ನವದೆಹಲಿ: ಲೋಕಸಭಾ ಚುನಾವಣೆ-2024ರಲ್ಲಿ (Lok Sabha Election 2024) ಒಟ್ಟು 12 ರಾಜ್ಯ ಮತ್ತು 1 ಕೇಂದ್ರಾಡಳಿತ ಪ್ರದೇಶದ 1,120 ಅಭ್ಯರ್ಥಿಗಳ ತಮ್ಮ ಅದೃಷ್ಟವನ್ನು ಪರೀಕ್ಷೆ ಇಂದು ನಡೆಯಲಿದೆ. ಈ ಬಾರಿ ಹಲವು ಪ್ರಮುಖ ಅಭ್ಯರ್ಥಿಗಳು ಕಣದಲ್ಲಿ ಇದ್ದು, ಇವರಲ್ಲಿ ಅತೀ ಹೆಚ್ಚು ಶ್ರೀಮಂತ (richest), ಕಡಿಮೆ ಆಸ್ತಿ ಹೊಂದಿರುವ (Candidates With Lowest Assets) ಹಾಗೂ ಯಾವುದೇ ಆಸ್ತಿ ಪಾಸ್ತಿ ಹೊಂದಿರದ ಅಭ್ಯರ್ಥಿಗಳೂ (Zero assets candidates) ಸೇರಿದ್ದಾರೆ.
ಎರಡನೇ ಹಂತದ ಚುನಾವಣೆಯ ಕಣದಲ್ಲಿರುವ ಕೆಲವು ಶ್ರೀಮಂತ ಅಭ್ಯರ್ಥಿಗಳ ಪಟ್ಟಿಯನ್ನು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಬಿಡುಗಡೆ ಮಾಡಿದೆ. ಎರಡನೇ ಹಂತದ ಚುನಾವಣೆಯಲ್ಲಿ ಭಾಗವಹಿಸುತ್ತಿರುವ 1,210 ಅಭ್ಯರ್ಥಿಗಳ ಅಫಿಡವಿಟ್‌ಗಳನ್ನು ವಿಶ್ಲೇಷಿಸಿದ್ದು, 390 ಅಭ್ಯರ್ಥಿಗಳು ‘ಕೋಟ್ಯಧಿಪತಿಗಳು’ ಎಂದು ಹೇಳಿದೆ. ಇವರಲ್ಲಿ ಶೇ. 21ರಷ್ಟು ಅಭ್ಯರ್ಥಿಗಳ ವಿರುದ್ಧವೂ ಕ್ರಿಮಿನಲ್ ಪ್ರಕರಣಗಳಿವೆ.
ಟಾಪ್ 5 ಶ್ರೀಮಂತ ಅಭ್ಯರ್ಥಿಗಳಿವರು
1. ವೆಂಕಟರಮಣ ಗೌಡ
ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್‌ನ ವೆಂಕಟರಮಣೇಗೌಡ ಅಲಿಯಾಸ್ ಸ್ಟಾರ್ ಚಂದ್ರು ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 622 ಕೋಟಿ ರೂ. ಗೂ ಅಧಿಕ ಆಸ್ತಿ ಹೊಂದಿದ್ದಾರೆ.
2. ಡಿ.ಕೆ. ಸುರೇಶ್
ಎರಡನೇ ಸ್ಥಾನವು ಕಾಂಗ್ರೆಸ್‌ನ ಅಭ್ಯರ್ಥಿ ಡಿ.ಕೆ. ಸುರೇಶ್‌ಗೆ ಸೇರಿದೆ. ಅವರು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರರಾಗಿದ್ದಾರೆ. ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸಿರುವ ಸುರೇಶ್ ಅವರ ಒಟ್ಟು ಆಸ್ತಿ ಮೌಲ್ಯ 593 ಕೋಟಿ ರೂ.
3. ಹೇಮಾ ಮಾಲಿನಿ
ಖ್ಯಾತ ನಟಿ ಹೇಮಾ ಮಾಲಿನಿ ಮೂರನೇ ಸ್ಥಾನ ಪಡೆದಿದ್ದು, ಉತ್ತರ ಪ್ರದೇಶದ ಮಥುರಾದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ. ಇವರು 278.9 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.
4. ಸಂಜಯ್ ಶರ್ಮಾ
ಮಧ್ಯಪ್ರದೇಶದ ಹೋಶಂಗಾಬಾದ್‌ನಿಂದ ಸ್ಪರ್ಧಿಸಿರುವ ಕಾಂಗ್ರೆಸ್‌ನ ಸಂಜಯ್ ಶರ್ಮಾ ಅವರ ಆಸ್ತಿ 232 ಕೋಟಿ ರೂ.
