ಬೆಂಗಳೂರು: ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ಶನಿವಾರ ರಾತ್ರಿ ಹನುಮಧ್ವಜ (Hanuman Flag) ಹಾರಿಸಿದ್ದು, ಪೊಲೀಸರನ್ನು ಬಳಸಿ ಧ್ವಜವನ್ನು ಕೆಳಗೆ ಇಳಿಸಿದ್ದನ್ನು ಖಂಡಿಸುತ್ತೇನೆ. ಒಂದು ಧ್ವಜ ಇಳಿಸಿದ್ರೆ, ಸಾವಿರಾರು ಧ್ವಜ ಹಾರಿಸಬೇಕಾಗುತ್ತವೆ. ಎಂದು ಎಚ್ಚರಿಕೆ ನೀಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ವಿ. ಸುನಿಲ್ ಕುಮಾರ್ (V Sunil Kumar), ಈಗ ರಾಜ್ಯದ ಹಲವು ಕಡೆ ಇರುವ ಹಸಿರು ಧ್ವಜ ತೆಗೆಯುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸುನಿಲ್ ಕುಮಾರ್, ಇದಕ್ಕೆ ಗೃಹ ಇಲಾಖೆ ನೇರ ಹೊಣೆ ಆಗಲಿದೆ ಅಂತ ಸರ್ಕಾರಕ್ಕೆ ಎಚ್ಚರಿಸುತ್ತೇವೆ. ಸ್ಥಳೀಯ ಅಧಿಕಾರಿಗಳು ದೊಡ್ಡ ವಿವಾದ ಮಾಡಲು ಹೊರಟಿದ್ದಾರೆ. ಇದು ಆಕ್ಷೇಪಾರ್ಹ ಎಂದು ತಿಳಿಸಿದರು.
ಇದನ್ನೂ ಓದಿ: Janardhana Reddy: ಜನಾರ್ದನ ರೆಡ್ಡಿ ಪಕ್ಷ ಬಿಜೆಪಿಯಲ್ಲಿ ವಿಲೀನ; ವರಿಷ್ಠರ ಜತೆ ಚರ್ಚಿಸಿ ತೀರ್ಮಾನ: ವಿಜಯೇಂದ್ರ
ಸಿದ್ದರಾಮಯ್ಯ ನನಗೆ ಕೇಸರಿ ಕಂಡರೆ ಆಗಲ್ಲ ಅಂದಿದ್ದರು
ಗ್ರಾಮದ ಜನ ಒಗ್ಗಟ್ಟಾಗಿ ಹನುಮ ಧ್ವಜ ಹಾರಿಸಲು ಮುಂದಾಗಿದ್ದಾರೆ. ಅಲ್ಲದೆ, ಸ್ಥಳೀಯರ ಮೇಲೆ ಲಾಠಿ ಪ್ರಹಾರ ನಡೆದಿದೆ. ಯಾಕೆ ಇಳಿಸಲಾಗುತ್ತಿದೆ ಎಂದು ಕೇಸರಿ ವಿರೋಧಿ ಸರ್ಕಾರ ಸ್ಪಷ್ಟಪಡಿಸಬೇಕು. ಸ್ವತಃ ಸಿಎಂ ಸಿದ್ದರಾಮಯ್ಯ (CM Siddaramaiah) ನನಗೆ ಕೇಸರಿ ಕಂಡರೆ ಆಗಲ್ಲ ಅಂದಿದ್ದರು ಎಂದು ಸುನಿಲ್ ಕುಮಾರ್ ವಿವರಿಸಿದರು.
ಇನ್ಯಾವುದನ್ನು ಸಹಿಸ್ತೀರಾ?
ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ದಿನ ಎಲ್ಲರೂ ಸಂಭ್ರಮದಿಂದ ಪಾಲ್ಗೊಂಡಿದ್ದಾರೆ. ಸಹಜವಾಗಿ ಎಲ್ಲರ ಮನೆ ಮೇಲೆ ಕೇಸರಿ ಧ್ವಜ ಹಾರಿಸಿದ್ದಾರೆ. ಜತೆಗೆ ನಂದಾ ದೀಪ ಹಚ್ಚಿದ್ದಾರೆ. ಆ ಗ್ರಾಮದಲ್ಲಿ ಕೂಡ ಧ್ವಜ ಹಾರಿಸಿ, ರಾಮನ ಫೋಟೊ ಹಾಕಿ ಪೂಜೆ ಮಾಡಿದ್ದಾರೆ. ಇದನ್ನು ಸರ್ಕಾರ ಸಹಿಸುತ್ತಿಲ್ಲ, ಇನ್ಯಾವುದನ್ನು ಸಹಿಸ್ತೀರಾ? ಎಂದು ಸುನಿಲ್ ಕುಮಾರ್ ಕೇಳಿದರು.
