ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯಸಭಾ ಚುನಾವಣೆ ಎದುರಾಗಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಚಟುವಟಿಕೆ ಬಿರುಸಾಗಿತ್ತು. ಬಿಜೆಪಿಯಿಂದ ಸಹ ರಾಜ್ಯಸಭೆ ಟಿಕೆಟ್‌ಗೆ (Rajya Sabha Ticket) ಭಾರಿ ಲಾಬಿ ನಡೆದಿತ್ತು. ಈ ಸ್ಥಾನದ ಮೇಲೆ ಮಾಜಿ ಸಚಿವ ವಿ. ಸೋಮಣ್ಣ (V Somanna) ಕಣ್ಣಿಟ್ಟಿದ್ದರು. ಅದಕ್ಕಾಗಿ ದೆಹಲಿವರೆಗೆ ಹೋಗಿ ಲಾಬಿಯನ್ನೂ ಮಾಡಿದ್ದರು. ಆದರೆ, ಬಿಜೆಪಿ ಹೈಕಮಾಂಡ್ (BJP high command) ಯಾವುದೇ ಲಾಬಿಗೆ ಮಣಿಯದೆ ಕರ್ನಾಟಕದಿಂದ ನಾರಾಯಣಸಾ ಕೃಷ್ಣಸಾ ಭಾಂಡಗೆ (Narayansa Krishnasa Bhandage) ಅವರಿಗೆ ಟಿಕೆಟ್ ನೀಡಿದೆ.
ಎಬಿವಿಪಿ ಹಾಗೂ ಸಂಘ ಪರಿವಾರದಲ್ಲಿ ಸಕ್ರಿಯರಾಗಿದ್ದ ನಾರಾಯಣಸಾ ಭಾಂಡಗೆ ಅವರಿಗೆ ರಾಜ್ಯಸಭೆ ಟಿಕೆಟ್ ಒಲಿದಿದೆ. ಭಾನುವಾರ ರಾತ್ರಿ ಬಿಜೆಪಿಯು ವಿವಿಧ ರಾಜ್ಯಗಳ ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕರ್ನಾಟಕದ ಅಭ್ಯರ್ಥಿಯ ಹೆಸರನ್ನೂ ಪ್ರಕಟಿಸಿದೆ.
ಇದನ್ನೂ ಓದಿ: Amit Shah: ಲೋಕಸಭೆಗೆ ಬಿಜೆಪಿ ಟಿಕೆಟ್; ಫೆ. 20-21ಕ್ಕೆ ಮಹತ್ವದ ಸಭೆ ನಡೆಸಲು ಅಮಿತ್ ಶಾ ನಿರ್ಧಾರ!
ಕರ್ನಾಟಕದಲ್ಲಿ ಒಟ್ಟು ನಾಲ್ಕು ರಾಜ್ಯಸಭಾ ಸ್ಥಾನಗಳು ಇದ್ದು, ಅದರಲ್ಲಿ ಒಂದು ಸ್ಥಾನಕ್ಕೆ ನಾರಾಯಣಸಾ ಭಾಂಡಗೆ ಅವರಿಗೆ ಟಿಕೆಟ್ ನೀಡಲಾಗಿದೆ. ಅಂದರೆ, ಬಿಜೆಪಿಯ ಸಂಖ್ಯಾಬಲದ ಆಧಾರದಲ್ಲಿ ಬಾಂಡಗೆ ಅವರಿಗೆ ನಿರಾಯಾಸ ಗೆಲುವು ಲಭ್ಯವಾಗಲಿದೆ. ಹೀಗಾಗಿ ಈ ಬಾರಿ ಪಕ್ಷದ ಕಾರ್ಯಕರ್ತರೊಬ್ಬರಿಗೆ ಟಿಕೆಟ್ ನೀಡಿದಂತಾಗಿದೆ.
ಯಾರು ಈ ನಾರಾಯಣಸಾ ಕೃಷ್ಣಸಾ ಭಾಂಡಗೆ?
