Site icon Vistara News

Karnataka Jobs Reservation: ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲು ಸಾಧ್ಯವೆ? ತೊಡಕುಗಳು ಏನೇನು?

Karnataka Jobs Reservation

ರಾಜ್ಯದ ಖಾಸಗಿ ಕೈಗಾರಿಕೆಗಳು (Private industry) ಹಾಗೂ ಇತರೆ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ. 50 ಮತ್ತು ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ. 75ರಷ್ಟು ಮೀಸಲಾತಿ (Karnataka Jobs Reservation) ಕಡ್ಡಾಯಗೊಳಿಸಿರುವ ಕರಡು ಮಸೂದೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramiah) ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿ (karnataka Cabinet meeting) ಅನುಮೋದನೆ ನೀಡಿಲಾಗಿದ್ದು, ಇದಕ್ಕೆ ಉದ್ಯಮ ರಂಗದ ಪ್ರಮುಖರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಆದರೆ, ಈ ಕಾಯಿದೆ ಜಾರಿಯಾದರೆ ಕನ್ನಡಿಗರಿಗೆ ಉದ್ಯೋಗದಲ್ಲಿ ನ್ಯಾಯ ಸಿಗಲಿದೆ ಎಂಬ ಸಂತಸ ಸ್ಥಳೀಯ ಯುವ ಜನತೆಯಿಂದ ವ್ಯಕ್ತವಾಗುತ್ತಿದೆ.

ಈ ಮಸೂದೆಯಲ್ಲಿ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ. 50ರಷ್ಟು ಮತ್ತು ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ. 75ರಷ್ಟು ಸ್ಥಳೀಯರಿಗೆ ಮೀಸಲಾತಿಯನ್ನು ಕಡ್ಡಾಯಗೊಳಿಸುತ್ತದೆ. ಸಾಕಷ್ಟು ಅರ್ಹ ಅಭ್ಯರ್ಥಿಗಳು ಇಲ್ಲದೇ ಇದ್ದರೆ ಸರ್ಕಾರದ ಸಹಯೋಗದೊಂದಿಗೆ ಉದ್ಯಮವು ಮೂರು ವರ್ಷಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಅವರನ್ನು ತೊಡಗಿಸಿಕೊಳ್ಳಬೇಕು. ಪ್ರಸ್ತಾವಿತ ಕಾನೂನಿನ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಉದ್ಯಮಕ್ಕೆ ಮೂರು ವರ್ಷಗಳ ಕಾಲಾವಕಾಶ ನೀಡಲು ಸರ್ಕಾರ ಯೋಜನೆ ರೂಪಿಸುತ್ತಿದೆ.

ಮೂರು ವರ್ಷಗಳ ಆನಂತರವೂ ಉದ್ಯಮಕ್ಕೆ ಈ ಸಮಸ್ಯೆ ಎದುರಾದರೆ ತರಬೇತಿಯ ಅನಂತರವೂ ಸಾಕಷ್ಟು ಸೂಕ್ತ ಸ್ಥಳೀಯರು ಲಭ್ಯವಾಗದೇ ಇದ್ದರೆ ವಿಚಾರಣೆಯ ಅನಂತರ ಉದ್ಯಮವನ್ನು ಮೀಸಲಾತಿ ನಿಬಂಧನೆಗಳಿಂದ ವಿನಾಯಿತಿ ನೀಡುವ ಸರ್ಕಾರದ ಅಧಿಕಾರವನ್ನು ಮಸೂದೆ ಒದಗಿಸುತ್ತದೆ. ವೃತ್ತಿಪರರನ್ನು ನೇಮಿಸಿಕೊಳ್ಳಲು ಕಂಪೆನಿಗಳಿಗೆ ಅವಕಾಶವನ್ನು ಒದಗಿಸುತ್ತದೆ. ಆದರೆ ಈ ಅವಕಾಶ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ. 25ರಷ್ಟು ಮತ್ತು ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ. 50ರಷ್ಟು ಸ್ಥಳೀಯರನ್ನು ಭರ್ತಿ ಮಾಡಿದರೆ ಮಾತ್ರ ಸಿಗುತ್ತದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.


ಸ್ಥಳೀಯರು ಅಂದರೆ ಯಾರು?