ಹಸಿರು ಧ್ವಜ ತೆಗೆಯುತ್ತೀರಾ?
ಹಿಂದು ಧ್ವಜ ಹಾರಿಸೋದನ್ನು ತಡೆಯುತ್ತೀರಾ? ರಾಜ್ಯದ ಎಲ್ಲೆಂದರೆ ಅಲ್ಲಿ ಘೋರಿ ಇದೆ. ಹಸಿರು ಧ್ವಜ ಹಾರಾಡುತ್ತಿದೆ. ಅದನ್ನು ನಾವು ತೋರಿಸುತ್ತೇವೆ. ತೆರವು ಮಾಡುವ ಕ್ರಮ ಮಾಡ್ತೀರಾ? ಎಂದು ಪ್ರಶ್ನೆಯನ್ನು ಮುಂದಿಟ್ಟರು. ಅನಧಿಕೃತ ಧ್ವಜ ತೆರವಿಗೆ ಸರ್ಕಾರದ ನಿರ್ದೇಶನ, ಕ್ರಮ ಏನಿದೆ ಎಂದು ಸ್ಪಷ್ಟಪಡಿಸಲು ಆಗ್ರಹಿಸಿದರು.
ನಮ್ಮ ನಾಯಕರು ಮಂಡ್ಯಕ್ಕೆ ಭೇಟಿ ನೀಡ್ತಾರೆ
ಒಂದು ಕಡೆ ಕಾಂಗ್ರೆಸ್ ನಾಯಕರು ಅಯೋಧ್ಯೆಗೆ ಹೋಗಲ್ಲ ಅಂತಾರೆ. ಮತ್ತೊಂದು ಕಡೆ ಪೊಲೀಸರನ್ನು ಬಳಸಿ ಕೇಸರಿ ಧ್ವಜ ಇಳಿಸುವ ಕೆಲಸ ಮಾಡುತ್ತಿದೆ ಎಂದು ಆಕ್ಷೇಪಿಸಿದ ಸುನಿಲ್ ಕುಮಾರ್, ನಮ್ಮ ನಾಯಕರು ಮಂಡ್ಯ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.
ಊರಿನ ಜನ ಸ್ವಯಂಪ್ರೇರಿತರಾಗಿ ಹಾಕಿದ್ದಾರೆ. ಸರ್ಕಾರ ಕೇಸರಿ ವಿರೋಧಿ ನೀತಿಯಿಂದ ಹೊರಗೆ ಬರಬೇಕು. ಕಾಂಗ್ರೆಸ್ಸಿಗರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಸುನಿಲ್ ಕುಮಾರ್ ಆಗ್ರಹಿಸಿದರು.
ಏನಿದು ಮಂಡ್ಯದ ಹನುಮಧ್ವಜ ಕೇಸ್?
ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಗ್ರಾಮಸ್ಥರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರು ಗ್ರಾಮದ 108 ಅಡಿ ಧ್ವಜಸ್ತಂಭದಲ್ಲಿ ಹನುಮ ಧ್ವಜವನ್ನು ಹಾರಿಸಿದ್ದರು. ಜನವರಿ 22 ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿತು. ಇದರ ನೆನೆಪಾಗಿ ಕೆರಗೋಡು ಗ್ರಾಮದಲ್ಲಿ 108 ಅಡಿ ಎತ್ತರ ಧ್ವಜಸ್ತಂಭದ ಮೇಲೆ ಹನುಮ ಧ್ವಜ ಹಾರಿಸಲು ಗ್ರಾಮಸ್ಥರು ನಿರ್ಧರಿಸಿದ್ದರು. ಧ್ವಜ ಹಾರಿಸಲು ನಿಶ್ಚಯಿಸಿದ ಜಾಗ ಗ್ರಾಮ ಪಂಚಾಯಿತಿಗೆ ಸೇರಿದ್ದರಿಂದ ಅನುಮತಿ ಕೋರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು. ಆದರೆ, ಗ್ರಾಮ ಪಂಚಾಯಿತಿ “ರಾಷ್ಟ್ರ ಧ್ವಜ ಮತ್ತು ನಾಡಧ್ವಜ” ಹೊರತುಪಡಿಸಿ ಯಾವುದೇ ಧಾರ್ಮಿಕ/ ರಾಜಕೀಯ ಧ್ವಜವನ್ನು ಹಾರಿಸುವಂತಿಲ್ಲವೆಂದು ಅನುಮತಿಯನ್ನು ನಿರಾಕರಣೆ ಮಾಡಿತ್ತು.
