Site icon Vistara News

ಅಂದು ಆಡ್ವಾಣಿಗೇ ಆವಾಜ್‌ ಹಾಕಿದವರು ಇಂದು ರಾಜ್ಯಸಭೆ ಸದಸ್ಯರಾದರು !

rajyasabha election 2022 nirmala seetharaman jairam ramesh lehar singh jaggesh new_edited

ರಮೇಶ ದೊಡ್ಡಪುರ ಬೆಂಗಳೂರು
ʼಆಡ್ವಾಣಿ ಜಿ, ನೀವು ಸರಿಯಾಗಿದ್ದಿದ್ದರೆ ನಮಗ್ಯಾಕೆ ಇಂಥ ಸ್ಥಿತಿ ಬರುತ್ತಿತ್ತು? ನಿಮ್ಮಿಂದಲೇ ಇಂದು ಬಿಜೆಪಿ ಇಂತಹ ಅವಮಾನ ಅನುಭವಿಸುತ್ತಿದೆ”. ಸರಿಯಾಗಿ ಒಂಭತ್ತು ವರ್ಷದ ಹಿಂದೆ ಇಂತಹದ್ದೇ ಪದಗಳನ್ನು ಬಿಜೆಪಿಯ ಭೀಷ್ಮ ಎಲ್‌.ಕೆ. ಆಡ್ವಾಣಿ ಅವರಿಗೆ ಬರೆದು ಪಕ್ಷದ ರಾಜ್ಯ ಖಜಾಂಚಿ ಸ್ಥಾನ ಕಳೆದುಕೊಂಡಿದ್ದಷ್ಟೆ ಅಲ್ಲದೆ ಉಚ್ಚಾಟನೆ ಶಿಕ್ಷೆಗೆ ಒಳಗಾಗಿದ್ದವರು ಇಂದು ಅದೇ ಬಿಜೆಪಿಯಲ್ಲಿ ರಾಜ್ಯಸಭೆ ಸದಸ್ಯರಾಗಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ನಾಲ್ಕನೇಯವರಾಗಿ ಬಿಜೆಪಿಯಿಂದ ಆಯ್ಕೆಯಾದವರು 73 ವರ್ಷದ ಲೆಹರ್‌ಸಿಂಗ್‌ ಸಿರೋಯಾ. ಸತತ ಭ್ರಷ್ಟಾಚಾರ, ರಿಪಬ್ಲಿಕ್‌ ಆಫ್‌ ಬಳ್ಳಾರಿ ಮೆರೆದಾಟ, ಮೂರು ಮುಖ್ಯಮಂತ್ರಿಗಳು, ಜೈಲಿಗೆ ಹೋದ ಮುಖ್ಯಮಂತ್ರಿ… ಇಂತಹ ಸಾಲುಸಾಲು ಅಪಸವ್ಯಗಳನ್ನು ಕಂಡ ಬಿಜೆಪಿ ಸರ್ಕಾರ(ಗಳು) 2013ರವರೆಗೆ ರಾಜ್ಯದಲ್ಲಿತ್ತು. 2008ರಲ್ಲಿ ಪಡೆದಿದ್ದ 110 ಸ್ಥಾನಗಳನ್ನು ಸರಳ ಬಹುಮತಕ್ಕೆ ಹೆಚ್ಚಿಸಿಕೊಂಡು ಐದು ವರ್ಷ ನಿರಾತಂಕವಾಗಿ ಆಡಳಿತ ನಡೆಸಬೇಕೆಂಬ ಬಿ.ಎಸ್‌. ಯಡಿಯೂರಪ್ಪ ಆಸೆಯು ಅವರನ್ನು ಬಳ್ಳಾರಿ ಗಣಿ ಧಣಿಗಳ ತೆಕ್ಕೆಗೆ ಕೆಡವಿತು.

ಕೊನೆಗೆ ಆಪರೇಷನ್‌ ಕಮಲದಂತಹ ಬ್ಯಾಡ್‌ ಬ್ರ್ಯಾಂಡ್‌ ಅಂಬಾಸಡಾರ್‌ ಆಗಿ ಅಪಮಾನಕರವಾಗಿ ಜೈಲಿಗೆ ತೆರಳುವವರೆಗೆ ಯಡಿಯೂರಪ್ಪ ಕಷ್ಟ ಅನುಭವಿಸಿದರು. ಇದೆಲ್ಲದರ ನಂತರ 2013ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕಿದ್ದು ಕೇವಲ 40 ಸ್ಥಾನ. ನಂತರ ನಡೆದ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರ ಹಿಡಿದರು.

