Site icon Vistara News

BJP ಕೈ ಸುಡಲಿದೆ 40%; SCST ಮೀಸಲಾತಿಯಿಂದ ಲಾಭವಿಲ್ಲ: ಲಂಡನ್‌ ವಿವಿ ರಾಜಕೀಯ ವಿಶ್ಲೇಷಕ ಜೇಮ್ಸ್‌ ಮೇನರ್‌ ಅಭಿಮತ

karnataka political oserver james manor says 40 percent allegation could damage bjp prospectus

ಬೆಂಗಳೂರು: ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 40% ಭ್ರಷ್ಟಾಚಾರ ಆರೋಪದಿಂದ ಸಾಕಷ್ಟು ತೊಂದರೆ ಆಗಲಿದೆ ಎಂದು ಲಂಡನ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಜೇಮ್ಸ್‌ ಮೇನರ್‌ ಅಭಿಪ್ರಾಯಪಟ್ಟಿದ್ದಾರೆ. ಹಾಗೂ, ಇತ್ತೀಚೆಗೆ ಬಿಜೆಪಿ ಸರ್ಕಾರ ನಡೆಸಿರುವ ಎಸ್‌ಸಿಎಸ್‌ಟಿ ಮೀಸಲಾತಿಯೂ ಅಷ್ಟೇನೂ ಪ್ರಯೋಜನಕ್ಕೆ ಬಾರದು ಎಂದಿದ್ದಾರೆ.

ಜೇಮ್ಸ್‌ ಮೇನರ್‌ ಸುಮಾರು 50 ವರ್ಷದಿಂದ ಕರ್ನಾಟಕದ ರಾಜಕೀಯವನ್ನು ಅಧ್ಯಯನ ನಡೆಸುತ್ತಿದ್ದಾರೆ. ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ರಾಜ್ಯಕ್ಕೆ ಆಗಮಿಸುವುದರ ಜತೆಗೆ ಅನೇಕ ನಾಯಕರ ಸಂದರ್ಶನ ಮಾಡುತ್ತಾರೆ. ಪ್ರಮುಖ ನಿಯತಕಾಲಿಕೆಗಳಿಗೆ ಲೇಖನ ಹಾಗೂ ಕರ್ನಾಟಕದ ರಾಜಕಾರಣ ಕುರಿತು ಪುಸ್ತಕವನ್ನೂ ರಚಿಸಿದ್ದಾರೆ.

ವಿಧಾನಸಭೆ ಚುನಾವಣೆ ಕುರಿತು ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ ವತಿಯಿಂದ ಆಯೋಜಿಸಲಾಗುತ್ತಿರುವ ಸಂವಾದ ಸರಣಿಯ ಮೊದಲ ಕಾರ್ಯಕ್ರಮದ ಭಾಗವಾಗಿ ಲಂಡನ್ನಿನಿಂದ ಜೂಮ್‌ ಮೂಲಕ ಜೇಮ್ಸ್‌ ಮೇನರ್‌ ಮಂಗಳವಾರ ಭಾಗವಹಿಸಿದರು.

ಮುಖ್ಯವಾಗಿ ಬಿಜೆಪಿಯನ್ನು ಅನೇಕ ವಿಚಾರಗಳು ಬಾಧಿಸುತ್ತಿವೆ ಎಂದು ಜೇಮ್ಸ್‌ ಮೇನರ್‌ ವಿವರಿಸಿದರು. ಈ ಹಿಂದೆ ಕಾಂಗ್ರೆಸ್‌ ಸರ್ಕಾರವನ್ನು 10% ಸರ್ಕಾರ ಎಂದು ಪ್ರಧಾನಿ ಮೋದಿ ದೂಷಿಸಿದ್ದರು. ಆದರೆ ಕಳೆದ ಆಗಸ್ಟ್‌ನಲ್ಲಿ ಗುತ್ತಿಗೆದಾರರ ಸಂಘವು ಬಿಜೆಪಿ ಸರ್ಕಾರದ ವಿರುದ್ಧ 40% ಲಂಚದ ಆರೋಪ ಮಾಡಿದೆ. ಈ ಆರೋಪದ ಕುರಿತು ಸರ್ಕಾರ ತನಿಖೆಯನ್ನೂ ನಡೆಸಿಲ್ಲ. ನಂತರದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ (ಸಂದೇಶ್‌) ಅವರು ಕರ್ನಾಟಕ ಸರ್ಕಾರದಲ್ಲಿರುವ ಭ್ರಷ್ಟಾಚಾರದ ಕುರಿತು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.

