Site icon Vistara News

Modi In Bengaluru | ರಾಜ್ಯ ಸರ್ಕಾರ ಎಚ್‌.ಡಿ. ದೇವೇಗೌಡರಿಗೆ ಅವಮಾನ ಮಾಡಿದೆ ಎಂದ ಜೆಡಿಎಸ್‌, ಸಾಮಾಜಿಕ ಜಾಲತಾಣದಲ್ಲಿ ಬಿರುಸಿನ ಚರ್ಚೆ

H D Devegowda

ಬೆಂಗಳೂರು: ನಾಡಿನ ಪರಂಪರೆಗೆ ಹೊಸ ಸೇರ್ಪಡೆಯಾದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರನ್ನು ಆಹ್ವಾನಿಸದೇ ಅವಮಾನಿಸಲಾಗಿದೆ ಎಂದು ರಾಜ್ಯ ಜೆಡಿಎಸ್‌ ಘಟಕ ಆರೋಪಿಸಿದೆ.

ಈ ಕುರಿತು ಕಾರ್ಯಕ್ರಮದ ಆಹ್ವಾನ ಪತ್ರಿಕೆ ಜತೆಗೆ ಏಳು ಸರಣಿ ಟ್ವೀಟ್‌ ಮಾಡಿರುವ ಜೆಡಿಎಸ್‌ ಘಟಕ, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದೆ.

“ನಾಡಪ್ರಭು ಕೆಂಪೇಗೌಡರ ನಂತರ ಬೆಂಗಳೂರು ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ, ಕನ್ನಡ ನೆಲದಿಂದ ಪ್ರಧಾನಿ ಆಗಿದ್ದ ಏಕೈಕ ಕನ್ನಡಿಗರಾದ ಶ್ರೀ ಎಚ್‌.ಡಿ. ದೇವೇಗೌಡ ಅವರನ್ನು ಶ್ರೀ ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಸರ್ಕಾರವು ಆಹ್ವಾನ ಮಾಡದಿರುವುದು ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ” ಎಂದಿದ್ದಾರೆ.

“ನಾಡಪ್ರಭುಗಳ ಪ್ರತಿಮೆ ಸ್ಥಾಪನೆಯ ಕಾಮಗಾರಿಗೆ ಅಡಿಗಲ್ಲು ಹಾಕುವ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿಗಳನ್ನು ಆಹ್ವಾನಿಸಿದ ಬಿಜೆಪಿ ಸರಕಾರ, ಅದೇ ಪ್ರಧಾನಿಗಳಿಂದ ಪ್ರತಿಮೆ ಲೋಕಾರ್ಪಣೆ ಮಾಡಿಸುವ ಸಮಾರಂಭಕ್ಕೆ ಅವರನ್ನು ಆಹ್ವಾನ ಮಾಡಲಿಲ್ಲ, ಯಾಕೆ?” ಎನ್ನುತ್ತ, ಅಡಿಗಲ್ಲು ಹಾಕು ಸಂದರ್ಭದ ಫೋಟೊವನ್ನು ಹಂಚಿಕೊಂಡಿದ್ದಾರೆ.

“ಯಾವುದೋ ಸ್ಥಳೀಯ ಮಟ್ಟದ ಕಾರ್ಯಕ್ರಮ ಆಗಿದ್ದಿದ್ದರೆ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ಆದರೆ, ನಾಡಪ್ರಭುಗಳ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಪ್ರಧಾನಿಗಳೇ ಬರುತ್ತಾರೆ ಎಂದರೆ, ನಮ್ಮ ಹೆಮ್ಮೆಯ ಮಾಜಿ ಪ್ರಧಾನಿಗಳನ್ನು ಅಧಿಕೃತವಾಗಿ ಕರೆಯಲೇಬೇಕಿತ್ತು. ಅವರ ಬಗ್ಗೆ ಅನಾದರ ತೋರಿದ್ದು ಕನ್ನಡಿಗರಿಗೆ ಅಪಾರ ನೋವುಂಟು ಮಾಡಿದೆ”