ಈ ಸಮಯದಲ್ಲಿ ಬಿಜೆಪಿ ಭೀಷ್ಮ ಎಂದೇ ಖ್ಯಾತರಾಗಿದ್ದ ಎಲ್‌.ಕೆ. ಆಡ್ವಾಣಿಯವರು ತಮ್ಮ ಬ್ಲಾಗ್‌ನಲ್ಲಿ ಕರ್ನಾಟಕ ಚುನಾವಣೆ ಬಗ್ಗೆ ಬರೆದುಕೊಂಡರು. ಇದಕ್ಕೆ ಮುನ್ನವೂ ಯಡಿಯೂರಪ್ಪ ಕುರಿತು ಅಸಮಾಧಾನ ಹೊರಹಾಕಿದ್ದ ಆಡ್ವಾಣಿ ಈ ಬಾರಿ ನೇರವಾಗಿ ಭ್ರಷ್ಟಾಚಾರ ವಿಚಾರ ಪ್ರಸ್ತಾಪಿಸಿದ್ದರು. ʼಕರ್ನಾಟಕದಲ್ಲಿ ಬಿಜೆಪಿಯ ಹೀನಾಯ ಸೋಲು ನನಗೆ ಅಚ್ಚರಿ ಉಂಟುಮಾಡಿಲ್ಲ. ಏಕೆಂದರೆ ಇದು ನಿರೀಕ್ಷಿತವಾಗಿತ್ತು. ಬಿಜೆಪಿಯೇನಾದರೂ ಗೆದ್ದಿದ್ದರೆ ಅಚ್ಚರಿಯಾಗುತ್ತಿತ್ತುʼ ಎಂದಿದ್ದರು.

ಇದನ್ನೂ ಓದಿ | ರಾಜ್ಯಸಭೆ ಚುನಾವಣೆ: ಬಿಜೆಪಿ, ಕಾಂಗ್ರೆಸ್‌ಗೆ ಎರಡು ರಾಜ್ಯಗಳಲ್ಲಿ ತಲಾ ನಾಲ್ಕು ಸ್ಥಾನ, ಹರಿಯಾಣ, ಮಹಾರಾಷ್ಟ್ರ ಫಲಿತಾಂಶ ವಿಳಂಬ

ಮುಂದುವರಿದಿದ್ದ ಆಡ್ವಾಣಿ, ಯಡಿಯೂರಪ್ಪ ಭ್ರಷ್ಟಾಚಾರ ಆರಂಭಿಸಿದಾಗಲೇ ಅವರನ್ನು ಪಕ್ಷದಿಂದ ಕಿತ್ತು ಹಾಕಿದ್ದರೆ ಇದೆಲ್ಲ ಸಮಸ್ಯೆಯೇ ಬರುತ್ತಿರಲಿಲ್ಲ ಅದರ ಬದಲಿಗೆ ನಾವು ಅವರನ್ನು ಮನವೊಲಿಸಲು ಆರಂಭಿಸಿದೆವು. ಅವರ ಎಲ್ಲ ಕೃತ್ಯಗಳನ್ನೂ ತಿಂಗಳುಗಟ್ಟಲೆ ಸಹಿಸಿಕೊಂಡೆವು. ದಕ್ಷಿಣದಲ್ಲಿ ಅಧಿಕಾರಕ್ಕೆ ಬಂದ ಏಕೈಕ ಸರ್ಕಾರವನ್ನು ಕಳೆದುಕೊಳ್ಳುವುದು ನಮಗೆ ಇಷ್ಟವಿರಲಿಲ್ಲ. ಇದೆಲ್ಲದರ ನಂತರ ಯಡಿಯೂರಪ್ಪ ಕೆಜೆಪಿ ಸ್ಥಾಪಿಸಿದರು. ನಾವು ಪರಿಸ್ಥಿತಿಗೆ ಸರಿಯಾಗಿ ಸ್ಪಂದಿಸಲಿಲ್ಲʼ ಎಂದು ವಿವರವಾಗಿ ತಿಳಿಸಿದ್ದರು.

