ಬೆಂಗಳೂರು: ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು (Karnataka Election Results 2023), ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದುಕೊಂಡಿದ್ದೆ. ಹೀಗಾಗಿ ಇದು ಭರವಸೆ ನೀಡಿದ್ದ ಪ್ರಮುಖ ಐದು ಉಚಿತ ಯೋಜನೆಗಳ ಜಾರಿಗೆ ದಿನಗಣನೆ ಆರಂಭಗೊಂಡಿದೆ.
ಪಕ್ಷ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲೇ ಈ ಉಚಿತ ಘೋಷಣೆಗಳಿಗೆ ಅನುಮೋದನೆ ನೀಡಲಾಗುವುದು ಎಂದು ಪಕ್ಷದ ನಾಯಕರು ಈಗಾಗಲೇ ಪ್ರಚಾರ ಮಾಡಿದ್ದಾರೆ. ಹೀಗಾಗಿ ಮತದಾರರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಪಕ್ಷ ಈ ಉಚಿತ ಯೋಜನೆಗಳನ್ನು ಜಾರಿಗೆ ತರುವುದು ಅನಿವಾರ್ಯವಾಗಿದೆ.
ಭಾನುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಇಲ್ಲಿ ಮುಖ್ಯಮಂತ್ರಿಯ ಆಯ್ಕೆ ನಡೆಯಲಿದೆ. ಆ ನಂತರ ಸರ್ಕಾರ ರಚನೆ ಪ್ರಕ್ರಿಯೆ ನಡೆಯಲಿದೆ. ಒಂದೆರಡು ದಿನಗಳಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವ ನಿರೀಕ್ಷೆ ಇದೆ. ಸರ್ಕಾರದ ಮೊದಲ ಸಂಪುಟ ಸಭೆಯನ್ನು ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿದ ದಿನದಂದೇ ನಡೆಸಲಾಗುತ್ತದೆ.
ಯಾವೆಲ್ಲಾ ಯೋಜನೆ ಜಾರಿ?
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಹಲವು ಭರವಸೆಗಳಲ್ಲಿ ಪ್ರಮುಖವಾಗಿರುವ ಉಚಿತ ಯೋಜನೆಗಳೆಂದರೆ;
1. ಗೃಹ ಜ್ಯೋತಿ ಯೋಜನೆಯಡಿ ಮನೆಗಳಿಗೆ 200 ಯುನಿಟ್ ಉಚಿತ ವಿದ್ಯುತ್
2. ಯುವನಿಧಿ ಯೋಜನೆಯಡಿ ಡಿಪ್ಲೊಮಾ ಆದವರಿಗೆ 1500 ರೂ, ಪದವೀಧರರಿಗೆ 3000 ರೂ. ನಿರುದ್ಯೋಗ ಭತ್ಯೆ
3. ಅನ್ನ ಭಾಗ್ಯ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಐದು ಕೆಜಿ ಅಕ್ಕಿ
4. ಗೃಹ ಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ 2000 ರೂ.
5. ಸ್ತ್ರಿ ಶಕ್ತಿ ಯೋಜನೆಯಡಿ ಎಲ್ಲ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ.
ಗೃಹ ಜ್ಯೋತಿಯೋಜನೆಯಡಿ ರಾಜ್ಯದ ಪ್ರತಿ ಕುಟುಂಬಕ್ಕೂ ಮಾಸಿಕ 200 ಯೂನಿಟ್‌ವರೆಗೆ ವಿದ್ಯುತ್ ಅನ್ನು ನೀಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಮಾಸಿಕ 2 ಸಾವಿರ ರೂ. ನೀಡಲಾಗುತ್ತದೆ. ಅನ್ನ ಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ ಮಾಸಿಕ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ. ಯುವನಿಧಿ ಯೋಜನೆಯಡಿ ಪ್ರಕಾರ ಕರ್ನಾಟಕದ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂ. ನೀಡುವುದಾಗಿ ಘೋಷಣೆ ಮಾಡಲಾಗಿದೆ. ಸ್ತ್ರಿ ಶಕ್ತಿ ಯೋಜನೆಯಡಿ ಎಲ್ಲ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ನೀಡಲಾಗುತ್ತದೆ.