ಆದರೂ ಗ್ರಾಮಸ್ಥರು ಮತ್ತು ಹಿಂದು ಕಾರ್ಯಕರ್ತರು ಹನುಮ ಧ್ವಜ ಹಾರಿಸಿದ್ದರು. ಇದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಕೊನೆಗೆ ಈ ವಿಚಾರ ಮತ್ತೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದಿದೆ. ಅಲ್ಲಿ 22 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಹನುಮ ಧ್ವಜ ಹಾರಾಟಕ್ಕೆ 20 ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಬಳಿಕ ಗ್ರಾಮ ಪಂಚಾಯತ್ ಸದಸ್ಯರು ನಡಾವಳಿ ರಚಿಸಿ, ವಿವಾದವನ್ನು ಇತ್ಯರ್ಥ ಪಡಿಸಿದ್ದರು. ಆದರೆ, ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಲಾಗಿದೆ ಇದನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತ ಮೌಖಿಕ ಆದೇಶವನ್ನು ಹೊರಡಿಸಿತ್ತು. ಹೀಗಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಅವರು ತೆರವುಗೊಳಿಸಲು ಮುಂದಾದರು. ಇದಕ್ಕೆ ಗ್ರಾಮಸ್ಥರು ಅಡ್ಡಿ ಪಡಿಸಿ ಪ್ರತಿಭಟಿಸಿದ್ದರು. ಹೀಗಾಗಿ ಅಲ್ಲಿಂದ ನಿರ್ಗಮಿಸಿದ್ದ ಅಧಿಕಾರಿಗಳು ಶನಿವಾರ (ಜ.27) ರಾತ್ರಿ ಪುನಃ ಬಂದು ಹನುಮ ತೆರವಿಗೆ ಮುಂದಾದರು. ಮುಂಜಾನೆ 3 ಗಂಟೆ ಹೊತ್ತಿಗೆ ಮಂಡ್ಯ ಎಸಿ ಶಿವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದರ್ ನೇತೃತ್ವದಲ್ಲಿ ತೆರವಿಗೆ ಮುಂದಾಗುತ್ತಿದ್ದಂತೆ ಗ್ರಾಮಸ್ಥರಿಗೆ ವಿಷಯ ತಿಳಿದು ಬಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಪೊಲೀಸರು ಸಹ ಸ್ಥಳದಲ್ಲಿದ್ದರು. ಪ್ರತಿಭಟನೆಯನ್ನೂ ಮಾಡಲಾಯಿತು. ಹೀಗಾಗಿ ಪುನಃ ವಾಪಸ್ ತೆರಳಲಾಯಿತು.
ಇದನ್ನೂ ಓದಿ: Hanuman Flag: ಮಂಡ್ಯ ಹನುಮ ಧ್ವಜ ಪ್ರಕರಣ; ತ್ರಿವರ್ಣ ಧ್ವಜ ಬಿಟ್ಟು ಭಗವಾಧ್ವಜ ಹಾರಿಸಿದ್ದು ಸರಿಯಲ್ಲ: ಸಿದ್ದರಾಮಯ್ಯ
ಕೊನೆಗೆ ಈಗ ಭಾನುವಾರ ಎಷ್ಟೇ ವಿರೋಧ ಹಾಗೂ ಪ್ರತಿಭಟನೆ ಇದ್ದರೂ ಅದರ ನಡುವೆ ಹನುಮಾನ್ ಧ್ವಜವನ್ನು ಇಳಿಸಿ, ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರಿಂದ 144 ಸೆಕ್ಷನ್ ಜಾರಿ ಮಾಡಲಾಗಿದೆ. ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಚಾರ್ಜ್ ಅನ್ನು ಸಹ ಮಾಡಲಾಗಿದೆ.