5. ಎಚ್.ಡಿ. ಕುಮಾರಸ್ವಾಮಿ
ಬಿಜೆಪಿಯೊಂದಿಗೆ ಸಮ್ಮಿಶ್ರವಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಮುಖಂಡ ಹಾಗೂ ಮಂಡ್ಯ ಅಭ್ಯರ್ಥಿ ಎಚ್ .ಡಿ. ಕುಮಾರಸ್ವಾಮಿ ಅವರ ಆಸ್ತಿ 217 ಕೋಟಿ ರೂ.
ಅತೀ ಕಡಿಮೆ ಆಸ್ತಿ ಹೊಂದಿರುವ ಅಭ್ಯರ್ಥಿಗಳು
1. ಮಹಾರಾಷ್ಟ್ರದ ನಾಂದೆಡ್ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವ ಲಕ್ಷ್ಮಣ್ ನಾಗರಾವ್ ತಮ್ಮ ಅಫಿಡವಿಟ್‌ನಲ್ಲಿ ಕೇವಲ 500 ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.
2. ಕೇರಳದ ಕಾಸರಗೋಡು ಕ್ಷೇತ್ರದಿಂದ ಸ್ಪರ್ಧಿಸಿರುವ ರಾಜೇಶ್ವರಿ ಕೆ.ಆರ್. 1000ರೂ ಆದಾಯ ಘೋಷಿಸಿದ್ದಾರೆ.
3. ಮತ್ತೋರ್ವ ಸ್ವತಂತ್ರ ಅಭ್ಯರ್ಥಿ ಅಮರಾವತಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಪೃಥ್ವಿಸಾಮ್ರಾಟ್ ಮುಖಿಂದ್‌ರಾವ್ ದೀಪವಂಶ್ 1,400 ರೂ ಮೊತ್ತದ ಆಸ್ತಿ ಹೊಂದಿದ್ದಾರೆ.
4. ಇನ್ನು ಕೇವಲ 2000 ರೂ. ಮೌಲ್ಯ ಆಸ್ತಿ ಹೊಂದಿರುವ ರಾಜಸ್ಥಾನದ ಜೋಧ್‌ಪುರ ಅಭ್ಯರ್ಥಿ ಶಹನಾಜ್ ಬಾನೋ ನಾಲ್ಕನೇ ಸ್ಥಾನದಲ್ಲಿದ್ದಾರೆ.
5. ಕೇರಳದ ಕೊಟ್ಟಾಯಂನಲ್ಲಿ ಕಣಕ್ಕಿಳಿದಿರುವ ವಿ.ಪಿ.ಕೊಚುಮನ್ 2,230 ರೂ. ಮೌಲ್ಯದ ಆಸ್ತಿ ಘೋಷಿಸಿದ್ದಾರೆ.
ಇದನ್ನೂ ಓದಿ:Lok Sabha Election 2024: ಲೋಕಸಭೆ ಚುನಾವಣೆ 2024 ಮತದಾನ Live News
ಯಾವುದೇ ಆಸ್ತಿ ಪಾಸ್ತಿ ಹೊಂದಿರದ ಅಭ್ಯರ್ಥಿಗಳು:
ಕರ್ನಾಟಕ ಪ್ರಕಾಶ್ ಆರ್.ಎ ಜೈನ್, ರಾಮಮೂರ್ತಿ ಎಂ ಮತ್ತು ರಾಜಾ ರೆಡ್ಡಿ ಸೇರದಂತೆ ಒಟ್ಟು ಆರು ಮಂದಿ ತಮ್ಮ ಬಳಿ ಯಾವುದೇ ಆಸ್ತಿ ಪಾಸ್ತಿ ಇಲ್ಲ ಎಂದು ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಕಿಶೋರ್ ಭೀಮರಾವ್ ಲಾಬಡೆ, ನಾಗೇಶ್ ಸಾಂಬಾಜಿ ಗಾಯಕ್ವಾಡ್ ಮತ್ತು ಧ್ಯಾನೇಶ್ವರ್ ರಾವ್ ಸಾಹೇಬ್ ಕಾಪಟೆ ಕೂಡ ಯಾವುದೇ ಆಸ್ತಿ ಪಾಸ್ತಿ ಹೊಂದಿರದ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದಾರೆ.