ಹಾಸನ: ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು (jds karnataka) ನಿರೀಕ್ಷೆಯಷ್ಟು ಫಲಿತಾಂಶ (Karnataka Election Results 2023) ದಾಖಲಿಸದೇ ಇದ್ದರೂ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದ ಹಾಸನದಲ್ಲಿ ಗೆದ್ದು ಬೀಗುತ್ತಿದೆ. ಕಳೆದ ಬಾರಿ ಈ ಕ್ಷೇತ್ರದಲ್ಲಿ ಗೆದ್ದಿದ್ದ ಬಿಜೆಪಿಯ ಪ್ರೀತಂಗೌಡ ಸೋಲುಂಡಿದ್ದಾರೆ. ದೇವೇಗೌಡರ ಕುಟುಂಬಕ್ಕೆ ಸವಾಲೊಡ್ಡುತ್ತಿದ್ದ ಅವರಿಗೆ ಹಿನ್ನಡೆಯಾಗಿದೆ.
ಈ ಕ್ಷೇತ್ರ ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿಯೇ ಗಮನ ಸೆಳೆದಿತ್ತು. ಬಿಜೆಪಿಯ ಪ್ರೀತಂಗೌಡ ವಿರುದ್ಧ ಮಾಜಿ ಸಚಿವ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಸ್ಪರ್ಧಿಸಲು ಉತ್ಸುಕತೆ ತೋರಿದ್ದರು. ಆದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಕ್ಷೇತ್ರದಿಂದ ಪಕ್ಷದ ಕಾರ್ಯಕರ್ತರೊಬ್ಬರನ್ನು ಕಣಕ್ಕಿಳಿಸುವುದಾಗಿ ಹೇಳುತ್ತಲೇ ಬಂದಿದ್ದರು. ಹೀಗಾಗಿ ಈ ಕ್ಷೇತ್ರದ ಟಿಕೆಟ್ ಹಂಚಿಕೆಯ ವಿಷಯವು ದೇವೇಗೌಡರ ಕುಟುಂಬದಲ್ಲಿ ಬಿರುಕು ಮೂಡಿಸಿತ್ತು.
ನಂತರ ಕುಮಾರಸ್ವಾಮಿಯವರ ಆಶಯದಂತೆಯೇ ಸ್ವರೂಪ್ ಗೌಡ ಅವರಿಗೆ ಟಿಕೆಟ್ ನೀಡಲಾಗಿತ್ತು. ಬಿಜೆಪಿಯ ಪ್ರೀತಂಗೌಡ ವೈಯುಕ್ತಿಕವಾಗಿ ದೇವೇಗೌಡರ ಕುಟುಂಬವನ್ನು ಟೀಕಿಸುತ್ತಿದ್ದ ಹಿನ್ನೆಲೆಯಲ್ಲಿ ಇಡೀ ಗೌಡರ ಕುಟುಂಬವೇ ಸ್ವರೂಪ್ ಪರವಾಗಿ ಪ್ರಚಾರ ನಡೆಸಿತ್ತು. ಟಿಕೆಟ್ ಆಕಾಂಕ್ಷಿಯಾಗಿದ್ದ ಭವಾನಿ ರೇವಣ್ಣ ಸ್ವರೂಪ್ ತಮ್ಮ ಮಗ ಇದ್ದಂತೆ ಎಂದು ಹೇಳಿಯೇ ಪ್ರಚಾರ ನಡೆಸಿದ್ದರು.
ಸ್ವರೂಪ್ ಗೆಲುವಿಗೆ ಕಾರಣಗಳೇನು ?
- ಕಾರ್ಯಕರ್ತನಿಗೆ ಟಿಕೆಟ್ ಎಂಬ ಸಂದೇಶ ನೀಡಿದ್ದು.
- ಇಡೀ ಜೆಡಿಎಸ್ ಕುಟುಂಬ ಒಂದಾಗಿ ಪ್ರಚಾರ ನಡೆಸಿದ್ದು.
- ಒಗ್ಗಟ್ಟಿನ ಸಂದೇಶ ರವಾನೆ ಮಾಡಿದ್ದು.
- ತಂದೆ ಹೆಚ್ ಎಸ್ ಪ್ರಕಾಶ್ ವರ್ಚಸ್ಸು ಮತ್ತು ಅಗಲಿಕೆಯ ಅನುಕಂಪ ಸ್ವರೂಪ್ ಪರವಾಗಿದ್ದಿದ್ದು.
- ಪ್ರೀತಂಗೌಡ ವಿರುದ್ದ ಇದ್ದ ಆಡಳಿತ ವಿರೋಧಿ ಅಲೆ.
- ಒಕ್ಕಲಿಗ ಒಳಪಂಗಡಗಳ ಲಾಭ ದೊರೆಯುವಂತೆ ಮಾಡುವಲ್ಲಿ ದೇವೇಗೌಡ ಕುಟುಂಬ ಯಶಸ್ವಿಯಾಗಿದ್ದು.
ಜೆಡಿಎಸ್‌ನ ಭದ್ರಕೋಟೆಯಾಗಿದ್ದ ಹಾಸನದಲ್ಲಿ ಗೆಲ್ಲುವ ಮೂಲಕ ಬಿಜೆಪಿಯಲ್ಲಿ ಭರವಸೆ ಮೂಡಿಸಿದ್ದ ಪ್ರೀತಂಗೌಡ ಸೋತಿದ್ದಾರೆ. ಜಿಲ್ಲೆಯ ಒಂದು ಕ್ಷೇತ್ರದಲ್ಲಿ ಖಾತೆ ತೆರೆದಿದ್ದ ಬಿಜೆಪಿ ಈ ಬಾರಿ ಯಾವ ಕ್ಷೇತ್ರದಲ್ಲಿಯೂ ಗೆದ್ದಿಲ್ಲ.
ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