Site icon Vistara News

Karnataka Election Results 2023 : ಸರ್ಕಾರ ರಚನೆಯತ್ತ ಕಾಂಗ್ರೆಸ್‌ ದಾಪುಗಾಲು; ಬಿಜೆಪಿಗೆ ಅನಿರೀಕ್ಷಿತ ಹಿನ್ನಡೆ

Karnataka Election exit Poll: In the India Today-Axis my India exit poll predicted huge victory for Congress

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆಯು (Karnataka Election Results 2023) ರಾಜ್ಯದ ಒಟ್ಟು 36 ಕೇಂದ್ರಗಳಲ್ಲಿ ಬಿರುಸಿನಿಂದ ನಡೆಯುತ್ತಿದ್ದು (Karnataka Election 2023), ಕಾಂಗ್ರೆಸ್‌ ಅಧಿಕಾರ ಹಿಡಿಯುವತ್ತ ದಾಪುಗಾಲು ಹಾಕಿದೆ. ಆಡಳಿತರೂಢ ಬಿಜೆಪಿ ನಿರೀಕ್ಷೆಗೂ ಮೀರಿ ಹಿನ್ನಡೆ ಅನುಭವಿಸುತ್ತಿದೆ. ಕಾಂಗ್ರೆಸ್‌ ಒಟ್ಟು 116 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 72 ಮತ್ತು ಜೆಡಿಎಸ್‌ 29 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಇತರರು 8 ಕ್ಷೇತ್ರಗಳಲ್ಲಿ ಮುಂದಿದ್ದಾರೆ.

ದೇಶದ ರಾಜಧಾನಿ ದೆಹಲಿಯ ಕಾಂಗ್ರೆಸ್‌ ಕಚೇರಿಯಲ್ಲಿ ಈಗಾಗಲೇ ಸಂಭ್ರಮಾಚರಣೆ ಆರಂಭವಾಗಿದೆ. ರಾಜ್ಯದಲ್ಲಿ ಎರಡು ಕ್ಷೇತ್ರಗಳಲ್ಲಿ ಅಧಿಕೃತವಾಗಿ ಫಲಿತಾಂಶ ಪ್ರಕಟವಾಗಿದ್ದು ಎರಡರಲ್ಲಿಯೂ ಕಾಂಗ್ರೆಸ್‌ ಗೆದ್ದಿದೆ. ಚಿತ್ರದುರ್ಗದಲ್ಲಿ ವೀರೇಂದ್ರ ಪಪ್ಪಿ ಮತ್ತು ಚಳ್ಳಕೆರೆಯಲ್ಲಿ ಟಿ. ರಘುಮೂರ್ತಿ ಗೆದ್ದು ವಿಜಯೋತ್ಸವ ಆಚರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಕನಕಪುರದಲ್ಲಿ ಸ್ಪರ್ಧಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಗೆಲುವಿನ ನಗೆ ಬೀರಿದ್ದಾರೆ.

ದೆಹಲಿಯ ಕಾಂಗ್ರೆಸ್‌ ಕಚೇರಿಯಲ್ಲಿ ಸಂಭ್ರಮಾಚರಣೆ.

ಬಿಜೆಪಿಯ ಒಂಬತ್ತು ಸಚಿವರು ಹಿನ್ನಡೆ ಅನುಭವಿಸಿದರೆ, ಕಾಂಗ್ರೆಸ್‌ ನಾಯಕರನ್ನು ಕಟ್ಟಿ ಹಾಕಲು ಪಕ್ಷ ನಡೆಸಿದ ಪ್ರಯತ್ನ ಕೂಡ ವಿಫಲವಾಗಿದೆ. ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದ್ದ ಸಚಿವ ವಿ ಸೋಮಣ್ಣ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಎದುರು ಸ್ಪರ್ಧಿಸಿದ್ದ ಸಚಿವ ಆರ್.‌ ಅಶೋಕ್‌ ಹಿನ್ನಡೆ ಅನುಭವಿಸಿದ್ದಾರೆ. ಇವರಲ್ಲಿ ಸೋಮಣ್ಣ ಚಾಮರಾಜನಗರ ಕ್ಷೇತ್ರದಲ್ಲಿಯೂ ಹಿನ್ನಡೆ ಅನುಭವಿಸಿದ್ದರೆ, ಆಶೋಕ್‌ ಬೆಂಗಳೂರಿನ ಪದ್ಮನಾಭನಗರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಬಿಜೆಪಿ ತನ್ನ ಹಳೆಯ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಕಳೆದ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿಯೂ ಅಷ್ಟೇ ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು, ಕಾಂಗ್ರೆಸ್‌ 12, ಜೆಡಿಎಸ್‌ 1 ಸ್ಥಾನದಲ್ಲಿ ಮುನ್ನಡೆ ಸಾಧಿಸಿವೆ.

ಬಿಜೆಪಿಯ ಆರಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಒಂದೇ ಒಂದು ಕ್ಷೇತ್ರದಲ್ಲಿಯೂ ಮುನ್ನಡೆಯಲಿಲ್ಲ. ಬಿಜೆಪಿಯ ಭದ್ರಕೋಟೆ ಎನಿಸಿದ ಕರಾವಳಿ ಭಾಗದಲ್ಲಿಯೂ ಬಿರುಕು ಕಾಣಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. ಉಡುಪಿಯಲ್ಲಿಯೂ ಕಾಂಗ್ರೆಸ್‌ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ :Karnataka Election Results 2023 : ಯಾವ ಜಿಲ್ಲೆಯಲ್ಲಿ ಯಾವ ಪಕ್ಷ ಸದ್ಯ ಮುನ್ನಡೆಯಲ್ಲಿದೆ?

Exit mobile version