Site icon Vistara News

Lok Sabha Election 2024: ದೇವೇಗೌಡರ ನಿವಾಸದಲ್ಲಿ ಮಹತ್ವದ ಸಭೆ; ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಯಾರಿಗೆ?

Mandya Lok Sabha constituency meeting with Deve Gowda residence

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ (Political Activity) ಗರಿಗೆದರಿವೆ. ಕರ್ನಾಟಕದಲ್ಲಿನ 28 ಲೋಕಸಭಾ ಕ್ಷೇತ್ರಗಳಲ್ಲಿ (Lok Sabha Constituencies) 28 ಕ್ಷೇತ್ರವನ್ನೂ ಗೆದ್ದುಕೊಳ್ಳಲು ಬಿಜೆಪಿ – ಜೆಡಿಎಸ್‌ ಮೈತ್ರಿ ಪಕ್ಷಗಳು (BJP JDS alliance) ರಣತಂತ್ರವನ್ನು ಹೆಣೆಯುತ್ತಿವೆ. ಇದೇ ವೇಳೆ ಸೀಟು ಹಂಚಿಕೆ ಸಮಸ್ಯೆ ತಲೆದೋರಿದ್ದು, ಜೆಡಿಎಸ್‌ಗೆ ಎಷ್ಟು ಹಾಗೂ ಯಾವ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂಬ ಬಗ್ಗೆ ತೀವ್ರ ಚರ್ಚೆಗಳು ನಡೆದಿವೆ. ಈ ನಡುವೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ (Mandya Lok Sabha constituency) ಎರಡೂ ಪಕ್ಷಗಳು ಕಣ್ಣಿಟ್ಟಿವೆ. ಇದರ ಭಾಗವಾಗಿ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಅವರ ನಿವಾಸದಲ್ಲಿ ಮಂಡ್ಯ ಭಾಗದ ನಾಯಕರ ಸಭೆಯನ್ನು ಮಂಗಳವಾರ ನಡೆಸಲಾಗಿದೆ.

ಶಾಸಕರು, ಮಾಜಿ ಶಾಸಕರು, ಪರಿಷತ್ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದು, ಮಂಡ್ಯ ಲೋಕಸಭೆ ಚುನಾವಣೆ ಬಗ್ಗೆ ಚರ್ಚೆಯನ್ನು ನಡೆಸಲಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರ ಸಿಕ್ಕರೆ ಅಭ್ಯರ್ಥಿ ಯಾರಾಗಬೇಕು? ಗೆಲ್ಲಲು ಯಾವ ರೀತಿ ಸಿದ್ಧತೆ ನಡೆಸಬೇಕು ಎಂಬ ಕುರಿತು ಚರ್ಚೆಯನ್ನು ನಡೆಸಲಾಗಿದೆ.

ಇದನ್ನೂ ಓದಿ: Karnataka Budget Session 2024: 16 ಸಾವಿರ ಅತಿಥಿ ಉಪನ್ಯಾಸಕರ ಕಾಯಂ ಇಲ್ಲವೆಂದ ಸರ್ಕಾರ!

ಇದೇ ವೇಳೆ ಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿ ಯಾರಾಗಬೇಕು ಎಂಬ ಕುರಿತು ಚರ್ಚೆಯನ್ನು ನಡೆಸಲಾಗಿದೆ ಎಂದು ಹೇಳಲಾಗಿದೆ.

ಮಂಡ್ಯದಲ್ಲಿ ಎಚ್‌ಡಿಕೆ ಅಥವಾ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಾಯ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅಥವಾ ನಿಖಿಲ್‌ ಕುಮಾರಸ್ವಾಮಿ ಅವರೇ ಸ್ಪರ್ಧೆ ಮಾಡಬೇಕು ಎಂದು ಮಂಡ್ಯ ಭಾಗದ ನಾಯಕರು ಎಚ್.ಡಿ. ದೇವೇಗೌಡ ಅವರನ್ನು ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಅಂತಿಮ ನಿರ್ಧಾರವನ್ನು ದೇವೇಗೌಡರು ತೆಗೆದುಕೊಳ್ಳುವಂತೆ ಎಂದು ಮನವಿ ಮಾಡಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಡಿ. ದೇವೇಗೌಡ, ಮಂಡ್ಯ ಜಿಲ್ಲೆಯ ಎಂಟು ಕ್ಷೇತ್ರದ ನಾಯಕರು, ಶಾಸಕರು ಹಾಗೂ ಮಾಜಿ ಶಾಸಕರು ಎಲ್ಲರೂ ಇಲ್ಲಿ ಬಂದಿದ್ದಾರೆ. ಕೋರ್ ಕಮಿಟಿ‌ ಅಧ್ಯಕ್ಷರು, ಮಂಡ್ಯ ಜಿಲ್ಲಾಧ್ಯಕ್ಷರು ಜತೆಗಿದ್ದಾರೆ. ಇವರ ಜತೆಗೆ ಸುದೀರ್ಘವಾಗಿ ಚರ್ಚೆಯನ್ನು ನಡೆಸಲಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂಬ ಬಗ್ಗೆಯೂ ಚರ್ಚೆಗಳು ನಡೆದಿವೆ. ಶಿಕ್ಷಕರ ಕ್ಷೇತ್ರದ ಎಲೆಕ್ಷನಲ್ಲಿ ಯಾರು ನಿಲ್ಲಬೇಕು ಎಂಬ ಬಗ್ಗೆ ಚರ್ಚೆಯಾಗಿದೆ. ವಿವೇಕ್ ಹಾಗೂ ಶ್ರೀಕಂಠಯ್ಯ ಅವರ ಮಧ್ಯೆ ಯಾರು ನಿಲ್ಲಬೇಕು ಎಂಬ ನಿರ್ಧಾರವನ್ನು ಎಚ್.ಡಿ. ಕುಮಾರಸ್ವಾಮಿ ಅವರು ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

ಮಂಡ್ಯ ಲೋಕಸಭೆಗೆ ಎಚ್‌ಡಿಕೆ ಸ್ಪರ್ಧೆ; ಎಚ್.ಡಿ. ದೇವೇಗೌಡ ಹೇಳಿದ್ದೇನು?

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎಚ್.ಡಿ. ಕುಮಾರ ಸ್ವಾಮಿ ಅವರೇ ಕಣಕ್ಕಿಳಿಸಬೇಕು. ಅಥವಾ ನಾನು ಸ್ಪರ್ಧೆ ಮಾಡುವಂತೆ ಕೋರಿದ್ದಾರೆ. ಇಲ್ಲವೇ ನಿಖಿಲ್ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವಂತೆ ನಾಯಕರು ಪ್ರೀತಿಯಿಂದ ಹೇಳಿದ್ದಾರೆ. ಆದರೆ, ನಾನು‌ ಸ್ಪರ್ಧೆ ಮಾಡುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದೇನೆ. ನಿಖಿಲ್ ಸಹ ನಾನು ಸ್ಪರ್ಧೆ ಮಾಡುವುದಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಇರುತ್ತೇನೆ ಎಂದು ಹೇಳಿದ್ದಾರೆ ಎಂಬುದಾಗಿ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದರು.

ಇಂದಿನ ಸಭೆಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ಈ ಸಭೆಯಲ್ಲಿ ಇಲ್ಲ. ಎಚ್.ಡಿ. ರೇವಣ್ಣ ಎಂದೂ ಸಹ ಲೋಕಸಭೆಗೆ ಸ್ಪರ್ಧೆ ಮಾಡುವುದಾಗಿ ಹೇಳಿಲ್ಲ. ಇದು ಮಾಧ್ಯಮದವರ ಸೃಷ್ಟಿಯಾಗಿದೆ. ನಾವು ಮೂರು ಜನ ಒಗ್ಗಟ್ಟಾಗಿ ಹೋಗ್ತೇವೆ. ಎಂಟು ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತೇವೆ. ಮಂಡ್ಯದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ ಮಾಡಿ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸುತ್ತೇವೆ. ನಾವೀಗ ಎನ್‌ಡಿಎ ಜತೆಗೆ ಮೈತ್ರಿ ಮಾಡಿಕೊಂಡಿರುವುದರಿಂದ ನಮ್ಮ ಅಭಿಪ್ರಾಯವನ್ನು ನಂತರ ನಾವು ಪ್ರಧಾನ‌ ಮಂತ್ರಿ ನರೇಂದ್ರ ಮೋದಿ ಅವರಿಗೆ ತಿಳಿಸುತ್ತೇವೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.

ನನ್ನ ಸ್ಪರ್ಧೆ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ

ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಮಂಡ್ಯದಿಂದ ಸ್ಪರ್ಧೆಗೆ ಒತ್ತಾಯ ಕೇಳಿಬರುತ್ತಿರುವುದು ನಿಜ. ದೇವೇಗೌಡರ ನಿವಾಸದಲ್ಲಿ ಎಂಟು ವಿಧಾನಸಭಾ ಕ್ಷೇತ್ರದ ಪ್ರಮುಖರ ಸಭೆ ಆಗಿದೆ. ಅವರ ಅಭಿಪ್ರಾಯವನ್ನು ದೇವೇಗೌಡರ ಗಮನಕ್ಕೆ ತಂದಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಸೇರಿ ಎಲ್ಲ ನಾಯಕರು ನಿರ್ಧಾರ ಮಾಡುತ್ತಾರೆ. ಒಟ್ಟಿನಲ್ಲಿ 28 ಲೋಕಸಭಾ ಕ್ಷೇತ್ರದಲ್ಲಿಯೂ ಗೆಲವು ಸಾಧಿಸಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧೊಟ್ಟಂತೆ ವಿಧಾನ ಪರಿಷತ್‌ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ವಿರುದ್ಧವಾಗಿ ಶಾಸಕ ಎಸ್.ಟಿ. ಸೋಮಶೇಖರ್ ಕೆಲಸ ಮಾಡುತ್ತಿರುವ ಆರೋಪದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿಖಿಲ್‌ ಕುಮಾರಸ್ವಾಮಿ, ಒಂದು ವ್ಯಕ್ತಿಯನ್ನು ಇಷ್ಟೊಂದು ಗಂಭೀರವಾಗಿ ಪರಿಗಣಿಸಬಾರದು. ಆರ್. ಅಶೋಕ್, ‌ಬಿ.ವೈ. ವಿಜಯೇಂದ್ರ ಸೇರಿ ಎಲ್ಲರೂ ಎ.ಪಿ. ರಂಗನಾಥ್ ಅವರ ಗೆಲುವಿನ ಶ್ರಮ ಹಾಕುತ್ತಿದ್ದಾರೆ. ಹೀಗಾಗಿ ಯಾರೋ ಒಬ್ಬ ವ್ಯಕ್ತಿಯನ್ನಿಟ್ಟುಕೊಂಡು ಮಾತನಾಡೋದು ಸೂಕ್ತ ಅಲ್ಲ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಶಾಸಕಿ ಕರೆಮ್ಮ ನಾಯಕ ಅವರ ಪ್ರತಿಭಟನೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿಖಿಲ್‌ ಕುಮಾರಸ್ವಾಮಿ, ಈ ಬಗ್ಗೆ ಹೆಚ್ಚು ಮಾಹಿತಿಯನ್ನು ಪಡೆದುಕೊಂಡಿಲ್ಲ. ಕರೆಮ್ಮ ಅವರ ಹತ್ತಿರ ಮಾತನಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Karnataka Budget Session 2024: ಖಾಸಗಿ ಒಡೆತನದ ʼಮೈಸೂರು ಲ್ಯಾಂಪ್ಸ್‌ʼ ಷೇರು ಖರೀದಿಗೆ ಕ್ರಮ: ಎಂ.ಬಿ. ಪಾಟೀಲ್

ಹೆಚ್ಚು ಮಾಹಿತಿಯನ್ನು ಪಡೆದುಕೊಂಡು ಮಾತಾಡುತ್ತೆನೆ ಎಂದ ನಿಖಿಲ್

ಸಭೆಗೆ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ, ಜೆಡಿಎಸ್ ಯುವ ಘಟಕರ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವ ಡಿ.ಸಿ. ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ಶಾಸಕ ಎಚ್.ಟಿ. ಮಂಜು, ಮಾಜಿ ಶಾಸಕರಾದ ಅನ್ನದಾನಿ, ರವಿಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ ಸೇರಿ ಹಲವು ನಾಯಕರು ಭಾಗಿಯಾಗಿದ್ದರು.

Exit mobile version