ಬೆಂಗಳೂರು/ಹುಬ್ಬಳ್ಳಿ : ಧಾರವಾಡ ಇಲ್ಲವೇ ಹಾವೇರಿ ಕ್ಷೇತ್ರದ ಟಿಕೆಟ್ ಕೇಳಿದ್ದ (Lok sabha Election 2024) ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಅವರಿಗೆ ಬಿಜೆಪಿ ಹೈಕಮಾಂಡ್ (BJP High Command) ಮತ್ತು ರಾಜ್ಯ ನಾಯಕರು ಬೆಳಗಾವಿಯಿಂದಲೇ ಸ್ಪರ್ಧಿಸಬೇಕು ಎಂದು ಹಠ ಹಿಡಿದಿದ್ದಾರೆ. ಆರಂಭದಲ್ಲಿ ಅದಕ್ಕೆ ತಗಾದೆ ಎತ್ತಿ ಹಿಂದೇಟು ಹಾಕಿದ್ದ ಶೆಟ್ಟರ್ ಅಂತಿಮವಾಗಿ ಬಿಜೆಪಿ ಹಿರಿಯ ನಾಯಕ ಅಮಿತ್ ಶಾ (Amit Shah) ಮತ್ತು ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ಮಾತಿಗೆ ಕಟ್ಟುಬಿದ್ದು ಬೆಳಗಾವಿಯಿಂದ (Belagavi Constituency) ಸ್ಪರ್ಧಿಸಲು ಒಪ್ಪಿದ್ದಾರೆ.
ಬುಧವಾರ ಬಿಡುಗಡೆಯಾದ ರಾಜ್ಯದ ಲೋಕಸಭಾ ಕ್ಷೇತ್ರಗಳ ಬಿಜೆಪಿ ಮೊದಲ ಪಟ್ಟಿಯಲ್ಲಿ ತಮ್ಮ ಹೆಸರು ಕಾಣದೆ ಜಗದೀಶ್ ಶೆಟ್ಟರ್ ಸಿಟ್ಟಿಗೆದ್ದಿದ್ದರು. ಹೊರಗಿನಿಂದ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರಕ್ಕೆ ತಮ್ಮ ಅಥವಾ ಮಂಗಳಾ ಅಂಗಡಿ ಕುಟುಂಬದ ಯಾರಿಗಾದರೂ ಟಿಕೆಟ್ ಕೊಟ್ಟರೆ ಸಾಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿ ಇತ್ತು. ಆದರೆ, ಆಂತರಿಕವಾಗಿ ಜಗದೀಶ್ ಶೆಟ್ಟರ್ ಅವರು ತಮಗೆ ಧಾರವಾಡ ಇಲ್ಲವೇ ಹಾವೇರಿ ಕೊಡಬೇಕು, ತಮ್ಮ ಕುಟುಂಬಕ್ಕೆ ಬೆಳಗಾವಿ ಕೊಡಬೇಕು ಎಂದು ಬಯಸಿದ್ದರು.
ಆದರೆ, ಹಾವೇರಿ ಮತ್ತು ಧಾರವಾಡ ಎರಡೂ ಕ್ಷೇತ್ರಗಳು ಮಿಸ್ ಆದ ಹಿನ್ನೆಲೆಯಲ್ಲಿ ಶೆಟ್ಟರ್ ಆಕ್ರೋಶಿತರಾಗಿದ್ದರು. ಧಾರವಾಡ, ಹಾವೇರಿ ಕ್ಷೇತ್ರದ ಟಿಕೆಟ್ ಕೊಡದ ನಾಯಕರ ವಿರುದ್ಧ ಸಿಟ್ಟಿಗೆದ್ದಿದ್ದರು. ಅವರು ತಮ್ಮ ಆಪ್ತರ ಜತೆ ಮಾತುಕತೆ ನಡೆಸಿ ಮುಂದಿನ ನಿರ್ಣಯ ತೆಗೆದುಕೊಳ್ಳುವ ಬಗ್ಗೆ ಮಾತನಾಡಿದ್ದರು. ಬಿ.ಎಸ್. ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ಅವರ ಮುಂದೆ ತಮ್ಮ ಅಸಮಾಧಾನ ತೋಡಿಕೊಂಡಿದ್ದರು. ಅದರ ನಡುವೆಯೇ ಸ್ವತಃ ಹಿರಿಯ ನಾಯಕ ಅಮಿತ್ ಶಾ ಅವರು ಅವರಿಗೆ ಕರೆ ಮಾಡಿ ನೀವು ಬೆಳಗಾವಿಯಿಂದ ಸ್ಪರ್ಧೆ ಮಾಡಿ ಎಂದು ಸೂಚಿಸಿದ್ದರು.