ಬಿಜೆಪಿ ಬಳಿ ಇತರೆ ಪಕ್ಷಗಳಿಗಿಂತ ಸುಮಾರು 20 ಪಟ್ಟು ಹೆಚ್ಚಿನ ಹಣವಿದೆ. ಆದರೆ ಕರ್ನಾಟಕದ ಮತದಾರರು ರಾಜಕೀಯವಾಗಿ ಹೆಚ್ಚು ಜಾಗೃತರಾಗಿದ್ದು, ಹಣದಿಂದಲೇ ಚುನಾವಣೆಯನ್ನು ಗೆಲ್ಲಲು ಆಗುವುದಿಲ್ಲ. ಬಿಜೆಪಿಯು ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಕರ್ನಾಟಕ ಚುನಾವಣೆಗೆ ನೆಚ್ಚಿಕೊಂಡಿದೆ. ಆದರೆ ಲೋಕಸಭೆ ಹೊರತುಪಡಿಸಿ 2014ರ ನಂತರ ಪ್ರಧಾನಿ ಮೋದಿ ನಾಯಕತ್ವವನ್ನೇ ಕೇಂದ್ರವಾಗಿಸಿಕೊಂಡ ಅನೇಕ ಚುನಾವಣೆಗಳಲ್ಲಿ ಬಿಜೆಪಿಗೆ ಹಿನ್ನಡೆ ಆಗಿದೆ ಎಂದರು.

ಇತ್ತೀಚೆಗೆ ಕರ್ನಾಟಕ ಸರ್ಕಾರ ಎಸ್‌ಸಿಎಸ್‌ಟಿ ಮೀಸಲು ಪ್ರಮಾಣವನ್ನು ಹೆಚ್ಚಳ ಮಾಡಿದೆ, ಅದರಿಂದ ಬಿಜೆಪಿಗೆ ಎಷ್ಟು ಪ್ರಯೋಜನ ಆಗಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಜೇಮ್ಸ್‌ ಮೇನರ್‌, ಅದರಿಂದ ಹೆಚ್ಚೇನೂ ಪ್ರಯೋಜನ ಆಗುವುದಿಲ್ಲ. ದಲಿತರೊಂದಿಗೆ ಹತ್ತಿರದ ಸಂಪರ್ಕ ಇರಿಸಿಕೊಂಡರೆ ಅದು ಸಾಧ್ಯವಾಗುತ್ತದೆ. ಆದರೆ ಬಿಜೆಪಿಯಲ್ಲಿ ಅಂತಹ ಯಾವುದೇ ನಡೆ ಕಾಣುತ್ತಿಲ್ಲ. ಮುಖ್ಯವಾಗಿ ದಲಿತ ಬಲಗೈ ಮತದಾರರು ಕಾಂಗ್ರೆಸ್‌ ಜತೆಗೆ ಇದ್ದಾರೆ. ಇದೀಗ ಎಐಸಿಸಿ ಅಧ್ಯಕ್ಷರಾಗಿ ಅದೇ ಬಲಗೈ ಸಮುದಾಯದ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾಗಿರುವುದರಿಂದ, ಈ ಮತಗಳು ಬಿಜೆಪಿ ಕಡೆಗೆ ವಾಲುವ ಸಾಧ್ಯತೆ ಕಡಿಮೆ ಎಂದರು.

ಮೂಲ-ವಲಸಿಗ ಬಿಜೆಪಿಗರ ನಡುವೆ ಸಂಘರ್ಷ

ಬಿಜೆಪಿಗೆ ಹೊರಗಿನಿಂದ ಬಂದವರು ಹಾಗೂ ಮೂಲ ಕಾರ್ಯಕರ್ತರ ನಡುವೆ ಸಂಘರ್ಷ ಎದುರಾಗುತ್ತಿದ್ದು, ಇದೂ ಸಹ ಚುನಾವಣೆಯಲ್ಲಿ ಸಮಸ್ಯೆ ತಂದೊಡ್ಡಬಹುದು ಎಂದು ಜೇಮ್ಸ್‌ ಮೇನರ್‌ ಹೇಳಿದರು. ಈ ಪರಿಸ್ಥಿತಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ರಾಜ್ಯ ಚುನಾವಣೆಯಲ್ಲಿ ಅಮಿತ್‌ ಶಾ ಅವರ ನೇರ ಹಸ್ತಕ್ಷೇಪದಿಂದ ಸಾಕಷ್ಟು ಸಮಸ್ಯೆ ಉಂಟಾಗಿದೆ ಎಂದ ಜೇಮ್ಸ್‌ ಮೇನರ್‌, ಈ ಬಾರಿಯೂ ಆ ಅಪಾಯವಿದೆ ಎಂದರು. ವಿವಿಧೆಡೆ ಅನ್ವಯ ಮಾಡಿ ವಿಫಲವಾಗಿದ್ದ ಹಾಗೂ ಕರ್ನಾಟಕ ಬಿಜೆಪಿಗೆ ಸರಿಹೊಂದದ ಅನೇಕ ಯೋಜನೆಗಳನ್ನು ಅನ್ವಯಿಸಲು ಕಳೆದ ಚುನಾವಣೆಯಲ್ಲಿ ಅಮಿತ್‌ ಶಾ ಮುಂದಾಗಿದ್ದರು. ಆದರೆ ಇದರಿಂದ ಸಾಕಷ್ಟು ತೊಂದರೆ ಆಯಿತು. ತೀರಾ ಕೇಂದ್ರೀಕೃತ ವ್ಯವಸ್ಥೆಯಿಂದ ತೊಂದರೆಯಾಯಿತು. ಈ ಬಾರಿಯೂ ಹೀಗೆ ಆಗಲು ಸಾಧ್ಯತೆಯಿದೆ. ಆದರೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಇರುವುದರಿಂದ ಈಗಲೇ ಹೇಳಲು ಸಾಧ್ಯವಿಲ್ಲ ಎಂದರು.

