Site icon Vistara News

Karnataka Politics : 2024ಕ್ಕೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಖಚಿತ; ಡಿಕೆಶಿ ಜತೆ ಇನ್ನೆಂದೂ ಕೈಜೋಡಿಸಲ್ಲ: ಎಚ್‌ಡಿಕೆ

HD Kumaraswamy in Ramananagara

ರಾಮನಗರ: ಪಬ್ಲಿಕ್‌ನಲ್ಲಿ ನನ್ನ ಕೈ ಮೇಲೆ ಎತ್ತಿ ಜೋಡೆತ್ತು ಎಂದು ಹೇಳಿದ ನಯವಂಚಕ ಮಾತುಗಳನ್ನು ನಂಬಿ ಮೋಸ ಹೋದೆ. ಆಮೇಲೆ ಅವರು ನನ್ನನ್ನು ನಡು ರಸ್ತೆಯಲ್ಲಿ ಕೈ ಬಿಟ್ಟು ಎತ್ತು, ಗಾಡಿಯೊಂದಿಗೆ ಪಲಾಯನ ಮಾಡಿದರು. ಡಿ.ಕೆ. ಶಿವಕುಮಾರ್‌ ಜತೆ ಇನ್ನೆಂದೂ ಕೈಜೋಡಿಸಲಾರೆ. ಅವರು ತಿಹಾರ್‌ ಜೈಲಿಗೆ ಹೋಗುವುದು ಖಚಿತ. ಇನ್ನು 2024ಕ್ಕೆ ವಿಧಾನಸಭಾ ಚುನಾವಣೆ (Assembly election) ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (Former Chief Minister HD Kumaraswamy) ಅವರು ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ (Deputy CM DK Shivakumar) ಅವರ ವಿರುದ್ಧ ಹರಿಹಾಯ್ದರು. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Karnataka Politics) ಮಹತ್ತರ ಬದಲಾವಣೆಗಳಾಗಲಿವೆ ಎಂಬ ಸುಳಿವನ್ನು ನೀಡಿದರು.

ಬಿಡದಿಯ ತಮ್ಮ ತೋಟದಲ್ಲಿ ನಡೆದ ರಾಮನಗರ ಜಿಲ್ಲಾ ಜೆಡಿಎಸ್ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, 2018ರಲ್ಲಿ ಸರ್ಕಾರ ಪತನವಾಗಿದ್ದು ಡಿ.ಕೆ.ಶಿವಕುಮಾರ್ ಅವರಿಂದಲೇ ಹೊರತು ನನ್ನಿಂದ ಅಲ್ಲ. ನನಗೂ ರಮೇಶ್ ಜಾರಕಿಹೊಳಿ ಅವರಿಗೂ ವೈಷಮ್ಯ ಇತ್ತಾ? ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜಕೀಯಕ್ಕೆ ನಾನು ಬಲಿಪಶುವಾದೆ. ಅವರು ಬೆಳಗಾವಿ ರಾಜಕೀಯಕ್ಕೆ ಕೈಹಾಕಿದ್ದು ಯಾಕೆ? ನಾನು ಕುಮಾರಣ್ಣನ ಸರ್ಕಾರ ಉಳಿಸೋಕೆ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಮೊಸಳೆ ಕಣ್ಣೀರು ಹಾಕಿ ಪ್ರಚಾರ ತೆಗೆದುಕೊಂಡರು. ಆಮೇಲೆ ನೋಡಿದರೆ ಒಳಗೊಳಗೇ ಮಾಡುವುದೆಲ್ಲವನ್ನು ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಕನಕಪುರ ಕ್ಷೇತ್ರದ ಮುಖಂಡರ ಪ್ರಶ್ನೆಗಳಿಗೆ ಉತ್ತರಿಸಿದ ಎಚ್.ಡಿ. ಕುಮಾರಸ್ವಾಮಿ, ಅವರನ್ನು ನಂಬಿ ನಾನು ಕುತ್ತಿಗೆ ಕುಯ್ದುಕೊಂಡಿದ್ದೇನೆ, ನಿಮ್ಮ ಕುತ್ತಿಗೆಯನ್ನು ಕುಯ್ದಿದ್ದೇನೆ. ಅವರಿಂದ ನನಗೆ, ನಿಮಗೆ ಅನ್ಯಾಯ ಆಗಿದೆ. ಅದನ್ನು ಬಿಟ್ಟರೆ ಕನಕಪುರ ಜನರಿಗೆ ನನ್ನಿಂದ ಎಳ್ಳಷ್ಟೂ ಅನ್ಯಾಯ ಆಗಿಲ್ಲ. ಆಗಿರುವ ಅನ್ಯಾಯ ಸರಿ ಮಾಡುವ ಹೊಣೆ ನನ್ನದು ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸೋಣ

ಕೋಟೆ ಕಟ್ಟಿ ಮೆರೆದೋರೆಲ್ಲ ಏನೇನೋ ಆಗಿ ಹೋದರು. ಅದು ಇವರಿಗೂ ಅನ್ವಯ ಆಗುತ್ತದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ 2ರಿಂದ 3 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಬೇಕು. ಅದಕ್ಕೆ ನೀವೆಲ್ಲರೂ ಶ್ರಮ ಹಾಕಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಈ ಮೈತ್ರಿಕೂಟದ ಮೂಲಕ ಇಡೀ ರಾಜ್ಯಕ್ಕೆ ದೇಶಕ್ಕೆ ನಾವು ಒಳ್ಳೆಯ ಸಂದೇಶ ಕೊಡಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಅವರು ನಮಗೆ ಕೇಡು ಬಗೆದರು

ನಾವೆಲ್ಲರೂ ನಂಬಿಕೆ, ವಿಶ್ವಾಸ, ಪ್ರಾಮಾಣಿಕತೆಯಿಂದ ಕೆಲಸ ಮಾಡೋಣ. ಯಾರೇ ಮೈತ್ರಿಕೂಟದ ಅಭ್ಯರ್ಥಿ ಆದರೂ ನಾವು ಒಟ್ಟಾಗಿ ಕೆಲಸ ಮಾಡೋಣ ಎಂದ ಎಚ್.ಡಿ. ಕುಮಾರಸ್ವಾಮಿ, ಮಂಡ್ಯ ಚುನಾವಣೆಯಲ್ಲಿ ನಿಖಿಲ್ ಅವರಿಗೆ ಮೋಸ ಮಾಡಿದ ಹಾಗೆ ಇಲ್ಲಿಯೂ ನಾವು ಮಾಡಿದ್ದಿದ್ದರೆ ಆ ವ್ಯಕ್ತಿಯ (ಡಿ.ಕೆ. ಸುರೇಶ್) ಕಥೆ ಅಂದೇ ಮುಗಿದು ಹೋಗುತ್ತಿತ್ತು. ಆದರೆ, ನಾವು ಮೈತ್ರಿ ಧರ್ಮ ಪಾಲಿಸಿದೆವು. ಅವರು ನಮಗೆ ಕೇಡು ಬಗೆದರು ಎಂದು ಎಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದರು.

2024ರಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಖಚಿತ

ಈ ಸರ್ಕಾರದ ಪಾಪದ ಕೊಡ ತುಂಬುತ್ತಿದೆ. ಇಷ್ಟು ಕೆಟ್ಟ ಸರ್ಕಾರವನ್ನು ನಾನು ನೋಡಿಯೇ ಇಲ್ಲ. ಆಂತರಿಕ ಕಚ್ಚಾಟದಿಂದ ಈ ಸರ್ಕಾರ ಹೋಗುತ್ತದೆ. 2024ರಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುವುದು ಖಚಿತ. ಆ ಚುನಾವಣೆಗೆ ಆ ವ್ಯಕ್ತಿ ಅಭ್ಯರ್ಥಿ ಆಗುವುದೇ ಅನುಮಾನ, ಏನು ಆಗುತ್ತದೆ ಎನ್ನುವುದು ನನಗೆ ಗೊತ್ತಿದೆ ಎಂದು ಡಿಕೆಶಿ ಮೇಲೆ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಡಿಕೆಶಿ ಜತೆ ಎಂದೂ ರಾಜಿ ಇಲ್ಲ

