ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರ (Parliament Flashback) ರಾಜ್ಯದ ವಿಶಿಷ್ಟ ಲೋಕಸಭೆ ಕ್ಷೇತ್ರವಾಗಿ ಗಮನ ಸೆಳೆದಿದೆ. ಖ್ಯಾತ ಚಲನಚಿತ್ರ ಕಲಾವಿದರಾದ ಅಂಬರೀಷ್, ರಮ್ಯಾ ಮತ್ತು ಸುಮಲತಾ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದು ವಿಶೇಷ. 1998ರಲ್ಲಿ ಹಿರಿಯ ನಟ ಅಂಬರೀಷ್ ಅವರು ಜೆಡಿಎಸ್ನಿಂದ ಸ್ಪರ್ಧಿಸಿ, ಕಾಂಗ್ರೆಸ್ ಹಿರಿಯ ಮುಖಂಡ ಜಿ ಮಾದೇಗೌಡ ಅವರನ್ನು 1,80,523 ಮತಗಳ ಭರ್ಜರಿ ಅಂತರದಿಂದ ಸೋಲಿಸಿ ಲೋಕಸಭೆ ಪ್ರವೇಶಿಸಿದರು. ಆದರೆ 1999ರಲ್ಲಿ ಅಂಬರೀಷ್ ಕಾಂಗ್ರೆಸ್ಗೆ ಪಕ್ಷಾಂತರ ಮಾಡಿ, ಜೆಡಿಎಸ್ನ ಕೃಷ್ಣ ಅವರನ್ನು 1,52,180 ಮತಗಳ ಅಂತರದಿಂದ ಸೋಲಿಸಿದರು. 2004ರಲ್ಲಿ ಅಂಬರೀಷ್ ಜೆಡಿಎಸ್ನ ಡಾ. ಎಸ್ ರಾಮೇಗೌಡ ಅವರನ್ನು 1,24,438 ಮತಗಳ ಅಂತರದಿಂದ ಪರಾಭವಗೊಳಿಸಿ ಮೂರನೇ ಬಾರಿ ಗೆದ್ದರು. ಆದರೆ 2009ರ ಚುನಾವಣೆಯಲ್ಲಿ ಜೆಡಿಎಸ್ನ ಚಲುವರಾಯಸ್ವಾಮಿ ಅವರ ವಿರುದ್ಧ ಅಂಬರೀಷ್ 23,500 ಮತಗಳ ಅಂತರದಿಂದ ಸೋತು ಹೋದರು.
ನಟಿ ರಮ್ಯ ಎಂಟ್ರಿ
ಈ ಮಧ್ಯೆ 2013ರ ವಿಧಾನಸಭೆ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಗೆದ್ದ ಚಲುವರಾಯಸ್ವಾಮಿ ಅವರು ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹಾಗಾಗಿ 2013ರಲ್ಲಿ ನಡೆದ ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದ ನಟಿ ರಮ್ಯಾ, ಜೆಡಿಎಸ್ ಅಭ್ಯರ್ಥಿ ಸಿ ಎಸ್ ಪುಟ್ಟರಾಜು ಅವರನ್ನು 33,000 ಮತಗಳ ಅಂತರದಿಂದ ಸೋಲಿಸಿ ಪಾರ್ಲಿಮೆಂಟ್ಗೆ ಎಂಟ್ರಿ ಪಡೆದರು. ಆಗ ಅವರ ಲೋಕಸಭೆ ಅವಧಿ ಇದ್ದದ್ದು 8 ತಿಂಗಳು ಮಾತ್ರ! 2014ರಲ್ಲಿ ರಮ್ಯಾ ಮತ್ತೆ ಕಾಂಗ್ರೆಸ್ನಿಂದ ನಾಮಪತ್ರ ಸಲ್ಲಿಸಿದರು. ಆದರೆ ಜೆಡಿಎಸ್ ಅಭ್ಯರ್ಥಿ ಸಿ ಎಸ್ ಪುಟ್ಟರಾಜು ಎದುರು ಕೇವಲ 5,518 ಮತಗಳಿಂದ ಸೋಲು ಕಂಡರು.