ಕರ್ನಾಟಕದಲ್ಲಿ ಹುಟ್ಟಿರುವ, 15 ವರ್ಷಗಳಿಂದ ರಾಜ್ಯದಲ್ಲಿ ನೆಲೆಸಿರುವ, ಕನ್ನಡ ಭಾಷೆಯನ್ನು ಓದುವುದು ಮತ್ತು ಬರೆಯುವುದನ್ನು ಚೆನ್ನಾಗಿ ತಿಳಿದಿರುವವರನ್ನು ಸ್ಥಳೀಯರು ಎಂದು ಮಸೂದೆಯಲ್ಲಿ ವ್ಯಾಖ್ಯಾನಿಸಲಾಗಿದೆ.
ಈ ಕಾನೂನಿನ ಅಡಿಯಲ್ಲಿ ಪ್ರಯೋಜನವನ್ನು ಬಯಸುವವರು ಕನ್ನಡ ಮಾಧ್ಯಮದಲ್ಲಿ ಹಿರಿಯ, ಮಾಧ್ಯಮಿಕ ಹಂತದಲ್ಲಿ ಓದಿರುವವರು ರಾಜ್ಯ ಸರ್ಕಾರದ ಭಾಷಾ ಪ್ರಾವೀಣ್ಯತೆಯ ಪರೀಕ್ಷೆಯನ್ನು ತೇರ್ಗಡೆಗೊಳಿಸಬೇಕು.

ಆಡಳಿತಾತ್ಮಕ, ಆಡಳಿತಾತ್ಮಕವಲ್ಲದ ಹುದ್ದೆಗಳು ಯಾವುದು?

ಆಡಳಿತಾತ್ಮಕ ಹುದ್ದೆಗಳೆಂದರೆ ನಿರ್ದೇಶಕರನ್ನು ಹೊರತುಪಡಿಸಿ ಮೇಲ್ವಿಚಾರಣೆ, ತಾಂತ್ರಿಕ, ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಪಾತ್ರಗಳಲ್ಲಿನ ಸ್ಥಾನಗಳನ್ನು ಒಳಗೊಂಡಿದೆ. ಆಡಳಿತಾತ್ಮಕವಲ್ಲದ ಹೊರಗುತ್ತಿಗೆ ಉದ್ಯೋಗಗಳು ಸೇರಿದಂತೆ ಕ್ಲೆರಿಕಲ್ ಹುದ್ದೆಗಳು, ಅರೆ ಮತ್ತು ನುರಿತ ಕೆಲಸಗಾರರಂತಹ ಎಲ್ಲಾ ಇತರ ಹುದ್ದೆಗಳನ್ನು ಸೇರಿಸಲಾಗಿದೆ.

ಇದನ್ನು ಯಾರು ಜಾರಿಗೆ ತರುತ್ತಾರೆ?

ಈ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸರ್ಕಾರವು ಏಜೆನ್ಸಿಯನ್ನು ನೇಮಿಸುತ್ತದೆ. ಬಹುತೇಕ ಕಾರ್ಮಿಕ ಇಲಾಖೆಯೇ ಇದನ್ನು ನಿರ್ವಹಿಸಲಿದೆ. ವ್ಯವಸ್ಥಾಪಕ ಮತ್ತು ನಿರ್ವಾಹಕೇತರ ಹುದ್ದೆಗಳ ನೇಮಕಾತಿಗಳ ಕುರಿತು ವರದಿ ಪಡೆಯಲು, ಅನುಸರಣೆ ಇಲ್ಲದಿದ್ದಲ್ಲಿ ವಿಚಾರಣೆ ನಡೆಸಲು ಏಜೆನ್ಸಿಗೆ ಅಧಿಕಾರವಿದೆ. ಕ್ಲೈಮ್‌ಗಳನ್ನು ಪರಿಶೀಲಿಸಲು ಏಜೆನ್ಸಿಯು ಉದ್ಯೋಗದಾತರಿಂದ ಯಾವುದೇ ದಾಖಲೆಗಳನ್ನು ಪಡೆಯಬಹುದು. ಅಗತ್ಯಬಿದ್ದರೆ ಉದ್ಯಮದೊಳಗೆ ಪ್ರವೇಶಿಸಿ ಪರಿಶೀಲಿಸುವ ಅಧಿಕಾರವೂ ಸಂಸ್ಥೆಯ ಅಧಿಕಾರಿಗಳಿಗೆ ಇರುತ್ತದೆ. ಪ್ರಸ್ತಾವಿತ ಕಾನೂನಿನ ಅನುಷ್ಠಾನಕ್ಕಾಗಿ ಪ್ರಾಧಿಕಾರವು ಸಹಾಯಕ ಕಾರ್ಮಿಕ ಆಯುಕ್ತರ ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿಯನ್ನು ನೇಮಿಸಲಿದೆ.


ಕಾನೂನು ಪಾಲನೆಯಾಗದೇ ಇದ್ದರೆ?

