ಬೆಂಗಳೂರು: ವಿಧಾನ ಪರಿಷತ್‌ಗೆ (MLC Election) ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಬಿಕ್ಕಟ್ಟಿನ ಚೆಂಡು ಸದ್ಯಕ್ಕೆ ಹೈಕಮಾಂಡ್ ಅಂಗಳದಲ್ಲಿದೆ. ದೆಹಲಿಯಲ್ಲಿ ನಡೆಯುತ್ತಿರುವ ಸರಣಿ ಸಭೆಗಳಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ (DCM DK Shivakumar) ಸದ್ಯ ತಮ್ಮ ಭಿನ್ನಮತಗಳನ್ನು ಮರೆತು ಒಂದಾಗಿದ್ದಾರೆ. ಈ ನಡುವೆ ಹಿರಿಯ ನಾಯಕ, ಗೃಹ ಸಚಿವ ಪರಮೇಶ್ವರ (G Parameshwara) ಅವರು, ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂಬ ಬಾಂಬ್ ಹಾಕಿದ್ದಾರೆ. ಕೋಲಾರದ ಹಿರಿಯ ನಾಯಕ ರಮೇಶ್ ಕುಮಾರ್ (Ramesh Kumar) ಅವರು ಕೂಡ ತಮ್ಮ ದಾಳ ಉರುಳಿಸಲು ಮುಂದಾಗಿದ್ದಾರೆ.
ರಾಜಕೀಯ ವರ್ಚಸ್ಸಿಗಾಗಿ ನನಗೆ ನೀನು, ನಿನಗೆ ನಾನು ಎಂಬ ತತ್ವ ಉಪಯೋಗಿಸಿರುವ ಸಿಎಂ ಹಾಗೂ ಡಿಸಿಎಂ, ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸುವುದು ಬಹುತೇಕ ಖಚಿತವಾಗಿದೆ. ಪರಿಷತ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಡಿಕೆಶಿ, ಸಿದ್ದರಾಮಯ್ಯ ಒಂದಾಗಿದ್ದು, ಹಿರಿಯ ನಾಯಕರ ಅಭಿಪ್ರಾಯವನ್ನು ತೆಗೆದುಕೊಳ್ಳದೇ ದೆಹಲಿಗೆ ದೌಡಾಯಿಸಿದ್ದಾರೆ. ಎರಡು ಪ್ರತ್ಯೇಕ ಪಟ್ಟಿ ಹಿಡಿದು ಹೊರಟಿರುವ ನಾಯಕರು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಭೇಟಿ ಮಾಡಿದ್ದಾರೆ. ನಾಳೆ ಎಐಸಿಸಿ ಅಧ್ಯಕ್ಷ ಖರ್ಗೆಯವರನ್ನು (Mallikarjun Kharge) ಭೇಟಿ ಮಾಡಲಿದ್ದಾರೆ.
ಸಿದ್ದರಾಮಯ್ಯ ಪುತ್ರ ಯತೀಂದ್ರ ಹಾಗೂ ಗೋವಿಂದರಾಜುಗೆ ಟಿಕೆಟ್ ಕನ್ಫರ್ಮ್ ಎಂದು ಮೂಲಗಳು ತಿಳಿಸಿವೆ. ಈ ಉಭಯರ ಪರವಾಗಿ ಸಿಎಂ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡಿದ್ದಾರೆ. ಪುತ್ರ ಯತೀಂದ್ರ ತಂದೆಗಾಗಿ ವರುಣ ಕ್ಷೇತ್ರ ತ್ಯಾಗ ಮಾಡಿದ್ದರು. ತ್ಯಾಗ ಮಾಡಿದ ಮಗನಿಗೆ ಪರಿಷತ್ ಸ್ಥಾನ ಕೊಡಿಸಲು ಸಿದ್ದರಾಮಯ್ಯ ಟೊಂಕ ಕಟ್ಟಿದ್ದಾರೆ. ಇತ್ತ ಗೋವಿಂದರಾಜು ಪರವಾಗಿಯೂ ಸಿಎಂ ಬ್ಯಾಟಿಂಗ್ ಮಾಡಿದ್ದಾರೆ.
ಡಿಕೆಶಿ ಹೇಳಿರುವ ಹೆಸರಿಗೂ ಸಿಎಂ ಎಸ್ ಎಂದಿದ್ದಾರೆ ಎನ್ನುತ್ತಿವೆ ಮೂಲಗಳು. ವಿನಯ್ ಕಾರ್ತಿಕ್ ಹಾಗೂ ಮುಳುಗುಂದ್ ಪರ ಡಿಕೆಶಿ ನಿಂತಿದ್ದಾರೆ ಎನ್ನುತ್ತಿವೆ ದೆಹಲಿಯ ಮೂಲಗಳು. ಹೀಗಾಗಿ ಈ ಬಾರಿ ಪರಿಷತ್ ಅಭ್ಯರ್ಥಿ ಆಯ್ಕೆಯಲ್ಲಿ ಸಿಎಂ, ಡಿಸಿಎಂ ಇಬ್ಬರ ಕೈ ಮೇಲುಗೈ ಆಗೋದರಲ್ಲಿ ಯಾವುದೇ ಅನುಮಾನವಿಲ್ಲ.
