ಬೆಂಗಳೂರು : ರಾಜ್ಯದಲ್ಲಿ ಅತಂತ್ರ ವಿಧಾನಸಭೆ (Karnataka Election 2023) ರಚನೆಯಾಗಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು (ಎಕ್ಸಿಟ್ ಪೋಲ್) ಅಭಿಪ್ರಾಯ ಪಟ್ಟ ಬೆನ್ನಲ್ಲೇ ಕಾಂಗ್ರೆಸ್ ಕೂಡ ಪ್ರತ್ಯೇಕ ಸಮೀಕ್ಷೆ ನಡೆಸಿದ್ದು, ಪಕ್ಷಕ್ಕೆ ಸರಳ ಬಹುಮತ ಬರಲಿದೆ ಎಂಬ ವರದಿ ಬಂದಿದೆ. ಇದರ ಬೆನ್ನಲ್ಲೇ ಪಕ್ಷದಲ್ಲಿ ಮುಖ್ಯಮಂತ್ರಿ ಗಾದಿ ಯಾರಿಗೆ ಎಂಬ ಕುರಿತು ಚರ್ಚೆ ಆರಂಭವಾಗಿದ್ದು, ಪಕ್ಷದ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ಗೆ 50:50 ಸೂತ್ರದಡಿ ಅಧಿಕಾರ ಹಂಚುವ ಸಾಧ್ಯತೆಗಳಿವೆ.
ಒಟ್ಟಾರೆ ಕಾಂಗ್ರೆಸ್‌ನಲ್ಲಿ ಗುರುವಾರ ಬೆಳಗ್ಗೆಯಿಂದಲೇ ಆರಂಭವಾದ ಸರ್ಕಾರ ರಚನೆಗೆ ಸಂಬಂಧಿಸಿದ ಚಟುವಟಿಕೆಗಳು ರಾತ್ರಿಯ ವೇಳೆಗೆ ತೀವ್ರಗೊಂಡಿತ್ತು. ಪಕ್ಷದ ಅಭ್ಯರ್ಥಿಗಳೊಂದಿಗೆ ಪಕ್ಷದ ನಾಯಕರು ವರ್ಚ್ಯುಲ್ ಸಭೆ ಕೂಡ ನಡೆಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರು. ಈ ಹೊತ್ತಿಗೆ ಪಕ್ಷ ನಡೆಸಿದ ಸಮೀಕ್ಷೆಯ ವರದಿಯೂ ನಾಯಕರ ಕೈ ಸೇರಿದ್ದು, ಇದರಿಂದ ನಿರಾಳರಾದ ಕೈ ನಾಯಕರು ಸರ್ಕಾರ ರಚನೆಯ ಕುರಿತು ಚರ್ಚೆ ಆರಂಭಿಸಿದ್ದಾರೆ.
ಬೆಂಬಲಿಗರ ಪಟ್ಟಿ ಸಿದ್ಧ ಪಡಿಸಿದ ಆಪ್ತರು
ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂಬ ವರದಿಗಳು ಬರುತ್ತಿದ್ದಂತೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಪ್ತರು ಯಾರೆಲ್ಲಾ ತಮ್ಮ ನಾಯಕರಿಗೆ ಬೆಂಬಲ ನೀಡಬಹುದು ಎಂಬ ಪಟ್ಟಿ ಸಿದ್ಧಪಡಿಸಲಾರಂಭಿಸಿದ್ದಾರೆ.
ಅಲ್ಲದೆ, ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಸಂಪರ್ಕಿಸಿ ತಮ್ಮ ನಾಯಕರ ಪರ ನಿಲ್ಲುವಂತೆ ಮನವಿ ಮಾಡುತ್ತಿದ್ದಾರೆ. ಈಗ ಯಾರೆಲ್ಲಾ ಬೆಂಬಲ ನೀಡಬಹುದು, ಯಾರು ಯಾವ ಕಾರಣಕ್ಕೆ ತಮ್ಮ ವಿರುದ್ಧ ಅಭಿಪ್ರಾಯ ಮಂಡಿಸಬಹುದು ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಇನ್ನೊಂದೆಡೆ ತಮಗೇ ಏಕೆ ಮುಖ್ಯಮಂತ್ರಿ ಪಟ್ಟ ನೀಡಬೇಕೆಂದು ಹೈಕಮಾಂಡ್ ಅನ್ನು ಒತ್ತಾಯಿಸಲು ತಮ್ಮ ಸಾಧನೆಗಳ ಪಟ್ಟಿಯನ್ನೂ ಈ ಇಬ್ಬರು ನಾಯಕರ ಆಪ್ತರು ಸಿದ್ಧಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ರಾಜ್ಯದಲ್ಲಿನ ಪಕ್ಷದ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರುವ ಪಕ್ಷದ ಹೈಕಮಾಂಡ್ ಈಗಾಗಲೇ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್‌ಗೆ 50:50 ಸೂತ್ರದಡಿ ಅಧಿಕಾರ ಹಂಚಿಕೆ ಮಾಡಲು ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ. ಸದ್ಯ ಯಾರು ಮೊದಲು ಮುಖ್ಯಮಂತ್ರಿಯಾಗುತ್ತಾರೆ ಎಂಬುದು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.