ಡಿಕೆಶಿ ವರ್ಸಸ್‌ ಸಿದ್ದು ಏನಾಗಬಹುದು?
ಕಾಂಗ್ರೆಸ್‌ ಮುಖ್ಯವಾಗಿ ಮೂರು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಜೇಮ್ಸ್‌ ಮೇನರ್‌ ವಿವರಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಮೂಲಕ ಕಾಂಗ್ರೆಸ್‌ ಎಷ್ಟರ ಮಟ್ಟಿಗೆ ಒಕ್ಕಲಿಗ ಮತಗಳನ್ನು ಸೆಳೆಯುತ್ತದೆ ಎನ್ನುವುದು ಮುಖ್ಯ. ಒಕ್ಕಲಿಗ ಮತಗಳು ಜೆಡಿಎಸ್‌ ಬೆನ್ನಿಗಿದ್ದು, ಅದು ಕಾಂಗ್ರೆಸ್‌ಗೆ ಲಭಿಸುತ್ತದೆಯೇ ಎಂದು ಕಾದು ನೋಡಬೇಕು. ಎರಡನೆಯದಾಗಿ, ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಬಣಗಳ ನಡುವಿನ ವಿರಸ ಕಾಂಗ್ರೆಸ್‌ಗೆ ಎಷ್ಟರ ಮಟ್ಟಿಗೆ ಹಾನಿ ಮಾಡುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೂರನೆಯದಾಗಿ, ಒಬಿಸಿ ಮತಗಳನ್ನು ಕಾಂಗ್ರೆಸ್‌ ಎಷ್ಟು ಪಡೆಯುತ್ತದೆ ಎನ್ನುವುದೂ ಸವಾಲಾಗಿದೆ ಎಂದರು.

ಬಿಜೆಪಿ ಶಾಸಕರು ಕಳೆಗುಂದಿದ್ದಾರೆ

ಪ್ರತಿ ಚುನಾವಣೆಯಲ್ಲೂ ಪ್ರಧಾನಿ ಮೋದಿ ಅವರನ್ನೇ ಮುಂದಿಟ್ಟುಕೊಂಡು ಹೋಗುವ ಕಾರಣಕ್ಕೆ ಹಾಗೂ ಇನ್ನಿತರೆ ಕಾರಣಕ್ಕೆ ಬಿಜೆಪಿ ಶಾಸಕರು ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಜೇಮ್ಸ್‌ ಮೇನರ್‌ ಅಭಿಪ್ರಾಯಪ್ಟರು. ಸರ್ಕಾರದ ಸವಲತ್ತುಗಳನ್ನು ಜನರಿಗೆ ಹೆಚ್ಚೆಚ್ಚು ತಲುಪಿಸಿದರೆ ಶಾಸಕರು ಜನಪ್ರಿಯರಾಗುತ್ತಾರೆ. ಆದರೆ ಈಗಾಗಲೆ ತಿಳಿಸಿದಂತೆ ಒಂದು ಕಡತವನ್ನು ಮುಂದೆ ಕೊಂಡೊಯ್ಯಬೇಕಾದರೂ ಸರ್ಕಾರದಲ್ಲಿ ಬಹಳ ಕಷ್ಟ ಇರುವುದರಿಂದ ಶಾಸಕರ ಜನಪ್ರಿಯತೆ ಕುಸಿಯುತ್ತಿದೆ. ಚುನಾವಣೆ ಹತ್ತಿರವಾದಂತೆ ಈ ಕುಸಿತ ಮತ್ತಷ್ಟು ತೀವ್ರವಾಗಬಹುದು ಎಂದರು.

ಒಟ್ಟಾರೆ ಸದ್ಯದ ಮಟ್ಟಿಗೆ ಬಿಜೆಪಿ ೬೦-೭೦, ಕಾಂಗ್ರೆಸ್‌ 70-80 ಹಾಗೂ ಜೆಡಿಎಸ್‌ 20-25 ಸೀಟ್‌ ಪಡೆಯುವ ಸಾಧ್ಯತೆಯಿದೆ ಎಂದು ಹೇಳಿದರು.

ಇದನ್ನೂ ಓದಿ | ʼನಾನು ಚಾಮರಾಜಪೇಟೆ ಅಳಿಯʼ: ಚುನಾವಣೆ ಸ್ಪರ್ಧೆಯ ಮುನ್ಸೂಚನೆ ಕೊಟ್ಟ ಸಿದ್ದರಾಮಯ್ಯ

Exit mobile version