ಶೃಂಗೇರಿ: ಚುನಾವಣೆ ಹಿನ್ನೆಲೆಯಲ್ಲಿ (Karnataka Election) ಶೃಂಗೇರಿ- ಧರ್ಮಸ್ಥಳ ಯಾತ್ರೆ ಕೈಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ತಮ್ಮ ಯಾತ್ರೆಯನ್ನು ಅರ್ಧಕ್ಕೇ ಅಂತ್ಯಗೊಳಿಸಿ ಬೆಂಗಳೂರಿಗೆ ಹಿಂದಿರುಗಿದ್ದಾರೆ. ಅಲ್ಲಿಂದ ಅವರು ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಲು ನವ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಇಂದು ಬೆಳಗ್ಗೆ ಶೃಂಗೇರಿಗೆ ಭೇಟಿ ನೀಡಿದ್ದ ಅವರು ಇಲ್ಲಿಂದ ನೇರವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಅವರು ಇಲ್ಲಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು.
ಕಾಂಗ್ರೆಸ್ ಉನ್ನತ ಮಟ್ಟದ ಸಭೆಯು ಇಂದು ಸಂಜೆ ದೆಹಲಿಯಲ್ಲಿ ನಡೆಯಲಿರುವುದರಿಂದ ಈ ಸಭೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಅವರು ಯಾತ್ರೆಯನ್ನು ಮೊಟಕುಗೊಳಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಈಗಾಗಲೇ ಈ ಸಭೆಯಲ್ಲಿ ಭಾಗವಹಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಕೂಡ ಸಂಜೆಯ ವೇಳೆಗೆ ನವ ದೆಹಲಿ ತಲುಪಲಿದ್ದಾರೆ.
ಶೃಂಗೇರಿಗೆ ಆಗಮಿಸಿದ ಅವರು ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗುರುದ್ವಯರನ್ನು ಸಂದರ್ಶಿಸಿ, ಅವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ʻʻನಾನು ಮತ್ತು ಪಕ್ಷದ ಎಲ್ಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದಕ್ಕಿಂತ ಮೊದಲು, ಶೃಂಗೇರಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿಕೊಳ್ಳಲು ಬಂದಿದ್ದೇನೆ. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಆಶೀರ್ವಾದ ಮಾಡಿದಂತೆ ನನಗೂ ಮತ್ತು ಪಕ್ಷಕ್ಕೂ ದೇವಿ ಆಶೀರ್ವಾದ ಮಾಡುತ್ತಾಳೆಂಬ ನಂಬಿಕೆ ಇದೆʼʼ ಎಂದು ಹೇಳಿದರು.
ಸಕಲರ ಒಳಿತಿಗಾಗಿ ಪ್ರಾರ್ಥನೆ ಮಾಡಿದ್ದೇನೆ
ಯಾರು ಬೇಕಾದರೂ ಸ್ಪರ್ಧೆ ಮಾಡಲಿ
ಡಿ.ಕೆ. ಶಿವಕುಮಾರ ಸ್ಪರ್ಧಿಸಲಿರುವ ಕನಕಪುರದಲ್ಲಿ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಆರ್. ಅಶೋಕ್ ಸ್ಪರ್ಧಿಸಲಿದ್ದಾರೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿದ ಅವರು, ʻʻಹಾಗೇನಾದರೂ ಅಶೋಕ್ ಸ್ಪರ್ಧಿಸಿದರೆ ಅದು ಸಂತೋಷದ ವಿಷಯ. ಚುನಾವಣೆಯಲ್ಲಿ ಯಾರು ಬೇಕಾದ್ರೂ ಎಲ್ಲಿಯಾದರೂ ನಿಲ್ಲಬಹುದು. ಹೀಗಾಗಿ ಅಶೋಕ್ ನಿಂತರೆ ಸ್ವಾಗತ ಮಾಡುತ್ತೇನೆ. ಅವರ ವಿರುದ್ಧ ಹೋರಾಟ ಮಾಡುತ್ತೇನೆ. ಯಾರನ್ನು ಆಯ್ಕೆ ಮಾಡಬೇಕೆಂದು ಜನ ತೀರ್ಮಾನ ಮಾಡುತ್ತಾರೆ. ಅವರ ಸ್ಪರ್ಧೆಗೆ ನನ್ನದೆನೂ ಅಭ್ಯಂತರವಿಲ್ಲʼʼ ಎಂದು ಹೇಳಿದರು.
ʻʻಅಶೋಕ್ ಅವರೇ ಬರಲಿ ಅಥವಾ ಬೇರೆಯವರನ್ನಾದರೂ ಬಿಜೆಪಿ ನಿಲ್ಲಿಸಲಿ. ರಾಜಕಾರಣದಲ್ಲಿ ಯಾರು ನಿಂತರೂ ಎದುರಿಸಲೇ ಬೇಕು, ಹೋರಾಟ ಮಾಡಲೇ ಬೇಕು. ಬಿಜೆಪಿ ಪಕ್ಷ ಈ ರೀತಿಯಲ್ಲಿ ತೆಗೆದುಕೊಳ್ಳುವ ದೊಡ್ಡ ನಿರ್ಧಾರವನ್ನು ನಾನು ಸ್ವಾಗತ ಮಾಡುತ್ತೇನೆʼʼ ಎಂದು ಡಿಕೆಶಿ ಹೇಳಿದರು.