ಖರ್ಗೆ ಭೇಟಿಯಾದ ಪರಮೇಶ್ವರ್
ಇನ್ನೊಂದೆಡೆ ಬೆಂಗಳೂರಿನಲ್ಲಿಯೇ ಬೀಡು ಬಿಟ್ಟಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸ ಕೂಡ ರಾಜಕೀಯ ಚಟುವಟಿಕೆಗಳ ಕೇಂದ್ರ ಸ್ಥಳವಾಗಿದೆ. ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅಲ್ಲದೆ, ಪಕ್ಷದಲ್ಲಿನ ಇನ್ನಿತರ ಮುಖ್ಯಮಂತ್ರಿ ಆಕಾಂಕ್ಷಿ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ತಮ್ಮ ಪರ ಬ್ಯಾಟಿಂಗ್ ಮಾಡುವಂತೆ ಮನವಿ ಮಾಡುತ್ತಿದ್ದಾರೆ.
ಸದಾಶಿವನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಶುಕ್ರವಾರ ಬೆಳಗ್ಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ಜಿ. ಪರಮೇಶ್ವರ್ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻʻಮುಖ್ಯಮಂತ್ರಿ ಹುದ್ದೆಯ ಕುರಿತು ಚರ್ಚೆ ನಡೆಸಿಲ್ಲ. ನನಗೆ ಹುದ್ದೆ ನೀಡಿ ಎಂದು ಕೋರಿಲ್ಲ. ಈಗ ಈ ವಿಷಯ ಮಾತನಾಡಿ ಗೊಂದಲ ಸೃಷ್ಟಿಸಲು ನಾನು ಹೋಗುವುದಿಲ್ಲ. ಪಕ್ಷದ ಹೈಕಮಾಂಡ್ ಯಾರು ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ತೀರ್ಮಾನಿಸಲಿದೆʼʼ ಎಂದಿದ್ದಾರೆ.
ಲಿಂಗಾಯಿತರಿಂದಲೂ ಲಾಬಿ
ಈ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯಿತ ಶಾಸಕರ ಸಂಖ್ಯೆ ಹೆಚ್ಚಲಿದೆ ಎಂದೇ ಅಂದಾಜಿಸಲಾಗುತ್ತಿದ್ದು, ಹೀಗಾಗಿ ಮುಖ್ಯಮಂತ್ರಿ ಹುದ್ದೆಯನ್ನು ಲಿಂಗಾಯಿತ ಶಾಸಕರಿಗೆ ನೀಡಬೇಕೆಂಬ ಲಾಬಿ ಆರಂಭವಾಗಿದೆ. ಗುರುವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಈ ಬಾರಿ ಲಿಂಗಾಯಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬಂದರೆ ನಾವು ಮುಖ್ಯಮಂತ್ರಿ ಹುದ್ದೆಯನ್ನು ನೀಡುವಂತೆ ಕ್ಲೈಮ್ ಮಾಡುತ್ತೇವೆ ಎಂದು ನೇರವಾಗಿಯೇ ಹೇಳಿದ್ದಾರೆ.
ರಾಜ್ಯ ರಾಜಕಾರಣದ ಕುತೂಹಲಕಾರಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದವರಲ್ಲಿ 51 ಮಂದಿ ಅಭ್ಯರ್ಥಿಗಳು ಲಿಂಗಾಯಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರಲ್ಲಿ ಎಷ್ಟು ಮಂದಿ ಆಯ್ಕೆಯಾಗಲಿದ್ದಾರೆ ಎಂಬುದರ ಮೇಲೆ ಲಿಂಗಾಯಿತ ಶಾಸಕರ ಲಾಬಿ ಎಷ್ಟು ತೀವ್ರವಾಗಿರಲಿದೆ ಎಂಬುದು ಗೊತ್ತಾಗಲಿದೆ. ಈಗಾಗಲೇ ಕೆಪಿಸಿಸಿಯ ಪ್ರಚಾರ ಸಮಿತಿಯ ಅಧ್ಯಕ್ಷ ಎಂ ಬಿ ಪಾಟೀಲ್, ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ತಾವು ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿರುವುದಾಗಿ ಪ್ರಕಟಿಸಿದ್ದಾರೆ. ಪಕ್ಷದ ಉನ್ನತ ನಾಯಕರೊಂದಿಗೆ ಮಾತುಕತೆ ಕೂಡ ನಡೆಸುತ್ತಿದ್ದಾರೆ.
ಇದನ್ನೂ ಓದಿ : Karnataka Election 2023: ಎಕ್ಸಿಟ್ ಪೋಲ್ ತಂದ ಹುಮ್ಮಸ್ಸು, ಕಾಂಗ್ರೆಸ್‌ನಲ್ಲಿ ಜೋರಾಯ್ತು ಚಟುವಟಿಕೆ, ಅಭ್ಯರ್ಥಿಗಳಿಗೆ ನೀತಿಪಾಠ