“ರಾಜ್ಯ ಬಿಜೆಪಿ ಸರ್ಕಾರ ,ಬಿಜೆಪಿ ನಾಯಕರು ರಾಜಕೀಯ ಕಾರಣಕ್ಕಾಗಿ ಮಾಜಿ ಪ್ರಧಾನಿಗಳನ್ನು ಕಡೆಗಣಿಸಿದ್ದಾರೆ ಎನ್ನುವುದು ಎಲ್ಲರ ಭಾವನೆ. ಇದನ್ನು ಬಿಜೆಪಿ ಪಕ್ಷದ ಕಾರ್ಯಕ್ರಮದಂತೆ ನಡೆಸಿದ್ದು ಮಾಜಿ ಪ್ರಧಾನಿಗಳಿಗೆ ಮಾತ್ರವಲ್ಲ, ಸಮಸ್ತ ಕನ್ನಡಿಗರು ಹಾಗೂ ಸ್ವತಃ ನಾಡಪ್ರಭುಗಳಿಗೇ ಮಾಡಿದ ಅಪಮಾನ. ಇದು ಅಕ್ಷಮ್ಯದ ಪರಮಾವಧಿ” ಎಂದಿದ್ದಾರೆ.

ಸ್ವತಃ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಹರಿಹಾಯ್ದಿರುವ ಜೆಡಿಎಸ್‌, “ಸರ್ವ ಜನರನ್ನು ಸಮಾನವಾಗಿ ಕಂಡು ಆದರ್ಶ ಪ್ರಭುವಾಗಿದ್ದ ನಾಡಪ್ರಭು ಕೆಂಪೇಗೌಡರನ್ನು ರಾಜಕೀಯಕ್ಕೆ ಎಳೆಯುವ ಕೆಲಸವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಮಾಡಿರುವುದು ಸ್ಪಷ್ಟ. ಇದು ಅತ್ಯಂತ ದುರದೃಷ್ಟಕರ. ರಾಜ್ಯ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಪ್ರತಿಮೆ ಅನಾವರಣ ಮಾಡಲಾಗಿದೆ ಎನ್ನುವುದು ಸತ್ಯ” ಎಂದಿದೆ.

“ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯ ಸರಕಾರ ಹಾಗೂ ಬಿಜೆಪಿ ನಾಯಕರು ದಾರಿ ತಪ್ಪಿಸಿದ್ದಾರೆ ಎನ್ನುವುದರಲ್ಲಿ ಸಂಶಯ ಇಲ್ಲ. ಮಾನ್ಯ ದೇವೇಗೌಡರ ಬಗ್ಗೆ ಅತೀವ ಗೌರವ ಇಟ್ಟುಕೊಂಡಿರುವ ಪ್ರಧಾನಿಗಳ ಬಗ್ಗೆಯೇ ಕನ್ನಡಿಗರಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ರಾಜ್ಯ ಬಿಜೆಪಿ ಸರಕಾರ ಮತ್ತು ಬಿಜೆಪಿ ನಾಯಕರು ವರ್ತಿಸಿದ್ದಾರೆ.
ಕೆಂಪೇಗೌಡರು ಬಿಜೆಪಿಯ ಆಸ್ತಿಯಲ್ಲ, ಕೆಲ ಸಚಿವರ ಜಹಗೀರಲ್ಲ, ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುವ ವಿಷಯವೂ ಅಲ್ಲ. ನಾಡಪ್ರಭುಗಳು ಸಮಸ್ತ ಕನ್ನಡಿಗರ ಹೆಮ್ಮೆ. ನಮ್ಮೆಲ್ಲರ ಅರಾಧ್ಯದೈವ. ಇನ್ನು, ಬೆಂಗಳೂರು ನಗರ ನಮ್ಮೆಲ್ಲರದ್ದು. ಸಮಸ್ತ ಕನ್ನಡಿಗರ ಜೀವನಾಡಿ. ಈ ಸೂಕ್ಷ್ಮವನ್ನು ರಾಜ್ಯ ಬಿಜೆಪಿ ಸರಕಾರ ಮರೆತು ಕನ್ನಡಿಗರನ್ನು ಅಪಮಾನಿಸಿದೆ” ಎಂದಿದೆ.

ಇದನ್ನೂ ಓದಿ | Kempegowda statue | ಸಂಸತ್‌ ಆವರಣದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿ: ಪ್ರಧಾನಿಗೆ ದೇವೇಗೌಡರ ಪತ್ರ

Exit mobile version