ಇದರಿಂದ ಕಾಂಗ್ರೆಸ್ ಪಕ್ಷದ ಹಿರಿಯ ಹುದ್ದರಿಗಳಲ್ಲಿ ಅಸಮಾಧಾನ ಮೂಡಿದೆ. ದೆಹಲಿಯಲ್ಲಿ ಚರ್ಚೆಗೂ ಮುನ್ನವೇ ಕೈ ಪಾಳಯದಲ್ಲಿನ ಹಿರಿಯ ನಾಯಕರ ಅಸಮಾಧಾನ ಮುಗಿಲು ಮುಟ್ಟಿದ್ದು, ಪ್ರತಿ ಬಾರಿಯೂ ಹಿರಿಯ ನಾಯಕರ ಕಡೆಗಣಿನೆಯಾಗುತ್ತಿದೆ ಎಂದು ಕೆಲವರು ಬಹಿರಂಗ ಅಸಮಾಧಾನ ತೋಡಿಕೊಂಡಿದ್ದಾರೆ. ಪರಿಷತ್ ಅಭ್ಯರ್ಥಿ ಆಯ್ಕೆ ವಿಷ್ಯದಲ್ಲಿ ಹಿರಿಯ ನಾಯಕರ ಸಲಹೆ ಪಡೆದಿಲ್ಲ. ಇಂಥ ಆಯ್ಕೆಗಳನ್ನು ನಾಲ್ಕು ಗೋಡೆ ನಡುವೆ ಮಾಡುವುದು ಸರಿಯಲ್ಲ ಎಂದು ಗೃಹ ಸಚಿವ ಪರಮೇಶ್ವರ ಬಹಿರಂಗವಾಗಿ ಟೀಕಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಕೈ ಪಾಳಯದಲ್ಲಿ ಈ ಬಗ್ಗೆ ಅಸಮಾಧಾನ ಮೂಡಿತ್ತು. ಈ ಬಾರಿಯೂ ಸಿಎಂ, ಡಿಸಿಎಂ ತಮ್ಮ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸುವುದು ಪಕ್ಕಾ ಆಗಿದ್ದು, ಇವರಿಬ್ಬರ ನಿರಂಕುಶ ಓಟಕ್ಕೆ ಎಐಸಿಸಿ ಅಧ್ಯಕ್ಷ ಖರ್ಗೆ ಬ್ರೇಕ್ ಹಾಕುತ್ತಾರಾ ನೋಡಬೇಕಿದೆ.
ಇತ್ತ ಕೊನೆಯ ಕ್ಷಣದಲ್ಲಿ ಪರಿಷತ್ ಸ್ಪರ್ಧೆಗೆ ರಮೇಶ್ ಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಕಾಂಗ್ರೆಸ್‌ಗೆ ಸಿಗುವ ಏಳು ಸ್ಥಾನಕ್ಕೆ ಭಾರಿ ಪೈಪೋಟಿ ಇದ್ದು, ಏಳು ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಮಾಡಲು ದೆಹಲಿಗೆ ಹೋಗುವ ಮುನ್ನವೇ ರಮೇಶ್ ಕುಮಾರ್ ಅವರು ಸಿಎಂ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಶಾಸಕರ ಜತೆ ಹೋಗಿ ಲಾಬಿ ಮಾಡಿರುವ ರಮೇಶ್ ಕುಮಾರ್, ಪರಿಷತ್ ಸ್ಥಾನ ತಮಗೆ ಕೊಡಿಸುವಂತೆ ಪಟ್ಟು ಹಿಡಿದಿದ್ದಾರೆ.
ನನ್ನ ಲಿಸ್ಟ್‌ನಲ್ಲಿ ನೀನು ಇದ್ದೀಯಾ. ಡಿಕೆ ಶಿವಕುಮಾರ್ ಬಳಿ ಹೋಗು. ಅವರ ಪಟ್ಟಿಯಲ್ಲಿ ಹೆಸರು ಬರುವ ರೀತಿ ಮಾಡು ಎಂದು ಸಿದ್ದರಾಮಯ್ಯ ಓಲೈಸಿ ಕಳಿಸಿದ್ದಾರೆ. ಹೀಗಾಗಿ ಡಿಕೆಶಿ ಮನೆಗೂ ತೆರಳಿದ ರಮೇಶ್ ಕುಮಾರ್ ಆಂಡ್ ಟೀಮ್, ಪರಿಷತ್ ಸ್ಥಾನ ಕೊಡಿಸುವಂತೆ ಪಟ್ಟು ಹಿಡಿದಿದ್ದಾರೆ. ಆಕಾಂಕ್ಷಿಗಳ ಸಂಖ್ಯೆ ದುಪ್ಪಟ್ಟು ಇದೆ. ಆದರೂ ನಿಮ್ಮ ಬಗ್ಗೆ ಹೈಕಮಾಂಡ್ ಜತೆ ಮಾತನಾಡ್ತೀವಿ ಎಂದು ಹೇಳಿ ಡಿಕೆಶಿ ಕಳಿಸಿದ್ದಾರೆ ಎಂದು ತಿಳಿದುಬಂದಿದೆ.
ಹೀಗಾಗಿ ದೆಹಲಿಯ ಕಾಂಗ್ರೆಸ್ ಬೆಳವಣಿಗೆಗಳ ಮೇಲೆ ರಮೇಶ್ ಕುಮಾರ್ ಕಣ್ಣಿಟ್ಟಿದ್ದಾರೆ. ಅತ್ತ ಕೆ.ಎಚ್ ಮುನಿಯಪ್ಪ ಬಣ ರಮೇಶ್ ಕುಮಾರರ ಆಕಾಂಕ್ಷೆಗೆ ಅಡ್ಡಗಾಲಾಗಿದೆ. ಈ ವಿರೋಧದ ನಡುವೆಯೂ ರಮೇಶ್ ಕುಮಾರ್‌ಗೆ ಸ್ಥಾನ ಒಲಿಯಲಿದೆಯೇ ನೋಡಬೇಕಿದೆ.
ಇದನ್ನೂ ಓದಿ: MLC Election: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಖಚಿತ: ಬೇಳೂರು