Site icon Vistara News

Karnataka Election Results 2023 : ಕಾಂಗ್ರೆಸ್‌ ಸೇರಿದ ಸವದಿ ಗೆದ್ದರು, ಶೆಟ್ಟರ್‌ ಸೋತರು

Karnataka Election Results 2023 Lingayat heavyweight Jagadish Shettar losses and savdi wins

#image_title

ಹುಬ್ಬಳ್ಳಿ /ಬೆಂಗಳೂರು : ಬಿಜೆಪಿಯು ಕೊನೆಯ ಕ್ಷಣದಲ್ಲಿ ಟಿಕೆಟ್‌ ನಿರಾಕರಿಸಿದ್ದರಿಂದ ಸಿಟ್ಟಿಗೆದ್ದು, ಕಾಂಗ್ರೆಸ್‌ ಸೇರಿ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಭಾರಿ ಅಂತರದಿಂದ (Karnataka Election Results 2023 ) ಸೋತಿದ್ದಾರೆ. ಆದರೆ ಇವರಂತೆಯೇ ಕಾಂಗ್ರೆಸ್‌ ಸೇರಿದ್ದ ಅಥಣಿ ವಿಧಾಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯಥಿಯಾಗಿದ್ದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಜಗದೀಶ್‌ ಶೆಟ್ಟರ್‌ ವಿರುದ್ಧ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಗೆಲ್ಲುವ ಮೂಲಕ ಈ ಕ್ಷೇತ್ರದಲ್ಲಿ ಪಕ್ಷ ಹೊಂದಿರುವ ಪ್ರಾಬಲ್ಯವನ್ನು ಎತ್ತಿ ಹಿಡಿದಿದ್ದಾರೆ. ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ ಸೇರಿ ಪಕ್ಷದ ನಾಯಕರ ವಿರುದ್ಧ ಸರಣಿ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಈ ಕ್ಷೇತ್ರದಲ್ಲಿ ಗೆಲ್ಲುವ ಶಪಥ ಮಾಡಿದ್ದರು. ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು ಕ್ಷೇತ್ರಕ್ಕೆ ಆಗಮಿಸಿ ಪ್ರಚಾರ ನಡೆಸಿದ್ದರಲ್ಲದೆ, ಗೆಲ್ಲಲು ರಣ ತಂತ್ರ ರೂಪಿಸಿದ್ದರು. ಪಕ್ಷದ ಈ ಎಲ್ಲ ಪ್ರಯತ್ನ ಫಲ ನೀಡಿದ್ದು, ಸತತವಾಗಿ ಈ ಕ್ಷೇತ್ರದಲ್ಲಿ ಗೆಲ್ಲುತ್ತಾ ಬಂದಿದ್ದ ಶೆಟ್ಟರ್‌ ಸೋತಿದ್ದಾರೆ.

ಕಳೆದ ಚುನಾವಣೆಯಲ್ಲಿ 21,306 ಮತಗಳ ಅಂತರದಿಂದ ಗೆದ್ದಿದ್ದ ಜಗದೀಶ್‌ ಶೆಟ್ಟರ್‌ ಈ ಬಾರಿ ಕೇವಲ 29,340 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ಮಹೇಶ್ ಟೆಂಗಿನಕಾಯಿ 64,910 ಮತಗಳನ್ನು ಪಡೆದುಕೊಂಡಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮಹೇಶ್‌ ನಾಲವಾಡ್‌ 54,488 ಮತಗಳನ್ನು ಪಡೆದುಕೊಂಡಿದ್ದರು.

