ಬೆಂಗಳೂರು: ಆಡಳಿತಾರೂಢ ಬಿಜೆಪಿ ಹೀನಾಯವಾಗಿ ಸೋಲುಂಡ ನಂತರ ಇದೀಗ ಪಕ್ಷ ಸಂಘಟನೆಗೆ ಮೇಜರ್ ಸರ್ಜರಿ ಮಾಡಲು ಆರ್‌ಎಸ್‌ಎಸ್ ಸಲಹೆ ನೀಡಿದೆ. ಪಕ್ಷದ ನೇತೃತ್ವ ವಹಿಸಿರುವವರ ವಿರುದ್ಧ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನವಿದ್ದು, ಶೀಘ್ರದಲ್ಲೆ ಬದಲಾವಣೆ ಮಾಡುವಂತೆ ಆರ್‌ಎಸ್‌ಎಸ್ ಸೂಚಿಸಿದೆ.
ಆರ್‌ಎಸ್‌ಎಸ್ ಕಚೇರಿ ಕೇಶವ ಕೃಪಾಕ್ಕೆ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ನಂತರ ಮಾಧ್ಯಮಗಳ ಜತೆಗೆ ಮಾತನಾಡಿದ ಬೊಮ್ಮಾಯಿ, ಈ ಚುನಾವಣೆ ಫಲಿತಾಂಶ ಬಗ್ಗೆ ಚರ್ಚೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದ ಪುನರ್ ಸಂಘಟನೆ ಮಾಡುವ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ.
ನಮ್ಮ ರಾಜ್ಯಾಧ್ಯಕ್ಷರು, ವರಿಷ್ಠರ ಜತೆ ಚರ್ಚೆ ಮಾಡಿ ಪಕ್ಷ ಸಂಘಟನೆ ಬಗ್ಗೆ ನಿರ್ಧರಿಸುತ್ತಾರೆ. ಶಾಸಕಾಂಗ ಪಕ್ಷದ ಸಭೆ ಬಗ್ಗೆ ಇವತ್ತು ಘೋಷಣೆ ಆಗುತ್ತದೆ ಎಂದಿದ್ದಾರೆ.
ಪ್ರಮುಖವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧವೇ ಕಾರ್ಯಕರ್ತರು ಬೇಸರ ಹೊರಹಾಕುತ್ತಿದ್ದಾರೆ. ಹಿರಿಯ ನಾಯಕರಿಗೆ ಟಿಕೆಟ್ ತಪ್ಪಿಸಿದ್ದು, ವೀರಶೈವ ಲಿಂಗಾಯತ ಸಮುದಾಯವನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಕುರಿತು ಪಕ್ಷದ ಒಳಗೆ ಹಾಗೂ ಬಿಜೆಪಿ ಮತದಾರರ ನಡುವೆ ನಡೆಯುತ್ತಿರುವ ಚರ್ಚೆಗಳ ಕುರಿತೂ ಮಾತುಕತೆ ನಡೆದಿದೆ ಎನ್ನಲಾಗಿದೆ.
ಇದೆಲ್ಲ ಸಮಸ್ಯೆಯನ್ನು ಸರಿಪಡಿಸಲು ಸದೃಢ ಪ್ರತಿಪಕ್ಷವಾಗಿ ಬಿಜೆಪಿ ಕೆಲಸ ಮಾಡಬೇಕಾಗಿದೆ. ತಮ್ಮ ಮಾತಿಗೆ ತಲೆದೂಗುವವರ ಬದಲಿಗೆ ಸಾಮರ್ಥ್ಯ ಇರುವ ಕಾರ್ಯಕರ್ತರನ್ನು ಹುದ್ದೆಗಳಿಗೆ ಆಯ್ಕೆ ಮಾಡಿ ಪಕ್ಷವನ್ನು ಬಲವರ್ಧನೆ ಮಾಡಬೇಕು ಎಂದು ಆರ್‌ಎಸ್‌ಎಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.
ಸುಧಾರಣೆಯ ಮೊದಲ ಹೆಜ್ಜೆಯಾಗಿ ಶಾಸಕಾಂಗ ಪಕ್ಷದ ಸಭೆಯನ್ನು ಆಯೋಜಿಸಲಾಗುತ್ತದೆ. ಪಕ್ಷದ ತತ್ವ, ಸಿದ್ಧಾಂತಗಳಿಗೆ ಬದ್ಧವಾಗಿರುವ, ಕಾರ್ಯಕರ್ತರ ಜತೆಗೆ ಬೆರೆಯುವ ನಾಯಕನನ್ನು ಆಯ್ಕೆ ಮಾಡಬೇಕು. ಇದೇ ಮಾನದಂಡವನ್ನು ರಾಜ್ಯ ಅಧ್ಯಕ್ಷರ ಆಯ್ಕೆಯಲ್ಲೂ ಪರಿಗಣಿಸಬೇಕು ಎಂಬ ಕುರಿತು ಆರ್‌ಎಸ್‌ಎಸ್ ಮಾರ್ಗದರ್ಶನ ನೀಡಿದೆ ಎನ್ನಲಾಗಿದೆ.
ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಜತೆಗೆ ಚರ್ಚೆ ನಡೆಸಿದ ನಂತರ ಈ ಕುರಿತು ನಿರ್ಧಾರಗಳು ಹೊರಬೀಳುವ ಸಾಧ್ಯತೆಯಿದೆ.
ಇದನ್ನೂ ಓದಿ: 12 ತಿಂಗಳಲ್ಲಿ 41 ಸಾವಿರ ಬೂತ್ಗಳಲ್ಲಿ ಮುನ್ನಡೆ ಸಾಧಿಸಿ ತೋರಿಸುತ್ತೇವೆ: ಬಿಜೆಪಿ ಸೋಲಿನ ನಂತರ ಬಿ.ಎಲ್. ಸಂತೋಷ್ ಪೋಸ್ಟ್