ಆಡ್ವಾಣಿಯವರ ಈ ಮಾತುಗಳು ಯಡಿಯೂರಪ್ಪ ಅವರ ಹಿಂಬಾಲಕ ಎಂದೇ ಕರೆಸಿಕೊಂಡಿದ್ದ ಲೆಹರ್‌ಸಿಂಗ್‌ ಸಿರೋಯಾ ಅವರನ್ನು ಕೆರಳಿಸಿತ್ತು. ಆದರೂ, ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದರೂ ಲೆಹರ್‌ಸಿಂಗ್‌ ಮಾತ್ರ ಬಿಜೆಪಿಯಲ್ಲೆ ಉಳಿದಿದ್ದರು. ಪ್ರಲ್ಹಾದ ಜೋಶಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾಗ ರಾಜ್ಯ ಖಜಾಂಚಿಯಾಗಿ ನೇಮಕವಾದರು. ಭ್ರಷ್ಟಾಚಾರದ ಕುರಿತು ಮಾತನಾಡಿದ್ದ ಆಡ್ವಾಣಿ ಲೇಖನಕ್ಕೆ ಲೆಹರ್‌ಸಿಂಗ್‌ ಖಾರವಾಗಿ ಪ್ರತಿಕ್ರಿಯಿಸಿದರು.

(13 ಮೇ 2013) ಪಕ್ಷವು ಸೋತಾಗ ನಿಮ್ಮಂತಹ ಹಿರಿಯರು ನಮಗೆ ಸಮಾಧಾನ ಹೇಳುವ ಬದಲಿಗೆ ವ್ಯಂಗ್ಯ ಮಾಡುತ್ತಿರುವುದು ಅಚ್ಚರಿ ತಂದಿದೆ. ಈ ಹಿಂದೆಯೂ ಭ್ರಷ್ಟಾಚಾರದ ಕುರಿತು ನೀವು ಇಷ್ಟೇ ಕಠಿಣವಾಗಿದ್ದರೆ ಪಕ್ಷ ಇಂತಹ ಸ್ಥಿತಿಗೆ ಬರುತ್ತಿರಲಿಲ್ಲ. ಈ ಹಿಂದೆ ರಾಜ್ಯದಲ್ಲಿ ಚುನಾವಣೆ ನಡೆದಾಗ ಹಣ ಹರಿದು ಬಂದಿದ್ದು ಎಲ್ಲಿಂದ ಎಂದು ನೀವು ಪ್ರಶ್ನಿಸಲಿಲ್ಲ. ರಾಜ್ಯದಿಂದ 19 ಸಂಸದರನ್ನು ಜಯಿಸಿ ಕಳಿಸಿದಾಗ ಅದಕ್ಕೆ ಹಣ ಎಲ್ಲಿಂದ ವೆಚ್ಚ ಮಾಡಿದಿರಿ ಎಂದು ನೀವು ಕೇಳಲಿಲ್ಲ. ಆಪರೇಷನ್‌ ಕಮಲಕ್ಕೆ ಹಣ ಎಲ್ಲಿಂದ ಬಂತು ಎಂದು ನೀವು ಕೇಳಲಿಲ್ಲ. ಹೋಗಲಿ, ಹಿಂದಿನ ನಿಮ್ಮ ಯಾತ್ರೆಗಳಿಗೆ ಹಣ ಎಲ್ಲಿಂದ ಬಂತು ಎಂದೂ ನೀವು ಕೇಳಲಿಲ್ಲ.

ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ಜೈರಾಮ್‌, ನಿರ್ಮಲಾ ಜಗ್ಗೇಶ್‌ ʼಮೊದಲ ಪ್ರಾಶಸ್ತ್ಯʼದ ಗೆಲುವು

ಈಗ ನೀವು ತೆಗಳುತ್ತಿರುವ ಗಣಿ ಮಾಫಿಯಾ ನಿಮ್ಮ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದಾಗ ಭ್ರಷ್ಟಾಚಾರದ ಕುರಿತು ನಿಮಗೆ ಚಿಂತೆ ಆಗಿರಲಿಲ್ಲ. ಇಂತಹ ಗಣಿ ಧಣಿಗಳನ್ನು ಬೆಂಬಲಿಸಿದ ಸುಷ್ಮಾ ಸ್ವರಾಜ್‌ ಅವರನ್ನೇ ನೀವು ಬೆಂಬಲಿಸಿದಿರಿ. ಸುಷ್ಮಾ ಅವರನ್ನು ಆಟಲ್‌ಬಿಹಾರಿ ವಾಜಪೇಯಿಯವರಿಗೆ ಹೋಲಿಕೆ ಮಾಡಿದಿರಿ. ನೀವು ಈ ಹಿಂದೆಯೇ ಇದೆಲ್ಲವನ್ನೂ ಪ್ರಶ್ನಿಸಿದ್ದರೆ ಅಥವಾ ಸರಿಪಡಿಸಿದ್ದರೆ ಕರ್ನಾಟಕದಲ್ಲಿ ಪಕ್ಷ ಇಂತಹ ಸ್ಥಿತಿಗೆ ಬರುತ್ತಿರಲಿಲ್ಲ ಎಂದು ಲೆಹರ್‌ಸಿಂಗ್‌ ಆಕ್ರೋಶ ಹೊರಹಾಕಿದ್ದರು.

