ಬೆಂಗಳೂರು: ರಾಜ್ಯ ಬಿಜೆಪಿಯ ಅನೇಕ ಶಾಸಕರು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದರೂ ತಮ್ಮ ನಡವಳಿಕೆಯಲ್ಲಿ ಸೋತವರಿಗೆ ಟಿಕೆಟ್ ನೀಡುವುದಿಲ್ಲ ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಸಿ.ಟಿ. ರವಿ, ಚುನಾವಣೆ ಗೆಲುವೊಂದೇ ನಮ್ಮ ಮಾನದಂಡ ಅಲ್ಲ. ಗೆಲುವು ಮುಖ್ಯವಾದರೂ ಆಡಳಿತ ನಡೆಸೋದು ನಮ್ಮ ಮಾನದಂಡ. ಕೆಲ ಶಾಸಕರು ಉತ್ತಮ ಕೆಲಸ ಮಾಡಿದ್ದಾರೆ. ಆದರೆ ನಡವಳಿಕೆಯಲ್ಲಿ ಸೋತಿದ್ದಾರೆ. ಉತ್ತಮ ಕೆಲಸದ ಜತೆ ನಡವಳಿಕೆಯೂ ಮುಖ್ಯ. ಉತ್ತಮ ಅಭ್ಯರ್ಥಿ ಜತೆ, ನಡವಳಿಕೆಯೂ ಮುಖ್ಯವಾಗುತ್ತದೆ.
ಇದೆಲ್ಲದರ ಕುರಿತು ಇಂಟರ್ನಲ್ ಮತ್ತು ಎಕ್ಸ್‌ಟರ್ನಲ್ ರಿಪೋರ್ಟ್ ಪಡೆಯುತ್ತೇವೆ. ಅದರ ಆಧಾರದ ಮೇಲೆ ಚುನಾವಣಾ ಸಮಿತಿ ಟಿಕೆಟ್ ನೀಡಲಿದೆ. ಜಾತಿ ಸಮೀಕರಣವೂ ಕೂಡ ಇಲ್ಲಿ ಲೆಕ್ಕಕ್ಕೆ ಬರಲಿದೆ. ಸಣ್ಣ ಸಮುದಾಯಕ್ಕೂ ಟಿಕೆಟ್ ಕೊಡಬೇಕು ಎನ್ನುವವರಲ್ಲಿ ನಾನು ಮೊದಲಿಗ. ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೂ ಆದ್ಯತೆ ಕೊಡಬೇಕು ಎಂದರು.
ಗುಜರಾತ್ ಚುನಾವಣೆ ಬಳಿಕ ಮತ್ತಷ್ಟು ಕಾಂಗ್ರೆಸ್, ಜೆಡಿಎಸ್ ಮುಖಂಡರು ಬಿಜೆಪಿಗೆ ಬರುತ್ತಾರೆ ಎಂಬ ಸಚಿವ ಆರ್. ಅಶೋಕ್ ಹೇಳಿಕೆ ವಿಚಾರದಲ್ಲಿ ಪ್ರತಿಕ್ರಿಯಿಸಿ, ನಾವು ಎಲ್ಲರನ್ನೂ ಸಾರಾಸಗಟಾಗಿ ಸೇರಿಸಿಕೊಳ್ಳುವುದಿಲ್ಲ. ಸಾರಾಗಟಾಗಿ ಎಲ್ಲರ ಸೇರ್ಪಡೆಗೆ ಗ್ರೀನ್ ಸಿಗ್ನಲ್ ಕೊಡುವುದಿಲ್ಲ. ಯಾರೇ ಬಂದರೂ ಸೇರಿಸಿಕೊಳ್ಳುವ ಮುನ್ನ ಹತ್ತಾರು ಮಾನದಂಡ ನೋಡುತ್ತೇವೆ. ಯಾರು ಸೂಕ್ತ, ಸೂಕ್ತವಲ್ಲ ಎಂದು ನೋಡುತ್ತೇವೆ ಎಂದರು.
ಲವ್ ಜಿಹಾದ್ ತಡೆಗೆ ಪೊಲೀಸ್ ವಿಶೇಷ ದಳ ರಚನೆಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ ವಿಚಾರದಲ್ಲಿ ಪ್ರತಿಕ್ರಿಯಿಸಿ, ಸಮಿತಿ ಕೊಟ್ಟಿರುವ ಮನವಿಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಅವರ ಮನವಿ ಬಗ್ಗೆ ಸಿಎಂ ಜತೆ ಚರ್ಚೆ ನಡೆಸುತ್ತೇನೆ ಎಂದರು.