ಪ್ರಸ್ತಾವಿತ ಕಾನೂನು ಸರಿಯಾಗಿ ಪಾಲನೆ ಆಗದೇ ಇದ್ದರೆ ಅಥವಾ ಕಾನೂನನ್ನು ಉಲ್ಲಂಘಿಸಿದರೆ ಕನಿಷ್ಠ 10,000 ರೂ.ನಿಂದ ಗರಿಷ್ಠ 25,000 ರೂ.ವರೆಗೆ ದಂಡವನ್ನು ನಿಗದಿಪಡಿಸಲಾಗಿದೆ. ಕಾನೂನಿನ ಉಲ್ಲಂಘನೆ ಮುಂದುವರಿದರೆ ದಂಡದ ಮೊತ್ತವನ್ನು 1 ಲಕ್ಷ ರೂ.ವರೆಗೆ ಹೆಚ್ಚಿಸಲಾಗುತ್ತದೆ. ಜೈಲು ಶಿಕ್ಷೆಯ ಬಗ್ಗೆ ಉಲ್ಲೇಖವಿಲ್ಲ. ಮಸೂದೆಯು ಆರು ತಿಂಗಳವರೆಗೆ ಕಾಲಾವಕಾಶ ನೀಡಲಿದೆ.

ಏನು ಇದರ ಪರಿಣಾಮ?

ಪ್ರಸ್ತಾವಿತ ಈ ಕಾನೂನು ಜಾರಿಯಾದರೆ 1.5 ಮಿಲಿಯನ್ ಉದ್ಯೋಗಿಗಳನ್ನು ಹೊಂದಿರುವ 245 ಬಿಲಿಯನ್ ಡಾಲರ್ ಮೌಲ್ಯದ ಬೆಂಗಳೂರು ತಂತ್ರಜ್ಞಾನ ಉದ್ಯಮದಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಸಿಗಲಿದೆ. ಯಾಕೆಂದರೆ ಇಲ್ಲಿ ಕೆಲಸ ಮಾಡುವ ಹೆಚ್ಚಿನ ಜನರು ಕನ್ನಡೇತರರು. ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ ಎಂಬ ಕೂಗು ಮೊದಲಿನಿಂದಲೂ ಕೇಳಿ ಬರುತ್ತಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರವು ರಾಜ್ಯದ ಜಿಡಿಪಿಗೆ ಶೇ. 25ರಷ್ಟು ಕೊಡುಗೆ ನೀಡುತ್ತದೆ. ಸ್ಥಳೀಯರಿಗೆ ಮೀಸಲಾತಿ ಜಾರಿಗೆ ತಂದರೆ ಉನ್ನತ ಪ್ರತಿಭೆಗಳು, ಕುಶಲತೆ ಹೊಂದಿರುವವರು ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತಿಲ್ಲ ಎಂದು ಖಾಸಗಿ ಕಂಪನಿಗಳು ಈ ಕಾಯಿದೆ ವಿರೋಧಿಸಿ ಬೇರೆ ರಾಜ್ಯಗಳಿಗೆ ವಲಸೆ ಹೋಗಬಹುದು. ಇದರಿಂದ ರಾಜ್ಯಕ್ಕೆ ಹಿನ್ನಡೆ ಆಗಬಹುದು.

ರಾಜ್ಯ ಸರ್ಕಾರದ ಪ್ರಕಾರ ಬೆಂಗಳೂರು ಕರ್ನಾಟಕದ ಆರ್ಥಿಕತೆಗೆ ಶೇ. 43.86ರಷ್ಟು ಕೊಡುಗೆ ನೀಡುತ್ತಿದೆ. ಕಳೆದ ವರ್ಷ ಮಂಡಿಸಲಾದ 2022-23ರ ಬಜೆಟ್‌ನಲ್ಲಿ ರಾಜ್ಯ ಹಣಕಾಸು ಇಲಾಖೆಯ ಅಂದಾಜಿನ ಪ್ರಕಾರ ರಾಷ್ಟ್ರೀಯ ಜಿಡಿಪಿಗೆ ಕರ್ನಾಟಕ ಶೇ. 7ರಷ್ಟು ಕೊಡುಗೆ ನೀಡುತ್ತಿದೆ. ಮಸೂದೆಯಲ್ಲಿನ ನಿರ್ಬಂಧಗಳು ಮುಂದಿನ ಐದು ವರ್ಷಗಳಲ್ಲಿ ಒಂದು ಟ್ರಿಲಿಯನ್ ಡಾಲರ್ ಮೌಲ್ಯದ ರಾಜ್ಯ ಸರ್ಕಾರದ ಯೋಜನೆಗಳ ಮೇಲೆ ಪರಿಣಾಮ ಬೀರಬಹುದು ಎನ್ನುತ್ತಾರೆ ಉದ್ಯಮ ತಜ್ಞರು.


ಬೇರೆ ರಾಜ್ಯಗಳಲ್ಲಿ ಈ ನಿರ್ಬಂಧ ಇದೆಯೇ?