ಬೆಳಗಾವಿ ಸ್ಪರ್ಧೆ ಎಂಬುದು ಶೆಟ್ಟರ್‌ಗೆ ಮತ್ತೊಂದು ಪೀಕಲಾಟ!
ಆದರೆ, ಇದು ಜಗದೀಶ್ ಶೆಟ್ಟರ್‌ಗೆ ಮತ್ತೊಂದು ರೀತಿಯಲ್ಲಿ ಪೀಕಲಾಟಕ್ಕೆ ಇಟ್ಟುಕೊಂಡಿತು. ಯಾಕೆಂದರೆ, ಬೆಳಗಾವಿಯ ಹಾಲಿ ಸಂಸದರಾಗಿರುವ ಮಂಗಳಾ ಅಂಗಡಿ ಅವರು ತಮ್ಮ ಕ್ಷೇತ್ರವನ್ನು ಜಗದೀಶ್ ಶೆಟ್ಟರ್ ಅವರಿಗೆ ಪರಭಾರೆ ಮಾಡಲು ಅಷ್ಟು ಆಸಕ್ತರಾಗಿರಲಿಲ್ಲ. ಅವರು ತಮ್ಮ ಇಬ್ಬರು ಹೆಣ್ಮಕ್ಕಳಾದ ಶ್ರದ್ಧಾ ಶೆಟ್ಟರ್ ಅಥವಾ ಸ್ಫೂರ್ತಿ ಪಾಟೀಲ್ ಅವರಿಗೆ ಕೊಡಬೇಕು ಎಂದು ಬಯಸಿದ್ದರು.
ನಿಜವೆಂದರೆ, ಬೆಳಗಾವಿ ಕ್ಷೇತ್ರದ ಟಿಕೆಟನ್ನು ತಮ್ಮ ಕುಟುಂಬಕ್ಕೇ ನೀಡಬೇಕು ಎಂದು ಹಿರಿಯರ ಮುಂದೆ ಪಟ್ಟು ಹಿಡಿಯಲು ಮಂಗಳಾ ಅಂಗಡಿ ದಿಲ್ಲಿಗೆ ತೆರಳಿದ್ದಾರೆ. ಈಗ ಬೆಳಗಾವಿ ಕ್ಷೇತ್ರವನ್ನು ತಾವು ಸ್ವೀಕರಿಸಿದರೆ ಮಂಗಳಾ ಅಂಗಡಿ ಕುಟುಂಬಕ್ಕೆ ಅನ್ಯಾಯ ಮಾಡಿದಂತಾಗುತ್ತದೆ ಎಂಬ ಧರ್ಮ ಸಂಕಟದಲ್ಲಿ ಸಿಲುಕಿದರು. ಆದರೆ, ಅಮಿತ್ ಶಾ ಹೇಳಿದ ಮಾತಿಗೆ ಕಟ್ಟು ಬಿದ್ದರು.
ಅಷ್ಟಾದರೂ ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ವೈ ವಿಜಯೇಂದ್ರ ಅವರ ಜತೆ ಮಾತನಾಡಿ ಬದಲಾವಣೆ ಮಾಡಿಸುವ ಪ್ರಯತ್ನವಾಗಿ ಅವರು ಬೆಂಗಳೂರಿಗೆ ಧಾವಿಸಿದರು.