ಮಾಜಿ ಸಚಿವ ಎಚ್. ವಿಶ್ವನಾಥ್ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಕುರಿತು ಮಾತನಾಡಿ, ಹೊಸಬರಿಗೆ ಅವಕಾಶ ಸಿಗಲಿದೆ ಎಂದು ಹೇಳಿದರು. ಗುಜರಾತ್ ಗೆಲುವು ರಾಜ್ಯದಲ್ಲಿ ನಮ್ಮ ಹುಮ್ಮಸ್ಸು ಹೆಚ್ಚಾಗಿಸಿದೆ. ಎರಡು ಸಂದೇಶ ಈ ಫಲಿತಾಂಶದಿಂದ ಸಿಕ್ಕಿದೆ. ಮೈಮರೆಯದಿದ್ದರೆ ಕರ್ನಾಟಕ ಸಹ ಗುಜರಾತ್ ಮಾದರಿಯಲ್ಲಿ ಗೆಲ್ಲಬಹುದು. ಮೈಮರೆತರೆ ಹಿಮಾಚಲ ಆಗುತ್ತದೆ. ಈ ಫಲಿತಾಂಶ ನಮಗೆ ಹುಮ್ಮಸ್ಸು ಕೊಡುವುದರ ಜತೆಗೆ ಎಚ್ಚರಿಕೆಯನ್ನೂ ನೀಡಿದೆ ಎಂದರು.
ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಲು ವಿಜೇಯೇಂದ್ರ ಆಸಕ್ತಿ ವಹಿಸಿದ ಕುರಿತು ಮಾತನಾಡಿದ ಸಿ.ಟಿ. ರವಿ, ಬಿಜೆಪಿ ಗೆಲ್ಲುವ ರಾಜಕಾರಣ ಮಾಡುತ್ತದೆ. ಗೆಲ್ಲುವ ಬಗ್ಗೆ ಮಾತ್ರ ರಾಜಕಾರಣ ಮಾಡುತ್ತೇವೆ. ನಮ್ಮ ಗೆಲುವಿಗೆ ಎದುರಾಳಿ ಸಹಕಾರ ಇರಬೇಕು ಎನ್ನುವುದು ಸರಿಯಲ್ಲ. ನಾವು ನಮ್ಮ ಕಾರ್ಯಕರ್ತರ ಬೆಂಬಲ ಬೇಕು ಎಂದು ಆಲೋಚನೆ ಮಾಡುತ್ತೇವೆ. ಸಿದ್ದರಾಮಯ್ಯ ಕೂಡ ಅದನ್ನು ಬಯಸಬಾರದು. ನನಗೆ ಜೆಡಿಎಸ್ ಬೆಂಬಲ ಬೇಕು ಎನ್ನುವ ರೀತಿ ಸಿದ್ದರಾಮಯ್ಯ ಆಲೋಚನೆ ಮಾಡಬಾರದು. ಅದು ನಿಜವಾದ ರಾಜಕೀಯ ಆಗುವುದಿಲ್ಲ.
75 ವರ್ಷಕ್ಕೆ ಟಿಕೆಟ್ ನೀಡಬಾರದು ಎಂಬ ನೀತಿ ಕುರಿತು ಪ್ರತಿಕ್ರಿಯಿಸಿ, ಹೀಗೆಯೇ ಆಗಬೇಕು ಎಂದೇನೂ ಇಲ್ಲ. ಸೋಮವಾರ ಗುಜರಾತ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ 75 ಮೀರಿದವರಿಗೂ ಅವಕಾಶ ನೀಡಿದೆ. ಹಣಕಾಸು ಸಚಿವರನ್ನೂ ಮಾಡಿದೆ. ಎಲ್ಲೂ ಕಾಲದಿಂದಲೂ ಸೀಮಿತವಾಗಿ ಮಾಡಿಲ್ಲ. ಆಯಾ ಕಾಲ ಪರಿಸ್ಥಿತಿ, ರಾಜ್ಯದ ಪರಿಸ್ಥಿತಿ ಅನುಗುಣವಾಗಿ ಮಾಡುತ್ತೇವೆ ಎಂದರು.
ಇದನ್ನೂ ಓದಿ | ಸೋದರ ಮಾವ ಎದುರು ಬಂದರೂ ಯುದ್ಧ ಮಾಡುತ್ತೇವೆ: ಪ್ರಮೋದ್ ಮುತಾಲಿಕರನ್ನು ಕಂಸನಿಗೆ ಹೋಲಿಸಿದ ಸಿ.ಟಿ. ರವಿ