಪಕ್ಷ ಗೇಮ್‌ ಚೇಂಜರ್‌ ಆಗಬಹುದೇ ಎಂಬ ಕುರಿತು ಈಗ ತೀವ್ರ ಚರ್ಚೆ ನಡೆಯುತ್ತಿದೆ.

ಈಗಾಗಲೇ ನಡೆದಿರುವ ವಿವಿಧ ಸಮೀಕ್ಷೆಗಳು ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ (ಜೆಸಿಬಿ) ಹೊರತುಪಡಿಸಿ, ಮೂರರಿಂದ ಏಳು ಕ್ಷೇತ್ರಗಳಲ್ಲಿ ಬೇರೆ ಅಭ್ಯರ್ಥಿಗಳು ಗೆಲ್ಲಬಹುದು ಎಂದು ಅಂದಾಜಿಸಿವೆ. ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ಕೂಡ ಮೂರರಿಂದ ಐದು ಮಂದಿ ಇತರ ಪಕ್ಷದವರು ಅಥವಾ ಪಕ್ಷೇತರರು ಗೆಲ್ಲಬಹುದು ಎಂದು ಅಂದಾಜಿಸುತ್ತಿದ್ದಾರೆ. ಹೀಗಾಗಿ ಯಾವೆಲ್ಲಾ ಕ್ಷೇತ್ರಗಳಲ್ಲಿ ʻಜೆಸಿಬಿʼ ಪಕ್ಷಗಳಲ್ಲದೆ ಬೇರೆ ಯಾವ ಪಕ್ಷದವರು ಗೆಲ್ಲಬಹುದು ಎಂಬದನ್ನು ಕುತೂಹಲದಿಂದ ಗಮನಿಸಲಾಗುತ್ತಿದೆ.

ಯಾವೆಲ್ಲಾ ಪಕ್ಷಗಳಿವೆ ಕಣದಲ್ಲಿ?

ಮುಖ್ಯವಾಗಿ ಮಾಜಿ ಸಚಿವ ಜನಾರ್ಧನ ರೆಡ್ಡಿ ನೇತೃತ್ವದ ʻಕಲ್ಯಾಣ ರಾಜ್ಯ ಪ್ರಗತಿ ಪಕ್ಷʼ (ಕೆಆರ್‌ಪಿಪಿ) 46 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಒಂದು ಕಾಲದಲ್ಲಿ ಬಳ್ಳಾರಿ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಮೇಲೆ ಗಣಿದೊರೆ ಜನಾರ್ಧನ ರೆಡ್ಡಿ ರಾಜಕೀಯ ಹಿಡಿತ ಹೊಂದಿದವರು. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಈಗ ತಮ್ಮದೇ ಪಕ್ಷ ಸ್ಥಾಪಿಸಿಕೊಂಡು ರಾಜಕೀಯದ ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ಅವರು ಬಳ್ಳಾರಿ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಜನಾರ್ಧನ ರೆಡ್ಡಿ ಅವರ ಪತ್ನಿ ಅರುಣ ಲಕ್ಷ್ಮೀ ಕೂಡ ಕಣದಲ್ಲಿದ್ದಾರೆ. ಹೀಗಾಗಿ ಈ ಪಕ್ಷ ಯಾವ ರೀತಿಯ ಸಾಧನೆ ಮಾಡಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಇನ್ನು ವಿವಿಧ ರೈತ, ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಒಟ್ಟಾಗಿ ಸ್ಥಾಪಿಸಿರುವ 2005ರಲ್ಲಿ ಸ್ಥಾಪನೆಗೊಂಡಿರುವ ಸರ್ವೋದಯ ಕರ್ನಾಟಕ ಪಕ್ಷ (ಎಸ್‌ಕೆಪಿ) ಮೇಲುಕೋಟೆ ಸೇರಿದಂತೆ 14 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೇಲುಕೋಟೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿರುವ ರೈತ ಹೋರಾಟಗಾರ ದಿವಂಗತ ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್‌ ಪುಟ್ಟಣ್ಣಯ್ಯಗೆ ಕಾಂಗ್ರೆಸ್‌ ಕೂಡ ಬೆಂಬಲ ನೀಡಿದೆ. ಕನಿಷ್ಠ ಮೂರ್ನಾಲ್ಕು ಕ್ಷೇತ್ರಗಳಲ್ಲಿ ಗೆಲ್ಲುವ ಹುಮ್ಮಸ್ಸನ್ನು ರೈತ ನಾಯಕರು ತೋರಿಸುತ್ತಿದ್ದಾರೆ. ಹೀಗಾಗಿ ಈ ಪಕ್ಷ ಎಷ್ಟು ಸ್ಥಾನ ಪಡೆಯಬಹುದು? ಮುಂದಿನ ಸರ್ಕಾರ ರಚನೆಯಲ್ಲಿ ಯಾವ ಪಾತ್ರ ವಹಿಸಬಹುದು ಎಂಬ ಚರ್ಚೆ ಕೂಡ ಮುನ್ನೆಲೆಗೆ ಬಂದಿದೆ.

