ಬೆಂಗಳೂರು: ರಾಜ್ಯ ಸರ್ಕಾರದ ಮೇಲೆ ಕೇಳಿಬಂದಿರುವ ಫೋನ್ ಕದ್ದಾಲಿಕೆ (Phone tapping) ಆರೋಪವು ದಿನೇ ದಿನೆ ವಾಕ್ಸಮರಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ಮೊದಲು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದ್ದರು. ಬಳಿಕ ಇದಕ್ಕೆ ಧ್ವನಿಗೂಡಿಸಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಹೇಳಿದ್ದರು. ಈಗ ಇದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದು, ಅಶೋಕ್ ಅವರಿಗೆ ಗೃಹ ಸಚಿವರಿಗೆ ಬರವಣಿಗೆ ಮೂಲಕ ದೂರು ಕೊಡಲು ಹೇಳಿ ಎಂದು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಸರ್ಕಾರ ಫೋನ್ ಕದ್ದಾಲಿಕೆ ಮಾಡುತ್ತಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಕ್ಕೆ ತಿರುಗೇಟು ನೀಡಿದರು.
ಫೋನ್ ಕದ್ದಾಲಿಕೆ ಆಗುತ್ತಿದೆ ಎಂದಾದರೆ ಈ ಬಗ್ಗೆ ಗೃಹ ಸಚಿವರಿಗೆ ಬರವಣಿಗೆ ಮೂಲಕ ದೂರು ಕೊಡಲಿ. ಅವರ ಕಾಲದಲ್ಲೆಲ್ಲ ಮಾಡಿದ್ದರಲ್ಲವೇ? ಯಾರ ಯಾರ ಕಾಲದಲ್ಲಿ ಫೋನ್ ಕದ್ದಾಲಿಕೆ ಮಾಡಿದ್ದಾರೆಂಬುದು ಗೊತ್ತಿದೆ. ಅಶೋಕ್ ಹೋಮ್ ಮಿನಿಸ್ಟರ್ ಆಗಿದ್ದವರು, ಕೆಲವರು ಚೀಫ್ ಮಿನಿಸ್ಟರ್ ಆಗಿದ್ದವರು ಮಾಡಿರುವ ಫೋನ್ ಟ್ಯಾಪಿಂಗ್ ಬಗ್ಗೆ ನಮಗೂ ರಿಪೋರ್ಟ್ ಬಂದಿತ್ತು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ನಿಮ್ಮ ಸುತ್ತ ಮುತ್ತ ಇರುವವರೇ ಮಾಹಿತಿ ನೀಡಿದ್ದಾರೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಬಹಳ ಸಂತೋಷ. ಅವರು ಯಾರು ಯಾರು ಮಾಹಿತಿ ಕೊಟ್ಟಿದ್ದಾರೆಂಬುದರ ಬಗ್ಗೆ ಅಪ್ಡೇಟ್ ಕೊಡುವುದಕ್ಕೆ ಹೇಳಿ ಎಂದು ಮಾಧ್ಯಮವರಿಗೆ ಹೇಳಿದರು.
ಸಿಬಿಐಗೆ ಫೋನ್ ಕದ್ದಾಲಿಕೆ ಪ್ರಕರಣ ವಹಿಸಲಿ: ಸರ್ಕಾರಕ್ಕೆ ಅಶೋಕ್ ಸವಾಲು
ಫೋನ್ ಕದ್ದಾಲಿಕೆಯನ್ನು ರಾಜ್ಯ ಸರ್ಕಾರವೇ ಮಾಡುತ್ತಿದೆ. ಇದು ಸುಳ್ಳು ಎಂದಾದರೆ ಕೂಡಲೇ ಈ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲಿ. ಅವರು ತಪ್ಪು ಮಾಡಿಲ್ಲ ಎಂದಾದರೆ ಕೂಡಲೇ ಸಿಬಿಐಗೆ ತನಿಖೆ ಹೊಣೆಯನ್ನು ಒಪ್ಪಿಸಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ಮಂಗಳವಾರ ಮಾಧ್ಯಮದವರ ಮುಂದೆ ಸವಾಲು ಹಾಕಿದ್ದರು.
ಫೋನ್ ಟ್ಯಾಪಿಂಗ್ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಅವರಿಗೆ ಪೊಲೀಸ್ ಅಧಿಕಾರಿಗಳು ಸಂಪರ್ಕದಲ್ಲಿದ್ದು, ಅವರಿಂದ ತಿಳಿದುಕೊಂಡು ಹೇಳಿರಬಹುದು. ಫೋನ್ ಟ್ಯಾಪ್ ಮಾಡುವುದು ಅಕ್ರಮವಾಗಿದ್ದು, ಹಣ ಕೊಟ್ಟರೆ ಚೀನಾದಿಂದ ಉಪಕರಣ ಸಿಗುತ್ತದೆ. ರಾಜ್ಯಕ್ಕೆ ಇಂತಹ ಉಪಕರಣ ಎಷ್ಟು ಬಂದಿದೆ? ಎಲ್ಲೆಲ್ಲಿದೆ ಎಂದು ಪತ್ತೆ ಮಾಡಬೇಕು. ವಿರೋಧ ಪಕ್ಷಗಳ ನಾಯಕರ ಫೋನ್ ಟ್ಯಾಪ್ ಮಾಡಲಾಗುತ್ತಿದೆ ಎಂದು ನನಗೂ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಬಗ್ಗೆ ಸರ್ಕಾರ ತನಿಖೆ ಮಾಡಿಸಲಿ ಎಂದು ಆಗ್ರಹಿಸಿದ್ದರು.
ಇದನ್ನೂ ಓದಿ: Murder Case: ಯುವತಿ ಪ್ರಬುದ್ಧ ಸಾವು ಆತ್ಮಹತ್ಯೆಯಲ್ಲ, ಕೊಲೆ: ತಾಯಿ ದೂರು
ಸರ್ಕಾರ ಮಾಡಿಲ್ಲವಾದರೆ ತನಿಖೆಗೆ ಕೊಡಲಿ
ಫೋನ್ ಟ್ಯಾಪ್ ಮಾಡುವವರನ್ನು ಜೈಲಿಗೆ ಕಳುಹಿಸಬೇಕು. ಹಿಂದೆಯೂ ಈ ರೀತಿ ಪೊಲೀಸ್ ಅಧಿಕಾರಿಗಳು ಮಾಡಿ ತನಿಖೆಗೆ ಒಳಗಾಗಿದ್ದರು. ಸರ್ಕಾರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಸರ್ಕಾರ ಇದನ್ನು ಮಾಡಿಲ್ಲವೆಂದು ಎದೆ ಮುಟ್ಟಿ ಹೇಳುವುದಾದರೆ ತನಿಖೆಗೆ ನೀಡಲಿ. ಇದನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಲಿ ಎಂದು ಆರ್. ಅಶೋಕ್ ಒತ್ತಾಯಿಸಿದ್ದರು.