ಮೈಸೂರು: ಲೋಕಸಭಾ ಚುನಾವಣೆಯ (Parliament Elections 2024) ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ಮೈತ್ರಿ (BJP-JDS Alliance) ಏರ್ಪಡಲಿದೆ ಎಂಬ ಸುದ್ದಿ ಕೇಳುತ್ತಿದ್ದಂತೆಯೇ ಹಲವಾರು ಬಿಜೆಪಿ ನಾಯಕರು ಥ್ರಿಲ್ಲಾಗಿದ್ದಾರೆ. ಈ ಬಾರಿಯ ಕಾಂಗ್ರೆಸ್ ಅಬ್ಬರದಲ್ಲಿ ಸೋಲಬಹುದೇ ಎಂಬ ಭಯದಲ್ಲಿದ್ದವರಿಗೂ ಜೆಡಿಎಸ್ ಮತಗಳು ಬಲ ತುಂಬಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. ಹೀಗಾಗಿ ಜೆಡಿಎಸ್ ಜತೆಗಿನ ಮೈತ್ರಿಯನ್ನು ಬಹುತೇಕರು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. ಮೈಸೂರಿನ ಸಂಸದರಾಗಿರುವ ಪ್ರತಾಪ್‌ಸಿಂಹ (MP Pratapsimha) ಅವರಂತೂ ಮಾಜಿ ಪ್ರಧಾನಿ ದೇವೇಗೌಡರ (HD Devegowda) ಮುಂದೆ ಮಂಡಿಯೂರಿ ನಮಸ್ಕರಿಸುವ ಮೂಲಕ ಸಂಬಂಧವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹೀಗೆ ಮಂಡಿಯೂರಿ ನಮಸ್ಕರಿಸಿದ ಘಟನೆ ನಡೆದಿರುವುದು ಸೋಮವಾರ ಮೈಸೂರಿನಲ್ಲಿ. ಆದಿ ಚುಂಚನಗಿರಿ ನೂತನ ಶಾಖಾ ಮಠದ ಉದ್ಘಾಟನೆ ಕಾರ್ಯಕ್ರಮದ ವೇಳೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಸಮ್ಮುಖದಲ್ಲಿ ಪ್ರತಾಪ್ ಸಿಂಹ ಅವರು ಎಚ್.ಡಿ ದೇವೇಗೌಡ ಹಾಗೂ ಜಿ.ಟಿ ದೇವೇಗೌಡ ಇಬ್ಬರನ್ನೂ ಭೇಟಿ ಮಾಡಿ ಮಾತುಕತೆ ಕಡೆಸಿದರು. ಭೇಟಿಯ ವೇಳೆ ಅವರು ಮಂಡಿಯೂರಿ ನಮಸ್ಕರಿಸಿದ್ದನ್ನು ನೋಡಿ ಸ್ವತಃ ದೇವೇಗೌಡರು, ಸ್ವಾಮೀಜಿಗಳು ಮತ್ತು ಜಿ.ಟಿ. ದೇವೇಗೌಡರು ನಕ್ಕಿರುವ ಚಿತ್ರಗಳು ವೈರಲ್ ಆಗುತ್ತಿವೆ.
ಲೋಕಸಭಾ ಚುನಾವಣೆಗೆ ಬಿಜೆಪಿ, ಜೆಡಿಎಸ್ ಮೈತ್ರಿ ನಡೆಯಲಿದೆ ಎಂಬ ಸುದ್ದಿಯ ಬೆನ್ನಲ್ಲೇ ಸಂಸದ ಪ್ರತಾಪ್ ಸಿಂಹ ಅವರು ಅಲರ್ಟ್ ಆಗಿದ್ದು, ಜೆಡಿಎಸ್ ವರಿಷ್ಠರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಮಾತುಕತೆ ನಡೆಸಿದ್ದಾರೆ.
ಪ್ರತಾಪ್ ಸಿಂಹ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದರು. ಮೈತ್ರಿಯ ಅನುಸಾರ ಮೈಸೂರಿನಲ್ಲಿ ಜೆಡಿಎಸ್ ಬಿಜೆಪಿಗೆ ಬೆಂಬಲ ನೀಡಲಿದೆ ಎನ್ನಲಾಗುತ್ತಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಪ್ರಾಬಲ್ಯ ಹೊಂದಿರುವುದು ಒಕ್ಕಲಿಗರು. ಅವರನ್ನು ಒಲಿಸಿಕೊಳ್ಳುವ ನಿಟ್ಟಿನಲ್ಲಿ ಇದೊಂದು ಸಣ್ಣ ಪ್ರಯತ್ನ ಎಂದು ಹೇಳಲಾಗುತ್ತಿದೆ.