ಈ ಪತ್ರ ರಾಜ್ಯ ಹಾಗೂ ರಾಷ್ಟ್ರೀಯ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಪತ್ರ ಬರೆದು ಐದು ದಿನದ ನಂತರ ರಾಜ್ಯ ಖಜಾಂಚಿ ಸ್ಥಾನದಿಂದ ಲೆಹರ್‌ಸಿಂಗ್‌ ಅವರನ್ನು ಕಿತ್ತೆಸೆಯಲಾಯಿತು ಹಾಗೂ ಪಕ್ಷದಿಂದ ಅಮಾನತು ಮಾಡಲಾಯಿತು.

ನರೇಂದ್ರ ಮೋದಿ ಗುಜರಾತ್‌ ಸಿಎಂ ಆಗಿದ್ದಾಗಿನಿಂದಲೇ ಅವರನ್ನು ಹೊಗಳುತ್ತ ಬಂದವರು ಲೆಹರ್‌ ಸಿಂಗ್‌. ಆಗಿನ್ನೂ ಮೋದಿಯವರ ಕುರಿತು ಹೊಗಳಲು ಹಿಂದೆ ಮುಂದೆ ಯೋಚಿಸುವ ಸ್ಥಿತಿ ಇತ್ತು. ಎಲ್ಲಿ ಆಡ್ವಾಣಿ ಬೇಸರಪಟ್ಟುಕೊಳ್ಳುತ್ತಾರೊ ಎಂಬ ಸಮಯದಲ್ಲಿ ಮೋದಿಯನ್ನು ಹೊಗಳಿ ಪಕ್ಷದೊಳಗೆ ದೂಷಣೆಗೆ ಒಳಗಾಗಿದ್ದರು. ಮೋದಿ ಜತೆಗೇ ಯಡಿಯೂರಪ್ಪ ಅವರ ಅನುಯಾಯಿ ಎಂದೇ ಗುರುತಿಸಿಕೊಂಡವರು.

ಆಗಲೂ ಎರಡನೇ ಪ್ರಾಶಸ್ತ್ಯದಲ್ಲೇ ಜಯ

ನಂತರ 2014ರಲ್ಲಿ ಯಡಿಯೂರಪ್ಪ ಬಿಜೆಪಿಗೆ ವಾಪಸಾಗಿ ರಾಜ್ಯ ಅಧ್ಯಕ್ಷರಾದರು. 2016ರಲ್ಲಿ ಬಿಜೆಪಿಯಿಂದ ವಿಧಾನಪರಿಷತ್‌ಗೆ ಲೆಹರ್‌ಸಿಂಗ್‌ ಆಯ್ಕೆಯಾದರು. ಆಗ ಬಿಜೆಪಿಯ ವಿ. ಸೋಮಣ್ಣ ಅವರು ಪ್ರಥಮ ಪ್ರಾಶಸ್ತ್ಯದ ಮತದಿಂದ ಜಯಿಸಿದರು. ಹೆಚ್ಚುವರಿ ಮತಗಳ ಜತೆಗೆ ಪಕ್ಷೇತರರು ಹಾಗೂ ಇನ್ನಿತರರನ್ನು ʼತಮ್ಮತ್ತ ಸೆಳೆದುʼ ಲೆಹರ್‌ ಸಿಂಗ್‌ ಜಯಗಳಿಸಿದ್ದರು. ಇದೀಗ 2022ರ ರಾಜ್ಯಸಭೆ ಚುನಾವಣೆಯಲ್ಲೂ ಬಿಜೆಪಿಯ ಹೆಚ್ಚುವರಿ ಮತಗಳ ಜತೆಗೆ ಇತರೆ ಮತಗಳನ್ನು ʼತಮ್ಮತ್ತ ಸೆಳೆದುʼ ಜಯಗಳಿಸಿದ್ದಾರೆ. ತಮ್ಮ ನೆಚ್ಚಿನ ನರೇಂದ್ರ ಮೋದಿಯವರು ಇರುವ ಸಂಸತ್‌ ಭವನವನ್ನು ಪ್ರವೇಶಿಸಲು ಲೆಹರ್‌ಸಿಂಗ್‌ ಸಜ್ಜಾಗಿದ್ದಾರೆ.

ಇದನ್ನೂ ಓದಿ | ಇಂದು ರಾಜ್ಯಸಭೆ ಮತದಾನ, ಫಲಿತಾಂಶ ಘೋಷಣೆ ಪ್ರಕ್ರಿಯೆ ನಡೆಯುವುದು ಹೀಗೆ

Exit mobile version