ಇನ್ನು ಭ್ರಷ್ಟಾಚಾರವನ್ನೇ ವಿಷಯವಾಗಿಸಿಕೊಂಡು ಚುನಾವಣೆ ಎದುರಿಸುತ್ತಿರುವ ಸಾಮಾಜಿಕ ಹೋರಾಟಗಾರ ರವಿಕೃಷ್ಣ ರೆಡ್ಡಿ ನೇತೃತ್ವದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್‌) ಒಟ್ಟು 199 ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಸ್ಟಾರ್‌ ನಟ ಉಪೇಂದ್ರ ಅವರ ನೇತೃತ್ವದ ʻಉತ್ತಮ ಪ್ರಜಾಕೀಯ ಪಕ್ಷʼ ಒಟ್ಟು 108 ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. 2018ರ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದಿದ್ದ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ) 133 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕೊನೆಯ ಕ್ಷಣದಲ್ಲಿ ಬಿಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಪಕ್ಷದ ನಾಯಕಿ ಮಾಯಾವತಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿ ಹೋಗಿದ್ದಾರೆ. ಹೀಗಾಗಿ ಬಿಎಸ್‌ಪಿ ಕೂಡ ಗಮನ ಸೆಳೆಯುತ್ತಿದೆ.

ಪಕ್ಷೇತರರು ಎಷ್ಟು ಮಂದಿ ಗೆಲ್ಲಬಹುದು?
ಇದುವರೆಗೆ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಒಟ್ಟು 9,971 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇವರಲ್ಲಿ 246 ಅಭ್ಯರ್ಥಿಗಳು ಗೆದ್ದಿದ್ದರು. ಈ ಬಾರಿ 918 ಪಕ್ಷೇತರರು ಕಣದಲ್ಲಿದ್ದಾರೆ. ಇವರಲ್ಲಿ ಎಷ್ಟು ಮಂದಿ ಗೆಲ್ಲುತ್ತಾರೆ ಎಂಬುದು ಈಗ ತೀವ್ರ ಕುತೂಹಲ ಮೂಡಿಸಿದೆ. ಕಳೆದ ಚುನಾವಣೆಯಲ್ಲ ಒಬ್ಬರು ಪಕ್ಷೇತರರು ಗೆದ್ದಿದ್ದರು.
ಕಳೆದ ಚುನಾವಣೆಗೆ ಹೋಲಿಸಿದಲ್ಲಿ ಈ ಬಾರಿ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆ ಕೂಡ ಕಡಿಮೆಯಾಗಿದೆ. 2018ರ ಚುನಾವಣೆಯಲ್ಲಿ ಒಟ್ಟು 2,636 ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಬಾರಿ 2,613 ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ.

ಇವಲ್ಲದೆ, ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ರಾಜ್ಯದಲ್ಲಿ ಮೂರು ದಿನ ಪ್ರವಾಸ ನಡೆಸಿ, ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಎಸ್‌ಪಿ ಸೇರಿದ್ದಾಗ ಈ ಪಕ್ಷ ರಾಜ್ಯ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಇನ್ನು ಶರದ್‌ ಪವಾರ್‌ ನೇತೃತ್ವದ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ಒಂಬತ್ತು ಕ್ಷೇತ್ರದಲ್ಲಿ ಕಣದಲ್ಲಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಬೆಳಗಾವಿಯ ಆರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರಾಷ್ಟ್ರೀಯ ಪಕ್ಷವಾಗಿ ಮಾನ್ಯತೆ ಪಡೆದಿರುವ ಆಮ್‌ ಆದ್ಮಿ ಪಕ್ಷ (ಎಎಪಿ) 209 ಮತ್ತು ಪಿ.ಎ. ಸಂಗ್ಮಾ ಸ್ಥಾಪಿಸಿದ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ)ಯು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ.

ಒಂದು ವೇಳೆ ಅತಂತ್ರ ವಿಧಾನಸಭೆ ರಚನೆಯಾದಲ್ಲಿ ಬೆರಳೆಣಿಕೆಯಷ್ಟು ಕ್ಷೇತ್ರಗಳಲ್ಲಿ ಗೆಲ್ಲುವ ಈ ಯಾವುದಾದರೂ ಸಣ್ಣ ಪಕ್ಷಗಳ ಪಾತ್ರ ಸರ್ಕಾರ ರಚನೆಯಲ್ಲಿ ಮಹತ್ವದ್ದಾಗಲಿದ್ದು, ಯಾವ ಪಕ್ಷಕ್ಕಾದರೂ ʻಗೇಮ್‌ ಚೇಂಜರ್‌ʼ ಆಗುವ ಅವಕಾಶ ದೊರೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : Karnataka Election 2023 : ಅಬ್ಬಬ್ಬಾ! ಕಣದಲ್ಲಿವೆ 80ಕ್ಕೂ ಹೆಚ್ಚು ಪಕ್ಷಗಳು!! ಈ ಪಕ್ಷಗಳ ಹೆಸರೇ ವಿಶೇಷವಾಗಿದೆ ನೋಡಿ!

Exit mobile version