Site icon Vistara News

Modi in Karnataka: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ದೇಶಕ್ಕೆ ಸಮರ್ಪಣೆ ಮಾಡಿದ ನರೇಂದ್ರ ಮೋದಿ

#image_title

ಮಂಡ್ಯ: ಅನೇಕ ವರ್ಷಗಳಿಂದಲೂ ನನೆಗುದಿಗೆ ಬಿದ್ದಿದ್ದ ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಮಂಡ್ಯದ ಗೆಜ್ಜಲಗೆರೆಯಲ್ಲಿ ಆಯೋಜನೆ ಮಾಡಿದ್ದ, 12 ಸಾವಿರ ಕೋಟಿ ರೂ. ಮೊತ್ತದ 210 ಕಿಲೋಮೀಟ್‌ ಉದ್ದದ ಎರಡು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಯಿ ಭುವನೇಶ್ವರಿ ಜತೆಗೆ ಆದಿ ಚುಂಚನಗಿರಿ ಹಾಗೂ ಮೇಲುಕೋಟೆ ಸಂತರ ಆಶೀರ್ವಾದವನ್ನು ಬೇಡುತ್ತೇನೆ. ಸಕ್ಕರೆ ನಗರ ಮಧುರ ಮಂಡ್ಯ, ಮಂಡ್ಯದ ಈ ಪ್ರೀತಿ, ಸತ್ಕಾರದಿಂದ ನನಗೆ ಅತ್ಯಂತ ಸಂತೋಷವಾಗಿದೆ, ಎಲ್ಲರಿಗೂ ತಲೆಬಾಗಿ ನಮಸ್ಕರಿಸುತ್ತೇನೆ ಎಂದರು.

ಡಬಲ್‌ ಇಂಜಿನ್‌ ಸರ್ಕಾರವು ತಮ್ಮ ಪ್ರೀತಿ, ಋಣವನ್ನು ಬಡ್ಡಿ ಸಮೇತ ತೀರಿಸಲು ಪ್ರಯತ್ನಿಸುತ್ತಿದ್ದೇವೆ. ವೇಗವಾಗಿ ಅಭಿವೃದ್ಧಿ ಮಾಡುತ್ತ ಈ ಋಣವನ್ನು ತೀರಿಸುತ್ತೇವೆ ಎಂದರು.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಕುರಿತು ದೇಶದಲ್ಲಿ ಬಹಳ ಚರ್ಚೆ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬಹಳ ಕುತೂಹಲ ಇದೆ. ಇಂತಹ ಆಧುನಿಕ, ಅದ್ಭುತ ಹೆದ್ದಾರಿಗಳು ಭಾರತದ ಎಲ್ಲ ಕಡೆಯೂ ಆಗಬೇಕು ಎನ್ನುವುದು ದೇಶದ ಯುವಕರ ಆಸೆಯಾಗಿದೆ. ಈ ಹೆದ್ದಾರಿಯನ್ನು ನೋಡಿ ನಮ್ಮ ದೇಶದ ಯುವಕರು ಹೆಮ್ಮ ಪಡುತ್ತಿದ್ದಾರೆ. ಈ ಹೆದ್ದಾರಿಯ ಕಾರಣಕ್ಕೆ ಎರಡೂ ನಗರಗಳ ನಡುವಿನ ಸಂಚಾರ ಸಮಯ ಅರ್ಧಕ್ಕಿಂತಲೂ ಕಡಿಮೆ ಆಗಲಿದೆ.

ಮೈಸೂರು-ಕುಶಾಲನಗರ ರಸ್ತೆಯ ಶಿಲಾನ್ಯಾಸವೂ ಇಂದು ಆಗಿದೆ. ಇದು ಎಲ್ಲರ ವಿಕಾಸಕ್ಕೆ ವೇಗ ನೀಡುತ್ತದೆ, ಸಮೃದ್ಧಿಯ ರಸ್ತೆಯನ್ನು ತೆರೆಯುತ್ತದೆ. ಈ ಯೋಜನೆಗಳಿಗಾಗಿ ನಿಮಗೆಲ್ಲರಿಗೂ ಅಭಿನಂದನೆಗಳು. ಅಭಿವೃದ್ಧಿ ಎಂದ ಕೂಡಲೆ ದೇಶದಲ್ಲಿ ಕೃಷ್ಣರಾಜ ಒಡೆಯರ್‌ ಹಾಗೂ ವಿಶ್ವೇಶ್ವರಯ್ಯ ಅವರ ಹೆಸರು ಕೇಳಿಬರುತ್ತದೆ. ಸಂಕಷ್ಟವನ್ನು ಅವಕಾಶವಾಗಿ ಪರಿವರ್ತಿಸಿಕೊಳ್ಳುವ ಇಂತಹ ಮಹಾನ್‌ ವ್ಯಕ್ತಿಗಳನ್ನು ಪಡೆದ ಎಲ್ಲರೂ ಧನ್ಯರು.

ಭಾರತ್‌ ಮಾಲಾ ಹಾಗೂ ಸಾಗರ್‌ ಮಾಲಾ ಯೋಜನೆಯ ಕಾರಣಕ್ಕೆ ಕರ್ನಾಟಕ ಬದಲಾಗುತ್ತಿದೆ, ದೇಶ ಬದಲಾಗುತ್ತಿದೆ. ಕರೊನಾ ಸಂಕಷ್ಟದ ಸಮಯದಲ್ಲೂ ಭಾರತವು ಮೂಲಸೌಕರ್ಯ ಯೋಜನೆಯ ಬಜೆಟ್‌ ಅನ್ನು ಹೆಚ್ಚಳ ಮಾಡಲಾಗಿದೆ. ಈ ವರ್ಷ ಹತ್ತು ಲಕ್ಷ ಕೋಟಿ ರೂ. ಹಣವನ್ನು ಮೂಲಸೌಕರ್ಯಕ್ಕೆ ನೀಡಲಾಗಿದೆ.

ಕಾರ್ಯಕ್ರಮದ ಆರಂಭದಲ್ಲಿ ರೈತರ ಗುರುತಿನ ಹಸಿರು ಶಾಲು, ಸುಮಲತಾ ಅವರಿಂದ ಸಾವಯವ ಬೆಲ್ಲ, ಹೆದ್ದಾರಿಯಲ್ಲಿ ಸಾಗುತ್ತಿರುವ ಆನೆಯ ಕಲಾಕೃತಿಯನ್ನು ಸಚಿವ ಗೋಪಾಲಯ್ಯ ಸಮರ್ಪಿಸಿದರು.

Exit mobile version