ಸುಮಲತಾ-ನಿಖಿಲ್ ಕುಮಾರಸ್ವಾಮಿ ಬಿಗ್ ಫೈಟ್
2019ರ ಎಲೆಕ್ಷನ್ನಲ್ಲಿ ಅಂಬರೀಷ್ ಅವರ ಪತ್ನಿ ಕಾಂಗ್ರೆಸ್ನಿಂದ ಟಿಕೆಟ್ ಬಯಸಿದ್ದರು. ಆದರೆ ಕಾಂಗ್ರೆಸ್ ಮಂಡ್ಯ ಕ್ಷೇತ್ರವನ್ನು ಆಗಿನ ತನ್ನ ಮಿತ್ರ ಪಕ್ಷವಾದ ಜೆಡಿಎಸ್ಗೆ ಒಪ್ಪಿಸಿತು.
ದೇಶದ ಗಮನ ಸೆಳೆದಿದ್ದ ಅಂದಿನ ಬಿರುಸಿನ ಸ್ಪರ್ಧೆಯಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಜೆಡಿಎಸ್ ಅಭ್ಯರ್ಥಿ, ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು 1,25,876 ಮತಗಳ ಭಾರಿ ಅಂತರದಿಂದ ಪರಾಭವಗೊಳಿಸಿದರು. ಹೀಗೆ ಈವರೆಗೆ ಮೂವರು ತಾರೆಯರು ಮಂಡ್ಯ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
ದೇಶದಲ್ಲಿ ಇಂದಿರಾ ಗಾಂಧಿ ವಿರೋಧಿ ಅಲೆ; ಆದರೆ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಜಯಭೇರಿ!:
ತುರ್ತು ಪರಿಸ್ಥಿತಿ ಹೇರಿದ್ದ (Parliament Flashback) ಇಂದಿರಾ ಗಾಂಧಿ ವಿರುದ್ಧ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಹಾಗಾಗಿ ಕಾಂಗ್ರೆಸ್ಗೆ ಭಾರಿ ಸೋಲಾಯಿತು. ಆದರೆ ಕರ್ನಾಟಕದಲ್ಲಿ ಮಾತ್ರ ತದ್ವಿರುದ್ಧ ಫಲಿತಾಂಶ ಕಂಡು ಬಂತು. ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ 1977ರ ಮಾ.21ರಂದು ಅಂತ್ಯವಾಯಿತು. ತುರ್ತು ಪರಿಸ್ಥಿತಿಯ ಭಯದ ವಾತಾವರಣದ ನಡುವೆಯೇ ಮಾ.16ರಿಂದ 20ರವರೆಗೆ 6ನೇ ಲೋಕಸಭೆ ಚುನಾವಣೆ ನಡೆಯಿತು. ಇಡೀ ದೇಶ ಇಂದಿರಾ ಗಾಂಧಿ ಅವರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಕೊತಕೊತನೆ ಕುದಿಯುತ್ತಿತ್ತು. ಜನರ ಆಕ್ರೋಶ ಭುಗಿಲೆದ್ದಿತ್ತು. ಎಲ್ಲ ಪ್ರತಿಪಕ್ಷಗಳು ಜನತಾ ಪರಿವಾರದ ಅಡಿಯಲ್ಲಿ ಒಂದಾಗಿ ಕಾಂಗ್ರೆಸ್ ವಿರುದ್ಧ ಸಮರ ಸಾರಿದ್ದರು. ಜನತಾ ಪರಿವಾರ 295 ಸೀಟುಗಳೊಂದಿಗೆ ಬಹುಮತ ಪಡೆಯಿತು. ಇಂದಿರಾ ಗಾಂಧಿ ಅವರ ಕಾಂಗ್ರೆಸ್ ಪಕ್ಷ ಕೇವಲ 154 ಸ್ಥಾನಗಳನ್ನು ಗಳಿಸಿತು. ಜನತಾ ಪರಿವಾರ ಹಿಂದಿನ ಚುನಾವಣೆಗಿಂತ 260 ಸ್ಥಾನಗಳನ್ನು ಹೆಚ್ಚುವರಿಯಾಗಿ ಗಳಿಸಿದರೆ, ಕಾಂಗ್ರೆಸ್ ತನ್ನ ಹಿಡಿತದಲ್ಲಿದ್ದ 198 ಕ್ಷೇತ್ರಗಳನ್ನು ಕಳೆದುಕೊಂಡಿತು.