ಯಡಿಯೂರಪ್ಪ ಮುಂದೆ ಹೊಸ ಪ್ರಸ್ತಾಪವಿಟ್ಟ ಶೆಟ್ಟರ್
ಬೆಂಗಳೂರಿಗೆ ಬಂದು ಬಿ.ಎಸ್. ಯಡಿಯೂರಪ್ಪ ಅವರ ಜತೆಗೆ ಸುದೀರ್ಘ ಚರ್ಚೆ ನಡೆಸಿದ ಜಗದೀಶ್ ಶೆಟ್ಟರ್ ಅವರು, ಬೆಳಗ್ಗೆಯಿಂದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಿದ್ದೇನೆ. ಧಾರವಾಡ ಕ್ಷೇತ್ರವಾಗಿದ್ದರೆ ಸ್ಪರ್ಧೆ ಮಾಡುತ್ತಿದ್ದೆ. ನಾನು ಬೆಳಗಾವಿಯಿಂದ ಸ್ಪರ್ಧೆ ಮಾಡುವುದಿಲ್ಲ.. ನನ್ನ ಬದಲಾಗಿ ಮಂಗಳಾ ಅಂಗಡಿ ಅವರ ಕುಟುಂಬದಲ್ಲಿ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಕೊಡಿ ಎಂದು ಪ್ರಸ್ತಾಪಿಸಿದರು. ಸ್ಫೂರ್ತಿ ಪಾಟೀಲ್ ಅಥವಾ ಶ್ರದ್ಧಾ ಶೆಟ್ಟರ್ ಗೆ ಟಿಕೆಟ್ ಕೊಡಿ ಎಂದು ಕೋರಿದರು.
ಆದರೆ, ಜಗದೀಶ್ ಶೆಟ್ಟರ್ ಪ್ರಸ್ತಾಪವನ್ನು ಬಿ.ಎಸ್.ವೈ ತಳ್ಳಿ ಹಾಕಿದರು. ನಿಮ್ಮ ಹೆಸರು ಶಿಫಾರಸು ಮಾಡಿದ್ದೇವೆ. ಗೆಲುವಿಗೆ ಯಾವುದೇ ಅಡ್ಡಿ ಇಲ್ಲ. ನೀವೇ ಸ್ಪರ್ಧೆ ಮಾಡಿ ಎಂದು ಹೇಳಿದರು ಯಡಿಯೂರಪ್ಪ. ಆ ಹೊತ್ತಿನಲ್ಲಿ ಬಿ.ವೈ ವಿಜಯೇಂದ್ರ ಕೂಡಾ ಆಗಮಿಸಿದರು. ಅಂತಿಮವಾಗಿ ಅಪ್ಪ ಮತ್ತು ಮಗನ ಮಾತಿಗೆ ಕಟ್ಟುಬಿದ್ದು ಬೆಳಗಾವಿಯಿಂದ ಕಣಕ್ಕಿಳಿಯಲು ಶೆಟ್ಟರ್ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಶುಕ್ರವಾರ ಬಿಜೆಪಿಯ ಎರಡನೇ ಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದ್ದು ಅದರಲ್ಲಿ ಬೆಳಗಾವಿಯಿಂದ ಶೆಟ್ಟರ್‌ಗೆ ಟಿಕೆಟ್ ಘೋಷಣೆಯಾಗುವುದು ಖಚಿತವಾಗಿದೆ.
ಇದನ್ನೂ ಓದಿ: Lok Sabha Election 2024: ರಾಜವಂಶಸ್ಥ ಯದುವೀರ್‌ಗೆ ಮೈಸೂರು ಟಿಕೆಟ್; ಸಂಸದ ಪ್ರತಾಪ್ ಸಿಂಹ ಅಭಿನಂದನೆ
ಶೆಟ್ಟರ್ ಸ್ಪರ್ಧೆಗೆ ಸ್ಥಳೀಯರು ಏನಂತಾರೆ? ಮಂಗಳಾ ಅಂಗಡಿ ಕುಟುಂಬ ಏನನ್ನುತ್ತದೆ?