ಅನ್ಯಾಯ ಸರಿಪಡಿಸುವ ಉದ್ದೇಶ
ಎಐಸಿಸಿಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಹಿರಿಯ ನಾಯಕರು. ಅವರೆಂದೂ ನಾನು ಮುಖ್ಯಮಂತ್ರಿಯಾಗಬೇಕೆಂದು ಹೇಳಿಲ್ಲ, ಕೇಳಿಲ್ಲ. ಆದರೆ ಅವರಿಗೆ ಅನ್ಯಾಯವಾಗಿದೆ ಎಂದು ಹೇಳಲಾಗುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಮುಖ್ಯಮಂತ್ರಿ ಮಾಡಿದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಹೇಳಿದ್ದೇನೆ. ಈ ಸಂಬಂಧ ಪಕ್ಷ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಪಕ್ಷ ಏನು ಹೇಳುತ್ತೆ ಅದನ್ನು ನಾವೆಲ್ಲರೂ ಕೇಳಬೇಕು. ಮಲ್ಲಿಕಾರ್ಜುನ ಖರ್ಗೆ ಅವರು ಈಗ ಪಕ್ಷದ ಅಧ್ಯಕ್ಷರಾಗಿದ್ದಾರೆ. ಅವರು ಸೇರಿದಂತೆ ಪಕ್ಷ ಮಾತನ್ನು ನಾನು, ಸಿದ್ದರಾಮಯ್ಯ ಎಲ್ಲರೂ ಕೇಳಬೇಕಾಗುತ್ತದೆ ಎಂದು ಹೇಳಿದ ಡಿ ಕೆ ಶಿವಕುಮಾರ್, ಎಲ್ಲರಿಗೂ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಉದ್ದೇಶ ಸದ್ಯ ಇದೆ ಅಷ್ಟೇ ಎಂದು ಹೇಳಿದರು.
ಮುಂದಿನ ಮುಖ್ಯಮಂತ್ರಿಗೆ ಜೈ!
ಕೆಪಿಸಿಸಿ ವಕ್ತಾರ ಡಾ. ಶಂಕರ ಗುಹಾ ದ್ವಾರಕನಾಥ್ ಅವರೊಂದಿಗೆ ಹೆಲಿಕಾಪ್ಟರ್‌ನಲ್ಲಿ ಶೃಂಗೇರಿಗೆ ಬಂದಿಳಿದ ಡಿ.ಕೆ. ಶಿವಕುಮಾರ್ ಅವರನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಡಿಕೆಶಿಯವರ ಅಭಿಮಾನಿಗಳು ʻʻಮುಂದಿನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ಗೆ ಜೈʼʼ ಎಂದು ಘೋಷಣೆ ಕೂಗಿದರು.
ಡಿಕೆಶಿ ಹಿಂದೆ ಬಿದ್ದ ಟಿಕೆಟ್ ಆಕಾಂಕ್ಷಿಗಳು
ಶೃಂಗೇರಿಗೆ ಆಗಮಿಸಿ ದೇವಿ ದರ್ಶನ ಪಡೆದ ಡಿ. ಕೆ. ಶಿವಕುಮಾರ್ ಅವರನ್ನು ಇಲ್ಲಿಯೂ ಟಿಕೆಟ್ ಆಕಾಂಕ್ಷಿಗಳು ಬಿಡಲಿಲ್ಲ. ಅವರ ಹಿಂದೆ-ಮುಂದೆ ಸುತ್ತಾಡಿದರಲ್ಲದೆ, ಅವರ ಗಮನ ಸೆಳೆಯಲು ಪ್ರಯತ್ನಿಸಿದರು. ದೇವಸ್ಥಾನದ ಒಳಗೂ ತೆರೆಳಿದ ಕೆಲ ಆಕಾಂಕ್ಷಿಗಳು ಅವರು ವಿಶೇಷ ಪೂಜೆ ಸಲ್ಲಿಸುವ ವೇಳೆಯಲ್ಲಿಯೂ ಅವರೊಂದಿಗಿದ್ದರು. ದೇವಾಲಯದಿಂದ ಹೊರ ಬರುತ್ತಿದ್ದಂತೆಯೇ ಅವರಿಗೆ ಮುತ್ತಿಗೆ ಕೂಡ ಹಾಕಿದರು. ಟಿಕೇಟ್ ಆಕಾಂಕ್ಷಿಗಳ ಬೆಂಬಲಿಗರು ನಮ್ಮ ನಾಯಕರಿಗೇ ಟಿಕೆಟ್ ನೀಡುವಂತೆ ಒತ್ತಾಯಿಸುತ್ತಿದ್ದರು.
ತರೀಕೆರೆ ಟಿಕೆಟ್ ಆಕಾಂಕ್ಷಿ ಗೋಪಿ ಕೃಷ್ಣರಿಗೆ, ಮಡಿವಾಳ ಸಮಾಜಕ್ಕೆ ಟಿಕೇಟ್ ನೀಡುವಂತೆ ಕೆಲವರು ಒತ್ತಾಯಿಸಿದರು. ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಎಚ್ ಡಿ ತಮ್ಮಯ್ಯ ಬೆಂಬಲಿಗರೂ ತಮ್ಮ ನಾಯಕರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದರು.
ಇದನ್ನೂ ಓದಿ : Karnataka Politics: ಆರ್‌ಎಸ್‌ಎಸ್ ಮತ್ತು ಹಿಂದು ಮಹಾಸಭಾ ನಿಯಂತ್ರಣದಲ್ಲಿ ಬಿಜೆಪಿ: ಸಿದ್ದರಾಮಯ್ಯ ಹೇಳಿಕೆ