ಸೋಲಿಗೆ ಕಾರಣ ನೀಡಿದ ಜಗದೀಶ್‌ ಶೆಟ್ಟರ್‌

1994 ರಿಂದಲೂ ಜಗದೀಶ್‌ ಶೆಟ್ಟರ್‌ ಈ ಕ್ಷೇತ್ರದಲ್ಲಿ ಗೆಲ್ಲುತ್ತಾ ಬಂದಿದ್ದರು. ಸತತವಾಗಿ ಆರು ಬಾರಿ ಗೆದ್ದಿದ್ದ ಜಗದೀಶ್‌ ಶೆಟ್ಟರ್‌ ಒಮ್ಮೆ ಈ ರಾಜ್ಯದ ಮುಖ್ಯಮಂತ್ರಿಯಾಗಿಯೂ ಅಧಿಕಾರ ನಡೆಸಿದ್ದರು. ನಿರೀಕ್ಷೆಗಿಂತ ಕಡಿಮೆ ಮತವನ್ನು ಅವರು ತೆಗೆದುಕೊಂಡಿದ್ದಾರೆ. ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ ಸೇರಿದ್ದರೂ ಸ್ಥಳೀಯ ಕಾಂಗ್ರೆಸ್‌ ನಾಯಕರು ಅವರಿಗೆ ಸರಿಯಾಗಿ ಬೆಂಬಲ ನೀಡಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ. ಅಲ್ಲದೆ ಬಿಜೆಪಿಯ ಭದ್ರಕೋಟೆಯಿಂದ ಮತ ಸೆಳೆಯುವಲ್ಲಿಯೂ ಅವರು ವಿಫಲರಾಗಿದ್ದಾರೆ.

ಸೋತೆನೆಂಬ ದುಃಖವಿಲ್ಲ

ʻʻನಾನು ಸೋತಿದ್ದೇನೆ ಅನ್ನುವ ದುಃಖ ನನಗಿಲ್ಲ. ಬಿಜೆಪಿ ಲಿಂಗಾಯತ ಸಮುದಾಯ ಕಡೆಗಣಿಸುತ್ತಿತ್ತು. ಇದರ ಪರಿಣಾಮ ಈಗ ಕಿತ್ತೂರು, ಕಲ್ಯಾಣ ಕರ್ನಾಟಕದಲ್ಲಿ ಕಾಣಿಸುತ್ತಿದೆ. ಸೋತರೂ ರಾಜಕೀಯದಲ್ಲಿ ಕ್ರಿಯಾಶೀಲವಾಗಿದ್ದು, ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತೇನೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಬರುತ್ತೆ ಅಂದಿದ್ದೆ. ಅದು ನಿಜವಾಗಿದೆ. ಕಾಂಗ್ರೆಸ್‌ಗೆ ಬೆಂಬಲ ನೀಡಿದ ಕರ್ನಾಟಕ ಜನರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆʼʼ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಬಹುಮತ ಪಡೆದು ಅಧಿಕಾರ ಹಿಡಿದಿದೆ. ಇದಕ್ಕೆ ರಾಜ್ಯದಲ್ಲಿನ ಲಿಂಗಾಯಿತ ಸಮುದಾಯ ಸಂಪೂರ್ಣವಾಗಿ ಬೆಂಬಲ ನೀಡಿದ್ದೇ ಕಾರಣ ಎಂದೂ ವಿಶ್ಲೇಷಿಸಲಾಗುತ್ತಿದೆ. ಲಿಂಗಾಯಿತ ಸಮುದಾಯದ ಬೆಂಬಲ ಬಿಜೆಪಿಯಿಂದ ಕಾಂಗ್ರೆಸ್‌ನತ್ತ ವಾಲಲು ಜಗದೀಶ್‌ ಶೆಟ್ಟರ್‌ ಸೇರ್ಪಡೆ ಕೂಡ ಒಂದು ಕಾರಣವಾಗಿತ್ತು. ಬಿಜೆಪಿಯು ಲಿಂಗಾಯಿತರನ್ನು ದೂರ ತಳ್ಳುತ್ತಿದೆ. ನಾಯಕರನ್ನು ಅವಮಾನಿಸುತ್ತಿದೆ ಎಂಬ ಅಭಿಪ್ರಾಯವನ್ನು ಬಲವಾಗಿ ಮೂಡಿಸುವಲ್ಲಿ ಜಗದೀಶ್‌ ಶೆಟ್ಟರ್‌ ಪಾತ್ರ ದೊಡ್ಡದಿತ್ತು.