ನಿಜವೆಂದರೆ, ಪ್ರತಾಪ್ ಸಿಂಹ ಅವರು ಮೈಸೂರು ಭಾಗದ ಜೆಡಿಎಸ್ ನಾಯಕರ ಜತೆಗೆ ಉತ್ತಮ ಬಾಂಧವ್ಯವನ್ನೇ ಹೊಂದಿದ್ದಾರೆ. ಜಿ.ಟಿ. ದೇವೇಗೌಡ, ಸಾರಾ ಮಹೇಶ್ ಅವರೂ ಆಪ್ತರೇ ಆಗಿದ್ದಾರೆ. ಪ್ರತಾಪ್‌ಸಿಂಹ ಅವರಿಗೆ ಬಿಜೆಪಿಯಲ್ಲೇ ಕೆಲವರು ವಿರೋಧಿಗಳಿರಬಹುದು. ಆದರೆ, ಜೆಡಿಎಸ್‌ನಲ್ಲಿ ಇಲ್ಲ ಎಂಬ ಮಾತಿದೆ. ಅಷ್ಟು ಚೆನ್ನಾಗಿ ಸಂಬಂಧ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ:MP Pratapsimha : ಮಹಿಷ ದಸರಾಗೆ ಬಿಡಲ್ಲ, ಹೇಗೆ ಆಚರಿಸ್ತಾರೋ ನೋಡ್ತೇನೆ; ಸಂಸದ ಪ್ರತಾಪ್ ಸಿಂಹ ಸವಾಲು
ನಿಜವೆಂದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವರ ಗೆಲುವಿನಲ್ಲಿ ಕೊನೆಯ ಕ್ಷಣದಲ್ಲಿ ತಿರುಗಿದ ಜೆಡಿಎಸ್ ಮತಗಳ ಪ್ರಭಾವ ಇದೆ ಎಂದು ಹೇಳಲಾಗುತ್ತಿದೆ. ಸ್ವತಃ ದೇವೇಗೌಡರೇ ಇಲ್ಲ ಪ್ರತಾಪ್ ಪರ ನಿಂತರು ಎನ್ನಲಾಗುತ್ತಿತ್ತು. ಕಳೆದ ಬಾರಿ ಹೇಗೋ ಗೊತ್ತಿಲ್ಲ. ಆದರೆ, ಈ ಬಾರಿ ಅವರು ಪ್ರತಾಪ್ ಸಿಂಹ ಅವರಿಗೆ ಮುಕ್ತವಾಗಿ ಬೆಂಬಲ ನೀಡುವುದು ಖಚಿತವಾಗಿದೆ.
ಹ್ಯಾಟ್ರಿಕ್ ಗೆಲುವಿಗೆ ಚುನಾವಣಾ ರಣತಂತ್ರ ಹೆಣೆಯುತ್ತಿರುವ ಸಂಸದ ಪ್ರತಾಪ್ ಸಿಂಹ ಅವರಿಗೆ ಜೆಡಿಎಸ್ ಮೈತ್ರಿ ಬಲವನ್ನು ಕೊಟ್ಟಿದೆ. ದೇವೇಗೌಡರ ಆಶೀರ್ವಾದವಿದ್ದರೆ ಗೆಲುವು ಕಷ್ಟವಲ್ಲ ಎನ್ನುವುದು ಪ್ರತಾಪ್ ಸಿಂಹ ಅವರಿಗೂ ಗೊತ್ತಿದೆ. ಈ ನಡುವೆ, ಅವರ ವಿರುದ್ಧ ಕಾಂಗ್ರೆಸ್‌ನಿಂದ ಯಾರು ಕಣಕ್ಕಿಳಿಯುತ್ತಾರೆ ಎನ್ನುವುದರ ಆಧಾರದ ಮೇಲೆ ಹೊಸ ಕಾರ್ಯತಂತ್ರಗಳು ರೂಪುಗೊಳ್ಳಲಿವೆ.