ಜೀವನದಲ್ಲಿ ಅವರ (ಡಿಕೆಶಿ) ಜತೆ ಎಂದೂ ರಾಜಿ ಆಗಲ್ಲ. ಒಮ್ಮೆ ಅವರ ಜತೆ ಸರ್ಕಾರ ಮಾಡಿದ್ದರಿಂದ ನಾನು ಈಗಲೂ ನೋವು ಅನುಭವಿಸುತ್ತಾ ಇದ್ದೇನೆ. ಅವರು ಒಮ್ಮೆ ತಿಹಾರ್ ನೋಡಿಕೊಂಡು ಬಂದಿದ್ದಾರೆ.
ಅವರು ಮತ್ತೆ ಅಲ್ಲಿಗೆ ಪರ್ಮನೆಂಟಾಗಿ ಹೋದರೂ ಅಚ್ಚರಿ ಅಲ್ಲ. ನಮ್ಮನ್ನು ಹಾಸನಕ್ಕೆ ಓಡಿಸಬಹುದು, ಅವರು ತಿಹಾರ್‌ಗೆ ಓಡುವ ಕಾಲ ಹತ್ತಿರದಲ್ಲಿ ಇದೆ ಎಂದು ಎಚ್‌.ಡಿ. ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.

ಶಾಮನೂರು ಶಿವಶಂಕರಪ್ಪನವರು ಧೈರ್ಯವಾಗಿ ಮಾತನಾಡಿದ್ದಾರೆ

ವೀರಶೈವ ಲಿಂಗಾಯತರಿಗೆ ಎಷ್ಟು ಸ್ಥಾನ ಕೊಟ್ಟಿದ್ದೇವೆ ಎಂದು ಸಂಖ್ಯೆ ಹೇಳುವುದಲ್ಲ, ಯಾವ ಸ್ಥಾನ ಕೊಟ್ಟಿದ್ದೀರಿ ಎನ್ನುವುದು ಮುಖ್ಯ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಸಭೆಯ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದ ಎಚ್‌.ಡಿ. ಕುಮಾರಸ್ವಾಮಿ, ಶಾಮನೂರು ಶಿವಶಂಕರಪ್ಪನವರು ತಮ್ಮ ಅಭಿಪ್ರಾಯವನ್ನು ಧೈರ್ಯವಾಗಿ ಹೇಳಿದ್ದಾರೆ. ಇಲ್ಲಿ ಸಂಖ್ಯೆಗಿಂತ ಇಲಾಖೆಯಲ್ಲಿ ಯಾವ್ಯಾವ ಅಧಿಕಾರಿಗೆ ಯಾವ ಇಲಾಖೆ ಕೊಟ್ಟಿದ್ದಾರೆ ಎಂಬುದು ಮುಖ್ಯ. ಕೆಲಸಕ್ಕೆ ಬಾರದ ಜಾಗ ಕೊಟ್ಟು, ಇಂತಹ ಸಮುದಾಯಕ್ಕೆ ಇಷ್ಟು ಸಂಖ್ಯೆ ಕೊಟ್ಟಿದ್ದೇವೆ ಎಂದರೆ ಅದರಿಂದ ಏನು ಉಪಯೋಗ? ಅವರು ಧೈರ್ಯವಾಗಿ ಹೇಳಿದ್ದಾರೆ ಎಂದರು.

ಇದನ್ನೂ ಓದಿ: JDS BJP alliance : ಜೆಡಿಎಸ್ – ಬಿಜೆಪಿ ಮೈತ್ರಿಗೆ ರಾಮನಗರ ಮುಖಂಡರ ಸಮ್ಮತಿ; ಡಿವಿಜನ್‌ ಮಟ್ಟದ ಸಭೆಗೆ ಎಚ್‌ಡಿಕೆ ಮುಂದು

ಹಲವಾರು ಸಮುದಾಯಗಳಿಗೂ ಪರಿಸ್ಥಿತಿ ಏನಾಗಿದೆ ಎನ್ನುವುದು ಗೊತ್ತಿದೆ. ಆ ಮಾನದಂಡ ಏನಿದೆ ಎಂಬುದು ಕೂಡ ನನಗೆ ಗೊತ್ತಿದೆ. ಅಧಿಕಾರಿಗಳು ಮತ್ತು ನೌಕರರ ವರ್ಗದವರಲ್ಲಿ ಅಸಮಾಧಾನ ಇದೆ. ಇದು ಚುನಾವಣೆಯ ಸಂದರ್ಭದಲ್ಲಿ ಸ್ಫೋಟಗೊಳ್ಳಲಿದೆ ಎಂದು ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

Exit mobile version