ನಿಜವೆಂದರೆ ಬೆಳಗಾವಿಗೆ ಸ್ಥಳೀಯರನ್ನೇ ಕಣಕ್ಕಿಳಿಸಬೇಕು ಎಂಬ ಬೇಡಿಕೆ ಜೋರಾಗಿದೆ. ಹಾಲಿ ಸಂಸದೆ ಮಂಗಳಾ ಅಂಗಡಿ ಅವರು ತಮ್ಮ ಕುಟುಂಬಕ್ಕೇ ಟಿಕೆಟ್ ಕೇಳಿದ್ದಾರೆ. ಟಿಕೆಟ್ ಕೈತಪ್ಪುವ ಸಾಧ್ಯತೆಗಳ ಚರ್ಚೆ ನಡೆಯುತ್ತಿದ್ದಂತೆಯೇ ಅವರು ಬೆಳಗಾವಿ ವಿಮಾನ ನಿಲ್ದಾಣದ ಮೂಲಕ ದಿಲ್ಲಿಗೆ ದೌಡಾಯಿಸಿದ್ದಾರೆ. ಇತ್ತ ಬೆಂಗಳೂರಿನಲ್ಲಿರುವ ಪುತ್ರಿಯರಾದ ಸ್ಪೂರ್ತಿ ಪಾಟೀಲ, ಶೃದ್ಧಾ ಶೆಟ್ಟರ್ ದೆಹಲಿಗೆ ಪ್ರಯಾಣಿಸಿದ್ದಾರೆ.
ಕೇಂದ್ರ ನಾಯಕರನ್ನು ಭೇಟಿಯಾಗಿ ಇನ್ನೊಂದು ಅವಧಿಗೆ ಟಿಕೆಟ್ ಕೊಡುವಂತೆ ಮಂಗಳಾ ಅಂಗಡಿ ಮನವಿ ಮಾಡಿದ್ದರು. ಕೆಲವು ದಿನಗಳ ಹಿಂದೆ ಮನೆಗೆ ಬಂದಿದ್ದ ಜೆಪಿ ನಡ್ಡಾಗೂ ನಮ್ಮ ಕುಟುಂಬಕ್ಕೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು ಮಂಗಳಾ ಅಂಗಡಿ. ಈಗ ದೆಹಲಿಯಲ್ಲಿ ಬೀಡುಬಿಟ್ಟು ಟಿಕೆಟ್ ಗಿಟ್ಟಿಸಿಕೊಳ್ಳಲು ಮಂಗಲ ಅಂಗಡಿ ಪ್ರಯತ್ನ ಮಾಡುತ್ತಿದ್ದಾರೆ. ಜಗದೀಶ್ ಶೆಟ್ಟರ್ ಅವರು ಕೂಡಾ ಮಂಗಳಾ ಅಂಗಡಿ ಕುಟುಂಬಕ್ಕೇ ಕೊಡಿ ಎನ್ನುತ್ತಿದ್ದಾರೆ. ಆದರೆ, ವರಿಷ್ಠರು ಮಾತ್ರ ಜಗದೀಶ್ ಶೆಟ್ಟರ್ ಅವರನ್ನೇ ಕಣಕ್ಕಿಳಿಸಲು ಯತ್ನಿಸುತ್ತಿದ್ದಾರೆ. ಇತ್ತ ಸ್ಪರ್ಧಾಕಾಂಕ್ಷಿಯಾಗಿರುವ ಮಹಂತೇಶ್ ಕವಟಗಿಮಠ ಅವರು ಸ್ಥಳೀಯರಿಗೇ ಕೊಡಬೇಕು ಎಂಬ ಒತ್ತಡ ಹೇರುತ್ತಿದ್ದಾರೆ. ಶೆಟ್ಟರ್‌ಗೆ ಇದೆಲ್ಲವೂ ಇರಸು ಮುರಸು ಉಂಟು ಮಾಡಿದೆ.