ಮತದಾನದ ಹಿಂದಿನ ದಿನ ಮೈಸೂರಿನ ನಾಡದೇವತೆ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಈ ಗ್ಯಾರಂಟಿಗಳನ್ನು ದೇವಿಯ ಮುಂದಿಟ್ಟು ಪೂಜೆ ಕೂಡ ಮಾಡಿಸಿದ್ದರು. ದೇವಾಲಯದಲ್ಲಿಯೇ ಪಕ್ಷ ಅಧಿಕಾರಕ್ಕೆ ಬಂದರೆ ಈ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಪ್ರಕಟಿಸಿದ್ದರು.
ಕಾಂಗ್ರಸ್ ಪಕ್ಷವು ಚುನಾವಣಾ ಪ್ರಚಾರದ ವೇಳೆ ಮನೆ ಮನೆಗೂ ಈ ಗ್ಯಾರಂಟಿ ಯೋಜನೆಯ ಕಾರ್ಡ್ ಅನ್ನು ತಲುಪಿಸಿತ್ತು. ಪಕ್ಷದ ಗೆಲುವಿಗೆ ಈ ಪ್ರಚಾರ ತಂತ್ರವೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ ಈ ಉಚಿತ ಯೋಜನೆಗಳನ್ನು ಜಾರಿಗೆ ತರಲೇಬೇಕಾದ ಅನಿವಾರ್ಯತೆಯಲ್ಲಿ ಕಾಂಗ್ರೆಸ್ ಪಕ್ಷವಿದೆ.
ಕಂಡಿಷನ್ ಇರುತ್ತದೆ!
ಸರ್ಕಾರದ ಯಾವುದೇ ಉಚಿತ ಯೋಜನೆಯನ್ನಾದರೂ ಎಲ್ಲರಿಗೂ ನೀಡುವುದು ಬಹಳ ಅಪರೂಪ. ಅರ್ಹ ಫಲಾನುಭವಿಗಳನ್ನು ಗುರುತಿಸಿಯೇ ನೀಡಲಾಗುತ್ತದೆ. ಈ ಐದು ಯೋಜನೆಗಳ ಜಾರಿಯ ಸಂದರ್ಭದಲ್ಲಿಯೂ ಇದೇ ನಿಯಮವನ್ನು ಅನುಸರಿಸಲಾಗುತ್ತದೆ.
ಮೊದಲ ಸಚಿವ ಸಂಪುಟದಲ್ಲಿ ಈ ಯೋಜನೆಗಳಿಗೆ ಅನುಮತಿ ನೀಡಿದ ನಂತರ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಅರ್ಹರನ್ನು ಗುರುತಿಸಲು ಮಾನದಂಡಗಳನ್ನು ರೂಪಿಸಿ, ಇದರ ಜಾರಿಗೆ ಸಂಬಂಧಿಸಿದಂತೆ ನೀತಿ-ನಿಯಮಗಳನ್ನು ರಚಿಸಲಿದ್ದಾರೆ. ಆ ನಂತರ ಸರ್ಕಾರ ಇದರ ಜಾರಿಗೆ ಅಧಿಸೂಚನೆ ಹೊರಡಿಸಲಿದೆ.
ಇದನ್ನೂ ಓದಿ: ವಿಸ್ತಾರ Explainer | ಉಚಿತ ಕೊಡುಗೆಗಳು ಜನರಿಗೆ ಹಿತವೇ? ಅಭಿವೃದ್ಧಿಗೆ ಶಾಪವೇ? ಚುನಾವಣಾ ವರ್ಷದಲ್ಲಿ ಕಾವೇರಿದ ಚರ್ಚೆ