ಭಾರತದ ಖಾಸಗಿ ವಲಯದಲ್ಲಿ ಉದ್ಯೋಗಗಳಲ್ಲಿ ಮೀಸಲಾತಿ ಕಾಯ್ದಿರಿಸಿದ ಮೊದಲ ರಾಜ್ಯಗಳಲ್ಲಿ ಆಂಧ್ರ ಪ್ರದೇಶ ಮತ್ತು ಹರಿಯಾಣ ಸೇರಿವೆ. ಎರಡೂ ರಾಜ್ಯಗಳು ಸಂಬಳದ ಮಿತಿಯೊಂದಿಗೆ ಉದ್ಯೋಗಗಳಿಗೆ ಮೀಸಲಾತಿಯನ್ನು ಒದಗಿಸಿವೆ. ಹರಿಯಾಣದಲ್ಲಿ 30,000 ರೂ. ಮಾಸಿಕ ವೇತನದ ಉದ್ಯೋಗಗಳಿಗೆ ಶೇ.75ರಷ್ಟು ಮೀಸಲಾತಿ ಅನ್ವಯಿಸುತ್ತದೆ. ಆಂಧ್ರದಲ್ಲಿ ಶೇ. 75ರಷ್ಟು ಮೀಸಲಾತಿಗೆ ಮಾಸಿಕ ವೇತನದ ಮಿತಿ 50,000 ರೂ. ಆಗಿದೆ.

ಕರ್ನಾಟಕ ಮಸೂದೆಯು ಸಂಬಳದ ಮಿತಿಯನ್ನು ವಿಧಿಸಿಲ್ಲ. ನಿರ್ದೇಶಕರನ್ನು ಹೊರತುಪಡಿಸಿ ಎಲ್ಲಾ ಖಾಸಗಿ ವಲಯದ ಉದ್ಯೋಗಗಳ ಮೇಲೆ ಕೋಟಾವನ್ನು ವಿಧಿಸುತ್ತದೆ. ಆದರೆ ಆಂಧ್ರಪ್ರದೇಶದಂತೆ ಕರ್ನಾಟಕವೂ ಸಹ ರಾಜ್ಯ ಶಾಸಕಾಂಗವು ಒಮ್ಮೆ ಅಂಗೀಕರಿಸಿದ ಕಾನೂನನ್ನು ಜಾರಿಗೆ ತರಲು ಉದ್ಯಮಕ್ಕೆ ಮೂರು ವರ್ಷಗಳನ್ನು ಒದಗಿಸಿದೆ.

ಇದನ್ನೂ ಓದಿ: Karnataka Jobs Reservation: ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಶೇ.75 ಮೀಸಲಾತಿ ಮಾತ್ರ; ಆಡಳಿತ ಹುದ್ದೆಗಳಲ್ಲಿ ಶೇ.50; ಉದ್ಯಮಿಗಳಿಗೆ ಬೆಚ್ಚಿತೇ ಸರ್ಕಾರ?

ಯಾವ ರೀತಿ ಎದುರಾಗಲಿದೆ ಕಾನೂನು ತೊಡಕುಗಳು?

ಕರ್ನಾಟಕ ಸರ್ಕಾರ ಪ್ರಸ್ತಾಪಿಸಿರುವ ಈ ಕಾನೂನಿಗೆ ಕಾನೂನು ತೊಡಕುಗಳು ಎದುರಾಗಬಹುದು. ಹರಿಯಾಣವು ಸ್ಥಳೀಯ ಅಭ್ಯರ್ಥಿಗಳಿಗೆ ರಾಜ್ಯ ಉದ್ಯೋಗ ಕಾಯಿದೆಯನ್ನು 2020ರಲ್ಲಿ ಜಾರಿಗೊಳಿಸಿತು. ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯರಿಗೆ 30,000 ರೂ. ವರೆಗಿನ ವೇತನಕ್ಕಾಗಿ ಶೇ. 75ರಷ್ಟು ಮೀಸಲಾತಿಯನ್ನು ಒದಗಿಸಿತು. ಬಳಿಕ ಅದನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಆದರೆ ಇದು ಕಾನೂನನ್ನು ಸಂವಿಧಾನದ ಭಾಗ IIIರಲ್ಲಿ ಭಾರತದಾದ್ಯಂತ ಉದ್ಯೋಗ ಸ್ವಾತಂತ್ರ್ಯವನ್ನು ಒದಗಿಸುವ ಸಂವಿಧಾನದ 14 ಮತ್ತು 19ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು 2022ರಲ್ಲಿ ಹೈಕೋರ್ಟ್ ಈ ಕಾಯಿದೆಯನ್ನು ವಜಾಗೊಳಿಸಿತ್ತು.

Exit mobile version