ರಾಮಸ್ವಾಮಿ ಹುಲಕೋಡು ಬೆಂಗಳೂರು
ರಾಜ್ಯ ರಾಜಕೀಯ ಇತಿಹಾಸದಲ್ಲಿಯೇ ಅಚ್ಚರಿ ಎನಿಸುವ ಫಲಿತಾಂಶವನ್ನು (Karnataka Election Results 2023) ಈ ಚುನಾವಣೆಯು ನೀಡಿದ್ದು, ಕಾಂಗ್ರೆಸ್ (karnataka congress) ಮೂರು ದಶಕದಲ್ಲಿಯೇ ಅತಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವತ್ತ ಹೆಜ್ಜೆ ಇರಿಸಿದೆ. 1999 ಮತ್ತು 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರ ಹಿಡಿದಿತ್ತು.
1999ರ ಚುನಾವಣೆಯಲ್ಲಿ ಕಾಂಗ್ರೆಸ್ 132 ಕ್ಷೇತ್ರಗಳಲ್ಲಿ ಗೆದ್ದಿತ್ತು. ಬಿಜೆಪಿ 44 ಕ್ಷೇತ್ರಗಳನ್ನು ಗೆಲುವು ಸಾಧಿಸಿತ್ತು. ಜೆಡಿಎಸ್ ಮತ್ತು ಜೆಡಿಯು ಸೇರಿ 28 ಕ್ಚೇತ್ರ ತಮ್ಮದಾಗಿಸಿಕೊಂಡಿದ್ದವು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ 122 ಕ್ಷೇತ್ರಗಳಲ್ಲಿ ಗೆದ್ದಿತ್ತು. ಬಿಜೆಪಿ 40 ಕ್ಷೇತ್ರಗಳನ್ನು ಗೆಲುವು ಸಾಧಿಸಿತ್ತು. ಜೆಡಿಎಸ್ 40 ಕ್ಷೇತ್ರ ತಮ್ಮದಾಗಿಸಿಕೊಂಡಿತ್ತು.
ಈ ಬಾರಿ ಕಾಂಗ್ರೆಸ್ ಸದ್ಯ 134 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. 132 ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನದಲ್ಲಿ ಗೆದ್ದು ದಾಖಲೆ ಬರೆಯಲಿದೆಯೇ ಎಂಬ ಕುತೂಹಲ ಈಗ ಪಕ್ಷದ ನಾಯಕರಲ್ಲಿದೆ.
ಚುನಾವಣಾ ಪೂರ್ವ ಸಮೀಕ್ಷೆಗಳು, ಮತಗಟ್ಟೆ ಸಮೀಕ್ಷೆಗಳು (ಎಕ್ಸಿಟ್ ಪೋಲ್) ಕೂಡ ಕಾಂಗ್ರೆಸ್ ಈ ಭರ್ಜರಿ ಗೆಲುವು ಸಾಧಿಸಲಿವೆ ಎಂಬುದನ್ನು ಊಹಿಸಿರಲಿಲ್ಲ. ಈ ಬಾರಿಯೂ ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂಬ ಲೆಕ್ಕಾಚಾರಗಳೆಲ್ಲಾ ಈಗ ತಲೆಕೆಳಗಾಗಿದೆ. ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್ ಗೆಲುವಿನ ಸಂಭ್ರಮದಲ್ಲಿದೆ.
ಕಾಂಗ್ರೆಸ್ ಗೆಲುವಿಗೆ 5 ಕಾರಣಗಳು ಇಲ್ಲಿವೆ
1. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯ ಆಡಳಿತ ವಿರೋಧಿ ಅಲೆಯನ್ನು ಸರಿಯಾಗಿ ಗ್ರಹಿಸಿ, ಅದನ್ನು ಉತ್ತೇಜಿಸುವ ಕೆಲಸ ಮಾಡಿಕೊಂಡೇ ಬಂದಿದ್ದು.
2. ಪ್ರಾರಂಭದಿಂದಲೂ ಒಗ್ಗಟ್ಟಿನ ಮಂತ್ರ ಜಪಿಸಿಕೊಂಡೇ ಬಂದಿದ್ದು. ಅಂತೆಯೇ ಚುನಾವಣೆಯನ್ನು ಯಾವುದೇ ಗೊಂದಲವಿಲ್ಲದಂತೆ ಒಗ್ಗಟ್ಟಿನಿಂದ ಎದುರಿಸಿದ್ದು.
3. ಮೊದಲೇ ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿ. ಅದನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಿದ್ದು. ಅಲ್ಲದೆ, ಬಿಜೆಪಿ ಈ ರೀತಿಯ ಯೋಜನೆಗಳನ್ನು ಜಾರಿಗೆ ತರುವಲ್ಲಿ ವಿಫಲವಾಗಿರುವುದನ್ನು ಮತದಾರರಿಗೆ ಮನದಟ್ಟು ಮಾಡಿಸಿದ್ದು.
4. ಚುನಾವಣೆಗೆ ಬಹಳ ಮೊದಲೇ ಸಿದ್ಧತೆ ಆರಂಭಿಸಿ, ಅಭ್ಯರ್ಥಿಗಳನ್ನು ಮೊದಲೇ ಪ್ರಕಟಿಸಿದ್ದು. ಹಲವು ಬಾರಿ ಸಮೀಕ್ಷೆಗಳನ್ನು ನಡೆಸಿ, ಹೆಚ್ಚು ಅರ್ಹ ಅಭ್ಯರ್ಥಿಗಳನ್ನು ಗುರುತಿಸಿ ಟಿಕೆಟ್ ನೀಡಿದ್ದು.
5. ಹಿಂದುತ್ವ ಅಲೆಯನ್ನು ಹಿಮ್ಮೆಟ್ಟಿಸಲು ʼಸಾಫ್ಟ್ ಹಿಂದುತ್ವʼ ನೀತಿ ಅನುಸರಿಸಿದ್ದು. ಜತೆ ಜತೆಗೆ ಲಿಂಗಾಯಿತ ಮತದಾರರನ್ನು ಸೆಳೆಯಲು ಹಲವು ತಂತ್ರಗಳನ್ನು ಅನುಸರಿಸಿ ಅದರಲ್ಲಿ ಯಶಸ್ವಿಯಾಗಿದ್ದು.