ನಾರಾಯಣಸಾ ಕೃಷ್ಣಸಾ ಭಾಂಡಗೆ ಅವರು ಮೂಲತಃ ಉತ್ತರ ಕರ್ನಾಟಕದ ಬಾಗಲಕೋಟೆಯವರಾಗಿದ್ದಾರೆ. ಈ ಹಿಂದೆ ವಿಧಾನ ಪರಿಷತ್ ಸದಸ್ಯರೂ ಆಗಿದ್ದ ನಾರಾಯಣ ಭಾಂಡಗೆ ಅವರು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಕರ್ನಾಟಕದ ಎಸ್‌ಎಸ್‌ಕೆ ಸಮಾಜದ ಮುಖಂಡರೂ ಆಗಿರುವ ಇವರು ಬಿಜೆಪಿಯ ಒಬಿಸಿ ಘಟಕದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ. ಒಂದು ಬಾರಿ ಬಿಜೆಪಿ ರಾಜ್ಯ ಉಪಾಧ್ಯಕ್ಷ, ರಾಜ್ಯ ಕಾರ್ಯದರ್ಶಿಯಾಗಿಯೂ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದಾರೆ. 1990 ದಶಕದಲ್ಲಿ ಅಯೋಧ್ಯೆ ಮತ್ತು ಈದ್ಗಾ ಮೈದಾನ ಹೋರಾಟದಲ್ಲಿ ಇವರು ಭಾಗವಹಿಸಿದ್ದರು.
ಫಲಿಸದ ವಿ. ಸೋಮಣ್ಣ ಲಾಬಿ
ರಾಜ್ಯಸಭಾ ಸ್ಥಾನ ಪಡೆಯಲು ಮಾಜಿ ಸಚಿವ ವಿ.ಸೋಮಣ್ಣ ಲಾಬಿ ನಡೆಸಿದ್ದರು. ಇದಕ್ಕಾಗಿ ದೆಹಲಿವರೆಗೂ ಹೋಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದಿದ್ದರು. ಅಲ್ಲದೆ, ತಮಗೆ ರಾಜ್ಯಸಭಾ ಟಿಕೆಟ್ ನೀಡುವಂತೆ ಕೋರಿಕೆಯನ್ನು ಇಟ್ಟಿದ್ದಾಗಿಯೂ ಬಹಿರಂಗವಾಗಿ ಹೇಳಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೈಕಮಾಂಡ್ ಆದೇಶದಂತೆ ತಾವು ಸ್ಪರ್ಧೆ ಮಾಡುತ್ತಿದ್ದ ಗೋವಿಂರಾಜನಗರ ಕ್ಷೇತ್ರವನ್ನು ಬಿಟ್ಟು ವರುಣ ಮತ್ತು ಚಾಮರಾಜನಗರದಲ್ಲಿ ಸ್ಪರ್ಧೆ ಮಾಡಿ ಸೋತಿದ್ದೇನೆ. ಹೀಗಾಗಿ ನನಗೆ ಈ ಬಾರಿ ರಾಜ್ಯಸಭಾ ಸ್ಥಾನವನ್ನು ನೀಡಬೇಕು ಎಂದು ಹೇಳಿಕೆ ನೀಡಿದ್ದರು. ಆದರೆ, ಇದ್ಯಾವುದನ್ನೂ ಪರಿಗಣಿಸದ ಬಿಜೆಪಿ ಹೈಕಮಾಂಡ್, ಲಾಬಿ ಮತ್ತು ಪ್ರೆಶರ್ ಪಾಲಿಟಿಕ್ಸ್‌ಗೆ ಮಣೆ ಹಾಕದೆ, ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ನಾರಾಯಣ ಭಾಂಡಗೆ ಅವರಿಗೆ ಟಿಕೆಟ್ ನೀಡಿದೆ.
ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ: ಭಾಂಡಗೆ
ರಾಜ್ಯಸಭಾ ಟಿಕೆಟ್ ಘೋಷಣೆ ಹಿನ್ನೆಲೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಾರಾಯಣಸಾ ಭಾಂಡಗೆ, ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ರಾಜ್ಯಸಭಾ ಟಿಕೆಟ್ ನೀಡಿದ್ದು ಬಿಜೆಪಿಯಲ್ಲಿಯೇ ಸಾಧ್ಯ. ಬೇರೆ ಪಕ್ಷದಲ್ಲಿ ಇದನ್ನು ನಾವು ಅಪೇಕ್ಷೆ ಮಾಡಲೂ ಅಸಾಧ್ಯ. ಕಳೆದ ಅನೇಕ ವರ್ಷಗಳಿಂದ ಪಕ್ಷದಲ್ಲಿ ದುಡಿದಿದ್ದನ್ನು ಪಕ್ಷ ಗುರುತಿಸಿದೆ. ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೂ ಬೆಲೆ ಕೊಡುತ್ತದೆ ಅನ್ನೋದಕ್ಕೆ ನನ್ನನ್ನು ರಾಜ್ಯಸಭಾ ಸದಸ್ಯನಾಗಿ ನಿಯುಕ್ತಿ ಮಾಡಿರೋದು ಒಂದು ಉದಾಹರಣೆಯಾಗಿದೆ. ನನಗೆ ಕೆಲಸ ಮಾಡುವುದಕ್ಕೆ ಪಕ್ಷ ಹೆಚ್ಚು ಶಕ್ತಿ ನೀಡಿದೆ. ನನಗೆ ಖುಷಿ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರೂ ಸೇರಿ ಎಲ್ಲರನ್ನೂ ಅಭಿನಂದಿಸುತ್ತೇನೆ. ಪಕ್ಷದ ಸದಾ ಪಕ್ಷದ ಸಲುವಾಗಿ ನಿರಂತರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಫೆಬ್ರವರಿ 27ರಂದು ಚುನಾವಣೆ
ರಾಜ್ಯಸಭೆ ಚುನಾವಣೆ (Rajya Sabha Election) ದಿನಾಂಕ ಘೋಷಿಸಿದ್ದು, ಕರ್ನಾಟಕದ 4 ಸ್ಥಾನಗಳಿಗೂ ಚುನಾವಣೆ ನಡೆಯಲಿದೆ. ಒಟ್ಟು 15 ರಾಜ್ಯಗಳ 56 ರಾಜ್ಯಸಭೆ ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆಸಲು ಆಯೋಗವು (Election Commission Of India) ತೀರ್ಮಾನಿಸಿದೆ.
ಏಪ್ರಿಲ್‌ನಲ್ಲಿ ತೆರವಾಗುವ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಫೆ. 27ರಂದು ಮತದಾನ ನಡೆಯಲಿದೆ. ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೂವರು ಹಾಗೂ ಬಿಜೆಪಿಯ ಒಬ್ಬ ಸದಸ್ಯರು ಇದ್ದಾರೆ. ಇವರ ಅವಧಿ ಈಗ ಮುಕ್ತಾಯವಾಗುತ್ತಿದೆ.
ಈ ನಾಲ್ವರ ಅವಧಿ ಮುಕ್ತಾಯ
- ಜಿ ಸಿ ಚಂದ್ರಶೇಖರ್ – ಕಾಂಗ್ರೆಸ್
- ನಾಸೀರ್ ಹುಸೇನ್ – ಕಾಂಗ್ರೆಸ್
- ಎಲ್ ಹನುಮಂತಯ್ಯ – ಕಾಂಗ್ರೆಸ್
- ರಾಜೀವ್ ಚಂದ್ರಶೇಖರ್ – ಬಿಜೆಪಿ
ಈ ನಾಲ್ವರ ಅವಧಿ ಮುಕ್ತಾಯದ ಹಿನ್ನೆಲೆಯಲ್ಲಿ ತೆರವಾಗುವ ಈ ಸ್ಥಾನಗಳಿಗೆ ಇವರೇ ಅಭ್ಯರ್ಥಿಗಳಾಗಿರಲಿದ್ದಾರಾ? ಅಥವಾ ಬೇರೆಯವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗುತ್ತದೆಯೇ ಎಂಬ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ.
ಶುರುವಾಗಿದೆ ರಾಜಕೀಯ ಲೆಕ್ಕಾಚಾರ!
ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸುವ ಸಂಬಂಧ ರಾಜ್ಯ ರಾಜಕೀಯದಲ್ಲಿ ಲೆಕ್ಕಾಚಾರಗಳು ಶುರುವಾಗಿದೆ. ಕಾಂಗ್ರೆಸ್‌ನಲ್ಲಿ 135 + 1 ಶಾಸಕರು ಇರುವುದರಿಂದ ರಾಜ್ಯಸಭೆಯ 3 ಸ್ಥಾನಗಳ ಗೆಲುವು ಪಕ್ಕಾ ಆಗಿದೆ. ಅಂದರೆ, ಯಾವುದೇ ರಾಜಕೀಯ ಬೆಳವಣಿಗೆಗಳು ನಡೆಯದೇ, ಕುದರೆ ವ್ಯಾಪಾರ ನಡೆಯದೇ ಇದ್ದರೆ ಕಾಂಗ್ರೆಸ್‌ಗೆ 3 ಸ್ಥಾನಗಳು ಆರಾಮವಾಗಿ ಒಲಿಯುತ್ತದೆ. ಇನ್ನು ಬಿಜೆಪಿಯಲ್ಲಿ 65 ಶಾಸಕರು ಇರುವುದರಿಂದ ಒಂದು ಸ್ಥಾನ ಆರಾಮವಾಗಿ ಗೆಲ್ಲಬಹುದು. ಇಷ್ಟಾಗಿ ಬಿಜೆಪಿ ಬಳಿ 20 ಶಾಸಕರ ಮತಗಳು ಹೆಚ್ಚುವರಿ ಇರುತ್ತದೆ. ಜೆಡಿಎಸ್ ಬಳಿ 19 ಶಾಸಕರು ಇರುವುದರಿಂದ 39 ಶಾಸಕರ ಮತಗಳು ಉಳಿದಂತೆ ಆಗುತ್ತದೆ. ಗೆಲ್ಲಲು 45 ಶಾಸಕರ ಮತಗಳು ಬೇಕಿರುವುದರಿಂದ ಹೆಚ್ಚುವರಿ ಮತಗಳನ್ನು ಕಾಂಗ್ರೆಸ್‌ನಿಂದ ಸೆಳೆಯಬೇಕು. ಒಂದು ವೇಳೆ ಅಲ್ಲಿಂದ 6 ಮಂದಿಯನ್ನು ಸೆಳೆದರೆ ಕಾಂಗ್ರೆಸ್‌ಗೆ 2 ಸ್ಥಾನಗಳು ಮಾತ್ರವೇ ಉಳಿದು ಇನ್ನೊಂದು ಜೆಡಿಎಸ್ ಪಾಲಾಗಬಹುದು ಎಂಬ ಲೆಕ್ಕಾಚಾರವನ್ನೂ ಹಾಕಲಾಗಿದೆ. ಆದರೆ, ಜೆಡಿಎಸ್‌ನ ಮನವೊಲಿಸಿ ಬೆಂಬಲ ಪಡೆದು ಈ ಸ್ಥಾನಕ್ಕೆ ಬಿಜೆಪಿ ಏನಾದರೂ ಇನ್ನೊಂದು ಸ್ಥಾನಕ್ಕೆ ಸ್ಪರ್ಧೆ ಮಾಡಿದರೆ ರಾಜಕೀಯ ಕಣ ಮತ್ತಷ್ಟು ರಂಗೇರಲಿದ್ದು, ಕಾಂಗ್ರೆಸ್ ಟೆನ್ಶನ್ ಅನ್ನು ಮತ್ತಷ್ಟು ಹೆಚ್ಚು ಮಾಡಲಿದೆ. ಆಗ “ಅಡ್ಡ ಮತ”ಗಳ “ಅಡ್ಡ ಪರಿಣಾಮ”ವನ್ನು ಎದುರಿಸುವ ಆತಂಕ ಕೈಪಡೆಗೆ ಎದುರಾಗುತ್ತದೆ.
ಇದನ್ನೂ ಓದಿ: Assembly Session: ನಾಳೆಯಿಂದ ಅಧಿವೇಶನ ಕದನ; 40 ಪರ್ಸೆಂಟ್ ಕಮಿಷನ್ ವರ್ಸಸ್ ಅನುದಾನ ತಾರತಮ್ಯ
ಯಾವ ಯಾವ ರಾಜ್ಯಗಳಲ್ಲಿ ಚುನಾವಣೆ?
ಫೆಬ್ರವರಿ 27ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ (Voting) ನಡೆಯಲಿದೆ ಎಂದು ಚುನಾವಣೆ ಆಯೋಗವು ಮಾಹಿತಿ ನೀಡಿದೆ. ಉಮೇದುವಾರಿಕೆ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ. ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿ ಒಟ್ಟು 15 ರಾಜ್ಯಗಳ 56 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಫೆಬ್ರವರಿ 16ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಫೆಬ್ರವರಿ 20 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಮತದಾನ ನಡೆಯುವ ಫೆಬ್ರವರಿ 27ರಂದೇ ಫಲಿತಾಂಶ ಲಭ್ಯವಾಗಲಿದೆ.