ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election Results 2023) ಬಿಜೆಪಿ ಮರಳಿ ಅಧಿಕಾರ ಹಿಡಿಯುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ಪ್ರಕಟಿಸಿದ್ದಾರೆ. ಶನಿವಾರ ಸಂಜೆ ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
ರಾಜ್ಯ ವಿಧಾನಸಭೆಯ ಮತ ಎಣಿಕೆಯು ಇನ್ನೂ ನಡೆಯುತ್ತಿದ್ದು, ಚುನಾವಣಾ ಆಯೋಗವು ಸಂಪೂರ್ಣ ಫಲಿತಾಂಶವನ್ನು ಪ್ರಕಟಿಸಿಲ್ಲ. ಆದರೆ ಕಾಂಗ್ರೆಸ್ ಪಕ್ಷವು ಬಹುಮತ ಪಡೆದಿರುವುದು ಸ್ಪಷ್ಟವಾಗಿದೆ. ಹೀಗಾಗಿ ಬಿಜೆಪಿ ಸೋಲಿನ ನೈತಿಕ ಹೊಣೆ ಹೊತ್ತು ಸಿಎಂ ಬೊಮ್ಮಾಯಿ ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದಾರೆ.
ಬಿಜೆಪಿಯು ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಈ ಬಾರಿ ಚುನಾವಣೆಯನ್ನು ಎದುರಿಸಿತ್ತು. ಪಕ್ಷ ನಿರೀಕ್ಷೆಗೂ ಮೀರಿ ಕಡಿಮೆ ಸ್ಥಾನದಲ್ಲಿ ಗೆದ್ದಿದೆ. ಕಳೆದ ಚುನಾವಣೆಗಿಂತ 40 ಸ್ಥಾನವನ್ನು ಕಳೆದುಕೊಳ್ಳುವುದರ ಜತೆಗೆ ಅಧಿಕಾರವನ್ನೂ ಕಳೆದುಕೊಂಡಿದೆ. ಪಕ್ಷ ಮರಳಿ ಅಧಿಕಾರ ಹಿಡಿಯುವ ವಿಶ್ವಾಸವನ್ನು ಸಿಎಂ ಬೊಮ್ಮಾಯಿ ವ್ಯಕ್ತಪಡಿಸುತ್ತಲೇ ಬಂದಿದ್ದರು.
ಶುಕ್ರವಾರ ಕೂಡ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸರ್ಕಾರ ರಚಿಸುವ ಕುರಿತು ಚರ್ಚಿಸಿದ್ದರು. ವಯಸ್ಸಿನ ಕಾರಣದಿಂದ ಯಡಿಯೂರಪ್ಪ ರಾಜೀನಾಮೆ ನೀಡಿದ್ದರಿಂದ ಪಕ್ಷದ ಹೈಕಮಾಂಡ್ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿತ್ತು.
ಬಸವರಾಜ ಬೊಮ್ಮಾಯಿ ರಾಜ್ಯದ 17 ನೇ ಮುಖ್ಯಮಂತ್ರಿಯಾಗಿದ್ದರು. 2021ರ ಜನವರಿ 21 ರಂದು ಮುಖ್ಯಮಂತ್ರಿಯಾಗಿ ಅವರು ಅಧಿಕಾರ ವಹಿಸಿಕೊಂಡಿದ್ದರು. ಅವರು ಎರಡೂ ವರೆ ವರ್ಷ ರಾಜ್ಯದಲ್ಲಿ ಆಡಳಿತ ನಡೆಸಿದಂತಾಗಿದೆ.
ಇದನ್ನೂ ಓದಿ: Karnataka Election Results 2023 : ಕಾಂಗ್ರೆಸ್ ಸೇರಿದ ಸವದಿ ಗೆದ್ದರು, ಶೆಟ್ಟರ್ ಸೋತರು