ರಾಜ್ಯದಲ್ಲೂ ಇಂದಿರಾ ಅಲೆ ಇತ್ತು, ಆದರೆ…:
ಕರ್ನಾಟಕದಲ್ಲೂ ಇಂದಿರಾ ವಿರೋಧಿ ಅಲೆ ಜೋರಾಗಿತ್ತು. ಆದರೆ ಒಟ್ಟು 28 ಕ್ಷೇತ್ರಗಳಲ್ಲಿ ಜನತಾ ಪಕ್ಷವು ಭಾರತೀಯ ಲೋಕ ದಳದ ಹೆಸರಿನಲ್ಲಿ ಗೆದ್ದಿದ್ದು ಕೇವಲ ಎರಡು ಕ್ಷೇತ್ರಗಳಲ್ಲಿ. ಕಾಂಗ್ರೆಸ್ 26 ಸ್ಥಾನಗಳನ್ನು ಗೆದ್ದು ಅಚ್ಚರಿ ಮೂಡಿಸಿತು. ಜನತಾ ಪರಿವಾರದ ಅಭ್ಯರ್ಥಿಗಳಲ್ಲಿ ಗೆದ್ದವರೆಂದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ನ್ಯಾ. ಕೆ ಎಸ್ ಹೆಗ್ಡೆ ಮತ್ತು ಹಾಸನದಿಂದ ಎಸ್ ನಂಜೇಗೌಡರು ಮಾತ್ರ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕೆ ಎಸ್ ಹೆಗ್ಡೆ ಅವರು ಕಾಂಗ್ರೆಸ್ನ ಕೆ ಹನುಮಂತಯ್ಯ ಅವರನ್ನು 41,165 ಮತಗಳ ಅಂತರದಿಂದ ಸೋಲಿಸಿದರು. ಹಾಸನದಲ್ಲಿ ಎಸ್ ನಂಜೇಗೌಡ ಅವರು ಕಾಂಗ್ರೆಸ್ನ ಜಿ ಎಲ್ ನಲ್ಲೂರೆಗೌಡ ಅವರ ವಿರುದ್ಧ ಕೇವಲ 1081 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಸೋತ ಘಟಾನುಘಟಿಗಳು ಯಾರು?
ರಾಜ್ಯದಲ್ಲಿ ಅಂದಿನ ಚುನಾವಣೆಯಲ್ಲಿ ಸೋತು ಹೋದ ಜನತಾ ಪರಿವಾರದ ಘಟಾನುಘಟಿ ರಾಜಕಾರಣಿಗಳು ಯಾರ್ಯಾರು ನೋಡಿ: ಕೆನರಾ (ಈಗಿನ ಉತ್ತರ ಕನ್ನಡ ಕ್ಷೇತ್ರ) ಲೋಕಸಭೆ ಕ್ಷೇತ್ರದಿಂದ ರಾಮಕೃಷ್ಣ ಹೆಗಡೆ, ಧಾರವಾಡ ಉತ್ತರದಿಂದ ಜಗನ್ನಾಥ್ ರಾವ್ ಜೋಶಿ, ಮಂಗಳೂರಿನಿಂದ ಎ ಕೆ ಸುಬ್ಬಯ್ಯ, ಮೈಸೂರಿನಿಂದ ಎಂ ಎಸ್ ಗುರುಪಾದಸ್ವಾಮಿ, ಶಿವಮೊಗ್ಗದಿಂದ ಜೆ ಎಚ್ ಪಟೇಲ್, ಉಡುಪಿಯಿಂದ ವಿ ಎಸ್ ಆಚಾರ್ಯ, ಧಾರವಾಡ ದಕ್ಷಿಣದಿಂದ ಸಿ ಎಂ ಇಬ್ರಾಹಿಂ, ತುಮಕೂರಿನಿಂದ ಎಸ್ ಮಲ್ಲಿಕಾರ್ಜುನಯ್ಯ. 1977ರ ಮಾ.25ರಂದು ಮಧ್ಯಾಹ್ನ 3.30ಕ್ಕೆ 81 ವರ್ಷದ ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಇಂದಿರಾ ಆಳ್ವಿಕೆ ಅಂತ್ಯ ಆಯಿತು. ಆದರೆ ಕರ್ನಾಟಕ ಮಾತ್ರ ಕಾಂಗ್ರೆಸ್ನ ಭದ್ರಕೋಟೆಯಾಗಿಯೇ ಉಳಿಯಿತು.