Site icon Vistara News

Karnataka Election 2023 : ದೇವೇಗೌಡರ ಸಮ್ಮುಖದಲ್ಲಿ ವೈಎಸ್‌ವಿ ದತ್ತಾ ನಾಮಪತ್ರ ಸಲ್ಲಿಕೆ

karnataka election 2023 YSV Datta's nomination submission in the presence of H D Deve Gowda

jds

ಚಿಕ್ಕಮಗಳೂರು: ಕಡೂರು ವಿಧಾನಸಭಾ ಕ್ಷೇತ್ರದ (karnataka election 2023) ಜೆಡಿಎಸ್‌ ಅಭ್ಯರ್ಥಿ ವೈ ಎಸ್‌ ವಿ ದತ್ತಾ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಉಪಸ್ಥಿತರಿದ್ದಿದ್ದು ವಿಶೇಷವಾಗಿತ್ತು.

ವೈ ಎಸ್‌ ವಿ ದತ್ತಾರನ್ನು ದೇವೇಗೌಡರ ಮಾನಸ ಪುತ್ರ ಎಂದೇ ಕರೆಯಲಾಗುತ್ತದೆ. ವಯೋಸಹಜ ಅನಾರೋಗ್ಯದಿಂದಾಗಿ ರಾಜಕೀಯ ಚಟುವಟಿಕೆಗಳಿಂದ ದೂರ ಇರುವ ದೇವೇಗೌಡರು ಕೊಟ್ಟ ಮಾತಿನಂತೆಯೇ ಆಗಮಿಸಿ, ದತ್ತಾಗೆ ನಾಮ ಪತ್ರ ಸಲ್ಲಿಸಲು ಹಣವನ್ನೂ ನೀಡಿದರು. ಅಲ್ಲದೆ ನಾಮಪತ್ರ ಸಲ್ಲಿಸುವಾಗ ತಾವೂ ದತ್ತಾರೊಂದಿಗೆ ಕೈ ಜೋಡಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ, ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಕೂಡ ಉಪಸ್ಥಿತರಿದ್ದರು.

ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದ ವೈ ಎಸ್‌ ವಿ ದತ್ತಾಗೆ ಕಾಂಗ್ರೆಸ್‌ ಪಕ್ಷ ಟಿಕೆಟ್‌ ನೀಡಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಅವರು ಮರಳಿ ಜೆಡಿಎಸ್‌ ಸೇರಿದ್ದರು. ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದ ದೇವೇಗೌಡರು, ಪಕ್ಷದ ಟಿಕೆಟ್‌ ಪ್ರಕಟವಾಗಿದ್ದರೂ, ಅದನ್ನು ಬದಲಾಯಿಸಿ, ದತ್ತಾಗೆ ಟಿಕೆಟ್‌ ಕೊಡಿಸಿದ್ದರು. ಅಲ್ಲದೆ, ʻʻನೀನು ನಾಮಪತ್ರ ಸಲ್ಲಿಸುವಾಗ ನಾನೂ ಇರುತ್ತೇನೆʼʼ ಎಂದು ತಿಳಿಸಿದ್ದರು. ಅದರಂತೆಯೇ ದೇವೇಗೌಡರು ಉರಿ ಬಿಸಿಲಿನ ನಡುವೆಯೂ ಕಡೂರಿಗೆ ಆಗಮಿಸಿ ದತ್ತಾರ ಜತೆಗೂಡಿದ್ದರು.

ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಎಚ್‌.ಡಿ.ದೇವೇಗೌಡ

ಕಡೂರಲ್ಲಿ 39 ಡಿಗ್ರಿ ಸೆಲ್ಸಿಯಸ್ ನಷ್ಟು ಸುಡು ಬಿಸಲು ಇತ್ತು. ಆದರೂ ತಾಲೂಕಿನ ಜೆಡಿಎಸ್‌ ಕಾರ್ಯರ್ತರು ದೇವೇಗೌಡರನ್ನು ನೋಡಲು ಬೆಳಗ್ಗೆಯಿಂದ ಕಾಯುತ್ತಿದ್ದರು. ಬೆಂಗಳೂರಿನಿಂದ ಹೆಲಿಕ್ಯಾಪ್ಟರ್‌ ಮೂಲಕ ಕಡೂರಿಗೆ ಆಗಮಿಸಿದ ದೇವೇಗೌಡರು, ಕಾರಿನಲ್ಲಿಯೇ ತಾಲೂಕು ಕಚೇರಿಯನ್ನು ತಲುಪಿದ್ದರು. ಈ ಸಂದರ್ಭದಲ್ಲಿ ಎಪಿಎಂಸಿ ಆವರಣದಿಂದ ತಾಲೂಕು ಕಚೇರಿಯವರೆಗೆ ಬೃಹತ್‌ ಮೆರವಣಿಗೆ ನಡೆಸಲಾಯಿತಾದರೂ ದೇವೇಗೌಡರು ಇದರಲ್ಲಿ ಸಾಂಕೇತಿಕವಾಗಿಯಷ್ಟೇ ಭಾಗಿಯಾಗಿದ್ದರು.

ಜೆಡಿಎಸ್‌ ಕಾರ್ಯಕರ್ತರ ಬೃಹತ್‌ ಮೆರವಣಿಗೆ

ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಜೆಡಿಎಸ್‌ ಅಭ್ಯರ್ಥಿ ವೈಎಸ್‌ವಿ ದತ್ತಾ ಎತ್ತಿನ ಗಾಡಿಯಲ್ಲಿದ್ದರು. ಇವರ ಜತೆಗೆ ಸಂಸದ ಪ್ರಜ್ವಲ್‌ ರೇವಣ್ಣ ಕೂಡ ಎತ್ತಿನಗಾಡಿ ಏರಿದ್ದರು. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಸಮಯ ಸಂಚಾರಕ್ಕೆ ಅಡಚಣೆಯುಂಟಾಗಿತ್ತು.

ಇದನ್ನೂ ಓದಿ : Karnataka Elections : ಪಕ್ಷ ಬಿಟ್ಟ ಶೆಟ್ಟರ್‌ ಏನೇನೋ ಮಾತನಾಡುವುದು ಸರಿಯಲ್ಲ ಎಂದ ನಳಿನ್‌ ಕುಮಾರ್‌ ಕಟೀಲ್‌

Exit mobile version