ಬಿಜೆಪಿಯಲ್ಲಿ ಸೋತಿದ್ದ ಸವದಿ ಕಾಂಗ್ರೆಸ್‌ನಲ್ಲಿ ಗೆದ್ದರು!

ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸೋತಿದ್ದ ಲಕ್ಷ್ಮಣ್‌ ಸವದಿ ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಜಗದೀಶ್‌ ಶೆಟ್ಟರಂತೆಯೇ ಬಿಜೆಪಿ ಮೇಲೆ ಆರೋಪ ಮಾಡಿ, ಕಾಂಗ್ರೆಸ್‌ ಸೇರಿದ್ದ ಅವರು 1,27,615 ಮತಗಳನ್ನು ಪಡೆದಿದ್ದಾರೆ. ಅವರ ಸಮೀಪ ಸ್ಪರ್ಧಿ ಬಿಜೆಪಿಯ ಮಹೇಶ್ ಈರನಗೌಡ ಕುಮಟಳ್ಳಿ 53,792 ಮತಗಳನ್ನು ಪಡೆದುಕೊಂಡಿದ್ದಾರೆ. ಒಟ್ಟಾರೆ ಸವದಿ 76 ಸಾವಿರ ಮತಗಳಿಂದ ಗೆದ್ದಂತಾಗಿದೆ.

ಬೆಳಗಾವಿಯ ಹಿರಿಯ ರಾಜಕಾರಣಿಯಾಗಿರುವ ಸವದಿ ತಾವು ಗೆದ್ದಿದ್ದಲ್ಲದೆ ಅಥಣಿಯ ಸುತ್ತಮುತ್ತಲಿನ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಗೆಲುವಿಗೆ ಕಾರಣರಾಗಿದ್ದಾರೆ. ಗಾಣಿಗ ಸಮುದಾಯದ ನಾಯಕರಾಗಿರುವ ಸವದಿ ಕನಿಷ್ಠ 10 ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದ್ದಾರೆ. ಇದನ್ನು ಅರಿತೇ ಅವರು ಚುನಾವಣೆಯಲ್ಲಿ ಸೋತಿದ್ದರೂ ಬಿಜೆಪಿ ನಾಯಕರು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದ್ದರು. ಆದರೆ ಈ ಬಾರಿ ಟಿಕೆಟ್‌ ನೀಡುವಾಗ ಎಡವಿ ಬಿಜೆಪಿ ಎಡವಟ್ಟು ಮಾಡಿಕೊಂಡಿದೆ.

ಗೆದ್ದ ನಂತರ ಸವದಿ ಏನು ಹೇಳಿದ್ದಾರೆ ನೋಡಿ.

2018 ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದಿದ್ದ ಮಹೇಶ್ ಈರನಗೌಡ ಕುಮಟಳ್ಳಿ ನಂತರ ಆಪರೇಷನ್‌ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದ್ದರು. 2019 ರ ಉಪಚುನಾವಣೆಯಲ್ಲಿಯೂ ಗೆದ್ದು ಬೀಗಿದ್ದರು. ಈ ಬಾರಿಯೂ ಸವದಿಗೆ ತೀವ್ರ ಪೈಪೋಟಿ ನೀಡಿದ್ದರು. ಕಾಂಗ್ರೆಸ್‌ ವೋಟ್‌ ಬ್ಯಾಂಕ್‌ನ ನೆರವಿನಿಂದ ಸವದಿ ಗೆದ್ದು ಬೀಗುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಪ್ರಾಬಲ್ಯವನ್ನು ಹೆಚ್ಚಿಸಿದ್ದಾರೆ.

ಇದನ್ನೂ ಓದಿ : Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

Exit mobile version